ಶ್ರೇಯಸ್ ಕೆ. ಮಂಜು ಅಭಿನಯದ ‘ರಾಣ’ ಚಿತ್ರದ ಸ್ಪೆಷಲ್‌ ಸಾಂಗ್‌ಗೆ ನಟಿ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಲಿದ್ದಾರೆ. ಈ ಮೊದಲು ಹಾಡಿನಲ್ಲಿ ನಟಿ ರಾಗಿಣಿ ದ್ವಿವೇದಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಶೂಟಿಂಗ್‌ ಡೇಟ್ಸ್ ಹೊಂದಿಕೆಯಾಗದ ಕಾರಣ ಅವರ ಜಾಗಕ್ಕೀಗ ಸಂಯುಕ್ತ ಹೆಗ್ಡೆ ಬಂದಿದ್ದಾರೆ.

‘ಕಿರಿಕ್‌ ಪಾರ್ಟಿ’ ಸಿನಿಮಾ ಖ್ಯಾತಿಯ ಸಂಯುಕ್ತ ಹೆಗ್ಡೆ ‘ರಾಣ’ ಸಿನಿಮಾದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡಲಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ‘ಕೆಜಿಎಫ್‌’ ಸಿನಿಮಾ ಖ್ಯಾತಿಯ ಕಲಾ ನಿರ್ದೇಶಕ ಶಿವು ನಿರ್ಮಿಸಿರುವ ಭವ್ಯವಾದ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ‌“ಮೊದಲು ಈ ಹಾಡಿಗೆ ನಟಿ ರಾಗಿಣಿ ದ್ವಿವೇದಿ ಆಯ್ಕೆಯಾಗಿದ್ದರು. ಮಳೆಯ ಕಾರಣದಿಂದಾಗಿ ಅವರು ಚಿತ್ರೀಕರಣಕ್ಕೆಂದು ಕೊಟ್ಟಿದ್ದ ಡೇಟ್ಸ್‌ ಹೊಂದಿಕೆಯಾಗಲಿಲ್ಲ. ನಮ್ಮ ಹೊಸ ಡೇಟ್ಸ್‌ ಅವರ ಹಿಂದಿ, ತೆಲುಗು ಸಿನಿಮಾಗಳಿಗೆ ತೊಂದರೆಯಾದ ಕಾರಣ ಅವರ ಬದಲು ಸಂಯುಕ್ತ ಹೆಗ್ಡೆ ಆಯ್ಕೆಯಾಗಿದ್ದಾರೆ. ಸುಮಾರು ಮುನ್ನೂರು ನೃತ್ಯಗಾರರು ಪಾಲ್ಗೊಳ್ಳಲಿರುವ ಈ ಹಾಡಿನಲ್ಲಿ ಹೀರೋ ಶ್ರೇಯಸ್ ಜೊತೆ ಸಂಯುಕ್ತಾ ಡ್ಯಾನ್ಸ್ ಮಾಡಲಿದ್ದಾರೆ” ಎನ್ನುತ್ತಾರೆ ಚಿತ್ರದ ನಿರ್ದೇಶಕ ನಂದಕಿಶೋರ್‌. ಶಿವು ಭೇರ್ಗಿ ರಚಿಸಿರುವ ಈ ಹಾಡಿಗೆ ಚಂದನ್‌ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ನಾಯಕ ಶ್ರೇಯಸ್ ಮಂಜುಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ ‘ರಾಣ’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌.

LEAVE A REPLY

Connect with

Please enter your comment!
Please enter your name here