ನಿರ್ದೇಶಕ ಆನಂದ್ ಎಲ್‌.ರಾಯ್ ನಿರ್ದೇಶನದಲ್ಲಿ ಚೆಸ್‌ ವರ್ಲ್ಡ್‌ ಚಾಂಪಿಯನ್‌ ವಿಶ್ವನಾಥನ್ ಆನಂದ್ ಬಯೋಪಿಕ್ ಹಿಂದಿ ಸಿನಿಮಾ ತಯಾರಾಗಲಿದೆ. ಸದ್ಯ ತಮ್ಮ ‘ಅತ್ರಂಗಿ ರೇ’ ಹಿಂದಿ ಸಿನಿಮಾ ಪ್ರೊಮೋಷನ್‌ನಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕರು ಚೆಸ್‌ ಚಾಂಪಿಯನ್‌ ಸಿನಿಮಾಗೆ ಚಿತ್ರಕಥೆ ಬರೆಯಲು ಆರಂಭಿಸಿದ್ದಾರೆ.

ಐದು ಬಾರಿ ವಿಶ್ವ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ಆಗಿ ದೇಶಕ್ಕೆ ಹೆಸರು ತಂದಿರುವ ವಿಶ್ವನಾಥನ್ ಅನಂದ್ ಬಯೋಪಿಕ್ ಸೆಟ್ಟೇರಲಿದೆ. ಈ ಸಿನಿಮಾಗೆ ಸಾಕಷ್ಟು ತಯಾರಿ ಬೇಕಾಗಿದ್ದು, ಚಿತ್ರಕಥೆ ಬರೆಯುತ್ತಿರುವುದಾಗಿ ಹೇಳಿದ್ದಾರೆ ನಿರ್ದೇಶಕ ಆನಂದ್ ಎಲ್‌.ರಾಯ್‌. “ಇದು ತುಂಬಾ ದೊಡ್ಡ ಪ್ರಾಜೆಕ್ಟ್‌. ಇದು ಕೇವಲ ಚೆನ್‌ ಆಟದ ಕತೆಯಲ್ಲ. ಚೆಸ್‌ ಚಾಂಪಿಯನ್‌ನ ಒಳಗಿರುವ ವ್ಯಕ್ತಿಯ ಕಥಾನಕ. ಮೇರು ಸಾಧಕನ ಬದುಕು, ಸಾಧನೆಯನ್ನು ಬೆಳ್ಳಿತೆರೆಗೆ ಅಳವಡಿಸುವಾಗ ತುಂಬಾ ತಯಾರಿ ಬೇಕಾಗುತ್ತದೆ. ವೈಯಕ್ತಿಕವಾಗಿ ಇದು ನನಗೂ ಮಹತ್ವದ ಪ್ರಾಜೆಕ್ಟ್‌” ಎನ್ನುವ ನಿರ್ದೇಶಕ ಆನಂದ್ ಎಲ್‌.ರಾಯ್‌ ತಮ್ಮ ಕಲರ್ ಯೆಲ್ಲೋ ಪ್ರೊಡಕ್ಷನ್ಸ್‌ ಮತ್ತು ಸನ್‌ಡಯಲ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಿಸಲಿದ್ದಾರೆ.

ಪ್ರಸ್ತುತ ಆನಂದ್ ಎಲ್‌. ರಾಯ್‌ ತಮ್ಮ ನಿರ್ದೇಶನದ ‘ಅತ್ರಂಗಿ ರೇ’ ಹಿಂದಿ ಚಿತ್ರದ ಪ್ರೊಮೋಷನ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್, ಧನುಷ್‌ ಮತ್ತು ಸಾರಾ ಅಲಿ ಖಾನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಇದೇ ಡಿಸೆಂಬರ್‌ 24ರಂದು ಡಿಸ್ನೀಪ್ಲಸ್ ಹಾಟ್‌ಸ್ಟಾರ್‌ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನೇರವಾಗಿ ‘ಅತ್ರಂಗಿ ರೇ’ ಸ್ಟ್ರೀಮ್ ಆಗಲಿದೆ. ಅಕ್ಷಯ್‌ ಕುಮಾರ್ ಅಭಿನಯದ ‘ರಕ್ಷಾ ಬಂಧನ್‌’ ಮತ್ತು ‘ಗೋರ್ಖಾ’ ಚಿತ್ರಗಳ ನಿರ್ಮಾಣ, ನಿರ್ದೇಶನದಲ್ಲೂ ಆನಂದ್ ಎಲ್‌.ರಾಯ್ ತೊಡಗಿಸಿಕೊಂಡಿದ್ದಾರೆ. ಜಾಹ್ನವಿ ಕಪೂರ್ ಅವರಿಗಾಗಿ ನಿರ್ಮಿಸುತ್ತಿರುವ ‘ಗುಡ್ ಲಕ್ ಜರ್ರಿ’ ಆನಂದ್ ಅವರ ಮತ್ತೊಂದು ಸಿನಿಮಾ.

LEAVE A REPLY

Connect with

Please enter your comment!
Please enter your name here