KPMG ಮಾಧ್ಯಮ ಮತ್ತು ಮನರಂಜನಾ ವರದಿಯ ಪ್ರಕಾರ 2023ರ ವೇಳೆಗೆ ಭಾರತದ ಓಟಿಟಿ ಮಾರುಕಟ್ಟೆ 138 ಬಿಲಿಯನ್ ರೂಗಳು ಎಂದು ನೋಡಿದಾಗ ಈ ವೇದಿಕೆಗಳ ಆರ್ಥಿಕ ತಾಕತ್ತು ಅರಿವಾಗುತ್ತದೆ. E and Y ವರದಿಯ ಪ್ರಕಾರ 2020ರ ವೇಳೆಗೆ ಓಟಿಟಿ ಬಳಕೆದಾರರ ಸಂಖ್ಯೆ 500 ಮಿಲಿಯನ್. ಅಮೇರಿಕಾ ನಂತರ ಜಗತ್ತಿನ ಎರಡನೆಯ ಅತಿದೊಡ್ಡ ಓಟಿಟಿ ಮಾರುಕಟ್ಟೆ ಎಂದರೆ ಭಾರತ!

ಭಾರತಕ್ಕೆ ಟೀವಿ ಬಂದ ದಿನಗಳ ಸಂಭ್ರಮವನ್ನು ನಮ್ಮ ತಲೆಮಾರಿನವರು ಮರೆಯಲಿಕ್ಕಿಲ್ಲ. ಮುಸುಕು ಹೊದ್ದು, ಮನೆಯ ಮೇಲೊಂದು ಕೋಡು ನಿಲ್ಲಿಸಿ ಬಂದ ಈ ಟೀವಿ ನಮ್ಮೆಲ್ಲರ ಬದುಕನ್ನು ಹೀಗೆ ಬದಲಾಯಿಸಿಬಿಡುತ್ತದೆ ಎನ್ನುವ ಅಂದಾಜಾದರೂ ಇತ್ತೆ ನಮಗೆ? ಸಣ್ಣ ಪುಟ್ಟ ತಾಲೂಕ್ ಸೆಂಟರ್‌ಗಳಲ್ಲಿ ಇಡೀ ಊರಿಗೆ ಒಂದೋ ಎರಡೋ ಟೀವಿ ಇರುತ್ತಿತ್ತು, ಅದು ಪ್ರತಿಷ್ಠೆಯ ಸಂಕೇತ ಸಹ ಹೌದು. ಬುಧವಾರ, ಶುಕ್ರವಾರಗಳ ಹಿಂದಿ ಹಾಡುಗಳು, ನಂತರ ಗುರುವಾರದ ಕನ್ನಡ ಚಿತ್ರಮಂಜರಿ ನೋಡಲೆಂದು ಅವರ ಮನೆಗಳಿಗೆ ಹಿಂಡುಹಿಂಡಾಗಿ ಜನ ಹೋಗುತ್ತಿದ್ದರು! ನಿಧಾನವಾಗಿ ಮೊದಲು ಕಪ್ಪು ಬಿಳುಪು ಟೀವಿ, ಆಮೇಲೆ ಬಣ್ಣದ ಟೀವಿ ಎಲ್ಲರ ಮನೆಗೂ ಬಂತು, ದೂರದರ್ಶನ  ಕೊಡುತ್ತಿದ್ದ ಕಾರ್ಯಕ್ರಮಗಳನ್ನು ಕಣ್ಣಿಗೊತ್ತಿಕೊಂಡು ನೋಡುತ್ತಿದ್ದ ಜನರನ್ನು ಕೇಬಲ್ ಎನ್ನುವ ಮಾಯಾಂಗನೆ ಬಂದು ಹುಚ್ಚೆಬ್ಬಿಸಿದಳು. ಕೇಬಲ್ ನೆಟ್‌ವರ್ಕ್‌ಗಳ ವಿಷಯಕ್ಕೆ ಮಾರಾಮಾರಿ ಆಗಿ, ಕೇಬಲ್ ಮಾಫಿಯಾ ಎನ್ನುವ ಹೊಸದೊಂದು ಪದಗುಚ್ಛವೇ ಚಾಲ್ತಿಗೆ ಬಂತು! ಆಂಟೆನಾಗಳಿಗೆ ಬೈಬೈ ಹೇಳಿದ ಈ ಕೇಬಲ್ ನೆಟ್‌ವರ್ಕ್‌ ಮನೆಮನೆಗಳ ಮೇಲೆ ಕಪ್ಪು ಕೇಬಲ್ ಎಳೆದು, ಮೇಲಿನಿಂದ ನೋಡಿದರೆ ಇಡೀ ಹಳ್ಳಿ, ಊರು, ಪಟ್ಟಣ, ನಗರ ಕೇಬಲ್ ನೆಟ್‌ವರ್ಕ್‌ ಬಲೆಯಲ್ಲಿ ಸಿಲುಕಿದಂತೆ ಕಾಣುತ್ತಿತ್ತು.

ನಾನೂ ಈ ಕೇಬಲ್ ನೆಟ್‌ವರ್ಕ್‌ ಸದಸ್ಯಳಾಗಿ, ತಿಂಗಳಿಗೊಮ್ಮೆ ಅವರಿಗೆ ಹಣಕೊಟ್ಟು, ತಿಂಗಳು ಪೂರಾ ಅವರು ತೋರಿಸುತ್ತಿದ್ದ ಸಿನಿಮಾಗಳನ್ನು ನೋಡುತ್ತಾ, ದಿನಕ್ಕೊಮ್ಮೆ ನ್ಯೂಸ್ ಕೇಳುತ್ತಾ, ಕಾಮಿಡಿ ಕಾರ್ಯಕ್ರಮಗಳಿಗೆ ನಗುತ್ತಾ ಸುಖವಾಗಿದ್ದೆ. ಟೀವಿ ಹಾಕಿಕೊಂಡು ಮನೆಯ ಕೆಲಸ ಮಾಡಿಕೊಳ್ಳುವುದು ಒಂದು ಅಭ್ಯಾಸವೇ ಆಗಿಬಿಟ್ಟಿತ್ತು! ಆದರೆ ಸುಮಾರು ಎರಡು ವರ್ಷಗಳ ಮೊದಲು ತಿಂಗಳಿಗಿಷ್ಟು ಎಂದು ನಿಯಮಿತವಾಗಿದ್ದ ಕೇಬಲ್ ಹಣ, ಚಾನೆಲ್‌ಗಿಷ್ಟು ಎಂದು ಬದಲಾವಣೆ ಆದಾಗ ಮೊದಲೇ ಲೆಕ್ಕ ಎಂದರೆ ಮೈಲು ದೂರ ಓಡುವ ನನಗೆ ಆ ಪಟ್ಟಿ ಓದುವ ಮೊದಲೇ ಇದು ನನ್ನಿಂದಾಗದು ಅನ್ನಿಸಿಬಿಟ್ಟಿತು. ಆಗ ನನಗೆ ಹೊಳೆದ ಹಾದಿ ಎಂದರೆ OTT ಅಥವಾ Over The Top Platform. ವರ್ಷಕ್ಕೊಮ್ಮೆ ಹಣ ಕಟ್ಟಿದರೆ ಆಯಿತು, ಪ್ರತಿ ತಿಂಗಳು ತಲೆಕೆಡಿಸಿಕೊಳ್ಳಬೇಕಿಲ್ಲ ಮತ್ತು ಎಲ್ಲಕ್ಕಿಂತ ದೊಡ್ಡ ಬಿಡುಗಡೆ ಸಿಕ್ಕಿದ್ದು 24/7 ನ್ಯೂಸ್ ಚಾನೆಲ್‌ಗಳಿಂದ. ಆಗ ಧುಮುಕಿದ ಓಟಿಟಿ ಎಂಬ ಸಾಗರದಲ್ಲಿ ನಾನಿನ್ನೂ ಈಜುತ್ತಲೇ ಇದ್ದೇನೆ!

ಭಾರತದ ಮೊದಲ ಓಟಿಟಿ ವೇದಿಕೆ 2008ರಲ್ಲಿ ಬಂದ Bigflix, ಇದು ರಿಲಯನ್ಸ್ ಒಡೆತನಕ್ಕೆ ಸೇರಿದ್ದು. ಮೊಬೈಲ್‌ಗೆ ಬಂದ ಮೊದಲ ಓಟಿಟಿ ಆಪ್ Digivive. 2013-14ರಲ್ಲಿ IPL ಪಂದ್ಯಗಳನ್ನು ಮೊಬೈಲ್‌ಗೆ ತಂದುಕೊಟ್ಟದ್ದು ಇದೇ ಆಪ್. 2015ರಲ್ಲಿ ಹಾಟ್ ಸ್ಟಾರ್ (ಈಗ ಡಿಸ್ನಿ ಹಾಟ್‌ಸ್ಟಾರ್‌) IPL ಹಕ್ಕುಗಳನ್ನು ಪಡೆದು ಈ ಹಾದಿಯಲ್ಲಿ ಮುಂಚೂಣಿಯಲ್ಲಿ ನಿಂತಿತು. 2016ರಲ್ಲಿ ಭಾರತಕ್ಕೆ ನೆಟ್‌ಫ್ಲಿಕ್ಸ್ ಕಾಲಿಟ್ಟಿತು. ಹೆಚ್ಚು ಕಡಿಮೆ ಅದೇ ಸಮಯಕ್ಕೆ ಬಂದದ್ದು ಅಮೇಜಾನ್ ಪ್ರೈಮ್. ಹಾಗೆಯೇ ಬಂದದ್ದು ಸನ್‌ನೆಕ್ಸ್ಟ್, ವೂಟ್, ಆಲ್ಟ್ ಬಾಲಾಜಿ, ಡಿಸ್ಕವರಿ, ಸೋನಿ ಲಿವ್, ಜೀ5, ಎಂಎಕ್ಸ್ ಪ್ಲೇಯರ್ ಇತ್ಯಾದಿ. ನೆಟ್ ಫ್ಲಿಕ್ಸ್  ಚಂದಾಹಣ ಮಿಕ್ಕ ವೇದಿಕೆಗಳಿಗೆ ಹೋಲಿಸಿದರೆ ಹೆಚ್ಚು, ಹಾಗಾಗಿಯೇ ಮಿಕ್ಕ ವೇದಿಕೆಗಳು ಅದಕ್ಕೆ ಕಠಿಣ ಸ್ಪರ್ಧೆಯನ್ನು ಒಡ್ಡುತ್ತವೆ. ಆದರೆ ಭಾರತದ ಮಾರುಕಟ್ಟೆಯ ತಾಕತ್ತು ಅರಿತ ನೆಟ್‌ಫ್ಲಿಕ್ಸ್ ಈಗೀಗ ಭಾರತಕ್ಕೆ ಒಗ್ಗುವಂತಹ ಕಂಟೆಂಟ್‌ಗಳ ತಯಾರಿಕೆಯ ಕಡೆ ಹೆಚ್ಚು ಒಲವು ತೋರಿಸುತ್ತಿದೆ. ‘ದ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾ ಹಕ್ಕನ್ನು ಪಡೆದ ನೀಸ್ಟ್ರೀಂ ಮಲಯಾಳಿ ವೇದಿಕೆಗೆ ಅದು ಅತ್ಯುತ್ತಮ ಜಾಹಿರಾತಾಗಿ ಸಹ ಕೆಲಸ ಮಾಡಿತು. ಚಲನಚಿತ್ರಗಳು ಬಂದ ಹೊಸದರಲ್ಲಿದ್ದ ಸ್ಟುಡಿಯೋ ಪದ್ಧತಿ ಇಂದಿಗೂ ವಿವಿಧ ರೂಪಗಳಲ್ಲಿ ಜೀವಂತವಾಗಿರುವುದು ತೆಲುಗು ಚಿತ್ರರಂಗದಲ್ಲಿ. ರಾಮಾನಾಯ್ಡು ಅವರ ಸ್ಟುಡಿಯೋ ಮತ್ತು ಅಕ್ಕಿನೇನಿ ಕುಟುಂಬದ ಅನ್ನಪೂರ್ಣ ಸ್ಟುಡಿಯೋ ಇಂದಿಗೂ ತೆಲುಗು ಚಿತ್ರರಂಗದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಅಷ್ಟೇ ಬಲವಾಗಿರುವುದು ಅಲ್ಲಿನ ಸಿನಿಮಾ ಕುಟುಂಬಗಳು. ಗೀತಾ ಆರ್ಟ್ಸ್‌ ನಿರ್ಮಾಣ ಕಂಪನಿಯಿಂದ ಅನೇಕ ಲಾಭದಾಯಕ ಚಿತ್ರಗಳನ್ನು ನಿರ್ಮಿಸಿದ ಅಲ್ಲು ಅರವಿಂದ್ ಅವರು ಹುಟ್ಟಿಹಾಕಿದ್ದು ತೆಲುಗಿನ ಆಹಾ ಟೀವಿ. ಮಿಕ್ಕುಳಿದ ಇನ್ನೆರಡು ಸ್ಟುಡಿಯೋಗಳೂ ಮತ್ತು ಸಿನಿಮಾ ಕುಟುಂಬಗಳೂ ಅದಕ್ಕೆ ಒತ್ತಾಸೆಯಾಗಿ ನಿಂತಿವೆ.

ಕೆಪಿಎಂಜಿ ಮಾಧ್ಯಮ ಮತ್ತು ಮನರಂಜನಾ ವರದಿಯ ಪ್ರಕಾರ 2023ರ ವೇಳೆಗೆ ಭಾರತದ ಓಟಿಟಿ ಮಾರುಕಟ್ಟೆ 138 ಬಿಲಿಯನ್ ರೂಗಳು ಎಂದು ನೋಡಿದಾಗ ಈ ವೇದಿಕೆಗಳ ಆರ್ಥಿಕ ತಾಕತ್ತು ಅರಿವಾಗುತ್ತದೆ. E and Y ವರದಿಯ ಪ್ರಕಾರ 2020ರ ವೇಳೆಗೆ ಓಟಿಟಿ ಬಳಕೆದಾರರ ಸಂಖ್ಯೆ 500 ಮಿಲಿಯನ್. ಅಮೇರಿಕಾ ನಂತರ ಜಗತ್ತಿನ ಎರಡನೆಯ ಅತಿದೊಡ್ಡ ಓಟಿಟಿ ಮಾರುಕಟ್ಟೆ ಎಂದರೆ ಭಾರತ! ಈ ಓಟಿಟಿ ಮಾರುಕಟ್ಟೆಗಳಿಗೆ ದೊಡ್ಡದೊಂದು ಬಲ ಬಂದದ್ದು ಕೋವಿಡ್ ಸಮಯದಲ್ಲಿ. ಊರಿನೆಲ್ಲಾ ಸಿನಿಮಾ ಥಿಯೇಟರ್‌ಗಳೂ ಬಾಗಿಲು ಮುಚ್ಚಿಕೊಂಡು, ನಾಟಕ ಮಂದಿರಗಳು ಸ್ಥಬ್ಧವಾಗಿ, ಹರಟೆಕಟ್ಟೆಗಳೆಲ್ಲಾ ಬಂದಾದಾಗ. ಆಗ ಮನೆಗಳಲ್ಲೇ ಉಳಿದ ಜನರನ್ನು ಪೊರೆದದ್ದು ಫೋನ್‌ಗಳಿಗೆ ಕೈಕಚ್ಚದ ದರದಲ್ಲಿ ದೊರಕುತ್ತಿದ್ದ ಇಂಟರ್‌ನೆಟ್‌ ಮತ್ತು ಈ ಮನರಂಜನೆಯ ಸುನಾಮಿ. ಮಾರುಕಟ್ಟೆಯಲ್ಲಿ ಬಂದ ಸ್ಮಾರ್ಟ್‌ ಟೀವಿಗಳೂ ಸಹ ಈ ಸುನಾಮಿಗೆ ಗಾಳಿ ಬೀಸಿದವು. ಅದುವರೆಗೂ ಕೇಬಲ್ ಮೂಲಕ ಮಾತ್ರ ಮನೆಮನೆ ತಲುಪುತ್ತಿದ್ದ ಕಟೆಂಟ್ ಈಗ ಅಂತರ್ಜಾಲದ ಕಾಣದ ರೆಕ್ಕೆಯನ್ನೇರಿ ವಾಯುವೇಗದಲ್ಲಿ ಮನೆಮನೆಯ ಟೀವಿ, ಟ್ಯಾಬ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಮೊಬೈಲ್‌ಗಳನ್ನು ತಲುಪಿದವು. ಪ್ರತಿ ಮೊಬೈಲ್ ಒಂದೊಂದು ಟೀವಿ ಪರದೆ ಆಯಿತು.  ಸಧ್ಯಕ್ಕೆ ಭಾರತದಲ್ಲಿ 40ಕ್ಕೂ ಹೆಚ್ಚು ಓಟಿಟಿ ವೇದಿಕೆಗಳು ಇವೆ.

ಓಟಿಟಿ ಕೊಡುವ ಒಂದು ಬಹುಮುಖ್ಯ ಸವಲತ್ತು ಎಂದರೆ ಆಯ್ಕೆಗೆ ಮತ್ತು ನಿಯಂತ್ರಣದ ಅವಕಾಶ. ಇಲ್ಲಿ ಪ್ರೇಕ್ಷಕರು ಡ್ರೈವಿಂಗ್ ಸೀಟ್‌ನಲ್ಲಿರುತ್ತಾರೆ. ನಾವು ಏನು ನೋಡಬೇಕು ಎಂದು ಕೇಬಲ್ ನವರು ನಿರ್ಧರಿಸುವುದಿಲ್ಲ. ನಮ್ಮ ಅಭಿರುಚಿ ಮತ್ತು ನಮ್ಮ  ಜೇಬಿನ ತಾಕತ್ತು ನಾವು ಏನು ನೋಡಬೇಕು ಎಂದು ನಿರ್ಧರಿಸುವುದರಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಇಲ್ಲಿ ಬೇಕಾದ ಕಾರ್ಯಕ್ರಮ ನೋಡುವಾಗ ಜಾಹಿರಾತುಗಳು ಅಡ್ಡಬಂದು ರಸಭಂಗ ಮಾಡುವುದಿಲ್ಲ. ಇದು ನೋಡುಗರ ದೃಷ್ಟಿಯಿಂದ ಆದರೆ ಕಂಟೆಂಟ್ ತಯಾರಕರ ದೃಷ್ಟಿಯಿಂದ, ಕಲಾವಿದ ಮತ್ತು ತಂತ್ರಜ್ಞರ ದೃಷ್ಟಿಯಿಂದ ನೋಡುವಾಗ ಈ ಓಟಿಟಿಗಳು ತೆರೆದ ಮಾರುಕಟ್ಟೆ ಕಲ್ಪನೆಗೂ ನಿಲುಕದ್ದು. ಕಡಿದ ಮರದ ಪಕ್ಕದಲ್ಲೇ ಚಿಗುರೊಡೆಯುವ ಹಸಿರಿನ ಹಾಗೆ ಕಲೆ ಸಹ ಇನ್ನು ಇದರ ಕಥೆ ಇಷ್ಟೆ ಎಂದವರ ಪರಿಕರ, ಸಾಧನಗಳನ್ನೇ ಬಳಸಿಕೊಂಡು ಮತ್ತೆ ಅರಳುತ್ತದೆ. ಈ ಓಟಿಟಿ ವೇದಿಕೆಗಳಿಂದ ಸಿನಿಮಾ ಮಂದಿರಗಳಿಗೆ ಆಪತ್ತು, ಚಲನಚಿತ್ರಗಳು ಘಾಸಿಗೊಳಗಾಗುತ್ತವೆ ಎನ್ನುವ ಕೂಗಿನ ನಡುವೆಯೇ ಚಲನಚಿತ್ರರಂಗ ಈ ವೇದಿಕೆಯನ್ನೂ ತನ್ನದಾಗಿಸಿಕೊಂಡಿತು. ಅದು ಹೆಚ್ಚು ಬಳಕೆಗೊಂಡಿದ್ದು ಲಾಕ್‌ಡೌನ್‌ ಸಮಯದಲ್ಲಿ. ಹಾಗೆಂದು ಇವು ಚಿತ್ರಮಂದಿರದಲ್ಲಿ ಸಿನಿಮಾ ನೋಡುವುದಕ್ಕೆ ಪರ್ಯಾಯವೇ ಎಂದರೆ ಖಂಡಿತ ಅಲ್ಲ, ಆದರೆ ಅವುಗಳ ಅನುಪಸ್ಥಿತಿಯಲ್ಲಿ ಇವು ಸಿನಿಮಾಗಳಿಗೆ ತಮ್ಮ ಕೊಡುಗೆ ಸಲ್ಲಿಸಿದವು. ಇವುಗಳಿಂದಾದ ಇನ್ನೊಂದು ಪರಿಣಾಮ ಎಂದರೆ ಚಿತ್ರರಂಗದಲ್ಲಿ ಬೇರೂರಿರುವ ಸ್ಟಾರ್ ಸಿಸ್ಟಮ್ ಬೇಧಿಸಲು, ಹೊಸ ಆಲೋಚನೆಗಳು, ಹೊಸ ಕಲಾವಿದರು ಬರಲು ಇದು ನೆರವಾಯಿತು. ತೆಲುಗು, ತಮಿಳು ಮತ್ತು ಮಲಯಾಳಂ ಈ ವೇದಿಕೆಯನ್ನು ಬಳಸಿಕೊಂಡಷ್ಟು ಸಮರ್ಪಕವಾಗಿ ಕನ್ನಡಕ್ಕೆ ಅದು ಸಾಧ್ಯವಾಗಿಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗುತ್ತದೆ. ಕನ್ನಡಕ್ಕೆ ತನ್ನದೇ ಆದ ವೇದಿಕೆ ಇಲ್ಲದಿರುವುದೂ ಅದಕ್ಕೆ ಕಾರಣ. ಇವುಗಳ ನಡುವೆ ಓಟಿಟಿಯಲ್ಲಿ ನಡೆಯುವ ತೆರೆಮರೆಯ ಲೆಕ್ಕಾಚಾರಗಳು, ತಮಗೆ ಬೇಕಾದಂತೆ ಜನಾಭಿಪ್ರಾಯವನ್ನು ರೂಪಿಸುವ ಆಲ್ಗಾರಿದಂಗಳ ಬಗ್ಗೆ ಸಹ ದನಿ ಏಳುತ್ತಿದೆ. ಪ್ರೇಕ್ಷಕರು ಹೇಗೆ ಗ್ರಾಹಕರಾಗುತ್ತಿದ್ದಾರೆ ಎನ್ನುವ ಸತ್ಯವೂ ಕಣ್ಣೆದುರಲ್ಲಿದೆ. ಮನೆಯಲ್ಲಿದ್ದ ಒಂದೇ ಒಂದು ಮನರಂಜನಾ ಸ್ಥಳವನ್ನು ಒಡೆದು, ಕೋಣೆಕೋಣೆಗಳಲ್ಲೂ ಇವು ಮೊಬೈಲ್ ಸುತ್ತಲೂ ಒಂದೊಂದು ದ್ವೀಪ ಸೃಷ್ಟಿಸುತ್ತಿರುವ ಅಪಾಯದ ಬಗ್ಗೆಯೂ ಮಾತು ಕೇಳಿಬರುತ್ತಿದೆ. ಆದರೆ ಸಧ್ಯಕ್ಕಂತೂ ಇವು ಶುಕ್ಲಪಕ್ಷದಲ್ಲೇ ಇವೆ.

ಇದೆಲ್ಲದರ ನಡುವೆಯೂ ಈ ಓಟಿಟಿಗಳು ಕೊಡುತ್ತಿರುವ ಸಿನಿಮಾ, ವೆಬ್ ಸರಣಿ, ಡಾಕ್ಯುಮೆಂಟರಿಗಳು ಟೀಕೆ ಮಾಡುವವರ ಬಾಯಿಗಳನ್ನು ಸದ್ಯಕಂತೂ ಮುಚ್ಚಿಸುತ್ತಿವೆ. ಇದಿಷ್ಟೂ ಪೀಠಿಕೆ! ಇಷ್ಟೆಲ್ಲಾ ಕಂಟೆಂಟ್ ಇರುವ ಈ ವೇದಿಕೆಯನ್ನು ಕುರಿತು ಚರ್ಚೆ ಮಾಡದಿದ್ದರೆ ಹೇಗೆ?! ಮುಂದಿನ ವಾರದಿಂದ, ಪ್ರತಿ ವಾರ ನಾನು ನೋಡಿದ, ಇಷ್ಟಪಟ್ಟ, ಪಡದ, ಭರಿಸಿದ, ಪ್ರೀತಿಸಿದ ಕಾರ್ಯಕ್ರಮಗಳ ಬಗ್ಗೆ ಒಂದಿಷ್ಟು ಮಾತು… ನಾನು ನಾಟಕಗಳ ಬಗ್ಗೆ, ಸಿನಿಮಾಗಳ ಬಗ್ಗೆ ಬರೆದಾಗ ಪ್ರೀತಿಯಿಂದ ಓದಿದ್ದೀರಿ, ಮೆಚ್ಚಿದ್ದೀರಿ. ಈಗಲೂ ನೀವು ನನ್ನ ಜೊತೆ ಇರುವಿರೆನ್ನುವ ಭರವಸೆ ನನ್ನದು.

ಸಿಗೋಣ. ನಮಸ್ಕಾರಗಳು!

LEAVE A REPLY

Connect with

Please enter your comment!
Please enter your name here