ಬಹುನಿರೀಕ್ಷಿತ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಿರ್ದೇಶಕ ಹೇಮಂತ್‌ ರಾವ್‌ ಚಿತ್ರದಲ್ಲಿ ಸುಂದರ ಪ್ರೇಮಕತೆಯೊಂದನ್ನು ಹೇಳಲು ಹೊರಟಿದ್ದಾರೆ ಎನ್ನುವ ಸುಳಿವು ಸಿಗುತ್ತದೆ. ಕಣ್ಗಳಿಗೆ ಹಿತವೆನಿಸುವ ಛಾಯಾಗ್ರಹಣ, ಅದಕ್ಕೆ ಹೊಂದುವಂತಹ ಹಿನ್ನೆಲೆ ಸಂಗೀತದೊಂದಿಗೆ ಟ್ರೈಲರ್‌ ಮುದ ನೀಡುತ್ತದೆ.

ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ (Side – A) ಟ್ರೈಲರ್‌ ಬಿಡುಗಡೆಯಾಗಿದೆ. ಹೇಮಂತ್‌ ರಾವ್‌ ಚಿತ್ರಕಥೆ ರಚಿಸಿ, ನಿರ್ದೇಶಿಸಿರುವ ಚಿತ್ರವಿದು. ಟ್ರೈಲರ್‌ನಲ್ಲಿ (ರುಕ್ಮಿಣಿ) ಪ್ರಿಯಾ ಮತ್ತು (ರಕ್ಷಿತ್‌) ಮನು ಜೋಡಿಯ ಕೆಮಿಸ್ಟ್ರಿ ವರ್ಕ್‌ ಆಗಿದೆ. ಎಲ್ಲೂ ಆಡಂಬರದ ಡೈಲಾಗ್‌ಗಳಿಲ್ಲ, ಹೆಚ್ಚಿನ ಭಾವತೀವ್ರತೆ ಇಲ್ಲ. ಸರಳ ಪ್ರೇಮ ಕತೆಯೊಂದನ್ನು ಹೇಳಿದಂತಿದೆ ನಿರ್ದೇಶಕ ಹೇಮಂತರಾವ್‌. ಮಾತುಗಳಿಲ್ಲದೇ ಬರೀ ಮೌನದಲ್ಲೇ ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಮನು ಪಾತ್ರ ಹೆಚ್ಚು ಕಾಡುತ್ತದೆ. ಪ್ರಿಯಾಳ ಶುದ್ಧ ಪ್ರೀತಿ ಸಮುದ್ರದ ಅಲೆಗಳಂತೆ ಪ್ರಶಾಂತವಾಗಿ ವ್ಯಕ್ತವಾಗಿವೆ. ನಿರ್ದೇಶಕರು ಸಮುದ್ರವನ್ನೂ ಒಂದು ಪಾತ್ರವಾಗಿ ದುಡಿಸಿಕೊಂಡಿದ್ದಾರೇನೋ…

ಟ್ರೈಲರ್‌ನ ಒಂದೊಂದು ದೃಶ್ಯವೂ ಸಮುದ್ರದ ನೀಲಿ ಗಾಢ ಬಣ್ಣವನ್ನು ಮತ್ತು ಅದರ ಭಾವನೆಗಳ ಆಳವನ್ನು ಸಾರಿ ಹೇಳುತ್ತಿದೆ. ಮಾತುಗಳಲ್ಲಿ ಬಣ್ಣಿಸಲಾಗದ ಭಾವನೆಗಳು ಪಾತ್ರಗಳಿಂದ ವ್ಯಕ್ತವಾಗಿವೆ. ಚಿತ್ರದಲ್ಲಿ ಅಚ್ಯುತ್‌ ಕುಮಾರ್‌, ಅವಿನಾಶ್‌, ಶರತ್‌ ಲೋಹಿತಾಶ್ವ, ಪವಿತ್ರಾ ಲೋಕೇಶ್‌, ಗೋಪಾಲ್ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಪೋಸ್ಟರ್‌ಗಳು, ಟೀಸರ್‌ ಈಗಾಗಲೇ ಗಮನ ಸೆಳೆದಿದ್ದು, ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದ್ದು, Side-A ಸೆಪ್ಟೆಂಬರ್‌ 1ರಂದು ಮತ್ತು Side B ಅಕ್ಟೋಬರ್‌ 20ರಂದು ತೆರೆಕಾಣಲಿವೆ.

LEAVE A REPLY

Connect with

Please enter your comment!
Please enter your name here