‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೊದಲ ಸ್ಪರ್ಧಿಯಾಗಿ ‘777 ಚಾರ್ಲಿ’ ಸಿನಿಮಾ ಖ್ಯಾತಿಯ ಚಾರ್ಲಿ ಆಯ್ಕೆಯಾಗಿದೆ! ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್ಸ್‌ ಸಮಾರಂಭದಲ್ಲಿ ಈ ಘೋಷಣೆ ಹೊರಬಿದ್ದಿದೆ. ಕನ್ನಡ ಕಿರುತೆರೆ ಶೋಗಳ ಇತಿಹಾಸದಲ್ಲೇ ಇದೊಂದು ವಿಶಿಷ್ಟ ಆಯ್ಕೆಯಾಗಿದ್ದು, ವೀಕ್ಷಕರಲ್ಲಿ ಕುತೂಹಲ ಮನೆಮಾಡಿದೆ.

ಕಲರ್ಸ್ ಕನ್ನಡದಲ್ಲಿ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ ಪ್ರಸಾರ ಕಂಡಿದ್ದು, ಧಾರಾವಾಹಿಗಳ ತಂಡದವರೆಲ್ಲ ಒಂದೆಡೆ ಸೇರಿ ಅದ್ಧೂರಿಯಾಗಿ ಈ ಅವಾರ್ಡ್ಸ್ ಕಾರ್ಯಕ್ರಮ ನಡೆಸಿದ್ದಾರೆ. ಹಲವು ರೀತಿಯ ಮನರಂಜನೆ ಕಾರ್ಯಕ್ರಮಗಳೊಟ್ಟಿಗೆ ಈ ವೇದಿಕೆ ಮೇಲೆ ಹೊಸ ಘೋಷಣೆಯೊಂದು ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಅಕ್ಟೋಬರ್ 8ರಿಂದ ಹೊಸ ಸೀಸನ್ ಆರಂಭವಾಗುವ ಬಗ್ಗೆ ಮಾಹಿತಿ ಇದೆ. ಇದರ ಜೊತೆಗೆ ಬಿಗ್‌ ಬಾಸ್‌ (Bigg Boss) ಮನೆ ಒಳಗೆ ಹೋಗುವ ಸ್ಪರ್ಧಿಗಳು ಯಾರು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಈಗಾಗಲೇ ಅನೇಕ ಹೆಸರುಗಳು ಹರಿದಾಡಿವೆ. ಆದರೆ, ಯಾವುದೂ ಅಧಿಕೃತವಾಗಿಲ್ಲ. ಅಧಿಕೃತ ಪಟ್ಟಿ ಸಿಗೋಕೆ ಅಕ್ಟೋಬರ್ 8ರ ರಾತ್ರಿವರೆಗೆ ಕಾಯಲೇಬೇಕು. ಈ ಮಧ್ಯೆ ಒಬ್ಬರ ಹೆಸರನ್ನು ಅಧಿಕೃತ ಮಾಡಲಾಗಿದೆ.

‘777 ಚಾರ್ಲಿ’ ಚಿತ್ರದ ನಿರ್ದೇಶಕರಾದ ಕಿರಣ್ ರಾಜ್ ಅವರು ‘ಅನುಬಂಧ’ ವೇದಿಕೆ ಏರಿದ್ದರು. ಈ ವೇಳೆ ಮಾತನಾಡಿದ ಅನುಪಮ ಗೌಡ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ‘ಚಾರ್ಲಿ777’ ಸಿನಿಮಾದಲ್ಲಿ ಮಿಂಚಿದ್ದ ಚಾರ್ಲಿ ಈಗ ಬಿಗ್ ಬಾಸ್​ಗೆ ಬರ್ತಿದ್ದಾಳೆ ಎಂದು ಅಧಿಕೃತ ಘೋಷಣೆ ಮಾಡಿದ್ದು, ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲೇ ಇದೊಂದು ವಿಶಿಷ್ಟ ಆಲೋಚನೆ. ಚಾರ್ಲಿ BiggBossನಲ್ಲಿ ಭಾಗವಹಿಸುತ್ತಿದ್ದಾಳೆ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ ಅನುಪಮಾ ಗೌಡ. ‘ಬಿಗ್ ಬಾಸ್​ಗೆ ಟಾರ್ಚರ್ ಕೊಟ್ಟು ಬಾ. ಕೆಲವೊಂದು ರೂಲ್ಸ್ ಇದೆ. Biggboss ಹಾಡು ಹಾಕಿದಾಗ ಎದ್ದೇಳಬೇಕು. ಟಾಸ್ಕ್​ ಕೊಟ್ರೆ ಮಾಡಬೇಕು. ಟಾಸ್ಕ್ ಮಾಡಿದ್ರೆ ಮಾತ್ರ ಲಕ್ಷುರಿ ಬಜೆಟ್ ಸಿಗೋದು. ಲಕ್ಷುರಿ ಬಜೆಟ್ ಸಿಕ್ಕಿದ್ರೆ ಮಾತ್ರ ನಿಂಗೆ ಮೂಳೆ ಸಿಗೋದು’ ಎಂದು ಹಾಸ್ಯದಿಂದ ನಿರೂಪಣೆ ಮಾಡಿದ್ದಾರೆ. ಇದರ ಮಧ್ಯೆ ಚಾರ್ಲಿಯ ಸ್ನೇಹಿತರ ಗುಂಪು ಚಾರ್ಲಿಗೆ ಶುಭಾಶಯ ತಿಳಿಸಿರುವ ವಿಡಿಯೋವೊಂದು ಹೆಚ್ಚು ಗಮನ ಸೆಳೆದಿದೆ.

LEAVE A REPLY

Connect with

Please enter your comment!
Please enter your name here