ಹನ್ಸಲ್‌ ಮೆಹ್ತಾ ನಿರ್ಮಾಣ, ತುಷಾರ್‌ ಹಿರಾನಂದಾನಿ ನಿರ್ದೇಶನದ ‘Scam 2003’ ಹಿಂದಿ ಸರಣಿ ಟೀಸರ್‌ ಬಿಡುಗಡೆಯಾಗಿದೆ. ನಕಲಿ ಛಾಪಾ ಕಾಗದ ಹಗರಣದಲ್ಲಿ ದೊಡ್ಡ ಸುದ್ದಿಯಾದ ಅಬ್ದುಲ್‌ ಕರೀಂ ತೆಲ್ಗಿ ಜೀವನ ಆಧರಿಸಿದ ಸರಣಿ ಸೆಪ್ಟೆಂಬರ್‌ 2ರಿಂದ Sony Livನಲ್ಲಿ ಸ್ಟ್ರೀಮ್‌ ಆಗಲಿದೆ.

ನಕಲಿ ಛಾಪಾ ಕಾಗದ ಮತ್ತು ಖೋಟಾನೋಟ ಹಗರಣ ನಡೆಸಿದ ಅಬ್ದುಲ್‌ ಕರೀಂ ತೆಲ್ಗಿ ಜೀವನ ಆದರಿಸಿದ ‘Scam 2003’ ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ಪತ್ರಕರ್ತ ಸಂಜಯ್‌ ಸಿಂಗ್‌ ರಚನೆಯ ‘ರಿಪೋರ್ಟರ್‌ ಕಿ ಡೈರಿ’ ಕೃತಿಯನ್ನು ಆಧರಿಸಿ ತುಷಾರ್‌ ಹಿರಾನಂದಾನಿ ನಿರ್ದೇಶಿಸಿರುವ ಸರಣಿಯಿದು. ಯಶಸ್ವೀ ಸರಣಿ ‘Scam 1992’ ನಿರ್ದೇಶಿಸಿದ್ದ ಚಿತ್ರನಿರ್ದೇಶಕ ಹನ್ಸಲ್‌ ಮೆಹ್ತಾ ‘Scam 2003’ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಮಾಸ್ಟರ್ ಮೈಂಡ್ ತೆಲ್ಗಿ ಖೋಟಾನೋಟು ಮತ್ತು ನಕಲಿ ಛಾಪಾ ಕಾಗದ ಹಗರಣ ಸುಮಾರು 30,000 ಕೋಟಿ ರೂಪಾಯಿಯದ್ದು ಎನ್ನುವ ಅಂದಾಜು ಇದೆ. ಹಗರಣದಲ್ಲಿ ಕೆಲವು ರಾಜ್ಯಗಳ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇವನೊಟ್ಟಿಗೆ ಭಾಗಿಯಾಗಿದ್ದರು. ಟೀಸರ್‌ನಲ್ಲಿ ತೆಲ್ಗಿ ಹಣ ಮತ್ತು ನಕಲಿ ಸ್ಟಾಂಪ್‌ ಪೇಪರ್‌ಗಳನ್ನು ತಯಾರಿಸುವ ಯೋಜನೆಯ ಕುರಿತು ಮಾತನಾಡುವುದನ್ನು ತೋರಿಸಲಾಗಿದೆ. ‘ಹಣವನ್ನು ಗಳಿಸುವುದಲ್ಲ, ತಯಾರಿಸುವುದು’ ಎಂದು ತೆಲ್ಗಿ ಸಂಭಾಷಣೆ ನಡೆಸುತ್ತಿರುವುದು ಮತ್ತು ಖೋಟಾನೋಟು ಮುದ್ರಿಸುವ ಯಂತ್ರಗಳು ಮತ್ತು ನಕಲಿ ಸ್ಟಾಂಪ್‌ ಪೇಪರ್‌ಗಳ ಯೋಜನೆಯ ತೆಲ್ಗಿ ಹಾಕಿಕೊಂಡಿದ್ದ ಕೆಲ ಮಾಸ್ಟರ್‌ ಪ್ಲಾನ್‌ಗಳನ್ನು ತೋರಿಸಲಾಗಿದೆ.

ಟೀಸರ್‌ ಕೊನೆಯಲ್ಲಿ ‘ಜೀವನದಲ್ಲಿ ಮುಂದೆ ಬರಬೇಕಾದರೆ ಧೈರ್ಯವೇ ಮುಖ್ಯ, ಡಾರ್ಲಿಂಗ್‌’ ಎನ್ನುವ ದನಿ ಕೇಳಿಸುತ್ತದೆ. ‘ಸ್ಕ್ಯಾಮ್ 2003′ ಸರಣಿಯನ್ನು ಸೋನಿಯ Studio Nextನ ಸಹಯೋಗದೊಂದಿಗೆ Applause Entertainment ನಿರ್ಮಿಸಿದೆ. ಹಿರಿಯ ರಂಗಕರ್ಮಿ, ನಿರ್ದೇಶಕ, ಬರಹಗಾರ ಗಗನ್ ದೇವ್ ರಿಯಾರ್ ಅವರು ಸರಣಿಯಲ್ಲಿ ತೆಲ್ಗಿ ಪಾತ್ರ ನಿರ್ವಹಿಸಿದ್ದಾರೆ. Sony LIV ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಟೀಸರ್ ಹಂಚಿಕೊಂಡು, ”ಖೇಲ್ ಬಡಾ ಥಾ, ಔರ್ ಖಿಲಾಡಿ…’ ಊಹೆಗೂ ನಿಲುಕದ ಪ್ರಮಾಣದಲ್ಲಿ ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಅಬ್ದುಲ್ ಕರೀಮ್ ತೆಲ್ಗಿಯ ಭಾರತದ ದೊಡ್ಡ ಹಗರಣದ ಕತೆ’ ಎಂದಿದೆ. ಮುಂದಿನ ತಿಂಗಳು, ಸೆಪ್ಟೆಂಬರ್‌ 2ರಿಂದ ಸರಣಿ Sonly Livನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲ
Next articleDurban International Film Festival | ‘ಜೋರಮ್’ ಹಿಂದಿ ಚಿತ್ರಕ್ಕೆ ಎರಡು ಪ್ರಶಸ್ತಿ

LEAVE A REPLY

Connect with

Please enter your comment!
Please enter your name here