ನಾವು ಏಕೆ ಸುಳ್ಳು ಹೇಳುತ್ತೇವೆ? ಇದಕ್ಕೆ ಯಾವುದೇ ಸ್ಪಷ್ಟವಾದ ಕಾರಣವಿಲ್ಲ, ಆದರೆ ‘ಸ್ಕೂಲ್ ಆಫ್ ಲೈಸ್’ ವಿನಾಕಾರಣ ಹೇಳುವ ಸಣ್ಣ ಸಣ್ಣ ಸುಳ್ಳುಗಳಿಂದ ಹಿಡಿದು, ಇನ್ಯಾವುದನ್ನೋ ಮರೆಮಾಚಲು ಹೇಳುವ ಗಂಭೀರ ಸುಳ್ಳುಗಳ ಚಿತ್ರಣವನ್ನು ನೀಡುತ್ತದೆ. DisneyPlus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ ಸರಣಿ.
‘ಸ್ಕೂಲ್ ಆಫ್ ಲೈಸ್’ ವಿಶಿಷ್ಟ ಕಥಾಹಂದರ ಹೊಂದಿರುವ ವೆಬ್ ಸರಣಿ. ಒಂದು ಸುಳ್ಳಿನ ಸುತ್ತ ಹೆಣೆಯಲಾದ ಕತೆಯೋ ಅಥವಾ ಕತೆಯೇ ಸುಳ್ಳೋ ಎಂಬಂತೆ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತಾ, ಮತ್ತೊಮ್ಮೆ ಸಿಕ್ಕು ಸಿಕ್ಕಾಗಿ ಇಲ್ಲಿ ಸುಳ್ಳು ಯಾವುದು ಎಂದು ಯೋಚಿಸುತ್ತಿರುವಾಗಲೇ ಮತ್ತೊಂದು ಸತ್ಯ ತೆರೆಯುತ್ತಾ ಹೋಗುತ್ತದೆ. ಸಣ್ಣ ಪಟ್ಟಣವೊಂದರಲ್ಲಿರುವ ಶಿಕ್ಷಣ ಸಂಸ್ಥೆ RISEನಲ್ಲಿನ ಆಗು ಹೋಗುಗಳು ನಿಜ – ಸುಳ್ಳಿನ ನಡುವಿನ ಹುಡುಕಾಟದಲ್ಲಿ ಕತೆ ಮುಂದೆ ಸಾಗುತ್ತದೆ. ಬೋರ್ಡಿಂಗ್ ಸ್ಕೂಲ್, ಅಲ್ಲಿನ ಶಿಸ್ತು, ಮಕ್ಕಳ ನಡುವಿನ ಗೆಳೆತನ, ಅವರ ಕುಟುಂಬ, ಶಿಕ್ಷಕರ ಒಡನಾಟ ಇವೆಲ್ಲದರ ನಡುವೆ ಕಾಡುವ ಏಕಾಂತ, ನಂಬಿಕೆ, ಅನುಮಾನ ಎಲ್ಲವೂ ಇಲ್ಲಿದೆ. ಶಾಲೆಯ ಬಾಲಕ ಶಕ್ತಿ ಸಲ್ಗಾಂವ್ಕರ್ ಕಾಣೆಯಾಗುವುದರೊಂದಿಗೆ ಸುಳ್ಳು- ನಿಜಗಳ ಹಾವು ಏಣಿ ಆಟ ಶುರುವಾಗುತ್ತದೆ. ಶಕ್ತಿ ಎಲ್ಲಿದ್ದಾನೆ? ಅವನಿಗೆ ಏನಾಗುತ್ತದೆ? ಆ ರಾತ್ರಿ ನಡೆದಿದ್ದು ಏನು ಎಂಬ ಕುತೂಹಲವನ್ನು ಕೊನೆಯವರೆಗೆ ಕಾಯ್ದುಕೊಂಡು ಹೋಗುವ ಕತೆಯಲ್ಲಿ ಮಕ್ಕಳ ಮನಸ್ಥಿತಿಯ ವಿವಿಧ ಹಂತಗಳನ್ನು ಕಾಣಬಹುದು.
‘ಸ್ಕೂಲ್ ಆಫ್ ಲೈಸ್’ ಕೇವಲ ಸುಳ್ಳು, ಲೋಪಗಳು ಮತ್ತು ನೈತಿಕ ಸಂಘರ್ಷಗಳಿಂದ ತುಂಬಿರುವ ಶಾಲೆಯಲ್ಲ. ‘ಸ್ಕೂಲ್ ಆಫ್ ಲೈಸ್’ ಸುಳ್ಳು ಹೇಳುವ ರೀತಿ ಹಾಗೂ ಸುಳ್ಳಿನಿಂದಲೇ ಹೆಣೆಯಲ್ಪಟ್ಟ, ಸುಳ್ಳಿನ ಮೂಲಕ ಜಾರಿಕೊಳ್ಳುವ ‘ಸುಲಭ’ ವಿಧಾನದ ಮುಖಗಳನ್ನು ತೆರೆದಿಡುತ್ತಾ ಹೋಗುತ್ತದೆ. ಸುಳ್ಳು ಎಂದರೇನು? ನಾವೇಕೆ ಸುಳ್ಳು ಹೇಳುತ್ತೇವೆ? ಎಂದು ಯೋಚಿಸುವಾಗಲೇ ಇವೆರಡೂ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದು ಅರಿವಿಗೆ ಬರುತ್ತದೆ.ಅದೆಷ್ಟು ಸುಳ್ಳು ಹೇಳುತ್ತೀಯಾ ಎಂದು ಪುಟ್ಟ ಬಾಲಕ ಮುರಳಿ ತನ್ನ ಗೆಳೆಯ ಶಕ್ತಿಯಲ್ಲಿ ಹೇಳಿದಾಗ ನಿನಗೆ ಸುಳ್ಳು ಹೇಳಲು ಬರಲ್ಲ, ಸುಳ್ಳು ಹೇಳುವಾಗ ಅದೇ ಸತ್ಯ ಎನ್ನುವ ರೀತಿಯಲ್ಲಿ ಹೇಳಬೇಕು ಅಂತಾನೆ ಅವನು. ಶಕ್ತಿಯ ಬಂಕ್‌ಮೇಟ್ ಆಗಿರುವ ಮುರಳಿ, ಶಕ್ತಿ ಕಾಣೆಯಾದ ಆ ರಾತ್ರಿ ತಾನು ಅವನು ಹೊರಗೆ ಓಡಿಹೋಗುತ್ತಿರುವುದನ್ನು ನೋಡಿದ್ದೇನೆ ಅಂತಾನೆ. ಅದೂ ಸುಳ್ಳು!
ಶಕ್ತಿ ಕಾಣೆಯಾಗುವುದರೊಂದಿಗೆ 17ರ ಹರೆಯದ ಹುಡುಗರ ಗ್ಯಾಂಗ್‌ನ ಮೂಲಕ ಸುಳ್ಳಿನ ಇನ್ನೊಂದು ವರ್ಷನ್ ಕಾಣಸಿಗುತ್ತದೆ. ಚಿಗುರು ಮೀಸೆಯ ವಿಕ್ರಮ್ ಮತ್ತು ತಪನ್ ಸುಳ್ಳುಗಳ ನಡುವೆ ಒದ್ದಾಡುತ್ತಾರೆ. ತಮ್ಮ ತಪ್ಪುಗಳನ್ನು ಮರೆ ಮಾಚಲು ಸುಳ್ಳು ಹೇಳುತ್ತಾ ಹೋಗುತ್ತಾರೆ. ಬೋರ್ಡಿಂಗ್ ಸ್ಕೂಲ್ ಕ್ಯಾಂಪಸ್‌ನಲ್ಲಿನ ಆಟ ಪಾಠಗಳ ನಡುವೆ ಟೀನೇಜ್ ಲವ್, ಡ್ರಗ್ಸ್, ಕದ್ದು ಮುಚ್ಚಿ ಔಟಿಂಗ್ ಇವೆಲ್ಲದರ ನಡುವೆ ಹದಿಹರೆಯದಲ್ಲಿ ಕಾಡುವ ಒತ್ತಡ, ಮಾನಸಿಕ ತೊಳಲಾಟ, ತಮ್ಮ ತಪ್ಪುಗಳಿಂದಾಗ ಶಿಕ್ಷಣ ವಂಚಿತರಾಗಿ ಭವಿಷ್ಯ ಇಲ್ಲವಾದರೆ ಎಂಬ ಆತಂಕ ಮತ್ತಷ್ಟು ಸುಳ್ಳು ಹೇಳಲು ಪ್ರೇರೇಪಿಸುತ್ತದೆ.
ಈ ಸುಳ್ಳಿನ ಗೋಡೆಗಳ ನಡುವೆ ಚಲನೆ ಇರುವ ಎರಡು ಪಾತ್ರಗಳು ಸ್ಯಾಮ್ ಮತ್ತು ನಂದಿತಾ. ನಾವು ಏಕೆ ಸುಳ್ಳು ಹೇಳುತ್ತೇವೆ? ಇದಕ್ಕೆ ಯಾವುದೇ ಸ್ಪಷ್ಟವಾದ ಕಾರಣವಿಲ್ಲ, ಆದರೆ ‘ಸ್ಕೂಲ್ ಆಫ್ ಲೈಸ್’ ವಿನಾಕಾರಣ ಹೇಳುವ ಸಣ್ಣ ಸಣ್ಣ ಸುಳ್ಳುಗಳಿಂದ ಹಿಡಿದು, ಇನ್ಯಾವುದನ್ನೋ ಮರೆಮಾಚಲು ಹೇಳುವ ಗಂಭೀರ ಸುಳ್ಳುಗಳ ಚಿತ್ರಣವನ್ನು ನೀಡುತ್ತದೆ. ಇಲ್ಲಿನ ವರ್ತಮಾನಕ್ಕೆ ಭೂತಕಾಲದ ಕರಿಛಾಯೆ ಇದೆ. ಕುಟುಂಬದಲ್ಲಿನ ಸಮಸ್ಯೆ, ಬಾಲ್ಯದಲ್ಲಿ ಅನುಭವಿಸಿದ ದೌರ್ಜನ್ಯಗಳು, ನೋವು, ಹತಾಶೆ, ಕಣ್ಣೀರು ಎಲ್ಲವೂ ಪ್ರತಿಯೊಂದು ಪಾತ್ರದ ವರ್ತಮಾನದಲ್ಲಿ ಕಾಡುತ್ತದೆ, ಕಾಡಿಸುತ್ತದೆ.
ಹುರಿದ ಮೊಟ್ಟೆಯ ತುಂಡುಗಳನ್ನು ಕೋಳಿ ಹೆಕ್ಕಿ ತಿನ್ನುವಾಗ ಆ ಹುಡುಗ ಶಕ್ತಿ, ತನ್ನ ಗೆಳೆಯ ಚಂಚಲ್‌ನಲ್ಲಿ ಕೋಳಿ ತನ್ನ ಸ್ವಂತ ಮಗುವನ್ನೇ ತಿನ್ನುತ್ತಿದೆ ಎಂದು ಅದಕ್ಕೆ ತಿಳಿದಿದೆಯಾ ಎಂದು ಕೇಳುತ್ತಾನೆ. ಮಕ್ಕಳ ಸ್ವಭಾವಕ್ಕೆ ಅವರ ಪೋಷಕರು ಯಾವ ರೀತಿ ಕಾರಣವಾಗಿರುತ್ತಾರೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ತೋರಿಸಿದ ರೀತಿ ಇದು. ತಮ್ಮ ಕುಟುಂಬದಲ್ಲಿನ ನೋವು, ವೈಯಕ್ತಿಕ ಜೀವನದ ಸಮಸ್ಯೆಗಳಿಂದ ಹೊರ ಬರಲು ಒಬ್ಬೊಬ್ಬರು ಸುಳ್ಳಿನ ಆಶ್ರಯ ಪಡೆಯುತ್ತಾರೆ. ಅಮ್ಮ ಚೆನ್ನಾಗಿ ಅಡುಗೆ ಮಾಡುತ್ತಾಳೆ ಎಂದು ಸುಳ್ಳು ಹೇಳುವ ಪೋರನ ಆ ಅಮ್ಮನಿಗೆ ತನ್ನ ಮಗುವಿನ ದೇಹದಲ್ಲಿ ಮಚ್ಚೆ ಇತ್ತೇ ಇಲ್ಲವೇ ಎಂಬುದು ಗೊತ್ತಿರುವುದಿಲ್ಲ . ಮನಸ್ಸು ಬಯಸಿದರೂ ಅನಾರೋಗ್ಯದಿಂದ ಇರುವ ಅಪ್ಪನನ್ನು ಬಿಟ್ಟು ಬರಲಾರೆ ಎಂದು ತನ್ನ ಸ್ನೇಹಿತನಲ್ಲಿ ಹೇಳುವ ನಂದಿತಾ, ಮಗ ಎಲ್ಲ ಜವಾಬ್ದಾರಿ ಹೊತ್ತಿದ್ದಾನೆ, ಹೊರಗಿನಿಂದ ಗಟ್ಟಿಗನಾಗಿ ಕಾಣಿಸಿದ್ದರೂ ಅವನು ತುಂಬಾ ಮೃದು ಎಂದು ಹೇಳುವ ವಿಕ್ರಮ್‌ನ ಅಮ್ಮ…ಹೆಣ್ಣು ಮನಸ್ಸಿನ ಸೂಕ್ಷ್ಮತೆಗಳನ್ನು ವಿವಿಧ ಫ್ರೇಮ್‌ಗಳಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅವಿನಾಶ್ ಅರುಣ್.
ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲಭ್ಯವಿರುವ ಎಂಟು ಭಾಗಗಳ ‘ಸ್ಕೂಲ್ ಆಫ್ ಲೈಸ್’ ವೆಬ್ ಸರಣಿಯಲ್ಲಿ ಶೈಲಿ ಮತ್ತು ಭಾವ ಅದ್ಭುತವಾಗಿ ಸಂಯೋಜಿಸಲ್ಪಟ್ಟಿದೆ. ಕಥಾ ನಿರೂಪಣೆಯು ಪದರು ಪದರಾಗಿ ಬಿಚ್ಚುತ್ತಾ ಸಂಯಮದಿಂದ ಕೂಡಿದೆ. ಗೊಂದಲಮಯ ಮನಸ್ಥಿತಿಯ ಪರಿಣಾಮ, ಆಂತರಿಕ ಪ್ರಕ್ಷುಬ್ಧತೆಗಳ ತಾಕಲಾಟ, ನಂಬಿಕೆ ದ್ರೋಹಗಳು, ಸತ್ಯದ ಮೇಲೆ ಸವಾರಿ ಮಾಡುವ ಸುಳ್ಳುಗಳ ಮೂಲಕ ಹಲವು ಬದುಕಿನ ಚಿತ್ರಣಗಳು ನಮ್ಮ ಮುಂದೆ ಬಂದು ನಿಲ್ಲುವಾಗ ಈ ‘ಶಾಲೆ’ ನಮ್ಮೊಳಗಿನ ನಾವು ಮತ್ತು ನಮ್ಮ ಮಕ್ಕಳು ‘ಸುಳ್ಳು’ಗಳ ಕೈಹಿಡಿದಿದ್ದೇವೆಯೇ ಎಂಬುದನ್ನು ನೋಡುವಂತೆ ಮಾಡುತ್ತದೆ.