ಕಾದಂಬರಿಯಷ್ಟು ಪರಿಣಾಮಕಾರಿಯಾಗಿ ಚಿತ್ರ ಮೂಡಿಬಂದಿಲ್ಲದೆ ಹೋದರೂ ಒಂದು ಕೊಲೆಯ ಸುತ್ತ ನಡೆಯುವ ತನಿಖೆಯ ಚಿತ್ರಕ್ಕೆ ಇರಬೇಕಾದ ಮುಖ್ಯ ಅಂಶಗಳು ಎಲ್ಲವೂ ಇದರಲ್ಲಿ ಇದೆ. ಪಾತ್ರಧಾರಿಗಳ ಸಾಧಾರಣ ನಟನೆಯನ್ನು ಪಕ್ಕಕ್ಕಿಟ್ಟು ನೋಡಿದರೆ ಖಂಡಿತ ಇದೊಂದು ಮನರಂಜಿಸುವ ಒಳ್ಳೆಯ ಥ್ರಿಲ್ಲರ್ ಚಿತ್ರ. ಪಂಕಜ್ ತ್ರಿಪಾಠಿ ಅವರ ಪಾತ್ರ ಚಿತ್ರವನ್ನು ಮತ್ತಷ್ಟು ಆಸಕ್ತಿಕರವಾಗಿ ಮಾಡಿರುವುದು ಹೌದು. ‘ಮರ್ಡರ್ ಮುಬಾರಕ್’ Netflixನಲ್ಲಿ ಲಭ್ಯವಿದೆ.

ಥ್ರಿಲ್ಲರ್ ಚಿತ್ರಗಳು ಎಂದಾಗ ಸಾಮಾನ್ಯ ಚಿತ್ರಕಥೆಯಲ್ಲಿ ಒಳಪದರ ಮತ್ತು ಹೊರಪದರಗಳು ಇರುತ್ತವೆ. ಮೇಲ್ನೋಟಕ್ಕೆ ಕಾಣುವ ಚಿತ್ರಣವೇ ಬೇರೆ ಮತ್ತು ಚಿತ್ರದ ಒಳಹೂರಣವೇ ಬೇರೆ ಇರುತ್ತದೆ. ಇವೆರಡೂ ಪದರಗಳನ್ನು ಸರಿಯಾದ ಹದದಲ್ಲಿ ಮಿಶ್ರಣ ಮಾಡಿ ವೀಕ್ಷಕರಿಗೆ ತಲುಪಿಸುವ ಸವಾಲುಗಳನ್ನು ಇಂಥ ಚಿತ್ರಗಳು ಒಡ್ಡುತ್ತವೆ. ‘ಮರ್ಡರ್ ಮುಬಾರಕ್’ ಈ ಸವಾಲಿನಲ್ಲಿ ಜಯಿಸಿದೆಯೇ? Netflix ನೋಡುಗರಿಗೆ ಥ್ರಿಲ್ಲರ್ ಚಿತ್ರಗಳು ಹೊಸದೇನಲ್ಲ. ನಿರ್ದೇಶಕರಾದ ಹೋಮಿ ಅದಜಾನಿಯ ಇಲ್ಲಿ ಆಯ್ಕೆ ಮಾಡಿಕೊಂಡಿರುವ ಕಥೆಯೂ ಅಂಥದ್ದೇ. ಅಂಜುಲ್ ಚೌಹಾನ್ ಅವರ ‘ಕ್ಲಬ್ ಯು ಟು ಡೆತ್’ ಕಾದಂಬರಿಯ ಮೇಲೆ ಚಿತ್ರ ಆಧಾರಿತವಾಗಿದೆ.

ದೆಹಲಿಯ ಅತ್ಯಂತ ಹೈಕ್ಲಾಸ್ ಸಮಾಜದ ಕ್ಲಬ್ ಒಂದರ ಚಿತ್ರಣದೊಂದಿಗೆ ಚಿತ್ರ ಶುರುವಾಗುತ್ತದೆ. ಕಳೆದು ಹೋದ ಬೆಕ್ಕನ್ನು ಹುಡುಕುತ್ತಿರುವ ಹುಡುಗಿಯ ದೃಶ್ಯದೊಂದಿಗೆ ಚಿತ್ರವಿಚಿತ್ರ ಪಾತ್ರಪರಿಚಯ ಆಗುತ್ತಾ ಹೋಗುತ್ತದೆ. ಒಂದು ನವಿರಾದ ಹಾಸ್ಯಮಿಶ್ರಿತ ವಿಡಂಬನೆ ಮಾದರಿಯ ನಿರೂಪಣೆಯನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಕ್ಲಬ್ ಎಷ್ಟು ಪ್ರಖ್ಯಾತವೆಂದರೆ ಅಲ್ಲಿನ ಸದಸ್ಯತ್ವ ಸಿಗುವುದೇ ಬಹಳ ಕಷ್ಟ. ಕೋಟಿಗಟ್ಟಲೆ ಬೆಲೆಬಾಳುವ ಕ್ಲಬ್ ಸದಸ್ಯತ್ವ ಕೇವಲ ದುಡ್ಡಿದ್ದ ಮಾತ್ರಕ್ಕೆ ಸಿಗುವುದಿಲ್ಲ. ಸರದಿಯಲ್ಲಿ ಕಾಯಬೇಕು. ಒಮ್ಮೆ ಸದಸ್ಯರು ಆದರೆಂದರೆ ಸಾವಿಗೆ ಮಾತ್ರ ಅವರನ್ನು ಅಲ್ಲಿಂದ ಕದಲಿಸುವ ಸಾಮರ್ಥ್ಯ ಇರುವುದು.ಅಷ್ಟು ಪ್ರತಿಷ್ಠೆಯ ಸದಸ್ಯತ್ವ ಅಲ್ಲಿಯದ್ದು. ದೆಹಲಿಯ ಮೇಲ್ವರ್ಗದ ಚಿತ್ರಣಗಳನ್ನು ಯಥಾವತ್ತಾಗಿ ವಿವರಿಸುವ ಕಾದಂಬರಿಯ ಸಾರವನ್ನು ಒಂದು ಮಟ್ಟಿಗೆ ಚಿತ್ರ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ ಅಷ್ಟೇ ಆದರೆ ಸಾಕೇ?

ಮುಂದೇನೇನಿದೆ ಎಂದು ನೋಡುತ್ತಾ ಹೋದರೆ ಇಂತಹ ಪ್ರತಿಷ್ಠೆಯ ರಾಯಲ್ ದೆಹಲಿ ಕ್ಲಬ್ ಇಂದ ACP ಭವಾನಿ ಸಿಂಗ್ ಮತ್ತು ಅವರ ತಂಡಕ್ಕೆ ಒಂದು ಕರೆ ಬರುತ್ತದೆ. ಜಿಮ್ ಟ್ರೇನರ್ ಒಬ್ಬನ ಸಾವು ಮೇಲ್ನೋಟಕ್ಕೆ ಅಪಘಾತದಂತೆ ಕಂಡರೂ ಅದು ಒಂದು ಕೊಲೆ ಎಂದು ಭವಾನಿ ಸಿಂಗ್ ತನ್ನ ಸೂಕ್ಷ್ಮ ಅವಲೋಕನದಲ್ಲಿ ಕಂಡುಕೊಳ್ಳುತ್ತಾನೆ. ಅಲ್ಲಿಂದ ಅಸಲಿ ನಕಲಿಗಳ ನಡುವಿನ ಪರದೆ ಸರಿಯುತ್ತಾ ಕಣ್ಣಾಮುಚ್ಚಾಲೆ ಆಟ ಶುರುವಾಗುತ್ತದೆ. ಈಗ ಎಷ್ಟೇ ಪ್ರತಿಷ್ಠಿತರಾದರೂ ಕ್ಲಬ್‌ನಲ್ಲಿ ಅಂದು ಇದ್ದವರೆಲ್ಲರೂ ಶಂಕಿತರೇ.

ರಣವಿಜಯ್ ಪಾತ್ರದಲ್ಲಿ ಸಂಜಯ್ ಕಪೂರ್ ಕಾಣಿಸಿಕೊಂಡಿದ್ದಾರೆ. ರಾಜಮನೆತನಕ್ಕೆ ಸೇರಿದ ಆದರೆ ಸದ್ಯಕ್ಕೆ ಕೈಯಲ್ಲಿ ಕಾಸಿಲ್ಲದಿದ್ದರೂ ಒಣಜಂಭಕ್ಕೆ ಏನೂ ಕಡಿಮೆಯಿಲ್ಲದ ಒಂದು ಹೊತ್ತಿನ ಊಟವನ್ನೂ ಬಡವರಿಗೆ ಕೊಡುವ ನೆಪದಲ್ಲಿ ಕ್ಲಬ್ ಇಂದ ಕದ್ದು ಒಯ್ಯುವ ಚಿಲ್ಲರೆ ಬುದ್ಧಿಯ ಮನುಷ್ಯನ ಪಾತ್ರ. ಇನ್ನು ಬಿ ಗ್ರೇಡ್ ಚಿತ್ರಗಳ ನಾಯಕಿ ಎಂದೇ ಕುಖ್ಯಾತವಾಗಿರುವ ನಟಿ ‘ಶೆಹನಾಜ್’ ಪಾತ್ರದಲ್ಲಿ ಕರಿಷ್ಮಾ ಕಪೂರ್ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಡಿಂಪಲ್ ಕಪಾಡಿಯ ವಿಚಿತ್ರ ಶೋಕಿಯ ಸದಾ ಅಮಲಿನಲ್ಲಿ ಇರುವ ಮಧ್ಯವಯಸ್ಕ ಮಹಿಳೆ ‘ಕುಕಿ’ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇದೇ ರೀತಿ ಚಿತ್ರದ ತುಂಬಾ ಚಿತ್ರವಿಚಿತ್ರ ನಡವಳಿಕೆಗಳ ಪಾತ್ರಗಳನ್ನು ತುಂಬಿರುವುದನ್ನು ಗಮನಿಸಬಹುದು. ಇದು ಹಾಸ್ಯವನ್ನು ಹುಟ್ಟಿಸಿ ವೀಕ್ಷಕರನ್ನು ಕತೆಯ ಕೇಂದ್ರ ವಿಷಯದಿಂದ ಮನಸ್ಸು ತಿರುಗಿಸುವುದಕ್ಕೂ ಇರಬಹುದು ಎನಿಸುವುದು ಸುಳ್ಳಲ್ಲ.

ಇನ್ನು ‘ಬಾಂಬಿ’ ಎನ್ನುವ ಚಿಕ್ಕ ವಯಸ್ಸಿನ ವಿಧವೆಯ ಪಾತ್ರದಲ್ಲಿ ನಟಿಸಿರುವ ಸಾರಾ ಅಲಿ ಖಾನ್ ಪಾತ್ರ ಇಷ್ಟೂ ಪಾತ್ರಗಳ ನಡುವೆ ತನ್ನ ಹೈ ಪ್ರೊಫೈಲ್ ವಿಷಾದಮಿಶ್ರಿತ ಹುಡುಗಾಟದೊಂದಿಗೆ ಗಮನ ಸೆಳೆಯುತ್ತದೆ. ಆಕಾಶ್ ಪಾತ್ರದಲ್ಲಿ ನಟಿಸಿರುವ ವಿಜಯ್ ವರ್ಮಾ ಅವರ ಪ್ರತಿಭೆಗೆ ಈ ಪಾತ್ರ ಸಾಲದು, ಇನ್ನೂ ಏನೋ ಬೇಕಿತ್ತು ಎನಿಸುತ್ತದೆ. ಎಲ್ಲರ ವಿಲಕ್ಷಣ ಹಿನ್ನೆಲೆಗಳನ್ನು ಗಮನದಲ್ಲಿ ಇಟ್ಟುಕೊಂಡೇ ಸ್ವಲ್ಪವೂ ವಿಚಾಲಿತವಾಗದೇ ತನಿಖೆ ನಡೆಸುವ ACP ಭವಾನಿ ಸಿಂಗ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಅವರ ಅಭಿನಯ ಮೆಚ್ಚುಗೆಯಾಗುತ್ತದೆ.

ಪಾತ್ರವರ್ಗ ಚೆನ್ನಾಗಿದೆ ಎನ್ನುವುದೇನೋ ಸರಿ. ಅದರಲ್ಲೂ ಪಂಕಜ್ ತ್ರಿಪಾಠಿ ಅವರ ಅಳತೆ ಮೀರದ ನಟನೆ, ಎಷ್ಟು ಬೇಕೋ ಅಷ್ಟೇ ಹಾವಭಾವ ಅವರ ಪಾತ್ರದ ಗಂಭೀರತೆಯನ್ನು ಹೆಚ್ಚಿಸಿದೆ. ಆದರೆ ಇದೇ ಮಾತನ್ನು ಮಿಕ್ಕ ಪಾತ್ರಗಳ ಬಗ್ಗೆ ಹೇಳಲಿಕ್ಕೆ ಆಗುವುದಿಲ್ಲ. ವಿಡಂಬನಾತ್ಮಕವಾಗಿ ಮಾಡಲು ಹೋಗಿ ಸುಮಾರು ಕಡೆ ಪಾತ್ರಗಳು ಹಾಸ್ಯಾಸ್ಪದವಾಗಿ ಕಾಣುತ್ತವೆ. ಒಂದು ಕೊಲೆಯ ಸನ್ನಿವೇಶಕ್ಕೆ ಇರಬೇಕಾದ ಘನತೆ ನಿರೂಪಣೆಯಲ್ಲಿ ಕಂಡುಬರುವುದಿಲ್ಲ. ಹಿನ್ನೆಲೆ ಸಂಗೀತ ಕೂಡ ಚಿತ್ರದ ಭಾವವನ್ನು ಲಘುವಾಗಿ ಆಗುವಂತೆ ಮಾಡಿ ಎಷ್ಟೋ ಕಡೆ ಬಹಳ ಕಿರಿಕಿರಿ ಎನಿಸುತ್ತದೆ. ಎಲ್ಲಾ ಪಾತ್ರಗಳೂ ಏನೋ ತಮಾಷೆಯ ಘಟನೆ ನಡೆದಂತೆ ಬಹಳ ಲಘುವಾಗಿ ವರ್ತಿಸುವುದು ಬಹಳ ಕಿರಿಕಿರಿ ಮಾಡುತ್ತದೆ. ಎಷ್ಟೊಂದು ಹಿರಿಯ ನಟನಟಿಯರ ದಂಡು ಇದ್ದರೂ ಯಾರ ಅಭಿನಯವೂ ಮನಸ್ಸಲ್ಲಿ ನಿಲ್ಲುವುದಿಲ್ಲ. ಪಂಕಜ್ ಒಬ್ಬರನ್ನು ಹೊರತುಪಡಿಸಿ ಮಿಕ್ಕ ಎಲ್ಲರೂ ಯಾರದ್ದೋ ಬಲವಂತಕ್ಕೆ ನಟಿಸಿದ ಹಾಗೆ ಕಾಣುತ್ತದೆ.

ಇನ್ನು ಕತೆಯ ವಿಚಾರಕ್ಕೆ ಬಂದರೆ ನಿರೀಕ್ಷೆಗೆ ಮೋಸವಿಲ್ಲ. ಸಾಕಷ್ಟು ತಿರುವು ಮತ್ತು ರಹಸ್ಯಗಳನ್ನು ಒಳಗೊಂಡ ಕತೆ ಅನಿರೀಕ್ಷಿತ ಅಚ್ಚರಿ ಮೂಡಿಸುವ ತಿರುವೊಂದನ್ನು ಅಂತ್ಯದಲ್ಲಿ ನೀಡುತ್ತದೆ. ಪಾತ್ರಧಾರಿಗಳ ಕಳಪೆ ನಟನೆಯಿಂದ ಕತೆಗೆ ಧಕ್ಕೆಯಾಗಿಲ್ಲ ಎನ್ನುವುದೊಂದೇ ಸಮಾಧಾನ. ಆ ನಿಟ್ಟಿನಲ್ಲಿ ಚಿತ್ರಕಥೆ ಪ್ರಶಂಸಾರ್ಹವಾಗಿದೆ. ಆದರೆ ಚಿತ್ರ ಮುಗಿದ ಮೇಲೆ ಒಂದು ಒಟ್ಟಾರೆಯಾದ ಅನುಭವ ನೋಡುಗನಿಗೆ ಸಿಗುವುದಿಲ್ಲ. ಒಂದು ರೀತಿಯ ಚೆಲ್ಲಾಪಿಲ್ಲಿ ಎನಿಸುವಂತಹ ಅನುಭವ ಮೂಡುತ್ತದೆ. ಉದಾಹರಣೆಗೆ ಹೇಳಬೇಕೆಂದರೆ ನೋಡಿಕೊಳ್ಳಲು ಆಗದೇ ಬಿಟ್ಟ ಆ ಮಗು, ಅನಾಥಾಶ್ರಮದ ತುಣುಕು ಹೀಗೆ ಅಲ್ಲಲ್ಲಿ ವಿವರಗಳು ಇನ್ನಷ್ಟು ಬೇಕಿತ್ತು ಎನಿಸುವ ದೃಶ್ಯಗಳು ಒಂದಷ್ಟು ಇವೆ. ಚಿತ್ರದ ನಿರೂಪಣೆಯೂ ಅಲ್ಲಲ್ಲೇ ವೀಕ್ಷಕ ಚಿತ್ರವನ್ನು ಬಿಟ್ಟು ಬೇರೆ ಯೋಚಿಸುವಂತೆ ಮಾಡುತ್ತದೆ. ಆದರೆ ಸಂಕಲನ ಚುರುಕಾಗಿರುವುದರಿಂದ ವೀಕ್ಷಕ ಮತ್ತೆ ಬೇಗ ಚಿತ್ರಕ್ಕೆ ಕನೆಕ್ಟ್ ಆಗುತ್ತಾನೆ ಎನ್ನುವುದು ಸಮಾಧಾನ.

ಒಟ್ಟಾರೆಯಾಗಿ ಹೇಳಬೇಕೆಂದರೆ ಕಾದಂಬರಿಯಷ್ಟು ಪರಿಣಾಮಕಾರಿಯಾಗಿ ಚಿತ್ರ ಮೂಡಿಬಂದಿಲ್ಲದೆ ಹೋದರೂ ಒಂದು ಕೊಲೆಯ ಸುತ್ತ ನಡೆಯುವ ತನಿಖೆಯ ಚಿತ್ರಕ್ಕೆ ಇರಬೇಕಾದ ಮುಖ್ಯ ಅಂಶಗಳು ಎಲ್ಲವೂ ಇದರಲ್ಲಿ ಇದೆ. ಪಾತ್ರಧಾರಿಗಳ ಸಾಧಾರಣ ನಟನೆಯನ್ನು ಪಕ್ಕಕ್ಕಿಟ್ಟು ನೋಡಿದರೆ ಖಂಡಿತ ಇದೊಂದು ಮನರಂಜಿಸುವ ಒಳ್ಳೆಯ ಥ್ರಿಲ್ಲರ್ ಚಿತ್ರ. ಪಂಕಜ್ ತ್ರಿಪಾಠಿ ಅವರ ಪಾತ್ರ ಚಿತ್ರವನ್ನು ಮತ್ತಷ್ಟು ಆಸಕ್ತಿಕರವಾಗಿ ಮಾಡಿರುವುದು ಹೌದು. ಸಾರಾ ಅಲಿ ಖಾನ್ ನಟನೆಯಲ್ಲಿ ಇನ್ನೂ ಬಹಳ ದೂರದ ಹಾದಿ ಕ್ರಮಿಸಬೇಕಿದೆ. ‘ಮರ್ಡರ್ ಮುಬಾರಕ್’ Netflixನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here