ಗುಣಶೇಖರ್‌ ನಿರ್ದೇಶನದ ‘ಶಾಕುಂತಲಂ’ ಪೌರಾಣಿಕ ತೆಲುಗು ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಕಾಳಿದಾಸ ರಚನೆಯ ಜನಪ್ರಿಯ ನಾಟಕ ಆಧರಿಸಿ ತಯಾರಾಗುತ್ತಿರುವ ಸಿನಿಮಾದ ಶೀರ್ಷಿಕೆ ಪಾತ್ರದಲ್ಲಿ ಸಮಂತಾ ನಟಿಸಿದ್ಧಾರೆ.

ಸಮಂತಾ ರುತ್‌ ಪ್ರಭು ನಟನೆಯ ಪೌರಾಣಿಕ ತೆಲುಗು ಸಿನಿಮಾ ‘ಶಾಕುಂತಲಂ’ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. “Presenting.. Nature’s beloved.. the Ethereal and Demure.. “Shakuntala” from #Shaakuntalam,” ಎನ್ನುವ ಸಂದೇಶದೊಂದಿಗೆ ನಟಿ ಸಮಂತಾ ಸೋಷಿಯಲ್‌ ಮೀಡಿಯಾದಲ್ಲಿ ಫಸ್ಟ್‌ಲುಕ್‌ ಶೇರ್‌ ಮಾಡಿದ್ದಾರೆ. ಪೌರಾಣಿಕ ಡ್ರಾಮಾದ ಥೀಮ್‌ನಂತೆ ಶ್ವೇತವರ್ಣದ ಸೀರೆ, ಹೂಗಳಿಂದ ಅಲಂಕೃತಗೊಂಡ ಆಭರಣಗಳನ್ನು ಧರಿಸಿದ ಸಮಂತಾ, ಆಕೆಯನ್ನು ಸುತ್ತುವರೆದ ಪಕ್ಷಿ,ಪ್ರಾಣಿಗಳ ಫೋಟೊ ಆಕರ್ಷಕವಾಗಿದೆ. ಪುರಾಣದ ಕತೆಯಂತೆ ಋಷಿ ವಿಶ್ವಾಮಿತ್ರ ಮತ್ತು ಮೇನಕಾರ ಪುತ್ರಿ ಶಾಕುಂತಲಾ. ಕಾಡಿನ ಋಷಿ ಕುಟೀರದಲ್ಲಿ ಆಕೆಯ ವಾಸ. ಬೇಟೆಗೆಂದು ಕಾಡಿಗೆ ಬಂದಿದ್ದ ದುಷ್ಯಂತ ರಾಜ ಆಕೆಯಲ್ಲಿ ಅನುರಕ್ತನಾಗುತ್ತಾನೆ. ಇಬ್ಬರ ಗಾಂಧರ್ವ ವಿವಾಹ ನೆರವೇರುತ್ತದೆ. ಕಾಡಿಗೆ ಮರಳುವುದಾಗಿ ಹೇಳಿ ತನ್ನ ರಾಜ್ಯಕ್ಕೆ ತೆರಳುವ ದುಷ್ಯಂತ ಋಷಿವರ್ಯರೊಬ್ಬರ ಶಾಪದಿಂದಾಗಿ ಶಕುಂತಲೆಯನ್ನು ಮರೆತುಬಿಡುತ್ತಾನೆ.

ಈ ಹಿಂದೆ ‘ಶಕುಂತಲಂ’ ಚಿತ್ರದ ಬಗ್ಗೆ ಮಾತನಾಡಿದ್ದ ಸಮಂತಾ, “ಇಷ್ಟೊಂದು ಡೀಟೇಲ್ಸ್‌ ಇರುವ ಚಿತ್ರಕಥೆ ಹಿಂದೆಂದೂ ನನಗೆ ಸಿಕ್ಕಿರಲಿಲ್ಲ. ಪಾತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡು ನಿರ್ದೇಶಕರ ವಿಷನ್‌ ಸಾಕಾರಗೊಳಿಸಲು ಬದ್ಧಳಾಗಿದ್ದೇನೆ” ಎಂದಿದ್ದರು. ಗುಣಶೇಖರ ನಿರ್ದೇಶನದ ಚಿತ್ರದಲ್ಲಿ ದೇವ್‌ ಮೋಹನ್‌ ಅವರು ದುಷ್ಯಂತನಾಗಿ ನಟಿಸುತ್ತಿದ್ಧಾರೆ. ನಟ ಅಲ್ಲು ಅರ್ಜುನ್‌ ಪುತ್ರಿ ಅಲ್ಲು ಆರ್ಹಾ ಪಾತ್ರವೊಂದರಲ್ಲಿ ಕಾಣಸಿಕೊಳ್ಳುತ್ತಿದ್ದಾಳೆ. ಮಣಿಶರ್ಮ ಸಂಗೀತ ಸಂಯೋಜಿಸುತ್ತಿದ್ದಾರೆ. ಮೂಲ ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

Previous articleಈ ವರ್ಷ ಮದುವೆಯಾಗಲಿದ್ದಾರೆಯೇ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ?
Next articleಅಪ್ಪ ಅನಿಲ್‌ ಕಪೂರ್‌ v/s ಮಗ ಹರ್ಷವರ್ಧನ್‌; ನೆಟ್‌ಫ್ಲಿಕ್ಸ್‌ ಸಿನಿಮಾ ‘ಥಾರ್‌’

LEAVE A REPLY

Connect with

Please enter your comment!
Please enter your name here