ಅಟ್ಲೀ ನಿರ್ದೇಶನದಲ್ಲಿ ಶಾರುಖ್ ಖಾನ್ ನಟಿಸಿರುವ ‘ಜವಾನ್’ ಸಿನಿಮಾದ ಒಟ್ಟು ವಹಿವಾಟು 1100 ಕೋಟಿ ರೂಪಾಯಿ ದಾಖಲಾಗಿದೆ. 1100 ಕೋಟಿ ರೂಪಾಯಿ ವಹಿವಾಟು ನಡೆಸಿದ ಮೊದಲ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಸಿನಿಮಾ ಪಾತ್ರವಾಗಿದೆ.
ಶಾರುಖ್ ಖಾನ್, ವಿಜಯ್ ಸೇತುಪತಿ, ನಯನತಾರಾ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಜವಾನ್’ ಹಿಂದಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ವಿಶ್ವದಾದ್ಯಂತ 1100 ಕೋಟಿ ರೂಪಾಯಿ ಗಳಿಸಿದ ಮೊದಲ ಹಿಂದಿ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರು ತಮ್ಮ Instagram ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ‘ಜವಾನ್ 1100 ಕೋಟಿ ದಾಟಿದ ಮೊದಲ ಚಿತ್ರವಾಗಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಈಗ ₹1103.27 ಕೋಟಿ ಗಳಿಸಿದೆ’. ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಚಲನಚಿತ್ರವು ಭಾರತದ ಬಾಕ್ಸ್ ಆಫೀಸ್‌ನಲ್ಲಿ ₹619.92 ಕೋಟಿ, ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹369.90 ಕೋಟಿ ವಹಿವಾಟು ನಡೆಸಿದೆ.
ಇದುವರೆಗೂ ತೆರೆಕಂಡ ಚಲನಚಿತ್ರಗಳ ಎಲ್ಲಾ ದಾಖಲೆಗಳನ್ನು ಮುರಿದಿರುವ ‘ಜವಾನ್’ ಸೆಪ್ಟೆಂಬರ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದೆ. ಬಿಡುಗಡೆಯಾದ 23 ದಿನಗಳಲ್ಲಿ ₹587 ಕೋಟಿ ಕಲೆಕ್ಷನ್ ಮಾಡಿದೆ. ‘ಗದರ್ 2’ ಮತ್ತು ‘ಪಠಾಣ್’ ಸಿನಿಮಾಗಳನ್ನು ಹಿಂದಿಕ್ಕಿರುವ ಈ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ತೆರೆಕಂಡಿತ್ತು. ಸಿನಿಮಾವನ್ನು Red Chillies Entertainment ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ನಿರ್ಮಿಸಿದ್ದು, ಅನಿರುದ್ದ್ ರವಿಚಂದರ್ ಅವರ ಸಂಗೀತ ಸಂಯೋಜನೆಯಿದೆ. ಪ್ರಿಯಾಮಣಿ, ಯೋಗಿ ಬಾಬು, ಸಾನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್, ರಿದ್ಧಿ ಡೋಗ್ರಾ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.