ಎ ಬಿ ಟ್ರೀಸಾ ಪೌಲ್ ಮತ್ತು ಆಂಟೊ ಜೋಸ್ ಪೆರೇರಾ ನಿರ್ದೇಶನದ ‘ಲಿಟಲ್ ಹಾರ್ಟ್’ ಮಲಯಾಳಂ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಶೇನ್ ನಿಗಮ್ ಮತ್ತು ಅನಘಾ ಮರುತೋರ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.
ಶೇನ್ ನಿಗಮ್ ‘ಲಿಟಲ್ ಹಾರ್ಟ್’ ಮಲಯಾಳಂ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಎ ಬಿ ಟ್ರೀಸಾ ಪೌಲ್ ಮತ್ತು ಆಂಟೊ ಜೋಸ್ ಪೆರೇರಾ ನಿರ್ದೇಶನದ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಿದು. ಆಕ್ಷನ್ – ಥ್ರಿಲ್ಲರ್ ‘RDX’ (Robert Dony Xavier) ಯಶಸ್ಸಿನ ನಂತರ ಶೇನ್ ಈ ಚಿತ್ರದಲ್ಲಿ ರೋಮ್ಯಾಂಟಿಕ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರೀಕರಣ ಇಡುಕ್ಕಿಯಲ್ಲಿ ಆರಂಭವಾಗಿದ್ದು, ಶೈನ್ ಟಾಮ್ ಚಾಕೊ ಸಹ ನಟಿಸುತ್ತಿದ್ದಾರೆ. ‘ಲಿಟಲ್ ಹಾರ್ಟ್ಸ್’ ಹಳ್ಳಿಗಾಡಿನ ಹಿನ್ನಲೆಯ ರೊಮ್ಯಾಂಟಿಕ್ – ಕಾಮಿಡಿ ಎಂಟರ್‌ಟೇನರ್ ಆಗಿರಲಿದೆ ಎನ್ನುತ್ತಾರೆ ನಿರ್ದೇಶಕರು. ಈ ಸಿನಿಮಾ ಕೇರಳದ ಗ್ರಾಮೀಣ ಪ್ರದೇಶ, ರೈತರ ಜೀವನದ ಕುರಿತೂ ಮಾತನಾಡಲಿದೆ. ಜೊತೆಗೆ ಎರಡು ಕುಟುಂಬಗಳ ಸದಸ್ಯರ ನಡುವಿನ ಕಥೆಯನ್ನು ಒಳಗೊಂಡಿದೆ. ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಹೇಗೆ ಕಾಣುತ್ತದೆ ಎನ್ನುವುದು ಚಿತ್ರದ ಕಥಾಹಂದರ.
ಈ ಹಿಂದೆ ಶೇನ್ ನಿಗಮ್ ಮತ್ತು ಶೈನ್ ಟಾಮ್ ‘ಇಷ್ಕ್’, ‘ಪರವ’, ‘ಕರೋನಾ ಪೇಪರ್ಸ್’ ಮತ್ತು ‘ವೆಯಿಲ್’ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ‘ಭೀಷ್ಮ ಪರ್ವಂ’ ಮತ್ತು ‘ರಕ್ಷಣಾಧಿಕಾರಿ ಬೈಜು ಒಪ್ಪು’ ಚಿತ್ರಗಳಲ್ಲಿ ಅಭಿನಯಿಸಿದ್ದ ಅನಘಾ ಮರುತೋರ ಅವರು ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಬಾಬುರಾಜ್, ಚೆಂಬನ್ ವಿನೋದ್ ಜೋಸ್, ಜಾಫರ್ ಇಡುಕ್ಕಿ, ರಮ್ಯಾ ಸುವಿ, ರೆಂಜಿ ಪಣಿಕ್ಕರ್ ಮತ್ತು ಮಾಲಾ ಪಾರ್ವತಿ ಚಿತ್ರದ ಇತರ ಪ್ರಮುಖ ಪಾತ್ರಧಾರಿಗಳು. ಪೃಥ್ವಿರಾಜ್ ಸುಕುಮಾರನ್ ಅವರ ‘ವಿಲಾಯತ್ ಬುದ್ಧ’ ಮತ್ತು ‘ಒರು ತೆಕ್ಕನ್ ತಲ್ಲು ಕೇಸ್’ ಚಿತ್ರಗಳಿಗೆ ಚಿತ್ರಕಥೆ ಬರೆದ ರಾಜೇಶ್ ಪಿನ್ನಾಡನ್ ಅವರು ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ‘ಲಿಟಲ್ ಹಾರ್ಟ್ಸ್’ ಸಿನಿಮಾವು ಏಳು ಹಾಡುಗಳನ್ನು ಒಳಗೊಂಡಿದ್ದು, ಕೈಲಾಸ್ ಮೆನನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಲ್ಯೂಕ್ ಜೋಸ್ ಛಾಯಾಗ್ರಾಹಣವಿದೆ. ಸಾಂಡ್ರಾ ಥಾಮಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.