‘ಪಾರು’ ಸೀರಿಯಲ್ ಖ್ಯಾತಿಯ ಶರತ್ ಪದ್ಮನಾಭ್ ‘ಅನಿಮಾ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ವರ್ಧನ್ ಎಂ ಎಚ್ ನಿರ್ದೇಶಿಸುತ್ತಿರುವ ಈ ಸಸ್ಪೆನ್ಸ್ – ಥ್ರಿಲ್ಲರ್ ಸಿನಿಮಾ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಅನುಷಾ ಕೃಷ್ಣ ಚಿತ್ರದ ನಾಯಕಿ.
ಕನ್ನಡ ಕಿರುತೆರೆಯಲ್ಲಿ ‘ಪಾರು’ ಸೀರಿಯಲ್ ಮೂಲಕ ವೀಕ್ಷಕರಿಗೆ ಹತ್ತಿರವಾಗಿರುವ ಶರತ್ ಪದ್ಮನಾಭ್ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಅವರು ಹೀರೋ ಆಗಿ ನಟಿಸುತ್ತಿರುವ ಸಿನಿಮಾಗೆ ‘ಅನಿಮಾ’ ಎನ್ನುವ ಶೀರ್ಷಿಕೆ ನಿಗಧಿಯಾಗಿದೆ. ಅನಿಮಾ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ. ವರ್ಧನ್ ಎಂ ಎಚ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ರೈತರ ಕುರಿತ ‘ಹೊನ್ನು ಬಿತ್ಯಾರು’ ಕಿರುಚಿತ್ರ ಮಾಡಿದ್ದ ವರ್ಧನ್ ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಟೈಟಲ್ ಪೋಸ್ಟರ್ ವಿಭಿನ್ನವಾಗಿದ್ದು, ದಟ್ಟ ಕಾಡಿನ ಮಧ್ಯೆ ಸಾಗುತ್ತಿರುವ ಕಾರು ಕಾಣಿಸುತ್ತಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಿಮಾ ಸಿನಿಮಾ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಈಗಾಗ್ಲೇ ಶೂಟಿಂಗ್ ನಡೆಸಲಾಗಿದೆ. ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್‌ನಡಿ ಚಿತ್ರ ನಿರ್ಮಾಣವಾಗ್ತಿದೆ. ಅನುಷಾ ಕೃಷ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಪಂಕಜ್ ಎಸ್ ನಾರಾಯಣ್, ಯುವ ಶೆಟ್ಟಿ, ವಾಣಿ, ಸೂರಿ, ಸುಷ್ಮಿತಾ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಎನ್ ಕೆ ರಾಜ್ ಛಾಯಾಗ್ರಹಣ, ವಿರಾಜ್ ವಿಶ್ವ ಸಂಭಾಷಣೆ, ರೋನಾದ ಬಕ್ಕೇಶ್ ಹಿನ್ನೆಲೆ ಸಂಗೀತ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ.