ಆರ್ಯನ್‌ ಖಾನ್ ಡ್ರಗ್ಸ್‌ ಪ್ರಕರಣದ ಹಿನ್ನೆಲೆಯಲ್ಲಿ ನಟಿ ಶೆರ್ಲಿನ್‌ ಚೋಪ್ರಾ ತಮ್ಮ ಸಂದರ್ಶನದ ಹಳೆಯ ವೀಡಿಯೋ ಶೇರ್ ಮಾಡಿದ್ದಾರೆ. ಬಾಲಿವುಡ್ ಸ್ಟಾರ್ ಪತ್ನಿಯರು ಕೊಕೇನ್ ಸೇವಿಸುತ್ತಿದ್ದರು ಎನ್ನುವ ಅವರ ಹೇಳಿಕೆ ಈ ವೀಡಿಯೋದಲ್ಲಿದೆ.

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್‌ ಡ್ರಗ್ಸ್ ಪ್ರಕರಣ ಹಲವು ತಿರುವು ಪಡೆಯುತ್ತಿದೆ. ನಟಿ, ರೂಪದರ್ಶಿ ಶರ್ಲಿನ್ ಚೋಪ್ರಾ ಅವರು ತಮ್ಮ ಹಳೆಯ ಸಂದರ್ಶನದ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಅವರು ಬಾಲಿವುಡ್ ಸ್ಟಾರ್ ಹೀರೋಗಳ ಪತ್ನಿಯರು ಮಾದಕ ಧ್ರವ್ಯ ಕೊಕೇನ್ ಸೇವಿಸುವುದನ್ನು ತಾವು ಕಣ್ಣಾರೆ ಕಂಡಿದ್ದಾರೆ ಹೇಳಿದ್ದಾರೆ. ನಟ ಶಾರುಖ್ ಖಾನ್ ಆಯೋಜಿಸಿದ್ದ ಕೊಲ್ಕೊತ್ತಾ ನೈಟ್ ರೈಡರ್ಸ್‌ ಪಾರ್ಟಿಯ ಸಂದರ್ಭದಲ್ಲಿ ತಾವು ಕಂಡ ದೃಶ್ಯವನ್ನು ಕಳೆದ ವರ್ಷ ಸಂದರ್ಶನವೊಂದರಲ್ಲಿ ಶೆರ್ಲಿನ್ ಹೇಳಿಕೊಂಡಿದ್ದರು. ಈ ವೀಡಿಯೋವನ್ನು ಅವರೀಗ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಕಳೆದ ವರ್ಷ ನಟ ಸುಶಾಂತ್ ಸಿಂಗ್ ರಜಪೂತ್‌ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ಡ್ರಗ್ಸ್ ಕುರಿತು ಪ್ರಸ್ತಾಪವಾಗಿತ್ತು. ಆಗ ಸಂದರ್ಶನವೊಂದರಲ್ಲಿ ಮಾತನಾಡಿದ್ದ  ಶೆರ್ಲಿನ್‌, “ನಾನು ಡ್ಯಾನ್ಸ್‌ ಮಾಡಿ ಸುಸ್ತಾದಾಗ ವಾಷ್‌ ರೂಂಗೆ ತೆರಳಿದೆ. ವಾಷ್‌ರೂಂ ಬಾಗಿಲು ತೆರೆಯುತ್ತಿದ್ದಂತೆ ನನಗೆ ಶಾಕ್ ಆಯ್ತು. ನಾನು ಬರಬಾರದ ಈವೆಂಟ್‌ಗೆ ಬಂದಿದ್ದೇನೆ ಎಂದೆನಿಸಿತು. ಬಾಲಿವುಡ್‌ ಸ್ಟಾರ್‌ಗಳ ಪತ್ನಿಯರು ಕನ್ನಡಿಯ ಎದುರು ನಿಂತು ಬಿಳಿಯ ಪೌಡರ್ ಸೇವಿಸುತ್ತಿದ್ದರು. ಅದು ಕೊಕೇನ್! ಈ ಬಗ್ಗೆ ನನಗೇನೂ ಗೊತ್ತಿಲ್ಲ ಎನ್ನುವಂತೆ ನಡೆದುಕೊಂಡು ನಾನು ಅಲ್ಲಿಂದ ಹೊರಬಿದ್ದೆ. ಬಾಲಿವುಡ್‌ನಲ್ಲಿ ಎಂತಹ ಪಾರ್ಟಿಗಳು ನಡೆಯುತ್ತವೆ ಎನ್ನುವುದು ಅಂದು ನನಗೆ ಮನವರಿಕೆಯಾಯ್ತು” ಎಂದಿದ್ದಾರೆ.

ಈ ಮಧ್ಯೆ ಎನ್‌ಸಿಬಿಯವರು ಶಾರುಖ್ ಪುತ್ರ ಆರ್ಯನ್‌ಮತ್ತು ಇತರೆ ಬಂಧಿತರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವನ್ನು ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿಲಾಗಿದ್ದು, ಇವರಿಗೆ ಅಂತಾರಾಷ್ಟ್ರೀಯ ಡ್ರಗ್ಸ್ ರ್ಯಾಕೆಟ್‌ ನಡೆಸುವವರ ಸಂಪರ್ಕವಿದೆ ಎನ್ನುವುದು ವಾಟ್ಸ್‌ಆಪ್‌ ಚಾಟ್‌ಗಳಿಂದ ಬಯಲಾಗಿದೆ. ಡ್ರಗ್ಸ್ ಮತ್ತು ಹಣಸಂದಾಯಕ್ಕೆ ಕೋಡ್‌ವರ್ಡ್‌ಗಳ ಬಳಕೆಯಾಗಿರುವುದೂ ಕಂಡುಬಂದಿದೆ ಎಂದು ಎನ್‌ಸಿಬಿ ಮೂಲಗಳು ಹೇಳುತ್ತವೆ. ಆರ್ಯನ್‌ ಡ್ರಗ್ಸ್‌ ಪ್ರಕರಣ ಈಗ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಬಾಲಿವುಡ್‌ನಲ್ಲಿ ಡ್ರಗ್ಸ್ ಪಾರ್ಟಿಗಳು ನಡೆಯುತ್ತವೆ ಎನ್ನುವುದಕ್ಕೆ ನಟಿ ಶೆರ್ಲಿನ್ ಚೋಪ್ರಾ ಕೂಡ ಪುರಾವೆ ಒದಗಿಸಿದ್ದಾರೆ. ಅವರ ಹೇಳಿಕೆ ಯಾರಿಗೆ ಮುಳ್ಳಾಗಲಿದೆ ಎಂದು ನೋಡಬೇಕು.

LEAVE A REPLY

Connect with

Please enter your comment!
Please enter your name here