ನಟ ಪುನೀತ್ ರಾಜಕುಮಾರ್ ಆರಂಭಿಸಿದ್ದ ಪಿಆರ್‌ಕೆ ಪ್ರೊಡಕ್ಷನ್ಸ್‌ ಇಂದು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಶೇಷ ಯೋಜನೆಯೊಂದರ ಪೋಸ್ಟರ್‌ ಬಿಡುಗಡೆಗೊಳಿಸಿದೆ. ಇದು ಪುನೀತ್‌ ಅವರ ಡ್ರೀಮ್‌ ಪ್ರಾಜೆಕ್ಟ್ ಎನ್ನುವ ಮಾಹಿತಿ ಸದ್ಯಕ್ಕೆ ಸಿಕ್ಕಿದೆ. ಡಿಸೆಂಬರ್ 6ರಂದು ಟೈಟಲ್ ಟೀಸರ್ ಬಿಡುಗಡೆಯಾದ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ.

ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. – ಅಕ್ಟೋಬರ್ 27ರಂದು ಪಿಆರ್‌ಕೆ ಪ್ರೊಡಕ್ಷನ್ಸ್ ಮಾಡಿದ್ದ ಟ್ವೀಟ್ ಇದು. ಈ ಟಿಪ್ಪಣಿಯ ಜೊತೆ ಪುನೀತ್ ರಾಜಕುಮಾರ್ ಮತ್ತು ಮೊತ್ತೊಬ್ಬ ವ್ಯಕ್ತಿ ಸೀ ಡೈವಿಂಗ್ ಮಾಡುತ್ತಿರುವ ವಿಶೇಷ ಪೋಟೋವನ್ನು ಪಿಆರ್‌ಕೆ ಟ್ವೀಟ್ ಮಾಡಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ನವೆಂಬರ್‌ 1ರ ರಾಜ್ಯೋತ್ಸವದಂದು ಪುನೀತ್ ರಾಜಕುಮಾರ್‌ ಡ್ರೀಮ್ ಪ್ರಾಜೆಕ್ಟ್ ರಿಲೀಸ್ ಆಗಬೇಕಿತ್ತು. ದುರದೃಷ್ಟವತಾಶ್ ಈ ಟ್ವೀಟ್ ಮಾಡಿದ ಎರಡು ದಿನಗಳಲ್ಲಿ ಅವರು ನಮ್ಮನ್ನು ಅಗಲಿದರು. ಇದೀಗ ಅವರ ಯೋಜನೆ ಸಾಕಾರಗೊಳ್ಳುತ್ತಿದೆ. ಡಿಸೆಂಬರ್‌ 6ರಂದು ಈ ಪ್ರಾಜೆಕ್ಟ್‌ನ ಟೈಟಲ್ ಟೀಸರ್ ಬಿಡುಗಡೆಯಾಗಲಿದೆ. “ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ.” – ಈ ಒಕ್ಕಣಿಯ ಟ್ವೀಟ್ ಕುತೂಹಲಕ್ಕೆ ಕಾರಣವಾಗಿದೆ.

ಏನಿದು ಪುನೀತ್ ಡ್ರೀಮ್ ಪ್ರಾಜೆಕ್ಟ್‌? ಲಭ್ಯವಿರುವ ಮಾಹಿತಿಯನ್ವಯ ಮಡ್‌ಸ್ಕಿಪ್ಪರ್ ಸಂಸ್ಥೆಯ ಜೊತೆಗೂಡಿ ಪಿಆರ್‌ಕೆ ಪ್ರೊಡಕ್ಷನ್ಸ್‌ ಈ ಪ್ರಾಜೆಕ್ಟ್‌ ಸಿದ್ಧಪಡಿಸಿದೆ. ಇದು ಕರ್ನಾಟಕದ ಅರಣ್ಯ, ಜಲ ಸಂಪತ್ತನ್ನು ಜಗತ್ತಿಗೆ ಪರಿಚಯಿಸುವ ವಿಶಿಷ್ಟ ಯೋಜನೆ ಇದ್ದಂತಿದೆ. ನಿರ್ದೇಶಕ ಅಮೋಘವರ್ಷ, ಸಂಗೀತ ಸಂಯೋಜಕ ಅಜನೀಶ್ ಈ ಯೋಜನೆಯ ಭಾಗವಾಗಿದ್ದಾರೆ. ಈ ಬಗ್ಗೆ ನಾಡಿದ್ದು ಭಾನುವಾರ ಮಾಹಿತಿ ನೀಡುವುದಾಗಿ ಸಂಬಂಧಿಸಿದವರು ಹೇಳುತ್ತಿದ್ದಾರೆ. ಇಂದು ಪಿಆರ್‌ಕೆ ಮಾಡಿರುವ ಫೋಟೊ ಟ್ವೀಟ್‌ನಲ್ಲಿ ದಟ್ಟ ಕಾನನದ ಮಧ್ಯೆ ಪುನೀತ್ ರಾಜಕುಮಾರ್‌ ಹಾಗೂ ಮತ್ತೊಬ್ಬ ವ್ಯಕ್ತಿ ನಡೆದುಹೋಗುತ್ತಿರುವ ಫೋಟೊ ಇದೆ. ಪಿಅರ್‌ಕೆ ಟ್ವೀಟ್ ಮಾಡುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಜನರು ಈ ಮಾಹಿತಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚುತ್ತಿದ್ದಾರೆ. ಸಾಹಸೀ ವ್ಯಕ್ತಿತ್ವದ ಪುನೀತ್‌ರ ಈ ಪ್ರಾಜೆಕ್ಟ್ ಏನು ಎನ್ನುವುದು ಡಿಸೆಂಬರ್‌ 6ರಂದು ರಿವೀಲ್ ಆಗಲಿದೆ.

LEAVE A REPLY

Connect with

Please enter your comment!
Please enter your name here