ರಂಗಭೂಮಿ ಹಿನ್ನೆಲೆಯ ಪ್ರತಿಭಾವಂತ ನಟಿ ಶ್ವೇತಾ ‘ಅಕಟಕಟ’ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ‘ದಿ ಬೆಸ್ಟ್ ಆಕ್ಟರ್’ ಮೈಕ್ರೋ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಾಗರಾಜ್ ಸೋಮಯಾಜಿ ಕತೆ ಬರೆದು ನಿರ್ದೇಶಿಸುತ್ತಿರುವ ಚಿತ್ರವಿದು.
ನಾಗರಾಜ್ ಸೋಮಯಾಜಿ ಕತೆ ಬರೆದು ನಿರ್ದೇಶಿಸುತ್ತಿರುವ ‘ಅಕಟಕಟ’ ಸಿನಿಮಾ ತಂಡಕ್ಕೆ ಪ್ರತಿಭಾನ್ವಿತ ನಟಿ ಶ್ವೇತಾ ಶ್ರೀನಿವಾಸ್ ಸೇರ್ಪಡೆಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಾಯಕಿ ಚೈತ್ರಾ ಆಚಾರ್ ಪರಿಚಯಿಸಿದ್ದ ಚಿತ್ರತಂಡ ಈಗ ನಟಿ ಹಾಗೂ ರಂಗಭೂಮಿ ಕಲಾವಿದೆಯೂ ಆಗಿರುವ ಶ್ವೇತಾ ಶ್ರೀನಿವಾಸ್ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಿದೆ. ಕಳೆದ 20 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಶ್ವೇತಾ ಶ್ರೀನಿವಾಸ್, ಪಂಚರಂಗಿ, ಟೋನಿ, ದ್ಯಾವ್ರೇ, ಬೆಂಕಿಪಟ್ಟಣ, ಕೃಷ್ಣಲೀಲಾ, ಸಂತೆ, ದೊಡ್ಮನೆ ಹುಡ್ಗ, ವೆನಿಲಾ, ನಾತಿಚರಾಮಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ‘ಅಕಟಕಟ’ ಸಿನಿಮಾದಲ್ಲಿ ‘ವನಜಾ’ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡದ ಶ್ವೇತಾ, “ಪ್ರತಿ ಸಿನಿಮಾದಲ್ಲಿಯೂ ನಾನು ವಿಶೇಷವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಇದೊಂದು ಚಾಲೆಂಜಿಂಗ್ ಪಾತ್ರ. ಅಪರೂಪದ ಕತೆಯ ನೆಲಮೂಲದ ಪಾತ್ರವಾಗಿದ್ದು, ನನ್ನನು ನಾನು ಕಂಡುಕೊಳ್ಳಲು ಈ ಪಾತ್ರ ಸಹಕಾರಿಯಾಗಿದೆ. ಪ್ರತಿಯೊಬ್ಬರಿಗೂ ಈ ಪಾತ್ರ ಕನೆಕ್ಟ್ ಆಗುತ್ತದೆ” ಎನ್ನುತ್ತಾರೆ. ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಪುಕ್ಸಟ್ಟೆ ಲೈಫು’ ಚಿತ್ರ ನಿರ್ಮಾಣ ಮಾಡಿದ್ದ ನಿರ್ದೇಶಕ ನಾಗರಾಜ್ ಸೋಮಯಾಜಿ ಮೂಲತಃ ಫೋಟೊಗ್ರಾಫರ್. ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದ ಇವರು ‘ದಿ ಬೆಸ್ಟ್ ಆಕ್ಟರ್’ ಮೈಕ್ರೋ ಸಿನಿಮಾ ನಿರ್ದೇಶಿಸಿದ್ದರು. ಪ್ರಸ್ತುತ ‘ಅಕಟಕಟ’ ಕತೆ ಬರೆದು ನಿರ್ದೇಶಿಸುತ್ತಿದ್ದಾರೆ.