‘LIGER’ ಪ್ರೊಮೋಷನ್‌ಗೆ ಬೆಂಗಳೂರಿಗೆ ಬಂದ ಹೀರೋ ವಿಜಯ್‌ ದೇವರಕೊಂಡ, ನಾಯಕಿ ಅನನ್ಯಾ ಪಾಂಡೆ ಸಿನಿಮಾ ಕುರಿತು ಮಾತನಾಡಿದರು. ಪುರಿ ಜಗನ್ನಾಥ್‌ ನಿರ್ದೇಶನದ ಸಿನಿಮಾ ಆಗಸ್ಟ್‌ 25ರಂದು ತೆರೆಕಾಣುತ್ತಿದೆ.

ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಿರುವ ‘LIGER’ ಸಿನಿಮಾ ಆಗಸ್ಟ್‌ 25ರಂದು ತೆರೆಕಾಣುತ್ತಿದೆ. ಪ್ರೊಮೋಷನ್‌ಗೆ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು. ಬೆಂಗಳೂರಿಗೆ ಬಂದಿಳಿದ ಚಿತ್ರದ ನಾಯಕ ವಿಜಯ್ ದೇವರಕೊಂಡ, ನಾಯಕಿ ಅನನ್ಯಾ ಪಾಂಡೆ ಹಾಗೂ ವಿಶ್ ನೇರ ಏರ್ ಪೋರ್ಟ್‌ನಿಂದ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಭೇಟಿ ಕೊಟ್ಟು ಪುಷ್ಪ ನಮನ ಸಲ್ಲಿಸಿದರು. ಸಂಜೆ ಮಾಧ್ಯಮದವರೊಂದಿಗೆ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

ಕನ್ನಡದಲ್ಲಿಯೇ ಮಾತು ಆರಂಭಿಸಿದ ವಿಜಯ್, “ಬೆಂಗಳೂರು ಯಾವಾಗಲೂ ನನಗೆ ಪ್ರೀತಿ ನೀಡಿದೆ. ಲೈಗರ್ ನನ್ನ ವೃತ್ತಿ ಜೀವನದ ದೊಡ್ಡ ಸಿನಿಮಾ. ಇದು ಮಾಸ್ ಎಂಟರ್‌ಟೇನರ್‌. ನಾನು ಚಿತ್ರಕ್ಕೆ ಕನ್ನಡದಲ್ಲಿ ಡಬ್ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ನನ್ನ ಪಾತ್ರಕ್ಕೆ ನಾನು ಡಬ್ ಮಾಡುತ್ತೇನೆ” ಎಂದರು. ಅಪ್ಪು ಜೊತೆಗಿನ ಒಡನಾಟದ ಬಗ್ಗೆ ಮೆಲುಕು ಹಾಕಿದ ವಿಜಯ್, “ನಾನು ಬೆಂಗಳೂರಿಗೆ ಬಂದಾಗಲೆಲ್ಲ ಪುನೀತ್ ಅಣ್ಣನನ್ನು ಮೀಟ್ ಮಾಡಿ ಹೋಗುತ್ತಿದ್ದೆ. ಅವರು ನನ್ನ ಸಿನಿಮಾಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗೇ ಶಿವಣ್ಣ ಕೂಡ ನನ್ನ ಸಿನಿಮಾ ನೋಡಿ ಫೋನ್ ಮಾಡಿ ಮಾತನಾಡಿದ್ದಿದೆ” ಎಂದು ರಾಜ್ ಕುಟುಂಬದೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಂಡರು.

ವಿಜಯ್ ಎದುರು ವಿಲನ್ ಆಗಿ ತೊಡೆ ತಟ್ಟಿರುವ ವಿಶ್ ಮಾತನಾಡಿ, “ನಿಮ್ಮನ್ನು ನೋಡಿ ತುಂಬಾ ಸಂತೋಷವಾಗಿದೆ. ವಿಜಯ್ ಹಾಗೂ ಪುರಿ ಸರ್ ಜೊತೆ ಕೆಲಸ‌ ಮಾಡಿದ್ದು ಖುಷಿಕೊಟ್ಟಿದೆ. ವಿಜಯ್ ಅದ್ಭುತ ನಟ. ಅನನ್ಯಾ ತುಂಬಾ ಚೆಂದ ಕಾಣಿಸ್ತಾರೆ. ಅಪ್ಪು ಅಣ್ಣನನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ಅಪ್ಪು ಅವರ ಮೊದಲ ಸಿನಿಮಾ ಮಾಡಿದ್ದು ಪುರಿ ಜಗನ್ನಾಥ್‌ ಸರ್‌. ಪ್ರತಿಯೊಬ್ಬರು 25ಕ್ಕೆ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ”‌ ಎಂದು ಮನವಿ ಮಾಡಿದರು.

ಮಂತ್ರಿ ಮಾಲ್ ನಲ್ಲಿ ವಿಜಯ್ ಫ್ಯಾನ್ಸ್ ಅಬ್ಬರ! | ಸುದ್ದಿಗೋಷ್ಠಿ ಬಳಿಕ ಲೈಗರ್ ಟೀಂ, ನಗರದ ಮಂತ್ರಿ ಮಾಲ್‌ನಲ್ಲಿ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ವಿಜಯ್ ಆಗಮಿಸುತ್ತಿದ್ದಾರೆ ಎಂದು ಗೊತ್ತಾಗ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ವಿಜಯ್ ಕಂಡು ಫ್ಯಾನ್ಸ್ ಅಬ್ಬರ ಮುಗಿಲುಮುಟ್ಟಿತ್ತು. ಲೈಗರ್ ಸಿನಿಮಾ ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ. ಚಿತ್ರಕ್ಕೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದು ಧರ್ಮ ಪ್ರೊಡಕ್ಷನ್ ಹಾಗೂ ಪುರಿ ಕನೆಕ್ಟ್ಸ್ ನಡಿ, ಚಾರ್ಮಿ ಕೌರ್, ಪುರಿ ಜಗನ್ನಾಥ್, ಕರಣ್ ಜೋಹಾರ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಹಾಡು ಮತ್ತು ಟೀಸರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಮೂಲಕ ವಿಜಯ್‌ ದೇವರಕೊಂಡ ಪ್ಯಾನ್‌ ಇಂಡಿಯಾ ಸ್ಟಾರ್ ಆಗಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಅಂಬೋಣ.

Previous articleSIIMAಗೆ ದಶಕದ ಸಂಭ್ರಮ; ಈ ಬಾರಿ ಬೆಂಗಳೂರಿನಲ್ಲಿ ಆಯೋಜನೆ
Next articleThe Odd Couple ಮತ್ತು Deja vu ಎನ್ನುವ ‘ಕಥಾ’ಚಿತ್ರಗಳು

LEAVE A REPLY

Connect with

Please enter your comment!
Please enter your name here