ನಟಿ ಶರ್ಮಿಳಾ ಮಾಂಡ್ರೆ ‘ಸಿಲ ನೊಡಿಗಲಿಲ್’ ತಮಿಳು ಚಿತ್ರದ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ರಿಚರ್ಡ್ ರಿಷಿ, ಪುನ್ನಗೈ ಪೂ ಗೀತಾ ಮತ್ತು ಯಶಿಕಾ ಆನಂದ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ನವೆಂಬರ್ 24ರಂದ ತೆರೆಕಾಣುತ್ತಿದೆ.
ರಿಚರ್ಡ್ ರಿಷಿ, ಪುನ್ನಗೈ ಪೂ ಗೀತಾ ಮತ್ತು ಯಶಿಕಾ ಆನಂದ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಸಿಲ ನೊಡಿಗಲಿಲ್’ ತಮಿಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಗಂಡ-ಹೆಂಡತಿ ಸಂಬಂಧ, ಕೊಲೆ, ಭ್ರಮೆ, ಸೇಡು ನಿಗೂಢ ಸತ್ಯದ ಸುತ್ತ ಸಿನಿಮಾದ ಕತೆ ಸುತ್ತುತ್ತದೆ. ‘ಸಜನಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ನಟಿ ಶರ್ಮಿಳಾ ಮಾಂಡ್ರೆ ಈಗ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣದ ಈ ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ಶರ್ಮಿಳಾ ಮಾಂಡ್ರೆ ಹೊತ್ತಿಕೊಂಡಿದ್ದಾರೆ. ‘ಮುಂದಿನ ನಿಲ್ದಾಣ’ ಕನ್ನಡ ಚಿತ್ರದ ನಿರ್ದೇಶಕ ವಿನಯ್ ಭಾರದ್ವಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರದ ಟೀಸರ್‌ನಲ್ಲಿ ತೋರಿಸಿರುವಂತೆ ಲಂಡನ್‌ನಲ್ಲಿ ವಾಸವಿರುವ ಗಂಡ-ಹೆಂಡತಿ ನಡುವೆ ಮತ್ತೊಬ್ಬ ಯುವತಿಯ ಆಗಮನವಾಗುತ್ತದೆ. ಅಲ್ಲೊಂದು ಕೊಲೆ ನಡೆಯುತ್ತದೆ. ಈ ಕೊಲೆ ಮಾಡಿದ್ದು ಯಾರು? ಇದು ನಿಜವಾಗಿಯೂ ಕೊಲೆನಾ? ಎಂಬ ಕುತೂಹಲಕಾರಿ ಅಂಶಗಳು ಕಾಣಿಸುತ್ತವೆ. ”ನಾಲ್ಕು ವರ್ಷಗಳ ಹಿಂದೆ ನಾನು ನಿರ್ದೇಶಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರ ತೆರೆಕಂಡು ಮೆಚ್ಚುಗೆ ಗಳಿಸಿತ್ತು. ‘ಸಿಲ ನೋಡಿಗಳಿಲ್’ ಚಿತ್ರ ನನಗೆ ಸಿಗಲು ‘ಲೂಸಿಯಾ’ ಪವನ್ ಕುಮಾರ್ ಕಾರಣ. ಅವರ ಮೂಲಕ ನನಗೆ ಶರ್ಮಿಳಾ ಮಾಂಡ್ರೆ ಅವರ ಪರಿಚಯವಾಯಿತು. ಮಲೇಷಿಯಾದಲ್ಲಿ ಖ್ಯಾತ ಆರ್ ಜೆ ಆಗಿ ಕಾರ್ಯನಿರ್ವಹಿಸುತ್ತಿರುವ ಪುನ್ನಗೈ ಪೂ ಗೀತಾ ಈ ಚಿತ್ರದ ನಿರ್ಮಾಣದ ಜೊತೆಗೆ ನಟನೆ ಮಾಡಿದ್ದಾರೆ. ಮೂರು ಪ್ರಮುಖ ಪಾತ್ರಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ‘ಸಿಲ ನೋಡಿಗಳಿಲ್’ ಎಂದರೆ ‘ಕೆಲವೇ ಕ್ಷಣಗಳಲಿ’ ಎಂದು ಅರ್ಥ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿನಯ್ ಭಾರದ್ವಾಜ್.
ಚಿತ್ರದಲ್ಲಿ ಐದು ಹಾಡುಗಳಿದ್ದು, ಐವರು ಖ್ಯಾತ ಸಂಗೀತ ನಿರ್ದೇಶಕರು ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ತಮಿಳಿನಲ್ಲಿ ಸಿನಿಮಾ ತಯಾರಾಗಿ ತೆರೆಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಕತೆಯನ್ನು ಕನ್ನಡಕ್ಕೂ ತರುವ ಯೋಜನೆ ನಿರ್ದೇಶಕರು ಮತ್ತು ನಿರ್ಮಾಪಕರದ್ದು. ಚಿತ್ರದ ಕಾರ್ಯಕಾರಿ, ಕ್ರಿಯೇಟಿವ್ ಪ್ರೊಡ್ಯೂಸರ್ ಶರ್ಮಿಳಾ ಮಾಂಡ್ರೆ ಮಾತನಾಡಿ, ”ಗಾಳಿಪಟ 2 ಚಿತ್ರದ ನಂತರ ನಾನು ಪವನ್ ಕುಮಾರ್ ಅವರ ಜೊತೆ ಈ ಚಿತ್ರದ ಬಗ್ಗೆ ಮಾತನಾಡಿದ್ದೆ. ಅವರು ಧೂಮಂ ಚಿತ್ರದಲ್ಲಿ ಬ್ಯುಸಿಯಾಗಿದ್ದುದರಿಂದ ವಿನಯ್ ಭಾರದ್ವಾಜ್ ಅವರನ್ನು ಪರಿಚಯಿಸಿದರು. ‘ಮುಂದಿನ ನಿಲ್ದಾಣ’ ಚಿತ್ರ ನೋಡಿದೆ. ವಿನಯ್ ಅವರ ನಿರ್ದೇಶನ ಇಷ್ಟವಾಗಿ ತಮಿಳು ಚಿತ್ರವನ್ನು ಅವರೇ ನಿರ್ದೇಶಿಸುವಂತಾಯ್ತು. ನಾನು ಈ ಚಿತ್ರದಲ್ಲಿ ನಟಿಸಿಲ್ಲ. ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದೇನೆ. ನಿರ್ಮಾಪಕರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ’ ಎನ್ನುತ್ತಾರೆ. ನವೆಂಬರ್ 24ರಂದು ಸಿನಿಮಾ ತೆರೆಕಾಣುತ್ತಿದೆ.