ಈ ಸಿನಿಮಾದ ಸ್ಕ್ರೀನ್‌ಪ್ಲೇ ವಿಧಾನ ತುಂಬಾ ವಿಶಿಷ್ಟವಾಗಿದೆ. ಇದು ಅಕಿರಾ ಕುರೋಸೋವಾ ನಿರ್ದೇಶನದ ‘ರಾಶೋಮನ್‌’ ಚಿತ್ರದ ಯಾದಿಯಲ್ಲಿ ಇದೆ. ಅಂದರೆ ಒಂದು ವಿಷಯವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಹೇಳುವುದು. ಕಮಲ ಹಾಸನ್‌ ನಟನೆ, ನಿರ್ದೇಶನದ ‘ವಿರುಮಾಂಡಿ’ ಪ್ರಸ್ತುತ ಅಮೇಜಾನ್‌ ಪ್ರೈಮ್‌ ವೀಡಿಯೋದಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಇದು ಕಮಲ ಹಾಸನ್ ನಿರ್ದೇಶನದ ಮೂರನೇ ಸಿನಿಮಾ. ಆಗ ಕಮಲ ಹಾಸನ್ ನಿರ್ದೇಶನದ ಸಿನಿಮಾಗಳು ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಿದ್ದವು. ಅವರ ನಿರ್ದೇಶನದಲ್ಲಿ ಶುರು ಮಾಡಿದ ಮೊದಲನೆಯ ಸಿನಿಮಾ ‘ಮರುದನಾಯಾಗಂ’ (1996). ಸುಮಾರು 150 ಕೋಟಿ ರೂಪಾಯಿ ಬಜೆಟ್‌ ಸಿನಿಮಾ ಎನ್ನಲಾಗಿತ್ತು. ಬ್ರಿಟನ್ ರಾಣಿ ವಿಕ್ಟೋರಿಯಾ ಅವರನ್ನು ಸಿನಿಮಾದ ಮುಹೂರ್ತಕ್ಕೆ ಆಹ್ವಾನಿಸಲಾಗಿ, ಅವರು ಪಾಲ್ಗೊಂಡಿದ್ದರು. ಒಂದು ವೇಳೆ ಈ ಸಿನಿಮಾ ಬಂದಿದ್ದರೆ ಭಾರತೀಯ ಸಿನಿಮಾ ಇತಿಹಾಸದಲ್ಲೇ ಒಂದು ಮೈಲುಗಲ್ಲು ಆಗುತಿತ್ತು. ಸಿನಿಮಾ ಶುರುವಾಗಿ ಕೆಲಕಾಲ ಶೂಟಿಂಗ್ ಮಾಡಿ ಬಜೆಟ್ ಕಾರಣಗಳಿಂದ ಆ ಸಿನಿಮಾವನ್ನು ಕೈ ಬಿಡಲಾಯಿತು. ಆ ಸಿನಿಮಾದಲ್ಲಿ ನಮ್ಮ ಕನ್ನಡದ ನಟ ವಿಷ್ಣುವರ್ಧನ್‌ ಅಭಿನಯಿಸಿದ್ದರು.

ಕಮಲ್‌ರ ಎರಡನೇ ಸಿನಿಮಾ ‘ಹೇ ರಾಮ್’. ಅದು ಸಹ ವಿವಾದದ ಸುಳಿಯಲ್ಲಿ ಸಿಲುಕಿ ಕಡೆಗೆ ಹೇಗೋ ಬಿಡುಗಡೆ ಆಯಿತು. ಆದರೆ ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷಿಸಿದ ಯಶಸ್ಸು ಕಾಣಲಿಲ್ಲ. ಆದರೆ ಪತ್ರಿಕೆ ಹಾಗೂ ಮಾದ್ಯಮಗಳು, ಭಾರತದ ಚಿತ್ರರಂಗದ ದಿಗ್ಗಜರು ಆ ಸಿನಿಮಾವನ್ನು ಕೊಂಡಾಡಿದರು. ಹೌದು, ಸಿನಿಮಾ ಚೆನ್ನಾಗಿತ್ತು. ಇದಾದ ಬಳಿಕ ತಮ್ಮ ಮೂರನೇ ಸಿನಿಮಾವನ್ನು ಕಮಲ್ ಅವ್ರು ಘೋಷಣೆ ಮಾಡಿದರು. ಆ ಸಿನಿಮಾದ ಹೆಸರು ‘ಸಂಡಿಯರ್’. ಈ ಸಿನಿಮಾದ ಟೈಟಲ್ ಭಾರಿ ವಿವಾದಗಳನ್ನು ಹುಟ್ಟುಹಾಕಿತ್ತು. ಕಾರಣ ಅದು ಮದುರೈ ಜಿಲ್ಲೆಗಳಲ್ಲಿ ಇರುವಂಥ ದೇವರ್ ಎಂಬ ಸಮುದಾಯದ ಹೆಸರಾಗಿತ್ತು. ವಿರೋಧದ ಹಿನ್ನೆಲೆಯಲ್ಲಿ ಕಮಲ್‌ ಚಿತ್ರದ ಶೀರ್ಷಿಕೆಯನ್ನು ‘ವಿರುಮಾಂಡಿ’ ಎಂದು ಬದಲಾಯಿಸಿ ಸಿನಿಮಾ ಶುರುಮಾಡಿದರು. ನಾಯಕಿಯಾಗಿ ಮಲಯಾಳಂನ ಅಭಿರಾಮಿ, ಪ್ರಮುಖ ಪಾತ್ರಗಳಲ್ಲಿ ನೆಪೋಲಿಯನ್, ಪಶುಪತಿ, ನಾಸರ್, ರೋಹಿಣಿ ನಟಿಸಿದ್ದರು.

ಸಂಗೀತ ಇಳಯರಾಜ ಹಾಗೂ ಛಾಯಾಗ್ರಹಣ ಕೇಶವ್ ಅವರದ್ದು. ಈ ಹೊತ್ತಿಗೆ ಸಿನಿಮಾ ಬಿಡುಗಡೆ ಆಗಿ 18 ವರ್ಷಗಳಾಯ್ತು. ಗಲ್ಲು ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ವಿರುಮಾಂಡಿ (ಕಮಲ ಹಾಸನ್‌) ಮತ್ತು ಕೊತಾಲ ದೇವರ್‌ (ಪಶುಪತಿ) ಅವರನ್ನು ಪತ್ರಕರ್ತೆ ರೋಹಿಣಿ (ಏಂಜೆಲಾ ಕಾತಮುತ್ತು) ಭೇಟಿಯಾಗುತ್ತಾಳೆ. ಅವರ ಗಲ್ಲುಶಿಕ್ಷೆಗೆ ಕಾರಣಗಳೇನು? ಇವರುಗಳ ಜೀವನದಲ್ಲಿ ನಡೆದದ್ದೇನು? ಎಂಬುದನ್ನು ತಿಳಿಯುವುದು ಆಕೆಯ ಉದ್ದೇಶ. ಅದರ ಪ್ರಕಾರ ಮೊದಲು ಕೊತಾಲನನ್ನು ಬೇಟಿ ಮಾಡಿ ಅವನ ಕಥೆ ಕೇಳುತ್ತಾರೆ. ಕೊತಾಲ ಪಾಯಿಂಟ್ ಆಫ್ ವ್ಯೂನಲ್ಲಿ ಕಥೆ ಸಾಗುತ್ತದೆ. ಈತ ಹೇಳುವ ಕಥೆ ಕೇಳಿದ ಮೇಲೆ ರೋಹಿಣಿಗೆ ವಿರುಮಾಂಡಿ ಮೇಲೆ ಬಹಳ ಕೋಪ ಬರುತ್ತದೆ. ಸಿನಿಮಾ ನೋಡುವ ನಮಗೂ ಸಹ. ಅಲ್ಲಿಗೆ ಸಿನಿಮಾದ ವಿರಾಮ. ಭೇಟಿ ಮುಗಿದ ನಂತರ ವಿರುಮಾಂಡಿಯನ್ನು ಭೇಟಿಯಾಗುತ್ತಾಳೆ. ಅವನ ಪಾಯಿಂಟ್ ಆಫ್ ವ್ಯೂ ನಲ್ಲಿ ಕಥೆ ಹೇಳಲಾಗುತ್ತದೆ. ವಿಶೇಷವೇನೆಂದರೆ ಕೊತಾಲ ಹೇಳಿದ ದೃಶ್ಯಗಳೇ ವಿರುಮಾಂಡಿ ಹೇಳುವಾಗ ಮರುಕಳಿಸುತ್ತವೆ. ಆದರೆ ನಿಜಾವಾಗಿ ಆ ದೃಶ್ಯಗಳಲ್ಲಿ ನಡೆದದ್ದು ಏನು ಎಂಬುದನ್ನು ವಿರುಮಾಂಡಿ ಪಾಯಿಂಟ್ ಆಫ್ ವ್ಯೂನಲ್ಲಿ ತೋರಿಸಲಾಗುತ್ತದೆ. ಅಲ್ಲಿ ನಿಜವಾದ ಆರೋಪಿ ಯಾರು? ಕೊನೆಗೆ ಇವರಿಬ್ಬರಿಗೂ ಗಲ್ಲು ಆಗುತ್ತದಾ? ಎಂಬುದನ್ನು ಚಿತ್ರದಲ್ಲಿ ನೋಡಿ.

ಈ ಸಿನಿಮಾದ ಸ್ಕ್ರೀನ್‌ಪ್ಲೇ ವಿಧಾನ ತುಂಬಾ ವಿಶಿಷ್ಟವಾಗಿದೆ. ಇದು ಅಕಿರಾ ಕುರೋಸೋವಾ ನಿರ್ದೇಶನದ ‘ರಾಶೋಮನ್‌’ ಚಿತ್ರದ ಯಾದಿಯಲ್ಲಿ ಇದೆ. ಅಂದರೆ ಒಂದು ವಿಷಯವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಹೇಳುವುದು. ಭಾರತದ ಸಂದರ್ಭದಲ್ಲಿ ಉದಾಹರಣೆ ಕೊಡುವುದಾದರೆ ಮಣಿರತ್ನಂ ನಿರ್ದೇಶನದ ‘ಆಯುದ ಎಳುತ್ತು’ ಚಿತ್ರವನ್ನು ನೆನಪು ಮಾಡಿಕೊಳ್ಳಬಹುದು. ನಮ್ಮ ಕನ್ನಡದ ರಕ್ಷಿತ್ ಶೆಟ್ಟಿ ಕೂಡ ತಮ್ಮ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಈ ಪ್ರಯೋಗ ಮಾಡಿದ್ದರು. ಅಷ್ಟು ಅದ್ಭುತವಾಗಿ ಚಿತ್ರಕಥೆ ಬರೆದಿದ್ದರು ಕಮಲ್. ಚಿತ್ರದ ಸಂಭಾಷಣೆಯನ್ನು ಅವರೇ ಬರೆದಿದ್ದರು. ವಿಶೇಷವಾಗಿ ಮದುರೈ ಭಾಗಗಳಲ್ಲಿ ಮಾತನಾಡುವ ಥೆನ್ ತಮಿಳು ಸ್ಲ್ಯಾಂಗ್‌ ಬಳಸಿಕೊಳ್ಳಲಾಗಿತ್ತು. ಕಮಲ್‌ ಸಿನಿಮಾಗೆ ಬೆನ್ನೆಲುಬಾಗಿದ್ದು ಇಳಯರಾಜ ಅವರ ಸಂಗೀತ. ಅದು ಹಾಡುಗಳಾಗಿರಬಹುದು ಅಥವಾ ಹಿನ್ನೆಲೆ ಸಂಗೀತ ಆಗಿರಬಹುದು ತಮ್ಮ ಮಾಂತ್ರಿಕತೆ ತೋರಿಸಿದ್ದರು.

ಹಾಗೆಯೇ ಸಿನಿಮಾದ ಛಾಯಾಗ್ರಾಹಕರ ಕೆಲಸ ಅದ್ಭುತವಾಗಿತ್ತು. ಕೆಲವು ಅತ್ಯುತ್ತಮ ಶಾಟ್‌ಗಳನ್ನು ಕಂಪೋಸ್‌ ಮಾಡಿದ್ದರು. ಉದಾಹರಣೆಗೆ ಖೈದಿಗಳನ್ನು ಭೇಟಿ ಮಾಡುವ ಸಮಯದಲ್ಲಿ ವೀಡಿಯೋ ಕ್ಯಾಮೆರಾ ಶಾಟ್ಸ್‌ಗಳು. ಕೊಯಮತ್ತೂರಿನ ಜೈಲಿನಲ್ಲಿ ನಿಜವಾಗಿ ನಡೆದ ಖೈದಿಗಳ ನಡುವಿನ ಗಲಭೆ ಅದು. ಅಂದು ಸನ್ ಟಿವಿಯಲ್ಲಿ ತೋರಿಸಲಾಗಿತ್ತು. ಆ ಒರಿಜಿನಲ್ ಫೂಟೇಜ್‌ಗಳನ್ನು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಳಸಿಕೊಳ್ಳಲಾಗಿತ್ತು. ಅದು ಅಷ್ಟು ರಿಯಲಿಸ್ಟಿಕ್ ಆಗಿ ಇತ್ತು. ಇನ್ನು ಸಹ ಕಲಾವಿದರು ನಟನೆ ಮಾಡಿದ್ದಾರೆ ಅನ್ನುವುದಕ್ಕಿಂತ ಆ ಪಾತ್ರಗಳನ್ನು ಜೀವಿಸಿದ್ದಾರೆ ಎನ್ನುವುದೇ ಸೂಕ್ತ. ಸಿನಿಮಾ ವಿದ್ಯಾರ್ಥಿಗಳಿಗೆ ಚಿತ್ರಕಥೆ ಅಭ್ಯಸಿಸಲು ಇದೊಂದು ಒಳ್ಳೆಯ ಸಿನಿಮಾ. ಸಿನಿಮಾಸಕ್ತರು ಈ ಕಲ್ಟ್‌ ಕ್ಲಾಸಿಕ್‌ ಸಿನಿಮಾವನ್ನು ಮಿಸ್‌ ಮಾಡಬೇಡಿ. ‘ವಿರುಮಾಂಡಿ’ ಪ್ರಸ್ತುತ ಅಮೇಜಾನ್‌ ಪ್ರೈಮ್‌ ವೀಡಿಯೋದಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here