ಮಧು ಎಸ್‌. ಚೊಚ್ಚಲ ನಿರ್ದೇಶನದ ‘ಮೇನಿಯಾ’ ಸೈಕೋ – ಥ್ರಿಲ್ಲರ್‌ ಸೆಟ್ಟೇರಿದ್ದು, ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನೀನಾಸಂ ರಂಗಸಂಸ್ಥೆಯಲ್ಲಿ ಅಭಿನಯ ಕಲಿತಿರುವ ಸ್ವಸ್ತಿಕ್‌ ಆರ್ಯ ಅವರಿಗೆ ನಾಯಕನಟನಾಗಿ ಇದು ಮೊದಲ ಸಿನಿಮಾ.

ಸ್ಯಾಂಡಲ್‌ವುಡ್‌ನಲ್ಲೀಗ ನ್ಯೂ ಏಜ್‌ ಕಂಟೆಂಟ್‌ ಸಿನಿಮಾಗಳು ಹೆಚ್ಚೆಚ್ಚು ಸೆಟ್ಟೇರುತ್ತಿದ್ದು, ‘ಮೇನಿಯಾ’ ಇದಕ್ಕೆ ಹೊಸ ಸೇರ್ಪಡೆ. ಸೈಕೋ – ಥ್ರಿಲ್ಲರ್ ಕಥಾಹಂದರದ ‘ಮೇನಿಯಾ ಸಿನ್ಸ್ 1999’ ವಿಭಿನ್ನ ಕಥಾವಸ್ತುವಿನ ಸಿನಿಮಾ. ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಇಂದು ಟೀಸರ್‌ ಬಿಡುಗಡೆಯಾಗಿದೆ. ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಸೇರಿದಂತೆ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮಧು ಎಸ್. ಅವರು ದೊರೆ – ಭಗವಾನ್ ಅವರ ಇನ್‌ಸ್ಟಿಟ್ಯೂಟ್‌ನಲ್ಲಿ ನಿರ್ದೇಶನ ತರಬೇತಿ ಪಡೆದಿದ್ದಾರೆ. ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅವರಿಗೆ ಇದು ಮೊದಲ ಫೀಚರ್‌ ಸಿನಿಮಾ. ಚಿತ್ರದ ಕತೆ, ಚಿತ್ರಕಥೆ ಮತ್ತು ಸಂಭಾಷಣೆ ಕೂಡ ಅವರದೆ. ಸ್ಚಸ್ತಿಕ್ ಆರ್ಯ ಚಿತ್ರದ ನಾಯಕ. ‘ರಂಗನಾಯಕಿ’ ಧಾರಾವಾಹಿಯಲ್ಲಿ ನಟಿಸಿರುವ ಇವರು, ವಿಜಯ್ ಪ್ರಕಾಶ್ ಹಾಡಿರುವ ‘ಜಿಯಾ’ ಆಲ್ಬಂನಲ್ಲೂ ಅಭಿನಯಿಸಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಈ ಆಲ್ಬಂ ಸಾಂಗ್ ಬಿಡುಗಡೆಯಾಗಿತ್ತು. ಅವರು ನೀನಾಸಂ ರಂಗಸಂಸ್ಥೆಯಲ್ಲೂ ತರಬೇತಿ ಪಡೆದಿದ್ದಾರೆ. ಸ್ವಸ್ತಿಕ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಯಕ ಸ್ವಸ್ತಿಕ್ ಆರ್ಯ ಅವರು ಅರುಣ್ ಭಟ್ ಅವರೊಡಗೂಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ‌. ಬೆಂಗಳೂರು- ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ವಿಶಾಲ್ ಕುಮಾರ್ ಗೌಡ ಛಾಯಾಗ್ರಾಹಣ, ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

LEAVE A REPLY

Connect with

Please enter your comment!
Please enter your name here