ಫ್ರೆಂಚ್‌ ಹೊಸ ಅಲೆಯ ಸಿನಿಮಾಗಳ ಜನಕ ಎಂದೇ ಕರೆಸಿಕೊಂಡಿದ್ದ ಜೀನ್‌-ಲ್ಯೂಕ್‌ ಗೊಡಾರ್ಡ್‌ ಇಂದು ಅಗಲಿದ್ದಾರೆ. ಅವರ ನಿರ್ದೇಶನದ ‘Breathless’, ‘Contempt’ ಸಿನಿಮಾಗಳು ಜಾಗತಿಕ ಸಿನಿಮಾ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದವು.

“It’s not where you take things from – it’s where you take them to,” ಎನ್ನುವ ಚಿತ್ರನಿರ್ದೇಶಕ ಗೊಡಾರ್ಡ್‌ ಅವರ ಹೇಳಿಕೆ ಬಹುಜನಪ್ರಿಯ. ಸಿದ್ಧ ಮಾದರಿಯ ವ್ಯಾಕರಣ ಮೀರಿ ಸಿನಿಮಾ ಮಾಡುತ್ತಿದ್ದ ಅವರು ಜಾಗತಿಕ ಸಿನಿಮಾ ವಲಯದಲ್ಲಿ ಗುರುತಿಸಿಕೊಂಡಿದ್ದವರು. ಫ್ರೆಂಚ್‌ ಹೊಸ ಅಲೆಯ ಸಿನಿಮಾಗಳಿಗೆ ನಾಂದಿ ಹಾಡಿದ ಗೊಡಾರ್ಡ್‌ (91 ವರ್ಷ) ಇಂದು (ಸೆಪ್ಟೆಂಬರ್‌ 13) ಅಗಲಿದ್ದಾರೆ. ಅವರ ನಿರ್ದೇಶನದ ‘Breathless’, ‘Contempt’ ಚಿತ್ರಗಳನ್ನು ಜಾಗತಿಕ ಮಟ್ಟದ ಕ್ಲಾಸಿಕ್‌ ಸಿನಿಮಾಗಳೆಂದು ಗುರುತಿಸಲಾಗುತ್ತದೆ.

ಪ್ಯಾರಿಸ್‌ನ Franco-Swiss ಕುಟುಂಬದಲ್ಲಿ 1930ರ ಡಿಸೆಂಬರ್‌ 3ರಂದು ಗೊಡಾರ್ಡ್‌ ಜನಿಸಿದರು. ತಂದೆ ವೈದ್ಯ. ಗೊಡಾರ್ಡ್‌ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘Mariée’ (1964), ‘Pierrot le fou’ (1965), ‘Masculin Féminin’ (1966), ‘Week-end’ (1967) ಅವರ ಕೆಲವು ಪ್ರಮುಖ ಚಿತ್ರಗಳು. ಸಿದ್ಧ ಮಾದರಿಯ ಸಿನಿಮಾ ವ್ಯಾಕರಣದಿಂದ ಹೊರತಾಗಿ ಆಲೋಚಿಸಿದ ಗೊಡಾರ್ಡ್‌ ಇದೇ ಕಾರಣಕ್ಕೆ ಸಂಪ್ರದಾಯವಾದಿಗಳ ಕೋಪಕ್ಕೂ ಗುರಿಯಾಗಿದ್ದರು. 2010ರಲ್ಲಿ ಸಿನಿಮಾರಂಗಕ್ಕೆ ಸಂದ ಸೇವೆ ಪರಿಗಣಿಸಿ ಅಕಾಡೆಮಿ ಗೊಡಾರ್ಡ್‌ ಅವರನ್ನು ಪುರಸ್ಕರಿಸಿತ್ತು.

ಸಿನಿಮಾ ತಜ್ಞ ಶ್ರೀಪಾದ್‌ ಭಟ್‌ ಅವರು ಗೊಡಾರ್ಡ್‌ ಬಗ್ಗೆ ಹೇಳುವುದು ಹೀಗೆ –
‘ಆಧುನಿಕ ಸಿನಿಮಾ’ ಅಥವಾ ‘ಸಿನಿಮಾಗಳಲ್ಲಿ ಆಧುನಿಕತೆ’ ಅಥವಾ ‘ಕೇಂದ್ರದಿಂದ ಸ್ವಲ್ಪ ಪಕ್ಕಕ್ಕೆ ಜರುಗಿ’ ಹೀಗೆ ಏನಾದರೂ ಕರೆಯಿರಿ ಅದೆಲ್ಲವನ್ನು ತೋರಿಸಿಕೊಟ್ಟ ನಿರ್ದೇಶಕ ಗೊಡಾರ್ಡ್. ಸವಕಲು ಮಂಡನೆಯ ಮುಖ್ಯವಾಹಿನಿ ಸಿನಿಮಾವನ್ನು ‘ಪರಂಪರೆಯ ಗುಣಮಟ್ಟ’ ಎಂದು ಟೀಕಿಸುವ ಎದೆಗಾರಿಕೆಯಿದ್ದ ಗೊಡಾರ್ಡ್ ನವ ವಾಸ್ತವವಾದದ ಹರಿಕಾರ. ‘ಏನನ್ನಾದರೂ ಹೇಳಬಲ್ಲೆ, ಆದರೆ ಅರ್ಥಪೂರ್ಣತೆ ಕಳೆದುಕೊಳ್ಳುವುದಿಲ್ಲ, ದಕ್ಕಿಸಿಕೊಳ್ಳುವುದು ನಿಮಗೆ ಬಿಟ್ಟಿದ್ದು’ ಎಂದ ಗೊಡಾರ್ಡ್ ಸಿನಿಮಾ ಫಾರ್ಮ್ ಅನ್ನೇ ತಿರುಗುಮುರುಗಾಗಿಸಿದ.

1960ರಲ್ಲಿ ಬಿಡುಗಡೆಯಾದ ಆತನ ‘breathless’ ಸಿನಿಮಾ, ನಿರ್ಮಾಣದ ಮತ್ತು ನೋಡುವ ವ್ಯಾಕರಣವನ್ನೇ ಬದಲಿಸಿಬಿಟ್ಟಿತು. ತನ್ನ ‘little soldier’ ಸಿನಿಮಾದಲ್ಲಿ ಆತ ತನ್ನ ದೇಶ ಫ್ರಾನ್ಸ್ ಏಕಪಕ್ಷೀಯವಾಗಿ ಅಲ್ಜೀರಿಯಾ ಮೇಲೆ ಯುದ್ಧದಲ್ಲಿ ತೊಡಗಿಕೊಂಡಿದೆ, ಅದು ಅಸಹ್ಯ ಎಂದು ನಿರೂಪಿಸಿದ. ಬ್ರೆಕ್ಟ್‌ನ ಎಪಿಕ್ ರಂಗಭೂಮಿಯ ಎಲ್ಲಾ ಆಯಾಮಗಳನ್ನು ಆವಾಹಿಸಿಕೊಂಡಿದ್ದ ಗೊಡಾರ್ಡ್, ‘ನೀನು ಎಲ್ಲಿಂದ ಆಯ್ಕೆ ಮಾಡಿಕೊಂಡೆ ಎಂಬುದಲ್ಲ, ಎಲ್ಲಿಗೆ ಕೊಂಡೊಯ್ಯುತ್ತೀಯಾ ಎಂಬುದು ಮುಖ್ಯ’ ಎಂದಿದ್ದರು.

LEAVE A REPLY

Connect with

Please enter your comment!
Please enter your name here