ಸ್ನೇಕ್‌ ಶ್ಯಾಮ್‌ ಅವರಿಗೆ ಉರಗ ಪ್ರಪಂಚದ ಬಗ್ಗೆ ಸಾಕಷ್ಟು ಮಾಹಿತಿ, ಜ್ಞಾನವಿದೆ. ಬಿಗ್‌ಬಾಸ್‌ ಮನೆಯಲ್ಲಿ ಅವರು ಇತರೆ ಸ್ಪರ್ಧಿಗಳಿಗೆ ಹಾವುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ರೋಚಕ ಮಾಹಿತಿಯನ್ನು ಸ್ಪರ್ಧಿಗಳೆಲ್ಲಾ ಆಸಕ್ತಿಯಿಂದ ಆಲಿಸಿದ್ದಾರೆ.

ಸಾವಿರಾರು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿರುವ ಅನುಭವ ಇರುವ ಸ್ನೇಕ್‌ ಶ್ಯಾಮ್‌ ಈ ಸಲ ಬಿಗ್‌ಬಾಸ್‌ ಮನೆಯಲ್ಲಿ ‘ಅಸಮರ್ಥ’ರ ಗುಂಪಿನಲ್ಲಿರುವ ಸ್ಪರ್ಧಿ. ಪ್ರಾಣಿ ಪ್ರಪಂಚದ, ಅದರಲ್ಲಿಯೂ ಹಾವುಗಳ ಕುರಿತಂತೆ ಅವರಲ್ಲಿ ಅಪಾರ ಮಾಹಿತಿ, ಜ್ಞಾನವಿದೆ. ಉರಗಗಳ ಕುರಿತಂದೆ ಅವರು ಮಾತನಾಡಿರುವುದು ‘Live Shorts’ ಸೆಗ್‌ಮೆಂಟ್‌ ವೀಡಿಯೋ ತುಣುಕಿನಲ್ಲಿ ದಾಖಲಾಗಿದೆ. ಸ್ಪರ್ಧಿಗಳೆಲ್ಲ ಈಜುಕೊಳದ ಬಳಿ ಆರಮವಾಗಿ ಕೂತು ಹರಟೆ ಹೊಡೆಯುತ್ತಿದ್ದಾಗ ಸ್ನೇಕ್ ಶ್ಯಾಮ್‌ ಅವರು ಹಾವುಗಳ ಕುರಿತಾದ ಹಲವು ರೋಚಕ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಅವರು ಹೇಳಿದ ಸಂಗತಿಗಳನ್ನು ಕೇಳಿ ಉಳಿದ ಸ್ಪರ್ಧಿಗಳು ಬೆರಗಾಗಿದ್ದಾರೆ.

https://jiocinema.onelink.me/fRhd/srvtazvk

ಸ್ನೇಕ್‌ ಶ್ಯಾಮ್‌ ಹೇಳಿದ್ದು | ಹಾವುಗಳಲ್ಲಿ 45 – 65 ದಿನಗಳ ಒಳಗೆ ಮೊಟ್ಟೆ ಬೆಳವಣಿಗೆಯಾಗುತ್ತದೆ. ಪ್ರಾಣಿಗಳಲ್ಲಿ ಫೈಟಿಂಗ್ ಆಗೋದು ಈಟಿಂಗ್ ಮತ್ತು ಮೀಟಿಂಗ್ ಎರಡಕ್ಕೇನೇ. ನಮ್ ಥರ ಅಲ್ಲ… ನಾವು ಎಲ್ಲದಕ್ಕೂ ಹೊಡೆದಾಡುತ್ತೇವೆ. ಮೀಟಿಂಗ್ ಮುಗಿದ ಮೇಲೆ ಗಂಡು ಹಾವು ಅದರ ಪಾಡಿಗೆ ಅದು ಹೋಗುತ್ತದೆ. ಹೆಣ್ಣು ಹಾವು ಮೊಟ್ಟೆ ಡೆವಲೆಪ್ ಆದಮೇಲೆ ಸರಿಯಾಗಿರುವ ಜಾಗ ಹುಡುಕಿಕೊಂಡು ಹೋಗಿ ಮೊಟ್ಟೆಗಳನ್ನು ಇಡುತ್ತದೆ. ಅದೂ ಟೆಂಪರೇಚರ್ ಸರಿಯಾಗಿರುವ ಜಾಗ ಸಿಗುವ ತನಕ ಕಾಯುತ್ತದೆ. ನಮ್ ಥರ ಒಂಬತ್ತು ತಿಂಗ್ಳಾಯ್ತು, ಹೊಟ್ಟೆ ನೋವು ಶುರುವಾಯ್ತು, ಡಾಕ್ಟರ್ ಹತ್ರ ಹೋಗ್ಬೇಕು ಅಂತೆಲ್ಲ ಮಾಡಲ್ಲ… ಸರಿಯಾದ ಜಾಗ ಸಿಗುವ ತನಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುತ್ತೆ. ಮೊಟ್ಟೆ ಇಟ್ಟಮೇಲೆ ಕೆಲವು ಜಾತಿ ಹಾವುಗಳು ಸುರುಳಿ ಸುತ್ಕೊಂಡು ಮೊಟ್ಟೆ ಮೇಲೆ ಕಾವು ಕೊಡ್ತವೆ. ಇನ್ನು ಕೆಲವು ಜಾತಿ ಹಾವುಗಳು ಮೊಟ್ಟೆಗಳನ್ನಿಟ್ಟು ಕಾಯುತ್ತವೆ. ಮೊಟ್ಟೆ ಇಟ್ಟ 45ರಿಂದ 65 ದಿನಗಳಲ್ಲಿ ಮರಿಗಳು ಈಚೆ ಬರುತ್ತವೆ.

ಎಲ್ಲಾ ಜಾತಿಯ ಹಾವುಗಳು ಮೊಟ್ಟೆಗಳನ್ನು ಇಟ್ಟರೆ ಮೂರು ಜಾತಿಯ ಹಾವುಗಳು ಮರಿಗಳನ್ನು ಹಾಕುತ್ತವೆ. ಅವು ಯಾವುವೆಂದರೆ, ಹಸಿರು ಹಾವು, ಮಣ್ಣುಮುಕ್ಕ ಹಾವು ಮತ್ತೆ ಮಂಡಲ ಹಾವು. ಈ ಮೂರು ಜಾತಿಯ ಹಾವುಗಳು ಮರಿ ಹಾಕತ್ತೆ. ಆದರೆ ಇವು ಸಸ್ತನಿ ಅಲ್ಲ. ಸಸ್ತನಿ ಅಂದ್ರೆ ಮರಿಗಳನ್ನು ಹಾಕಿ ಮೊಲೆಯೂಡಿಸಬೇಕು. ಈ ಹಾವುಗಳು ಹಾಗೆ ಮಾಡಲ್ಲ. ಒಂದು ವಿಷಯ ಹೇಳ್ಬೇಕು, ಹಾವಿನ ಪ್ರತಿಯೊಂದು ಮರಿಗಳೂ ಸಂಪೂರ್ಣ ಸ್ವಾವಲಂಬಿಗಳಾಗಿರ್ತವೆ. ನಮ್ಮ ಥರ ಹುಟ್ಟಿದ ಮೇಲೆ ಬೇರೆಯವರ ಮೇಲೆ ಡಿಪೆಂಡ್ ಆಗಿರುವುದಿಲ್ಲ. ಅವರ ಪಾಡಿಗೆ ಅವು ತಮ್ಮ ಆಹಾರವನ್ನು ಹುಡುಕಿಕೊಂಡು ಹೋಗುತ್ತಿರುತ್ತವೆ. ತಾಯಿ, ತಂದೆಯ ಮೇಲೆ ಅವಲಂಬನೆ ಮಾಡುವುದೇ ಇಲ್ಲ.

ಎಲ್ಲ ಜಾತಿಯ ಹಾವುಗಳಲ್ಲಿಯೂ ಗಂಡು ಹಾವು ಇದೆ. ಆದರೆ ಒಂದು ಜಾತಿಯ ಹಾವುಗಳಲ್ಲಿ ಗಂಡುಹಾವು ಇಲ್ಲ. ಹೆಣ್ಣು ಹಾವೇ ಸೆಲ್ಫ್‌ ರಿಪ್ರೊಡಕ್ಷನ್ ಮಾಡಿಕೊಳ್ಳುತ್ತದೆ. ಆ ಜಾತಿಯ ಹಾವುಗಳನ್ನು ನೀವೆಲ್ಲರೂ ನೋಡಿರ್ತೀರಾ… ಎಲ್ಲರ ಮನೆಯ ಅಡುಗೆ ಮನೆ, ಬಚ್ಚಲ ಮನೆ, ಟಾಯ್ಲೆಟ್‌ನಲ್ಲೆಲ್ಲ ಓಡಾಡ್ತಿರತ್ತೆ, ಪಿಣಿಪಿಣಿಪಿಣಿ ಅಂತ… ಎರೆಹುಳದ ಥರ ಇರತ್ತೆ. ಅದು ಭಾರತದಲ್ಲಿನ ಅತಿಸಣ್ಣ ಹಾವು. ಅದು ರಿಪ್ರೊಡಕ್ಷನ್‌ ಅನ್ನು ಅದೇ ಮಾಡಿಕೊಳ್ಳುತ್ತದೆ. ಎಲ್ಲ ಜಾತಿಯ ಹಾವುಗಳೂ ಬಿಲಗಳಲ್ಲಿ, ಪೊಟರೆಗಳಲ್ಲಿ ಮೊಟ್ಟೆ ಇಟ್ಟರೆ, ಒಂದೇ ಒಂದು ಜಾತಿಯ ಹಾವು ಗೂಡನ್ನು ಕಟ್ಟಿ ಮೊಟ್ಟೆ ಇಡುತ್ತದೆ. ಎಲೆಗಳಿಂದ ಗೂಡು ಕಟ್ಟಿ ಮೊಟ್ಟೆ ಇಡುತ್ತದೆ. ಅದು ಕಿಂಗ್ ಕೋಬ್ರಾ!’

LEAVE A REPLY

Connect with

Please enter your comment!
Please enter your name here