‘ಗೌಳಿ’ ಚಿತ್ರದ ಸಾಹಸ ಸನ್ನಿವೇಶದ ಶೂಟಿಂಗ್ ನಡೆದಿದ್ದು, ಚಿತ್ರದ ನಿರ್ಮಾಪಕ ರಘು ಸಿಂಗಂ ಸಾಹಸ ಕಲಾವಿದರಿಗೆ ಇನ್‌ಶ್ಯೂರೆನ್ಸ್ ಮಾಡಿಸಿ ಸುದ್ದಿಯಾಗಿದ್ದಾರೆ. ದುಬಾರಿ ವೆಚ್ಚದ ರಿಸ್ಕೀ ಆಕ್ಷನ್ ಚಿತ್ರೀಕರಣದ ಸಂದರ್ಭದಲ್ಲಿನ ಅವರ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಶ್ರೀನಗರ ಕಿಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ ‘ಗೌಳಿ’ ಚಿತ್ರಕ್ಕೆ ಬೆಂಗಳೂರು ನೆಲಮಂಗಲ ಬಳಿಯ ಅರಿಶಿನಕುಂಟೆ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಇದಕ್ಕಾಗಿ ಕಟಾವಿಗೆ ಬಂದಿದ್ದ 3 ಎಕರೆ ಬಾಳೆತೋಟ ಹಾಗೂ 2 ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆದು ಬಳಸಿಕೊಳ್ಳಲಾಗಿದೆ. ಅಲ್ಲದೆ ವಿಶೇಷ ಸೆಟ್ ಕೂಡ ಹಾಕಿ ಸುಮಾರು 35 ಲಕ್ಷ ರೂ.ಗಳ ಅಪಾರ ವೆಚ್ಚದಲ್ಲಿ ಈ ಫೈಟ್ ಸೀನ್ ಚಿತ್ರೀಕರಿಸಿಕೊಳ್ಳಲಾಯ್ತು. ಶೂಟಿಂಗ್‌ನಲ್ಲಿ 100ಕ್ಕೂ ಹೆಚ್ಚು ಸಾಹಸ ಕಲಾವಿದರು ಪಾಲ್ಗೊಂಡಿದ್ದರು. ಈ ಸಾಹಸ ಕಲಾವಿದರಿಗೆ ನಿರ್ಮಾಪಕ ರಘು ಸಿಂಗಂ ತಮ್ಮ ಸ್ವಂತ. ಖರ್ಚಿನಲ್ಲಿ ಇನ್‌ಷೂರೆನ್ಸ್ (ಜೀವವಿಮೆ) ಮಾಡಿಸಿಕೊಟ್ಟಿದ್ದಾರೆ. ಸಾಹಸ ಸನ್ನಿವೇಶಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಕಹಿ ವಿದ್ಯಮಾನಗಳ ಹಿನ್ನೆಲೆಯಲ್ಲಿ ನಿರ್ಮಾಪಕರು ಕಲಾವಿದರಿಗೆ ಎಲ್ಲಾ ರೀತಿಯ ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅವರ ಈ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.
ರಘು ಸಿಂಗಂ ಕಳೆದ ಹಲವಾರು ವರ್ಷಗಳಿಂದ ಚಿತ್ರರಂಗದ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ. ಈಗವರು ತಮ್ಮ ಪುತ್ರನ ಹೆಸರಿನಲ್ಲಿ ಸೋಹನ್ ಫಿಲಂ ಫ್ಯಾಕ್ಟರಿ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಗೌಳಿಯಾಗಿ ನಟಿಸುತ್ತಿದ್ದಾರೆ. ವಿಕ್ರಂ ಮೋರ್ ಸಾಹಸ ಸಂಯೋಜನೆಯಲ್ಲಿ ನಾಯಕನಟ ಶ್ರೀನಗರ ಕಿಟ್ಟಿ ಹಾಗೂ ಖಳನಟ ಯಶ್‌ಶೆಟ್ಟಿ ಗುಂಪಿನ ನಡುವಿನ ಹೊಡೆದಾಟದ ಸೀನ್ ಇದಾಗಿತ್ತು. ಇದರ ಜೊತೆ ಚಿತ್ರದ ಶೇ.50ರಷ್ಟು ಚಿತ್ರೀಕರಣ ಮುಗಿದಿದ್ದು, 30 ದಿನಗಳ ಚಿತ್ರೀಕರಣ ಬಾಕಿಯಿದೆ. ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಹಾಕಿರುವ ಸೂರ ಅವರೇ ಚಿತ್ರದ ಕಥೆ, ಚಿತ್ರಕಥೆ ರಚಿಸಿದ್ದಾರೆ. ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಹಾಲು ಮಾರುವವರನ್ನು ಗೌಳಿ ಎಂದು ಕರೆಯುತ್ತಾರೆ. ಇದೇ ನಾಯಕನ ಹೆಸರು ಕೂಡ. ಪಾವನಾ ಚಿತ್ರದ ನಾಯಕಿ. ಶಶಾಂಕ್ ಶೇಷಗಿರಿ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.