ಸಹಾರಾ ಸಮೂಹದ ಸಂಸ್ಥಾಪಕ ಸುಬ್ರತಾ ರಾಯ್‌ ಚಿತ್ರನಿರ್ಮಾಣ ಮತ್ತು ವಿತರಣೆಯಲ್ಲೂ ಸಕ್ರಿಯರಾಗಿದ್ದವರು. ‘ಸಹಾರಾ ಒನ್ ಮೋಷನ್ ಪಿಕ್ಚರ್ಸ್’ ವಿತರಣಾ ಸಂಸ್ಥೆಯಡಿ ಅವರು ಹಲವು ಹಿಂದಿ ಚಿತ್ರಗಳನ್ನು ವಿತರಿಸಿದ್ದಾರೆ. ಚಿತ್ರರಂಗದ ಗಣ್ಯರೊಂದಿಗೆ ಅವರು ನಿಕಟ ಸಂಪರ್ಕ ಹೊಂದಿದ್ದರು.

ಸಹಾರಾ ಸಮೂಹದ ಸಂಸ್ಥಾಪಕರಾದ ಸುಬ್ರತಾ ರಾಯ್ (75) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಹಾರಾಶ್ರೀ ಎಂದೇ ಜನಪ್ರಿಯರಾಗಿದ್ದ ಅವರು ‘ಸಹಾರಾ ಇಂಡಿಯಾ ಗ್ರೂಪ್’ ನಿರ್ಮಿಸುವುದರ ಜೊತೆಗೆ, ಚಿತ್ರನಿರ್ಮಾಣ ಮತ್ತು ‘ಸಹಾರಾ ಒನ್ ಮೋಷನ್ ಪಿಕ್ಚರ್ಸ್’ ವಿತರಣಾ ಸಂಸ್ಥೆ ಸ್ಥಾಪಿಸಿದ್ದರು. ‘ನೋ ಎಂಟ್ರಿ’, ‘ವಾಂಟೆಡ್‌’, ‘ ಡೋರ್‌’ ಅವರ ನಿರ್ಮಾಣ, ವಿತರಣೆಯ ಕೆಲವು ಹಿಂದಿ ಚಿತ್ರಗಳು. ಬಾಲಿವುಡ್‌ ಹಿರಿಯ ನಟ ಅನುಪಮ್‌ ಖೇರ್‌ ಅವರು ಸುಬ್ರತಾ ಅವರ ನಿಧನಕ್ಕೆ ಸಂತಾಪ ಸೂಚಿಸಿ, ‘ಸುಬ್ರತಾ ರಾಯ್ ಜಿ ಅವರ ನಿಧನದ ವಿಷಯ ತಿಳಿದು ದುಃಖವಾಯಿತು. ವಿವಿಧ ಸಂದರ್ಭಗಳಲ್ಲಿ ನಾವು ಹಲವು ಬಾರಿ ಭೇಟಿಯಾಗಿದ್ದೇವೆ. ಅವರು ಯಾವಾಗಲೂ ಸಹಾಯ ಮಾಡಲು ಮುಂದಿರುತ್ತಿದ್ದರು’ ಎಂದು ಟ್ವೀಟ್‌ ಮಾಡಿದ್ದಾರೆ.

ನಟ ರಿತೇಶ್ ದೇಶ್‌ಮುಖ್ ತಮ್ಮ X ನಲ್ಲಿ, ‘ಸಹಾರಾಶ್ರೀ, ಸುಬ್ರತಾ ರಾಯ್ ಜಿ ಅವರು ಸಹೃದಯದ ವ್ಯಕ್ತಿ. ಯಾವಾಗಲೂ ಅವರ ಸುಂದರ ನಗು ಮತ್ತು ಬೆಚ್ಚಗಿನ ಅಪ್ಪುಗೆಯೊಂದಿಗೆ ನನ್ನನ್ನು ಸ್ವಾಗತಿಸುತ್ತಿದ್ದರು. ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ಅವರು ನಿಜವಾದ ದಾರ್ಶನಿಕರಾಗಿದ್ದರು. ಇಡೀ ಸಹಾರಾ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದಾರೆ. ನಟಿ ಮನೀಶಾ ಕೊಯಿರಾಲಾ ತಮ್ಮ X ನಲ್ಲಿ, ‘ತನ್ನ ಹೋರಾಟದ ಜೀವನದಲ್ಲಿ ಎಂದಿಗೂ ಬಿಟ್ಟುಕೊಡದ ವ್ಯಕ್ತಿ. RIP ಡಿಯರ್ ಸರ್’ ಎಂದು ಬರೆದುಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರು ರಾಯ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅಮಿತಾಭ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ನಷ್ಟದಲ್ಲಿದ್ದಾಗ ರಾಯ್‌ ಅವರು ನಟನಿಗೆ ಸಹಾಯ ಮಾಡಿದ್ದರು ಎನ್ನಲಾಗಿದೆ. ಸುಬ್ರತಾ ಅವರ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here