“ಹಿಂದಿ ರಾಷ್ಟ್ರಭಾಷೆ ಅಲ್ಲದಿದ್ದರೆ ನೀವೇಕೆ ನಿಮ್ಮ ಸಿನಿಮಾವನ್ನು ಹಿಂದಿಗೆ ಡಬ್‌ ಮಾಡುತ್ತೀರಿ?” ಎಂದು ನಟ ಅಜಯ್‌ ದೇವಗನ್‌ ಟ್ವಿಟರ್‌ನಲ್ಲಿ ಸುದೀಪ್‌ರನ್ನು ಪ್ರಶ್ನಿಸಿದ್ದಾರೆ. ನಟ ಸುದೀಪ್‌ ಇದಕ್ಕೆ ಸೂಕ್ತ ಉತ್ತರ ನೀಡಿ, “ನನ್ನ ಮಾತುಗಳನ್ನು ನೀವು ತಪ್ಪಾಗಿ ಅರ್ಥೈಸಿದ್ದೀರಿ. ಇದು ವಾದ ಮಾಡುವ ವಿಚಾರವಲ್ಲ” ಎಂದಿದ್ದಾರೆ.

ಮೊನ್ನೆ ಸಿನಿಮಾ ಸಮಾರಂಭವೊಂದರಲ್ಲಿ ನಟ ಸುದೀಪ್‌, “ದಕ್ಷಿಣ ಭಾರತದ ಸಿನಿಮಾಗಳು ಭಾರತದಾದ್ಯಂತ ಪ್ರದರ್ಶನಗೊಳ್ಳುತ್ತಿವೆ. ಹಿಂದಿ ಸಿನಿಮಾಗಳದ್ದು ಹೆಚ್ಚುಗಾರಿಕೆ ಎನ್ನುವ ಕಾಲ ಇದಲ್ಲ. ಹಿಂದಿ ರಾಷ್ಟ್ರಭಾಷೆಯಲ್ಲ” ಎಂದಿದ್ದರು. ಇದಾಗಿ ಎರಡು ದಿನಗಳ ನಂತರ ಸಂದರ್ಶನವೊಂದರಲ್ಲಿ ಇದೇ ಮಾತುಗಳನ್ನು ಪುನರುಚ್ಛರಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಲಿವುಡ್‌ ನಟ ಅಜಯ್‌ ದೇವಗನ್‌, “ಹಿಂದಿ ರಾಷ್ಟ್ರಭಾಷೆ ಅಲ್ಲದಿದ್ದರೆ ನೀವೇಕೆ ನಿಮ್ಮ ಸಿನಿಮಾಗಳನ್ನು ಹಿಂದಿ ಭಾಷೆಗೆ ಡಬ್‌ ಮಾಡಿ ರಿಲೀಸ್‌ ಮಾಡುತ್ತೀರಿ? ಹಿಂದಿ ರಾಷ್ಟ್ರಭಾಷೆ ಹೌದು, ಮುಂದೆಯೂ ರಾಷ್ಟ್ರಭಾಷೆಯಾಗಿಯೇ ಉಳಿಯುತ್ತದೆ” ಎಂದು ಟ್ವೀಟ್‌ ಮಾಡಿದ್ದಾರೆ. ದೇವಗನ್‌ ಟ್ವೀಟ್‌ಗೆ ಸಾವಿರಾರು ಸಂಖ್ಯೆಯಲ್ಲಿ ಪರ – ವಿರೋಧದ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ.

“ಹಿಂದಿ ರಾಷ್ಟ್ರಭಾಷೆ ಎನ್ನುವ ಗ್ರಹಿಕೆಯೇ ಮೂರ್ಖತನದ್ದು” ಎಂದು ದಕ್ಷಿಣ ಭಾರತದವರು ದೊಡ್ಡ ಸಂಖ್ಯೆಯಲ್ಲಿ ಅಜಯ್‌ ದೇವಗನ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೆ ಕೆಲವರು ಅಜಯ್‌ ಪರವಾಗಿ ಬ್ಯಾಟ್‌ ಬೀಸಿದ್ದು, ಅವರ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಅಜಯ್‌ ದೇವಗನ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸುದೀಪ್‌, “ನಾನು ಯಾವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದೇನೆ ಎನ್ನುವುದು ಮುಖ್ಯ. ಅದನ್ನು ನೀವು ತಪ್ಪಾಗಿ ಅರ್ಥೈಸಿದ್ದೀರಿ. ನೇರವಾಗಿ ಮುಖಾಮುಖಿಯಾದಾಗ ನಿಮಗೆ ನನ್ನ ನಿಲುವು ಸ್ಪಷ್ಟಪಡಿಸುತ್ತೇನೆ. ಇದು ಇತರರನ್ನು ನೋಯಿಸಲು ಇಲ್ಲವೇ ವಾದ ಮಾಡಲು ಮಾತನಾಡಿದ್ದಲ್ಲ” ಎಂದಿದ್ದಾರೆ.

ಅಜಯ್‌ ದೇವಗನ್‌ರಿಗೆ ಪ್ರತಿಕ್ರಿಯಿಸಿರುವ ಮತ್ತೊಂದು ಟ್ವೀಟ್‌ನಲ್ಲಿ ಸುದೀಪ್‌, “ನಿಮ್ಮ ಹಿಂದಿಯ ಟ್ವೀಟ್‌ ಅನ್ನು ನಾನು ಅರ್ಥ ಮಾಡಿಕೊಂಡೆ. ಏಕೆಂದರೆ ನಾನು ಹಿಂದಿ ಭಾಷೆಯನ್ನು ಕಲಿತಿದ್ದೇನೆ. ಅದೇ ವೇಳೆ ಒಂದೊಮ್ಮೆ ನಾನು ಕನ್ನಡದಲ್ಲಿ ನಿಮಗೆ ಪ್ರತಿಕ್ರಿಯಿಸಿದ್ದಿದ್ದರೆ ಹೇಗಿರುತ್ತಿತ್ತು!? ನಾವಿಬ್ಬರೂ ಭಾರತೀಯರೇ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ದೇವಗನ್‌ರಿಗೆ ಈ ಟ್ವೀಟ್‌ ಮೂಲಕ ಸುದೀಪ್‌ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದಾರೆ ಎಂದು ಸುದೀಪ್‌ ಅಭಿಮಾನಿಗಳು ಟ್ವೀಟ್‌ ಮಾಡಿದ್ದರೆ, ಸುದೀಪ್‌, “ನಾನು ಭಾರತದ ಎಲ್ಲಾ ಭಾಷೆಗಳನ್ನೂ ಗೌರವಿಸುತ್ತೇನೆ. ನಾನು ಹೇಳಿದ ಸಂದರ್ಭ ಬೇರೆಯದ್ದು. ಇಲ್ಲಿಗೆ ಈ ವಿಷಯವನ್ನು ಮುಕ್ತಾಯಗೊಳಿಸಲು ಇಚ್ಛಿಸುತ್ತೇನೆ” ಎಂದಿದ್ದಾರೆ.

ಸುದೀಪ್‌ ಟ್ವೀಟ್‌ ಮಾಡಿದ ನಂತರ ಅಜಯ್‌ ದೇವಗನ್‌ ಮತ್ತೊಂದು ಟ್ವೀಟ್‌ನಲ್ಲಿ, “ನೀವು ನನ್ನ ಸ್ನೇಹಿತರು. ತಪ್ಪಾಗಿ ಅರ್ಥೈಸಿದ ನನಗೆ ನಿಮ್ಮಿಂದ ಕ್ಲಿಯಾರಿಟಿ ಸಿಕ್ಕಿತು. ಸಿನಿಮಾರಂಗ ಒಂದೇ ಎಂದೇ ನಾನು ಭಾವಿಸಿದ್ದೇನೆ. ನಾವು ಎಲ್ಲಾ ಭಾಷೆಗಳನ್ನೂ ಗೌರವಿಸುತ್ತೇವೆ” ಎಂದಿದ್ದಾರೆ. ಅಜಯ್‌ ಮಾತುಗಳನ್ನು ರೀಟ್ವೀಟ್‌ ಮಾಡಿರುವ ಸುದೀಪ್‌, “ಸಂಪೂರ್ಣ ವಿವರಗಳು ಗೊತ್ತಾಗದೆ ಪ್ರತಿಕ್ರಿಯಿಸಿದರೆ ತಪ್ಪು ಅರ್ಥಗಳು ಸಿಗುತ್ತವೆ. ಇದಕ್ಕೆ ನಿಮ್ಮನ್ನು ನಾನು ದೂಷಿಸುವುದಿಲ್ಲ. ಸೃಜನಶೀಲ ಕಾರಣಗಳಿಗೆ ನಿಮ್ಮಿಂದ ಟ್ವೀಟ್‌ಗಳು ಸಿಕ್ಕಿದ್ದಕ್ಕೆ ನಾನು ಖುಷಿ ಪಡುತ್ತೇನೆ” ಎಂದಿದ್ದಾರೆ.

ಇಬ್ಬರು ನಟರ ಟ್ವೀಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವಾದ, ವಿವಾದಗಳಿಗೆ ಕಾರಣವಾಗಿದ್ದಂತೂ ಹೌದು. ಅಜಯ್‌ ದೇವಗನ್‌ರ ಹಿಂದಿ ಟ್ವೀಟ್‌ಗೆ ದೊಡ್ಡ ಸಂಖ್ಯೆಯಲ್ಲಿ ಖಾರವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. “ಹಿಂದಿ ರಾಷ್ಟ್ರಭಾಷೆ” ಎನ್ನುವ ಅವರ ಗ್ರಹಿಕೆಯ ಬಗ್ಗೆ ಹಲವರು ಕಟಕಿಯಾಡಿದ್ದಾರೆ. ಇನ್ನು ಅಜಯ್‌ ಟ್ವೀಟ್‌ಗೆ ಸುದೀಪ್‌ ನೇರವಾಗಿ ಪ್ರತಿಕ್ರಿಯಿಸಬೇಕಿತ್ತು ಎಂದೂ ಕೆಲವರು ಹೇಳಿದ್ದಾರೆ. “ಹಿಂದಿ ರಾಷ್ಟ್ರಭಾಷೆ ಎಂದು ವಾದಿಸುವ ದೇವಗನ್‌ ತಮ್ಮ ಅಜ್ಞಾನವನ್ನು ತಾವೇ ತೋರಿಸಿಕೊಟ್ಟಿದ್ದಾರೆ. ಈ ಬಗ್ಗೆ ಸುದೀಪ್‌ ಪ್ರಶ್ನಿಸಬೇಕಿತ್ತು” ಎಂದು ಹಲವರು ಕಾಮೆಂಟಿಸಿದ್ದಾರೆ. ನೂರಾರು ಕನ್ನಡಿಗರು ಅಜಯ್‌ ದೇವಗನ್‌ ಟ್ವೀಟ್‌ಗೆ ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿರುವುದು ವಿಶೇಷ.

LEAVE A REPLY

Connect with

Please enter your comment!
Please enter your name here