ಯಶ್‌ರ ‘KGF2’ ಸಿನಿಮಾ ಮೂಲಕ ಸುದ್ದಿಯಲ್ಲಿರುವ ಹೊಂಬಾಳೆ ಫಿಲಂಸ್‌ ನೂತನ ಸಿನಿಮಾ ಘೋಷಿಸಿದೆ. ನೈಜ ಘಟನೆ ಆಧರಿಸಿ ತಯಾರಾಗುತ್ತಿರುವ ಚಿತ್ರವನ್ನು ‘ಸೂರರೈ ಪೋಟ್ರು’ ತಮಿಳು ಸಿನಿಮಾ ಖ್ಯಾತಿಯ ಸುಧಾ ಕೊಂಗರ ನಿರ್ದೇಶಿಸಲಿದ್ದಾರೆ.

‘KGF2’ ಸಿನಿಮಾದ ದೊಡ್ಡ ಯಶಸ್ಸಿನೊಂದಿಗೆ ಹೊಂಬಾಳೆ ಫಿಲಂಸ್‌ ಎಲ್ಲರಿಗೂ ಚಿರಪರಿಚಿತವಾಗಿದೆ. ಕನ್ನಡ ಚಿತ್ರರಂಗದ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಈ ಸಂಸ್ಥೆಯಿಂದ ಹಲವು ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಪ್ರಸ್ತುತ ಸಂಸ್ಥೆಯಿಂದ ನೂತನ ಚಿತ್ರದ ಘೋಷಣೆಯಾಗಿದೆ. ವಿಶೇಷವೆಂದರೆ ಹೊಂಬಾಳೆ ಫಿಲಂಸ್‌ಗೆ ಸಿನಿಮಾ ಮಾಡುವ ಅವಕಾಶ ಪಡೆದಿರುವುದು ಸುಧಾ ಕೊಂಗರ ಅವರು. ಮೂಲತಃ ಆಂಧ್ರಪ್ರದೇಶದವರಾದ ಅವರು ತಮಿಳು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಅಲ್ಲಿ ಭಿನ್ನ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ಸೂರ್ಯ ನಟಿಸಿದ್ದ ‘ಸೂರರೈ ಪೋಟ್ರು’ ಪ್ರೇಕ್ಷಕರು ಹಾಗೂ ವಿಮರ್ಶಕ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.

ಈಗ ಸುಧಾ ಕೊಂಗರ ಮತ್ತು ಹೊಂಬಾಳೆ ಫಿಲಂಸ್ ಸಂಸ್ಥೆ ಕೈ ಜೋಡಿಸಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈ ಹೊಸಚಿತ್ರದ ನಿರ್ಮಾಣದ ಸುದ್ದಿಯನ್ನು ಹೊಂಬಾಳೆ ಫಿಲಂಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ”ಕೆಲವು ನೈಜ ಕಥೆಗಳನ್ನು ಹೇಳಲೇಬೇಕು. ಸುಧಾ ಕೊಂಗರ ಅವರ ಜೊತೆ ನಮ್ಮ ಹೊಸ ಸಿನಿಮಾ ಘೋಷಣೆ ಮಾಡಲು ಹೆಮ್ಮೆ ಆಗುತ್ತಿದೆ” ಎಂದು ಪೋಸ್ಟ್ ಮಾಡಿದ್ದಾರೆ. ಸುಧಾ ಕೊಂಗರ ಅವರು ನಿರ್ದೇಶಿಸಿದ್ದ ‘ಸೂರರೈ ಪೋಟ್ರು’ ಸತ್ಯ ಘಟನೆ ಆಧಾರಿತ ಚಿತ್ರ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥನ್ ಅವರ ಜೀವನದ ಕಥೆಯನ್ನು ಆಧರಿಸಿ ಸುಧಾ ಅವರು ಸಿನಿಮಾ ಮಾಡಿದ್ದರು.

ಹೊಂಬಾಳೆ ಫಿಲಂಸ್ ಮೂಲಕ ಈಗಾಗಲೇ ಅನೇಕ ಸಿನಿಮಾಗಳ ಸಿದ್ಧವಾಗುತ್ತಿವೆ. ಪ್ರಭಾಸ್ ನಟನೆಯ ‘ಸಲಾರ್’, ಶ್ರೀಮುರಳಿ ಅಭಿನಯದ ‘ಬಘೀರ’, ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರಾ’, ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಈಗ ಸುಧಾ ಕೊಂಗರ ನಿರ್ದೇಶನದ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ಈ ಚಿತ್ರದ ಶೀರ್ಷಿಕೆ, ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ.

LEAVE A REPLY

Connect with

Please enter your comment!
Please enter your name here