ಬಹುಭಾಷಾ ನಟಿ ಸುಹಾಸಿನಿ ಅವರು ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ಬೋಲ್ಡ್‌ ಕಂಟೆಂಟ್‌ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ಕಂಟೆಂಟ್‌ನಲ್ಲಿ ನಟಿಸಬೇಡಿ ಎಂದು ಅವರು ಬಾಲಿವುಡ್‌ನ ಮುಂಚೂಣಿ ತಾರೆಯರಿಗೆ ಖುದ್ದಾಗಿ ಹೇಳಲು ಬಯಸಿದ್ದರಂತೆ. ಆಗ ಸುಹಾಸಿನಿ ಸ್ನೇಹಿತೆ, ನಟಿ ಪೂನಂ ದಿಲ್ಲಾನ್‌ ಅವರನ್ನು ತಡೆದಿದ್ದಾರೆ.

‘OTT ಪ್ಲಾಟ್‌ಫಾರ್ಮ್‌ಗಳಲ್ಲಿ ಈಗ ತುಂಬಾ ಬೋಲ್ಡ್‌ ಕಂಟೆಂಟ್‌ ಬರುತ್ತಿದೆ. ನಮ್ಮ ಸಮಾಜ, ಸೆನ್ಸಾರ್‌, ಕಾನೂನು ಒಪ್ಪದ ಇಂತಹ ಕಂಟೆಂಟ್‌ಗಳನ್ನು ಮಾಡಲು ಅವರು ಅದು ಹೇಗೆ ಧೈರ್ಯ ಮಾಡುತ್ತಾರೆ ಎನ್ನುವ ಪ್ರಶ್ನೆ ಏಳುತ್ತದೆ. ಬಾಲಿವುಡ್‌ ಸ್ಟಾರ್‌ ಹೀರೋ, ಹಿರೋಯಿನ್‌ಗಳು ಸಿನಿಮಾಗಳಲ್ಲಿ ಇಂತಹ ಕಂಟೆಂಟ್‌ನಲ್ಲಿ ನಟಿಸುತ್ತಾರೆ. ಬಹುಶಃ ಓಟಿಟಿ ಕಂಟೆಂಟ್ ರೂಪಿಸುವವರಿಗೆ ಇದೇ ಪ್ರೇರಣೆಯಾಗಿರಬಹುದು. ಸೃಜನಶೀಲ ಸ್ವಾತಂತ್ರ್ಯ ಎನ್ನುವ ನೆಪದಲ್ಲಿ ಹದ್ದು ಮೀರುತ್ತಿದ್ದಾರೆ’ ಎಂದಿದ್ದಾರೆ ಬಹುಭಾಷಾ ನಟಿ ಸುಹಾಸಿನಿ. ಇತ್ತೀಚೆಗೆ ABP live eventನಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಬೋಲ್ಡ್‌ ಕಂಟೆಂಟ್‌ನಲ್ಲಿ ನಟಿಸದಂತೆ ಬಾಲಿವುಡ್‌ನ ಮುಂಚೂಣಿ ಕಲಾವಿದರಿಗೆ ಕಿವಿಮಾತು ಹೇಳಲು ಅವರು ಅಪೇಕ್ಷಿಸಿದ್ದರಂತೆ. ಆಗ ಅವರ ಆಪ್ತ ಸ್ನೇಹಿತೆ, ನಟಿ ಪೂನಂ ದಿಲ್ಲಾನ್‌ ತಡೆದಿದ್ದಾರೆ. ‘ಈ ವಿಷಯದಲ್ಲಿ ಮಾತನಾಡಬೇಡ, ಸುಮ್ಮನಿರು’ ಎಂದಿದ್ದರಂತೆ ಪೂನಂ.

Digital Publisher Content Grievances Council (DPCGC) ಅಡಿ ಬರುವ Grievance Redressal Board (GRB) ಭಾಗವಾಗಿದ್ದಾರೆ ನಟಿ ಸುಹಾಸಿನಿ. ABP ಚರ್ಚೆಯಲ್ಲಿ ನಿರೂಪಕಿ, ‘ಸಿನಿಮಾ, ಟೀವಿ ಕ್ಷೇತ್ರದಲ್ಲಿ ಯುವ ತಂತ್ರಜ್ಞರು ಹಾಗೂ ಕಲಾವಿದರಿಗೆ ಏನು ಕಿವಿಮಾತು ಹೇಳಲು ಇಚ್ಛಿಸುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ. ಆಗ ಸುಹಾಸಿನಿ OTT ಸಾಧಕ – ಬಾಧಕಗಳ ಬಗ್ಗೆ ಮಾತನಾಡುತ್ತಾ, ಅಲ್ಲಿನ ಬೋಲ್ಡ್‌ ಕಂಟೆಂಟ್‌ ಕುರಿತು ಪ್ರಸ್ತಾಪಿಸಿದ್ದಾರೆ. Grievance Redressal Board (GRB) ಭಾಗವಾಗಿ ಇದನ್ನು ಹತ್ತಿಕ್ಕುವುದು ತಮ್ಮ ಕರ್ತವ್ಯ ಎನ್ನುತ್ತಾರೆ ಸುಹಾಸಿನಿ. ‘ಓಟಿಟಿಯಲ್ಲಿ ಇಂತಹ ಬೋಲ್ಡ್‌ ಕಂಟೆಂಟ್‌ ನೋಡಿದಾಗೆಲ್ಲಾ ಬೇಸರವಾಗುತ್ತದೆ. ಕೆಲವರು ಇದನ್ನೇ ಸೃಜನಶೀಲತೆ ಎಂದು ಕರೆಯುತ್ತಾರೆ. ಆದರೆ ಇದು ಇತರರಿಗೆ ಮಾದರಿ ಆಗಿಬಿಡುತ್ತದೆ. ಪೋರ್ನೋಗ್ರಫಿ ಎಲ್ಲರಿಗೂ ಸುಲಭವಾಗಿ ಸಿಗುವಂತಾಗಿದೆ. ಜನರು ಇದನ್ನು ಆಕ್ಷೇಪಿಸದೆ ಒಪ್ಪಿಕೊಂಡಿದ್ದಾರೆ. ಕಲೆ ಎಂದು ಎಲ್ಲವನ್ನೂ ಒಪ್ಪಿಕೊಳ್ಳುವುದು ಸೂಕ್ತವಲ್ಲ ಎಂದು ಜನರಿಗೆ ಮನವರಿಕೆಯಾಗಬೇಕು’ ಎಂದಿದ್ದಾರೆ ಸುಹಾಸಿನಿ.

LEAVE A REPLY

Connect with

Please enter your comment!
Please enter your name here