ಊಬರ್‌ನ ಸ್ಥಾಪಕ ಟ್ರಾವಿಸ್ ಕಲಾನಿಕ್‌ನ ಬೆಳವಣಿಗೆ ಮತ್ತು ಪತನವನ್ನು ‘ಸೂಪರ್ ಪಂಪ್ಡ್ ಅಪ್: ದ ಬ್ಯಾಟಲ್ ಫಾರ್ ಊಬರ್’ ಚಿತ್ರಿಸಿದೆ. ಅಮೆರಿಕದ ಶೋಟೈಮ್ ನಿರ್ಮಾಣದ ಈ ಸರಣಿ ಭಾರತದ ವೀಕ್ಷಕರಿಗೆ Voot Selectನಲ್ಲಿ ಸ್ಟ್ರೀಂ ಆಗುತ್ತಿದೆ.
ಒಂದೊಮ್ಮೆ ಅಡ್ನಾಡಿ ಯುವಕರಾಗಿದ್ದವರು ಸ್ಟಾರ್ಟಪ್‌ಗಳ ಕೃಪೆಯಿಂದ ಇಂದು ಶತಕೋಟ್ಯಧಿಪತಿಗಳಾದದ್ದು ಹೊಸ ವಿಚಾರವಾಗಿ ಉಳಿದಿಲ್ಲ. ಆದರೆ ಆ ಸ್ಟಾರ್ಟಪ್‌ಗಳ ಹಿಂದಿನ ಕತೆ, ಆ ಕಂಪನಿಗಳು ಬೆಳೆದುಬಂದ ಬಗೆ ಕುತೂಹಲಕಾರಿ. ಕೆಲವೇ ವರ್ಷಗಳಲ್ಲಿ ಬೆಳೆದ ಬಗೆ, ಅದಕ್ಕಾಗಿ ಅನುಸರಿಸಿದ ಸೂತ್ರಗಳು, ನಿಯಮಗಳ ಉಲ್ಲಂಘನೆ ಬಗೆಗೆಲ್ಲ ರಂಗು ರಂಗಿನ ಕತೆಗಳು ಓಡಾಡುತ್ತವೆ. ಹಾಗಾಗಿ ಸಿನಿಮಾ ರಂಗಕ್ಕೆ ಆ ಕಥೆಗಳು ಹೇಳಿ ಮಾಡಿಸಿದಂಥವು. ‘ಸೂಪರ್ ಪಂಪ್ಡ್ ಅಪ್: ದ ಬ್ಯಾಟಲ್ ಫಾರ್ ಊಬರ್’ ಸರಣಿ ಅಂಥದ್ದೇ ಒಂದು ಚಿತ್ರಿಕೆ.
ಮೈಕ್ ಐಸ್ಯಾಕ್ ಬರೆದ ಅದೇ ಹೆಸರಿನ ಪುಸ್ತಕ ಇದೀಗ ವೆಬ್ ಸರಣಿಯ ರೂಪ ಪಡೆದಿದೆ. ನಮ್ಮಲ್ಲಿ ಓಲಾ ಸದ್ದು ಮಾಡುವ ಸರಿಸುಮಾರು ಒಂದು-ಒಂದೂವರೆ ವರ್ಷ ಮೊದಲು ಅಮೆರಿಕದಲ್ಲಿ ಆರಂಭವಾದ ಕಂಪನಿ ಊಬರ್. 2010ರಲ್ಲಿ ಟ್ರಾವಿಸ್ ಕಲಾನಿಕ್ ಹಾಗೂ ರಯಾನ್ ಗ್ರಾವೆಸ್ ಆರಂಭಿಸಿದ ಊಬರ್ ಕ್ಯಾಬ್ಸ್ ಶುರುವಿಗೆ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ತನ್ನ ವಹಿವಾಟು ಆರಂಭಿಸಿತ್ತು. ಅಲ್ಲಿಂದ ನಂತರ ಕಂಪನಿ ಹಣಕಾಸು ಹೊಂದಿಸಿದ ರೀತಿ, ಬೆಳೆದ ಬಗೆ ಮತ್ತು ಟ್ರಾವಿಸ್ ಕಲಾನಿಕ್‌ನ ಪತನವನ್ನು ಸರಣಿ ಒಂದು ಗಂಟೆ ಅವಧಿಯ ಏಳು ಎಪಿಸೋಡ್‌ಗಳಲ್ಲಿ ಕಟ್ಟಿಕೊಟ್ಟಿದೆ.
ಟ್ರಾವಿಸ್ ಕಲಾನಿಕ್ ಅದಾಗಲೇ ಒಂದು ಕಂಪನಿ ಆರಂಭಿಸಿ ಹೂಡಿಕೆದಾರರಿಂದ ಹೊರದಬ್ಬಿಸಿಕೊಂಡು ಅನುಭವ ಹೊಂದಿದ್ದಾತ. ಇದರಿಂದಾಗಿ ಊಬರ್‌ಗೆ ಹೂಡಿಕೆದಾರರನ್ನು ಹುಡುಕುವಾಗ ಆತನಿಗೆ ಆ ಭಯ ಇದ್ದೇ ಇತ್ತು. ಹಾಗಾಗಿ ಆತ ತನ್ನನ್ನು ಯಾವ ಕಾಲಕ್ಕೂ ಹೊರಗಟ್ಟದಂತೆ ಆರಂಭದಲ್ಲೇ ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ಈ ಹಂತದಲ್ಲಿ ಆತನ ನೆರವಿಗೆ ಬರುವ ಹೂಡಿಕೆದಾರ ಬಿಲ್ ಗರ್ಲಿ. ಹೋಟೆಲಲ್ಲಿ ಕಲಾನಿಕ್ ಜತೆ ಪ್ರಥಮ ಭೇಟಿಯ ನಂತರ ಮೊದಲ ಬಾರಿ ಆತ ಊಬರ್ ಕ್ಯಾಬ್‌ನಲ್ಲಿ ಮನೆಗೆ ತೆರಳುತ್ತಾನೆ. ರಸ್ತೆ ಬದಿ ನಿಂತು ಟ್ಯಾಕ್ಸಿಗಾಗಿ ಕೂಗಬೇಕಿಲ್ಲ, ಗಮ್ಯ ತಲುಪಿದ ಮೇಲೆ ಪರ್ಸ್‌ಗಾಗಿ ತಡಕಾಡಬೇಕಿಲ್ಲ ಎಂಬ ಅಂಶಗಳು ಆತನ ಮನಗೆಲ್ಲುತ್ತವೆ. ಹಾಗಾಗಿ ಮೊದಲ ದೊಡ್ಡ ಹೂಡಿಕೆದಾರನಾಗಿ ಆತ ಊಬರ್ ಕ್ಯಾಬ್ಸ್‌ಗೆ ಕಾಸು ಸುರಿಯುತ್ತಾನೆ.
ಟ್ಯಾಕ್ಸಿ ಪರವಾನಗಿ ಪಡೆಯದೆ, ಅವುಗಳ ಸಾರಿಗೆ ನಿಯಮಗಳಿಗೆ ಒಳಪಡದೆ ಊಬರ್ ನಡೆಸುತ್ತಿದ್ದ ವಹಿವಾಟು ಸ್ಯಾನ್ ಫ್ರಾನ್ಸಿಸ್ಕೋದ ಟ್ಯಾಕ್ಸಿ ಒಕ್ಕೂಟದ ಕೆಂಗಣ್ಣಿಗೆ ಗುರಿಯಾಗುತ್ತದೆ. ಒಂದೋ ಒಕ್ಕೂಟದ ಟ್ಯಾಕ್ಸಿಗಳಿಗೂ ಊಬರ್ ಕ್ಯಾಬ್ಸ್‌ನ ಸದಸ್ಯತ್ವ ಕೊಡಬೇಕು ಅಥವಾ ನಿಯಮಗಳನ್ನು ಪಾಲಿಸಬೇಕು ಎಂದು ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ಹಾಕುವಲ್ಲಿ ಒಕ್ಕೂಟ ಆರಂಭಿಕ ಯಶಸ್ಸು ಕಂಡಿತ್ತು. ಆ ನಿಯಮಗಳಿಂದ ತಪ್ಪಿಸಿಕೊಳ್ಳಲು ಊಬರ್ ಕ್ಯಾಬ್ಸ್ ತನ್ನ ಹೆಸರಿನ ಮುಂದಿರುವ ಕ್ಯಾಬ್ಸ್ ತೆಗೆದು ಬರೇ ಊಬರ್ ಮಾತ್ರ ಉಳಿಸಿಕೊಂಡಿತು. ತಾನೊಂದು ಟ್ಯಾಕ್ಸಿ ಕಂಪನಿಯಲ್ಲ, ಬದಲಾಗಿ ತಂತ್ರಜ್ಞಾನ ಸೇವೆ ನೀಡುವ ಕಂಪನಿ, ಹಾಗಾಗಿ ಟ್ಯಾಕ್ಸಿ ನಿಯಮಗಳು ತನಗೆ ಅನ್ವಯಿಸುವುದಿಲ್ಲ ಎಂಬ ಆಟವಾಡಿತು. ನಮ್ಮಲ್ಲೂ ಓಲಾ ಇಂಥದ್ದೇ ಸಂದಿಗ್ಧದಲ್ಲಿ ಸಿಲುಕಿದ್ದು ನೆನಪಿರಬಹುದು. ರ್ಯಾಪಿಡೋದಂಥ ಬೈಕ್ ಟ್ಯಾಕ್ಸಿಗಳು ಇಂದಿಗೂ ಆ ನಿಯಮಗಳ ಸಂದಿಗ್ಧತೆ ಎದುರಿಸುತ್ತಿವೆ.
ಸ್ಟಾರ್ಟಪ್‌ಗಳಿಗೆ ವರ್ಷದ ಕೊನೆಯ ಲಾಭ ಮುಖ್ಯವಾಗುವುದಿಲ್ಲ. ವರ್ಷದಿಂದ ವರ್ಷಕ್ಕೆ ಕಾಣುವ ಬೆಳವಣಿಗೆ ಅತಿಮುಖ್ಯ. ಅದಕ್ಕಾಗಿ ಯಾವುದೇ ನಿಯಮಗಳನ್ನು ಗಾಳಿಗೆ ತೂರಲು ಹೇಸುವುದಿಲ್ಲ. ಜತೆಗೆ ದೊಡ್ಡ ಪ್ರಮಾಣದ ಹೂಡಿಕೆದಾರರು ಬೆನ್ನಿಗಿರುವ ಕಾರಣ ವಹಿವಾಟು ವೃದ್ಧಿಗೆ ಕೋಟ್ಯಾಂತರ ಹಣ ಸುರಿಯುವುದೂ ದೊಡ್ಡ ವಿಚಾರ ಅನಿಸುವುದಿಲ್ಲ. ಹಾಗಾಗಿ ಗ್ರಾಹಕರಿಗೆ ರಿಯಾಯಿತಿ, ಕೆಲಸಗಾರರಿಗೆ ಭರ್ಜರಿ ಬೋನಸ್ ಕೊಡುವುದು ಅವುಗಳ ಜಾಯಮಾನ. ಊಬರ್ ಕೂಡ ಅದನ್ನೇ ಮಾಡಿ ಯಶ ಕಾಣುವುದು ಇಲ್ಲಿ ಸಿನಿಮೀಯವಾಗಿ ಚಿತ್ರಿತವಾಗಿದೆ.
ಬೆಳವಣಿಗೆಗಾಗಿ ನಿಯಮಗಳನ್ನು ಗಾಳಿಗೆ ತೂರುವ ಊಬರ್‌ನ ಚಟ ಅಲ್ಲಿಗೇ ನಿಲ್ಲಲಿಲ್ಲ. ಯಾರ ಅರಿವಿಗೂ ಬಾರದಂತೆ ಊಬರ್ ಆ್ಯಪ್ ತನ್ನ ಬಳಕೆದಾರರ ಮಾಹಿತಿ ಕದಿಯಲು ಶುರು ಮಾಡುತ್ತದೆ. ಆ್ಯಪ್ ಬಳಕೆ ಮಾಡದಿದ್ದಾಗಲೂ ಆ ವ್ಯಕ್ತಿ ಎಲ್ಲೆಲ್ಲ ಓಡಾಡಿದ್ದಾನೆ ಎಂಬ ಜಿಪಿಎಸ್ ಮಾಹಿತಿ ಕದಿಯುತ್ತದೆ. ಅಷ್ಟು ಮಾತ್ರವಲ್ಲ, ಕ್ಯಾಮರಾವನ್ನೂ ತನಗೆ ಬೇಕಾದಾಗ ಚಾಲೂ ಮಾಡಿಕೊಳ್ಳುವ ಕಳ್ಳದಾರಿ ಹಿಡಿಯುತ್ತದೆ. ಈ ವಿಚಾರಗಳು ಆ್ಯಪಲ್ ಜತೆಗಿನ ಗುದ್ದಾಟದ ನೆಪದಲ್ಲಿ ಸರಣಿಯಲ್ಲಿ ಪ್ರಸ್ತಾಪವಾಗಿದೆ.
ಸ್ಟಾರ್ಟಪ್‌ಗಳಿಗೆ 18ರ ಯುವ ಮನಸ್ಸು, ಅತ್ಯುತ್ಸಾಹ. ಆ ವಯಸ್ಸಿನಲ್ಲಿ ಒಂದೊಮ್ಮೆ ಎಡವಿದರೂ ಸುಧಾರಿಸಿಕೊಳ್ಳಲು ಅವಕಾಶವಿರುತ್ತದೆ. ಆದರೆ 28 ತಲುಪಿದಾಗ ಅನುಭವಿಸುವ ಸೋಲುಗಳು, ಪ್ರೇಮ ವೈಫಲ್ಯಗಳನ್ನು ಸಮಾಜ ಗಮನಿಸುತ್ತದೆ. ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆಯಾಗಿ ಅಂಟಿಕೊಳ್ಳುತ್ತದೆ. ಟ್ರಾವಿಸ್ ಕಲಾನಿಕ್‌ಗೂ ಅದೇ ಆಯಿತು. ಕಂಪನಿ ಬೆಳೆಯುವ ಹಂತದಲ್ಲಿ ಆತನ ದರ್ಪ-ದಾರ್ಷ್ಟ್ಯಗಳು ಸುದ್ದಿಯಾಗಲಿಲ್ಲ. ಬೆಳೆದ ಮೇಲೆ ಅವನ ಗುಣ ನಡತೆಗಳು ಕೆಟ್ಟ ಸುದ್ದಿಯಾದವು. ಹಾಗೆಯೇ ಕಂಪನಿಯೊಳಗೆ ಮಹಿಳೆಯರ ಮೇಲಿನ ದೌರ್ಜನ್ಯಗಳೂ ಸದ್ದು ಮಾಡಿದವು. ಕಂಪನಿಯಲ್ಲಿ ಕೆಲಸ ಮಾಡುವ ಪುರುಷ ಉದ್ಯೋಗಿಗಳು ತರುವ ಲಾಭವೇ ಆತನಿಗೆ ಮುಖ್ಯವಾಗಿತ್ತೇ ವಿನಃ ಮೌಲ್ಯಗಳಿಗೆ ಅಲ್ಲಿ ಜಾಗವೇ ಇರಲಿಲ್ಲ. ಈ ಎಲ್ಲಾ ಕೆಟ್ಟ ಪ್ರಚಾರದ ಪರಿಣಾಮ ಟ್ರಾವಿಸ್ ಕಲಾನಿಕ್ 2017ರಲ್ಲಿ ತನ್ನದೇ ಕಂಪನಿಯ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು.
ಈ ಸರಣಿಯಲ್ಲಿ ಒಂದಷ್ಟು ‘ದ ಸೋಶಿಯಲ್ ನೆಟ್ವರ್ಕ್’ನ ಛಾಯೆ ಕಾಣಬಹುದು. ಸಂಭಾಷಣೆ ಹಾಗೂ ಅಭಿನಯ ಮೇಲ್ನೋಟಕ್ಕೆ ಸ್ವಲ್ಪ ಉತ್ಪ್ರೇಕ್ಷೆಯಂತೆ ಕಂಡರೂ ಕಂಪನಿ ನಡೆದು ಬಂದ ಹಾದಿ ಅದಕ್ಕೆ ಪುಷ್ಟಿ ನೀಡುತ್ತದೆ. ನಿಯಮ-ಮೌಲ್ಯಗಳನ್ನು ಗಾಳಿಗೆ ತೂರುವ ಮಂದಿ ಖಾಸಗಿಯಾಗಿ ಹಾಗೆಯೇ ಇದ್ದಿರಬಹುದು ಅನಿಸುತ್ತದೆ. ‘ದ ಬ್ಯಾಟಲ್ ಫಾರ್ ಊಬರ್‌ನಲ್ಲಿ’ ನಟರು ಸುತ್ತಲಿನ ಪಾತ್ರಗಳಿಂದ ಆಚೆ ಬಂದು ನೇರ ವೀಕ್ಷಕರ ಕಡೆಗೆ ಮಾತನಾಡುವಾಗ ರಂಗಭೂಮಿಯ ಸೂತ್ರಗಳು ನೆನಪಾಗುತ್ತವೆ. ಮೂಲತಃ ಅಮೆರಿಕದ ಶೋಟೈಮ್‌ನ ನಿರ್ಮಾಣವಾದ ಕಾರಣ ಇದರಲ್ಲಿ ಅಮೆರಿಕದ ಭಾಷೆ-ಸೂತ್ರಗಳು ಧಾಳಾಗಿವೆ. ನಮ್ಮಲ್ಲಿ Voot Selectನಲ್ಲಿ ಸ್ಟ್ರೀಂ ಆಗುತ್ತಿದೆ. ಪುಸ್ತಕ ಹಿಡಿದು ಓದಲು ಕಷ್ಟವಾಗುವವರು ಅದರ ಸಾರವನ್ನು ಪಡೆಯಲು ಈ ಸರಣಿ ನೋಡಬಹುದು.