ಕಳೆದ ವರ್ಷ ಡಿಸ್ನೀ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಿದ್ದ ‘ಆರ್ಯ’ ವೆಬ್‌ ಸರಣಿ ಯಶಸ್ವಿಯಾಗಿತ್ತು. ರಾಮ್‌ ಮಾಧ್ವಾನಿ ನಿರ್ದೇಶನದ ಸರಣಿಯಲ್ಲಿ ಸುಷ್ಮಿತಾ ಸೇನ್ ನಟಿಸಿದ್ದರು. ಇದರ ಮುಂದುವರೆದ ಭಾಗವಾಗಿ ‘ಆರ್ಯ 2’ ಸಿದ್ಧವಾಗಿದ್ದು, ಟೀಸರ್ ಬಿಡುಗಡೆಯಾಗಿದೆ.

ಬಾಲಿವುಡ್ ನಟಿ ಸುಷ್ಮಿತಾ ಸೇನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆರ್ಯ 2’ ವೆಬ್ ಸರಣಿ ಟೀಸರ್ ಬಿಡುಗಡೆಯಾಗಿದೆ. ಡಿಸ್ನೀ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿರುವ ಇದು ಕಳೆದ ವರ್ಷ ಸ್ಟ್ರೀಮ್ ಆಗಿದ್ದ ‘ಆರ್ಯ’ ಸರಣಿಯ ಮುಂದುವರೆದ ಭಾಗ. ಬಣ್ಣ ಮೆತ್ತಿದ ಮುಖ, ಸೇಡಿನ ನೋಟದೊಂದಿಗಿನ ಸುಷ್ಮಿತಾ ಇರುವ ಟೀಸರ್ ಸರಣಿ ಕುರಿತಂತೆ ವೀಕ್ಷಕರಲ್ಲಿ ಕಾತುರ ಹೆಚ್ಚಿಸಿದೆ. ತನ್ನ ಮಕ್ಕಳೊಂದಿಗೆ ದೇಶ ಬಿಟ್ಟು ಹೊರಡುವ ಆರ್ಯಳ ನಿರ್ಧಾರದೊಂದಿಗೆ ಕಳೆದ ಸೀಸನ್ ಮುಕ್ತಾಯವಾಗಿತ್ತು. ಮುಂದುವರೆದ ಭಾಗದಲ್ಲಿ ಆರ್ಯ, ತನ್ನ ಕುಟುಂಬದ ಬೆನ್ನು ಬಿದ್ದಿರುವ ವ್ಯಕ್ತಿಯ ವಿರುದ್ಧ ಸೇಡು ತೀರಿಕೊಳ್ಳುವ ಕತೆ ಇರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.

2020ರ ಜನಪ್ರಿಯ ವೆಬ್‌ ಸರಣಿಗಳಲ್ಲಿ ‘ಆರ್ಯ’ ಕೂಡ ಒಂದು ಎಂದು ಹೆಸರು ಮಾಡಿತ್ತು. ಈ ಜನಪ್ರಿಯತೆ ಹಿನ್ನೆಲೆಯಲ್ಲಿ ಕೋವಿಡ್‌, ಲಾಕ್‌ಡೌನ್‌ ಸಂದರ್ಭದಲ್ಲೇ ಎರಡನೇ ಸೀಸನ್ ಚಿತ್ರಿಸಿದ್ದರು ನಿರ್ದೇಶಕರು. ಸಿಕಂದರ್ ಖೇರ್‌, ಚಂದ್ರಚೂಡ್ ಸಿಂಗ್‌, ನಮಿತಾ ದಾಸ್‌, ಜಯಂತ್ ಕೃಪಲಾನಿ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇಂಟರ್‌ನ್ಯಾಷನಲ್‌ ಎಮ್ಮಿ ಪ್ರಶಸ್ತಿಯ ‘ಬೆಸ್ಟ್ ಡ್ರಾಮಾ ಸೀರೀಸ್‌’ ಕೆಟಗರಿಗೆ ‘ಆರ್ಯ’ ನಾಮನಿರ್ದೇಶನಗೊಂಡಿತ್ತು. ಡಿಸ್ನೀ ಪ್ಲಸ್ ಹಾಟ್‌ಸ್ಟಾರ್ ಸದ್ಯದಲ್ಲೇ ‘ಆರ್ಯ’ ಸ್ಟ್ರೀಮಿಂಗ್‌ ದಿನಾಂಕವನ್ನು ಘೋಷಿಸಲಿದೆ.

LEAVE A REPLY

Connect with

Please enter your comment!
Please enter your name here