ವಿಭಿನ್ನ ತಲೆಮಾರುಗಳಿಗೆ ಸೇರಿದ ಮೂವರು ಮಹಿಳೆಯರು ಸ್ವಲ್ಪ ದಿನದ ಮಟ್ಟಿಗೆ ಬದುಕಿನ ಜಂಜಾಟಗಳಿಂದ ಬ್ರೇಕ್ ತೆಗೆದುಕೊಳ್ಳಲು ಮನೆಯ ಗಂಡಸರಿಗೆ ಗೊತ್ತಾಗದಂತೆ ಕದ್ದುಮುಚ್ಚಿ ರಾತ್ರೋರಾತ್ರಿ ಪ್ರವಾಸ ಹೊರಟು ಬಿಡುತ್ತಾರೆ. ಆಮೇಲೇನಾಗುತ್ತದೆ? Amazon Prime Videoದಲ್ಲಿ ಸ್ಟ್ರೀಮ್ ಆಗುತ್ತಿದೆ ‘ಸ್ವೀಟ್ ಖಾರಮ್ ಕಾಫಿ’ ತಮಿಳು ವೆಬ್ ಸರಣಿ.
ರೆಕ್ಕೆ ಇದ್ದರೆ ಸಾಲದು ಅದನ್ನು ಬಿಚ್ಚಿ ಹಾರಲೂ ಆಗಬೇಕು. ಗರಿಬಿಚ್ಚಿ ಹಾರಲು ಯಾವ ಹೆಣ್ಣು ಬಯಸುವುದಿಲ್ಲ ಹೇಳಿ? ಕೆಲವೊಂದು ಕಟ್ಟುಪಾಡುಗಳು ಅವಳನ್ನು ಬಂಧಿಯಾಗಿಸಿದರೆ ಕೆಲವೊಂದು ಕಡೆ ಜವಾಬ್ದಾರಿಗಳು ಆಕೆಯನ್ನು ಕಟ್ಟಿ ಹಾಕಿರುತ್ತವೆ. ಉಸಿರುಗಟ್ಟಿದಾಗ ಒಮ್ಮೆ ಹೊರಗೆ ಹೋಗಿ ಬಿಡಬೇಕು ಎಂದು ಅನಿಸಿ ಹೊರಗೆ ಹೋದರೂ ಉಸಿರಾಡುವುದಕ್ಕೆ ಇಷ್ಟು ಸಾಕು ಮತ್ತೆ ಇದ್ದಲ್ಲಿಗೆ ಮರಳೋಣ ಅಂತಾಳೆ ಆಕೆ. ಹೆಣ್ಣೊಬ್ಬಳ ಪಯಣವೆಂದರೆ ಬ್ಯಾಗ್ ಹೆಗಲಿಗೇರಿಸಿ ಹೋಗಿಬಿಡುವುದು ಮಾತ್ರವಲ್ಲ. ಆ ಪಯಣದಲ್ಲಿ ಹುಡುಕಾಟವಿರಬಹುದು, ಮನಸ್ಸಿನ ತಳಮಳಗಳಿಗೆ ಉತ್ತರ ಕಂಡುಕೊಳ್ಳಲಿರುವ ಮಾರ್ಗವೂ ಇರಬಹುದು. ಹೀಗೆ ಪ್ರತಿಯೊಬ್ಬರ ಪಯಣದ ಹಿಂದೆ ಒಂದೊಂದು ಕತೆಯಿದೆ. ಅಂಥಾ ಕತೆಗಳನ್ನು ಹೇಳುವ ತಮಿಳು ವೆಬ್ ಸಿರೀಸ್ ‘ಸ್ವೀಟ್ ಖಾರಮ್ ಕಾಫಿ’ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ವಿಭಿನ್ನ ತಲೆಮಾರುಗಳಿಗೆ ಸೇರಿದ ಮೂವರು ಮಹಿಳೆಯರು ಸ್ವಲ್ಪ ದಿನದ ಮಟ್ಟಿಗೆ ಬದುಕಿನ ಜಂಜಾಟಗಳಿಂದ ಬ್ರೇಕ್ ತೆಗೆದುಕೊಳ್ಳಲು ಮನೆಯ ಗಂಡಸರಿಗೆ ಗೊತ್ತಾಗದಂತೆ ಕದ್ದುಮುಚ್ಚಿ ರಾತ್ರೋರಾತ್ರಿ ಪ್ರವಾಸ ಹೊರಟು ಬಿಡುತ್ತಾರೆ. ಆಮೇಲೇನಾಗುತ್ತದೆ?
ಅದೊಂದು ರೋಡ್ ಟ್ರಿಪ್. ಅಜ್ಜಿ, ಮೊಮ್ಮಗಳು ಮತ್ತು ಅಮ್ಮ ಇದೇ ಮೂವರ ಗ್ಯಾಂಗ್. ಕ್ರಿಕೆಟ್ ಆಟಗಾರ್ತಿ, ತನ್ನ ಬಾಯ್‌ಫ್ರೆಂಡ್ ಜೊತೆ ಬ್ರೇಕ್‌ಅಪ್ ಆಗಿ ನೊಂದುಕೊಂಡಿರುವ ಯುವತಿ ನಿವೇದಿತಾ ಎಂಬ ನಿವಿ (ಶಾಂತಿ ಬಾಲಚಂದ್ರನ್), ಗಂಡ ತೀರಿದ ನಂತರ ಬಿಪಿ, ಶುಗರ್ ಔಷಧಿ ಸೇವಿಸುತ್ತಾ ಮನೆಯಲ್ಲಿ ಸುಮ್ಮನೆ ಕುಳಿತಿರುವ ಸುಂದರಿ ಎಂಬ ಅಜ್ಜಿ (ಲಕ್ಷ್ಮಿ), ಗಂಡ, ಮಕ್ಕಳು, ಮನೆ, ಕುಟುಂಬವನ್ನೇ ತನ್ನ ಜಗತ್ತನ್ನಾಗಿರಿಸಿದ ನಿವಿಯ ಅಮ್ಮ ಕಾವೇರಿ (ಮಧೂ). ಮನೆಯಲ್ಲಿ ಕಾವೇರಿಯ ಗಂಡ ರಾಜರತ್ನಂ (ಕವಿನ್ ಜೆ ಬಾಬು) ಮತ್ತು ಮಗ ಬಾಲ (ಬಾಲ ಸುರೇಶ್). ಈ ಇಬ್ಬರು ಗಂಡಸರಿಗೆ ಕಾವೇರಿ ಜತೆಗೆ ಹೆಚ್ಚು ಮಾತನಾಡಲು ಪುರುಸೋತ್ತೇ ಇಲ್ಲ. ಮನೆಗೆಲಸ ಮಾಡುತ್ತಾ ಎಲ್ಲರ ಬೇಕು ಬೇಡಗಳನ್ನು ನೋಡಿಕೊಂಡು ಕುಟುಂಬವನ್ನು ಸಂಭಾಳಿಸುವ ಅಪ್ಪಟ ಗೃಹಿಣಿ ಕಾವೇರಿ. ಅಮ್ಮನೆಂದರೆ ಹಾಗೇ ಅಲ್ಲವೇ ಅಂತಾಳೆ ಆಕೆ.
ಹಾಗೊಂದು ದಿನ ಕುಟುಂಬದ ಎಲ್ಲರೂ ಹೊರಗೆ ಹೋಗೋಣ ಎಂಬ ಮಾತು ಬಂದಾಗ ಮನೆಯ ಗಂಡಸರು ಹೋಗುವುದಾದರೂ ಎಲ್ಲಿಗೆ? ನಮಗೇ ಸುತ್ತಿ ಸುತ್ತಿ ಸಾಕಾಗಿದೆ ಅಂತಾರೆ. ಹಾಗಾದರೆ ನೀವು ಇಲ್ಲೇ ಇರಿ, ನಾವು ಪ್ರವಾಸ ಹೋಗಿ ಬರುತ್ತೇವೆ ಎಂಬ ಅಜ್ಜಿಯ ದನಿಗೆ ಮೊಮ್ಮಗಳು ಮತ್ತು ಸೊಸೆ ದನಿಗೂಡಿಸುತ್ತಾರೆ, ಗೋವಾಕ್ಕೆ ಹೋಗಿ ಬಿಡೋಣ ಎಂದು ಉತ್ಸಾಹದೊಂದಿಗೆ ಈ ಗ್ಯಾಂಗ್ ಪ್ರಯಾಣ ಆರಂಭಿಸುತ್ತಾರೆ. ರಸ್ತೆಯಲ್ಲಿ ಸಾಗುತ್ತಾ ಅವರ ನಡುವಿನ ಸಂಭಾಷಣೆಗಳು ಒಂದೊಂದು ಕತೆಯನ್ನು ತೆರೆಯುತ್ತಾ ಹೋಗುತ್ತದೆ. ಎಂಟು – ಕಂತುಗಳ ಸರಣಿಯಲ್ಲಿ ಪ್ರಯಾಣ ಸಾಗುತ್ತಿದ್ದಂತೆ ಗಮ್ಯ ಸ್ಥಾನವೂ ಬದಲಾಗುತ್ತದೆ.
ಈ ಪಯಣದಲ್ಲಿ ಈ ಮೂವರದ್ದು ಮೂರು ಕತೆ. ಒಂದೇ ಕುಟುಂಬದಲ್ಲಿದ್ದರೂ ಅವರಿಗ ಪರಸ್ಪರ ಹೆಚ್ಚಿನ ಸಂಗತಿ ಗೊತ್ತಿಲ್ಲ, ದಾರಿ ಸಾಗುತ್ತಿದ್ದಂತೆ ಒಬ್ಬರನ್ನೊಬ್ಬರು ಅರ್ಥ ಮಾಡುತ್ತಾ ಹೋಗುವುದು ಮಾತ್ರವಲ್ಲದೆ ತಮ್ಮನ್ನು ತಾವೇ ಅರ್ಥ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಈ ಟ್ರಿಪ್ ಹಿಂದಿನ ರೂವಾರಿ ಅಜ್ಜಿ, ಈಕೆಯ ಪ್ರಯಾಣದ ಹಿಂದೆ ಒಂದು ಉದ್ದೇಶವಿದೆ. ಅದೊಂದು ಹುಡುಕಾಟ. ಆಕೆ ಆಗಾಗ್ಗೆ ವಿದೇಶದಲ್ಲಿರುವ ಗೆಳತಿಗೆ ಫೋನ್ ಮಾಡಿ ಆ ವ್ಯಕ್ತಿಯ ವಿಳಾಸ ಹುಡುಕುವಂತೆ ಹೇಳುತ್ತಲೇ ಇರುತ್ತಾಳೆ. ಪುಣೆಯಲ್ಲಿ ಆ ವ್ಯಕ್ತಿ ಇದ್ದಾರೆ ಎಂದು ಗೆಳತಿ ಹೇಳಿದಾಗ ಗೋವಾಗೆ ಹೋಗಬೇಕಾಗಿದ್ದ ಅವರ ಪಯಣ ಮಹಾರಾಷ್ಟ್ರದತ್ತ ಸಾಗುತ್ತದೆ. ಅರೇ ನಾವು ಇಲ್ಲಿಗೆ ಯಾಕೆ ಬಂದಿದ್ದೇವೆ ಎಂದು ಸೊಸೆ ಮತ್ತು ಮೊಮ್ಮಗಳು ಕೇಳಿದಾಗ ತನ್ನ ಉದ್ದೇಶದ ಬಗ್ಗೆ ಸುಂದರಿ ಹೇಳುವುದಿಲ್ಲ. ಹೇಗೋ ಮಹಾರಾಷ್ಟ್ರಕ್ಕೆ ಬಂದಾಗಿದೆ, ಹುಡುಕುವುದು ಎಲ್ಲಿ ಎಂದು ಚಿಂತಿಸುತ್ತಿರುವಾಗಲೇ ಸುಂದರಿ ಹುಡುಕುತ್ತಿರುವ ವ್ಯಕ್ತಿ ಹಿಮಾಚಲ ಪ್ರದೇಶದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ. ಅರೇ, ಗೋವಾ ಬಿಟ್ಟು ಪುಣೆ ಬಂದಾಯ್ತು, ಇನ್ನು ಹೇಗಾದರೂ ಮಾಡಿ ಇಲ್ಲಿಂದ ಹಿಮಾಚಲ ಹೋಗಲೇಬೇಕು ಎಂದು ಸುಂದರಿ ಗಟ್ಟಿ ನಿರ್ಧಾರ ಮಾಡುತ್ತಾಳೆ.
ಈ ಪಯಣದ ನಡುವೆ ವೃತ್ತಿಯಲ್ಲಿ ವೈದ್ಯನೂ, ಬೈಕರ್ ಆಗಿರುವ ಸುಂದರ ತರುಣ ವಿಕ್ರಂ ರಾಥೋಡ್ ಪರಿಚಯವಾಗಿಬಿಡುತ್ತದೆ. ವಿಕ್ರಂ ಈ ಕುಟುಂಬದೊಂದಿಗೆ ಹತ್ತಿರವಾಗುತ್ತಾನೆ. ಬ್ರೇಕ್ ಅಪ್ ಆಗಿರುವ ನಿವಿಗೆ ವಿಕ್ರಂ ಮೇಲೆ ಪ್ರೀತಿ ಹುಟ್ಟಿದರೂ ಹಳೇ ಪ್ರೇಮಿಯನ್ನು ಮರೆಯಲು ಸಾಧ್ಯವಾಗದ ದ್ವಂದ್ವ. ಇತ್ತ ಮನೆಯಲ್ಲಿ ಗಂಡ ಮತ್ತು ಮಗನನ್ನು ಬಿಟ್ಟು ಬಂದಿದ್ದೇನೆ ಅವರು ಹೇಗಿರುವರೋ ಎಂದು ಚಿಂತೆಯಲ್ಲಿದ್ದ ಕಾವೇರಿ, ಮದುವೆ ಆದ ಮೇಲೆ ಸಂಗೀತದಿಂದ ದೂರವಾಗಿದ್ದನ್ನು ನೆನೆದು ಮರುಗುತ್ತಾಳೆ. ಆದರೆ ಅಜ್ಜಿಯ ಗುರಿ ಹಿಮಾಚಲ ಪ್ರದೇಶ. ಅಲ್ಲಿಗೆ ಹೋಗಬೇಕು, ಆದರೆ ಸೊಸೆ ಮತ್ತು ಮೊಮ್ಮಗಳಲ್ಲಿ ಹೇಳುವುದು ಹೇಗೆ? ಅವರೇನಂತಾರೋ ಎಂಬ ಸಂಕೋಚ.
ಈ ಪಯಣದ ನಡುವೆ ಭೇಟಿಯಾದ ವಿದೇಶಿ ಜೋಡಿ ಹಿಮಾಚಲ ಪ್ರದೇಶಕ್ಕೆ ಹೋಗುತ್ತೇವೆ ಎಂದಾಗ ಅಜ್ಜಿ ನಾವೂ ಹೋಗಿ ಬಿಡೋಣ ಎಂದು ಕಾವೇರಿ ಮತ್ತು ನಿವಿಯಲ್ಲಿ ಹೇಳುತ್ತಾರೆ. ಅವರು ಇಲ್ಲ ಎಂದಾಗ ನೊಂದುಕೊಂಡ ಅಜ್ಜಿ ಹುಷಾರು ತಪ್ಪಿ ಆಸ್ಪತ್ರೆ ಸೇರುತ್ತಾಳೆ. ಹೇಗಾದರೂ ಅಜ್ಜಿಯ ಆಸೆ ನೆರವೇರಿಸೋಣ ಎಂದು ಅಮ್ಮ – ಮಗಳು ಒಪ್ಪಿಕೊಂಡು ಬೈಕರ್ ವಿಕ್ರಂ ಜತೆ ಹಿಮಾಚಲ ಪ್ರದೇಶದ ಧರ್ಮಶಾಲಾಗೆ ಪ್ರಯಾಣ ಮುಂದುವರಿಸುತ್ತಾರೆ.
ಹಿಮಾಚಲ ಪ್ರದೇಶದಲ್ಲಿ ಯಾರಿದ್ದಾರೆ? ನೀವು ಇಷ್ಟು ಕಾತರದಿಂದ ನೋಡಲು ಬಯಸುವ ವ್ಯಕ್ತಿ ಯಾರು ಎಂದು ಕೇಳಿದಾಗ, ‘ದೇವಾ’ ಎಂದು ಹೆಸರು ಅಂತಾಳೆ ಸುಂದರಿ. ಅಂತೂ ಇಂತೂ ಧರ್ಮಶಾಲಾದಲ್ಲಿ ದೇವಾ ಭೇಟಿ ಮಾಡಿದ ಸುಂದರಿ ಮೊದಲಿಗೆ ಖುಷಿ ಪಟ್ಟರೂ, ಹಳೇ ವಿಷಯಗಳನ್ನು ಹೇಳಿ ಇಬ್ಬರೂ ಕಣ್ಣೀರು ಹಾಕುತ್ತಾರೆ. ಭೇಟಿ ಮಾಡಿದ್ದಾಯ್ತು, ಇನ್ನು ಹೊರಡೋಣ ಎಂದು ಸುಂದರಿ, ಕಾವೇರಿ ಮತ್ತು ನಿವಿ ಊರಿಗೆ ಮರಳುತ್ತಾರೆ.
ಪ್ರಯಾಣದಿಂದ ಮತ್ತಷ್ಟು ಆತ್ಮವಿಶ್ವಾಸ ಬೆಳೆಸಿಕೊಂಡ ಕಾವೇರಿ. ಬಾಯ್ ಫ್ರೆಂಡ್ ಜತೆ ಪ್ಯಾಚ್ ಅಪ್ ಆದ ನಿವಿ. ಕುಟುಂಬ ಸಂತೋಷದಿಂದ ಇರುವಾಗ ದೇವಾ ಜೊತೆ ಭೇಟಿ ಆದರೂ ಅದೆಷ್ಟು ಮಾತುಗಳು ಆಡದೇ ಉಳಿದಿವೆ ಎಂದು ಸುಂದರಿಗೆ ಅನಿಸುತ್ತಲೇ ಇರುತ್ತದೆ. ಮನೆಯಲ್ಲಿ ಪಾರ್ಟಿ ನಡೆಯುತ್ತಿದೆ. ಖುಷಿ, ನಗುವಿನ ಸದ್ದಿದ್ದರೂ ಒಂಟಿ ಭಾವ. ಅಷ್ಟೊತ್ತಿಗೆ ಮನೆಯ ಕಾಲಿಂಗ್ ಬೆಲ್ ಸದ್ದು. ಬಾಗಿಲು ತೆರೆದು ನೋಡಿದರೆ ಬೈಕರ್ ವಿಕ್ರಂ, ಆತನ ಹಿಂದೆ ದೇವಾ. ವಿಕ್ರಂನ್ನು ಕಂಡ ನಿವಿ ಮೂಕಳಾಗಿದ್ದಾಳೆ. ದೇವಾ ಎಂದು ಅಜ್ಜಿ ಕಣ್ಣಗಲಿಸಿ ನಕ್ಕಿದ್ದಾಳೆ.
ರೇಷ್ಮಾ ಘಟಾಲಾ ರಚಿಸಿದ ಈ ವೆಬ್ ಸರಣಿನ್ನು ಬಿಜೋಯ್ ನಂಬಿಯಾರ್, ಕೃಷ್ಣ ಮಾರಿಮುತ್ತು ಮತ್ತು ಸ್ವಾತಿ ರಘುರಾಮನ್ ನಿರ್ದೇಶಿಸಿದ್ದಾರೆ. ರೋಡ್ ಟ್ರಿಪ್‌ನುದ್ದಕ್ಕೂ ಆಯಾ ರಾಜ್ಯಗಳ ಸೊಗಡನ್ನು ತೋರಿಸುವ ಚೆಂದದ ಸಿನಿಮಾಟೊಗ್ರಫಿ ಜತೆಗೆ ಗೋವಿಂದ ವಸಂತ ಅವರ ಸಂಗೀತ ‘ಸ್ವೀಟ್ ಖಾರಮ್ ಕಾಫಿ’ಯ ರುಚಿಯನ್ನು ಮತ್ತಷ್ಟು ಹೆಚ್ಚಿಸಿದೆ.