ಕಥಾಹಂದರ ವಿಭಿನ್ನವಾಗಿದ್ದರೂ ಅಲ್ಲಲ್ಲಿ ಕೊಂಚ ಎಳೆದಂತೆ ಭಾಸವಾಗಿ ಕೆಲವು ಸಂಚಿಕೆಗಳು ಬೋರ್ ಹೊಡೆಸುತ್ತವೆ. ನಿರೂಪಣೆಯಲ್ಲಿ ಜೀವಂತಿಕೆ ಮತ್ತು ಲಘು ಹಾಸ್ಯ ಇದ್ದರೂ ಕೆಲವೆಡೆ ಸ್ವಲ್ಪ ಅಸಹಜ ಎಂದೂ ಎನಿಸುತ್ತದೆ. ಆದರೆ ಖಂಡಿತ ಒಂದು ಆಹ್ಲಾದಕರ ಪ್ರಯತ್ನ. ‘ಸ್ವೀಟ್ ಖಾರಂ ಕಾಫಿ’ ತಮಿಳು ವೆಬ್ ಸರಣಿ Prime Videoದಲ್ಲಿ ಸ್ಟ್ರೀಮ್ ಆಗುತ್ತಿದೆ.
ಹೆಸರು ಕೇಳಿದ ತಕ್ಷಣ ಕಣ್ಣ ಮುಂದೆ ಬರೋದು ಒಂದು ಬೆಚ್ಚಗಿನ ಕುಟುಂಬ ಅದರಲ್ಲಿ ಒಂದು ಮುಗುಳುನಗೆಯ ಮನೆಯೊಡತಿ, ಮುದ್ದಾದ ಮಕ್ಕಳ ಕಲರವ, ಸಿಡಿಮಿಡಿ ಮಾಡುವ ಗಂಡ, ಗೊಣಗುವ ತಮಾಷೆ ಮಾಡುವ ಚೇತೋಹಾರಿಯಾದ ಮುದ್ದು ಅಜ್ಜಿ ತಾತ ಇತ್ಯಾದಿಗಳ ಚಿತ್ರಣ. ಇಲ್ಲೂ ಹಾಗೆಯೇ. ಕುಟುಂಬ ಇದೆ, ಬೆಚ್ಚಗೆ ಇದೆಯಾ ಉಸಿರುಗಟ್ಟಿಸುವಂತೆ ಇದೆಯಾ ಗೊತ್ತಿಲ್ಲ. ಮನೆಯೊಡತಿ ಮುಗುಳು ನಗುತ್ತಾಳೆ. ಆದರೆ ಮನಸ್ಸಲ್ಲಿ ತೀರದ ಒಂಟಿತನ ಮತ್ತು ವೇದನೆ. ಮಕ್ಕಳು ಮುದ್ದಾಗಿದ್ದಾರೆ ಆದರೆ ಮೌನವಾಗಿ ಅವರವರ ಲೋಕದಲ್ಲಿ ಕಳೆದುಹೋಗಿದ್ದಾರೆ. ಗಂಡನ ಸಿಡಿಮಿಡಿಗೆ ಕಾರಣಗಳೇ ಬೇಕಿಲ್ಲ. ಅವನ ಯಾಂತ್ರಿಕ ಬದುಕಲ್ಲಿ ಅವನ ತಾಯಿ ಮತ್ತು ಮಕ್ಕಳಿಗೆ ಮಾತ್ರ ಪ್ರಾಮುಖ್ಯ. ಇನ್ನು ಗಂಡನನ್ನು ಕಳೆದುಕೊಂಡ ಅಜ್ಜಿಗೆ ವಯಸ್ಸು ಕಳೆದರೂ ಉತ್ಸಾಹ ಅದಮ್ಯ. ಆದರೆ ಅವಳ ಉತ್ಸಾಹಕ್ಕೆ ತಕ್ಕ ಸಾಂಗತ್ಯವಿಲ್ಲ. ಇಲ್ಲಿ ಮನೆ ತುಂಬಿದ್ದರೂ ಮನಸ್ಸುಗಳು ಖಾಲಿಯಾಗಿವೆ.
ಬದುಕಿನ ಏಕತಾನತೆಯಿಂದ ಬೇಸತ್ತ ಮೂರು ತಲೆಮಾರುಗಳ ಹೆಣ್ಣುಮಕ್ಕಳು ಅಂದರೆ ಅಜ್ಜಿ ಮತ್ತವಳ ಸೊಸೆ ಹಾಗೂ ಅವಳ ಮಗಳು ದಿಢೀರ್ ಎಂದು ಯಾರಿಗೂ ಹೇಳದೆ ಟ್ರಿಪ್ ಹೊರಟುಬಿಡುತ್ತಾರೆ. ಎಲ್ಲಿಗೆ, ಎಷ್ಟು ದಿನ ಏನೊಂದೂ ತಿಳಿಯದು. ಮೂವರಿಗೂ ಅವರವರದ್ದೇ ಕಾರಣಗಳು. ಅವರವರದ್ದೇ ಸಂದಿಗ್ಧಗಳು. ಬಂಧನದಿಂದ ಕಳಚಿಕೊಂಡ ಹಕ್ಕಿಗಳಂತೆ ಮನೆ ಬಿಟ್ಟು ಹೊರಡುತ್ತಾರೆ. ಗುರಿ ತಲುಪುತ್ತಾರಾ? ಅವರವರ ಖಾಲಿತನಕ್ಕೆ ಮದ್ದು ಸಿಗುತ್ತದಾ? ಪ್ರಯಾಣ ಅವರಲ್ಲಿನ ಪ್ರಶ್ನೆಗಳಿಗೆ ಉತ್ತರವಾಗುತ್ತದಾ? ಎಂಟು ಸಂಚಿಕೆಗಳ ಈ ಸರಣಿಯನ್ನು ನೋಡಿದರೆ ಗೊತ್ತಾಗುತ್ತದೆ.
ಇಲ್ಲಿ ಟಿಪಿಕಲ್ ಮಧ್ಯಮವರ್ಗದ ಮಧ್ಯವಯಸ್ಸಿನ ಹೆಣ್ಣೊಬ್ಬಳ ತುಮುಲಗಳಿವೆ, ಆಕೆ ಅನುಭವಿಸುವ identity crisis ಚಿತ್ರಣವಿದೆ, ಅಜ್ಜಿಯೊಬ್ಬಳ ಅಂತರಂಗದ ವೇದನೆಯಿದೆ, ಹದಿಹರೆಯದ ಹುಡುಗಿಯೊಬ್ಬಳ ಗೊಂದಲಗಳಿವೆ. ಎಲ್ಲರಿಗಿಂತ ಇಲ್ಲಿ ಕಾಡುವುದು ತಾಯಿ ಕಾವೇರಿಯ ಪಾತ್ರ. ಪ್ರಪಂಚ ಎಷ್ಟೇ ಮುಂದುವರೆದರೂ ನಮ್ಮ ಹೆಣ್ಣುಮಕ್ಕಳಿಗೆ ಇಷ್ಟೇನಾ ಆಯ್ಕೆಗಳು ಬದುಕಿನಲ್ಲಿ, ಮದುವೆ ಅನ್ನೋದು ಕನಸುಗಳಿಗೆ ಫುಲ್ ಸ್ಟಾಪ್ ಹಾಕಿಸುವ ರೆಡ್ ಸಿಗ್ನಲ್ ಯಾವಾಗ ಆಯ್ತು ಎಂದು ಪ್ರಶ್ನೆ ಮಾಡುವಂತೆ ಮಾಡುತ್ತದೆ. ಸಂವೇದನೆಗಳೇ ಇಲ್ಲದ ಗಂಡನ ಬಗ್ಗೆ ಸಿಟ್ಟು ತರಿಸುತ್ತದೆ. ಇನ್ನು ಅಜ್ಜಿಯ ಪಾತ್ರಕ್ಕೆ ಬರೋದಾದರೆ ವಯಸ್ಸು ಆದ ಮಾತ್ರಕ್ಕೆ ಜೀವನವೇ ಮುಗಿದುಹೋಯ್ತು ಅಂತ ವೃದ್ಧರನ್ನು ಮೂಲೆಯಲ್ಲಿ ಕೂರಿಸೋರೇ ಜಾಸ್ತಿ. ಕಟುಮಾತಿನಲ್ಲಿ ಕೆಲವರು ಮಾಡಿದರೆ ನಯವಾದ ಮಾತಿನಿಂದಲೇ ಕೆಲವರು ಹೀಗೆ ನಡೆದುಕೊಳ್ಳುತ್ತಾರೆ. ಆದರೆ ವೃದ್ಧಾಪ್ಯದ ಸೆರಗಿನಲ್ಲೇ ಒಂದಷ್ಟು ಯೌವ್ವನದ ಈಡೇರದ ಆಸೆಗಳು ತಮ್ಮ ಸರದಿಗಾಗಿ ಕಾಯುತ್ತಾ ಕೂತಿರುತ್ತವೆ ಎಂಬುದನ್ನು ಯಾರೂ ಗಮನಿಸುವುದಿಲ್ಲ. ಅಂಥ ಒಂದು ಆಸೆಯೊಂದರ, ಗುರಿಯೊಂದರ ಬೆನ್ನು ಹತ್ತಿ ದಿಟ್ಟವಾಗಿ ಹೊರಟು ನಿಲ್ಲುವ ಅಜ್ಜಿಯಾಗಿ ಲಕ್ಷ್ಮಿ ಗಮನ ಸೆಳೆಯುತ್ತಾರೆ. ಚೂರೇ ಚೂರು ಸುಸ್ತಾದಂತೆ ಕಂಡರೂ ಅವರ ಅಭಿನಯದಲ್ಲಿ ಅದೇ ಜೀವಂತಿಕೆ.
ತನ್ನ ಕ್ರಿಕೆಟ್ ಪ್ರೇಮ ಮತ್ತು ಗೆಳೆಯನ ಪ್ರೇಮದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂಧಿಗ್ಧ ಎದುರಿಸುವ ಮೊಮ್ಮಗಳು ಅಜ್ಜಿ ಮತ್ತು ಅಮ್ಮನ ಜೊತೆ ಹೊರಟು ನಿಲ್ಲುತ್ತಾಳೆ. ಈ ಮೂರೂ ತಲೆಮಾರುಗಳ ಜೀವಗಳಿಗೆ ಈ ಪ್ರಯಾಣದಲ್ಲಿ ಅವರವರು ಅರಸುತ್ತಿದ್ದ ನೆಮ್ಮದಿ, ಉತ್ತರಗಳು ಸಿಗುತ್ತದಾ ಎಂದು ತಿಳಿಯಲು ಸರಣಿ ನೋಡಬೇಕು. ಕಥಾಹಂದರ ವಿಭಿನ್ನವಾಗಿದ್ದರೂ ಅಲ್ಲಲ್ಲಿ ಕೊಂಚ ಎಳೆದಂತೆ ಭಾಸವಾಗಿ ಕೆಲವು ಸಂಚಿಕೆಗಳು ಬೋರ್ ಹೊಡೆಸುತ್ತವೆ. ನಿರೂಪಣೆಯಲ್ಲಿ ಜೀವಂತಿಕೆ ಮತ್ತು ಲಘು ಹಾಸ್ಯ ಇದ್ದರೂ ಕೆಲವೆಡೆ ಸ್ವಲ್ಪ ಅಸಹಜ ಎಂದೂ ಎನಿಸುತ್ತದೆ. ಕಾವೇರಿ ಪಾತ್ರದ ಮಧು ಅವರ ಅಭಿನಯ ಕೊಂಚ ಅತಿರೇಕ ಎನಿಸಿದರೂ ಅವರು ಹಳೆಯ charm ಉಳುಸಿಕೊಂಡಿದ್ದಾರೆ. ಗೊಂದಲದ ಮೊಮ್ಮಗಳಾಗಿ ಶಾಂತಿ ಅವರ ಅಭಿನಯ ಅಚ್ಚುಕಟ್ಟಾಗಿದೆ. ಆಕೆಯ ಕ್ರಿಕೆಟ್ ಪ್ರೇಮವನ್ನು ಪುಷ್ಟಿಕರಿಸುವಂತಹ ಯಾವ ದೃಶ್ಯವೂ ಇಲ್ಲದಿರುವುದು ನಿರಾಸೆ ಹುಟ್ಟಿಸುತ್ತದೆ. ಹಾಗಾಗಿ ಆ ಪಾತ್ರಕ್ಕೆ ಹೆಚ್ಚು relate ಆಗೋಕ್ಕೆ ವೀಕ್ಷಕರಿಗೆ ಕಷ್ಟವಾಗಬಹುದು. ಕೊನೆಯಲ್ಲಿ ಬರುವ ತಿರುವು ತುಸು ನಿರೀಕ್ಷಿತ ಎಂದೇ ಹೇಳಬಹುದು. ಎರಡನೇ ಸೀಸನ್‌ಗೆ ಮುನ್ನುಡಿಯಂತೆಯೂ ಸೀಸನ್ ಒಂದನ್ನು ಮುಗಿಸಿದ್ದಾರೆ.
ಅಲ್ಲಲ್ಲಿ ಹಿಂದಿಯ ‘ಇಂಗ್ಲಿಷ್ ವಿಂಗ್ಲಿಷ್’ ಮತ್ತು ‘ಚಕ್ ದೇ ಇಂಡಿಯಾ’ ಚಿತ್ರಗಳ ಛಾಯೆಗಳು ಹೀಗೆ ಬಂದು ಹಾಗೆ ಹೋಗುತ್ತವೆ ಎಂದೆನಿಸಿದ್ದು ಹೌದು. ಮೂವರು ನಿರ್ದೇಶಕರು ನಿರ್ದೇಶಿಸಿರುವ ಎಂಟು ಸಂಚಿಕೆಗಳ ಈ ‘ಸ್ವೀಟ್ ಖಾರಂ ಕಾಫಿ’ ಸರಣಿ ಖಂಡಿತ ಒಂದು ಆಹ್ಲಾದಕರ ಪ್ರಯತ್ನ. ಎರಡನೇ ಸೀಸನ್ ಹೇಗಿರಬಹುದು ಅನ್ನುವ ಕುತೂಹಲವಿದೆ.