ಭಾರತದ ಮುಂಚೂಣಿ ಮ್ಯೂಸಿಕ್‌ ಕಂಪನಿ, ಚಿತ್ರನಿರ್ಮಾಣ ಸಂಸ್ಥೆ T-Series ಈಗ ಓಟಿಟಿ ಜಗತ್ತು ಪ್ರವೇಶಿಸಿದೆ. ಬಾಲಿವುಡ್‌ನ ಪ್ರತಿಭಾವಂತ ಚಿತ್ರನಿರ್ದೇಶಕರೊಂದಿಗೆ ಕಂಪನಿ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ OTTಗಾಗಿ ಕಂಟೆಂಟ್‌ ತಯಾರಿಸಲಿದೆ.

“ಓಟಿಟಿ ಪ್ಲಾಟ್‌ಫಾರ್ಮ್‌ಗಳ ಜಾಗತಿಕ ವೀಕ್ಷಕರಿಗಾಗಿ T-Series ಒರಿಜಿನಲ್‌, ತಾಜಾ ಮತ್ತು ಮಹತ್ವದ ಸರಣಿಗಳನ್ನು ನಿರ್ಮಿಸಲಿದೆ. ಪ್ರತಿಭಾವಂತ ನಿರ್ದೇಶಕರು ನಮ್ಮ ಜೊತೆ ಕೆಲಸ ಮಾಡಲಿದ್ದು ವೈವಿಧ್ಯಮಯ ಕಂಟೆಂಟ್‌ ಕೊಡಲಿದ್ದೇವೆ” ಎಂದಿದ್ದಾರೆ T-Series ಮ್ಯಾನೇಜಿಂಗ್‌ ಡೈರೆಕ್ಟರ್‌ ಭೂಷಣ್‌ ಕುಮಾರ್‌. ಭಾರತದ ಮುಂಚೂಣಿ ಮ್ಯೂಸಿಕ್‌ ಕಂಪನಿ ಈಗಾಗಲೇ ಚಿತ್ರನಿರ್ಮಾಣದಲ್ಲೂ ತನ್ನ ಛಾಪು ಮೂಡಿಸಿದೆ. ಈಗ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗೆ ಅಧಿಕೃತವಾಗಿ ಪ್ರವೇಶಿಸಲಿದ್ದು, ಇದಕ್ಕೆ ದೊಡ್ಡ ರೀತಿಯಲ್ಲಿ ಸಿದ್ಧತೆ ನಡೆಸುತ್ತಿದೆ.

ಆನ್‌ಲೈನ್‌ ಕಂಟೆಂಟ್‌ ತಯಾರಿಸುವ ಸಲುವಾಗಿ T-Series ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದೆ. ಥ್ರಿಲ್ಲರ್‌, ಮರ್ಡರ್‌ ಮಿಸ್ಟರಿ, ಬಯೋಪಿಕ್‌, ಜೈಲ್‌ಬ್ರೇಕ್‌ ಡ್ರಾಮಾ ಸೇರಿದಂತೆ ವಿವಿಧ ಜಾನರ್‌ಗಳ ಸರಣಿ, ಸಿನಿಮಾಗಳನ್ನು ನಿರ್ಮಿಸುವುದು ಅವರ ಯೋಜನೆ. ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ನಿರ್ದೇಶಕರಾದ ಆನಂದ್‌ ಎಲ್‌. ರಾಯ್‌, ಸುಪರ್ಣ ಎಸ್‌. ವರ್ಣ, ಸಂಜಯ್‌ ಗುಪ್ತಾ, ಮಿಖಿಲ್‌ ಮೂಸಲೆ, ನಿಖಿಲ್‌ ಅಡ್ವಾನಿ ಮತ್ತಿತರರೊಂದಿಗೆ ಮತ್ತಿತರರೊಂದಿಗೆ ಕಂಪನಿ ಒಪ್ಪಂದ ಮಾಡಿಕೊಂಡಿದೆ.

2022-23ರ ವಾರ್ಷಿಕ ಬಜೆಟ್‌ ಮಂಡನೆಯಾದ ನಂತರ T-Series ಈ ನಿಟ್ಟಿನಲ್ಲಿ ದಾಪುಗಾಲಿಟ್ಟಿರುವುದು ವಿಶೇಷ. ಕೇಂದ್ರ ಸರ್ಕಾರ ಈ ವರ್ಷ ದೇಶದಾದ್ಯಂತ 5G ಸರ್ವೀಸಸ್‌ಗಳನ್ನು ತಲುಪಿಸುವ ಗುರಿ ಹೊಂದಿದೆ ಎನ್ನುವ ಅಂಶ ಸಂಸ್ಥೆಯ ಈ ನಿಲುವಿಗೆ ಇಂಬು ನೀಡಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಗ್ರಾಮೀಣ ಭಾರತದಲ್ಲೂ 5G ಸೇವೆ ತಲುಪಲಿದ್ದು, ಆಗ OTT ಸ್ಟ್ರೀಮಿಂಗ್‌ ಜಾಲ ದೊಡ್ಡದಾಗಲಿದೆ ಎನ್ನುವ ದೂರಾಲೋಚನೆಯಿಂದ T-Series ಓಟಿಟಿಗೆ ದೊಡ್ಡ ಮಟ್ಟದ ಬಂಡವಾಳ ಹೂಡುತ್ತಿದೆ.

ಕಳೆದ ವರ್ಷ ರಿಲಯನ್ಸ್‌ ಎಂಟರ್‌ಟೇನ್‌ಮೆಂಟ್‌ ಜೊತೆ T-Series ಒಪ್ಪಂದ ಮಾಡಿಕೊಂಡಿತ್ತು. ಅಬ್ಬರೂ ಜೊತೆಗೂಡಿ ಹತ್ತು ಸಿನಿಮಾಗಳನ್ನು ನಿರ್ಮಿಸಲು ಸಹಿ ಹಾಕಿದ್ದರು. ಅರ್ಹ ಮೂಲಗಳ ಪ್ರಕಾರ ಇದು ಭಾರತೀಯ ಸಿನಿಮಾ ಉದ್ಯಮದ ದೊಡ್ಡ ಸಹಯೋಗಗಳಲ್ಲೊಂದು ಎನ್ನಲಾಗಿದೆ. ಸರಿಸುಮಾರು ಒಂದು ಸಾವಿರ ಕೋಟಿ ರೂಪಾಯಿ ಬಂಡವಾಳದ ಬಾಬತ್ತು. ಇಬ್ಬರೂ ಜೊತೆಗೂಡಿ ಚಿಕ್ಕ ಮತ್ತು ದೊಡ್ಡ ಬಜೆಟ್‌ನ ಸಿನಿಮಾಗಳನ್ನು ನಿರ್ಮಿಸಲು ನಿರ್ಧರಿಸಿವೆ.

LEAVE A REPLY

Connect with

Please enter your comment!
Please enter your name here