‘ಕರಗಟ್ಟಕಾರನ್‌’, ‘ವಿನ್ನರ್‌’, ‘ಪುಲಿ’ ಸೇರಿದಂತೆ ಹಲವು ಪ್ರಮುಖ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಜ್ಯೂನಿಯರ್‌ ಬಾಲಯ್ಯ ಅಗಲಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ (ನವೆಂಬರ್‌ 2) ಇಹಲೋಕ ತ್ಯಜಿಸಿದ್ದಾರೆ.

ಹಿರಿಯ ತಮಿಳು ನಟ ಜ್ಯೂನಿಯರ್‌ ಬಾಲಯ್ಯ (70 ವರ್ಷ) ನಿನ್ನೆ (ನವೆಂಬರ್‌ 2) ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈ ವಲಸರವಾಕ್ಕಂ ಪ್ರದೇಶದಲ್ಲಿನ ತಮ್ಮ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮನೆಯಲ್ಲಿ ಜಾರಿ ಬಿದ್ದು ಹೃದಯಾಘಾತವಾಗಿ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ತಮಿಳು ಚಿತ್ರರಂಗದ ಮೇರು ನಟ ಟಿ ಎಸ್‌ ಬಾಲಯ್ಯ ಅವರ ಪುತ್ರ ಜ್ಯೂನಿಯರ್‌ ಬಾಲಯ್ಯ. ಜನ್ಮನಾಮ ರಘು ಬಾಲಯ್ಯ. ‘ಮೇಲ್‌ನಾಟ್ಟು ಮರುಮಗಳ್‌’ (1975) ತಮಿಳು ಚಿತ್ರದೊಂದಿಗೆ ‘ಜ್ಯೂನಿಯರ್‌ ಬಾಲಯ್ಯ’ ಹೆಸರಿನೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು.

ನಾಲ್ಕು ದಶಕಗಳ ನಟನಾ ಬದುಕಿನಲ್ಲಿ ತಮಿಳು ಚಿತ್ರರಂಗದ ಪ್ರಮುಖ ನಾಯಕನಟರ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಕರಗಟ್ಟುಕಾರನ್‌, ಗೋಪುರ ವಾಸಲಿಲೆ, ಅವತಾರಂ, ಸಾಟ್ಟೈ, ವಿನ್ನರ್‌, ಕುಮ್ಕಿ, ಥನ ಒರುವನ್‌ ಅವರ ಕೆಲವು ಪ್ರಮುಖ ತಮಿಳು ಸಿನಿಮಾಗಳು. ‘ಚಿತ್ತಿ’, ‘ವಝಕೈ’ ತಮಿಳು ಸೀರಿಯಲ್‌ಗಳಲ್ಲಿ ಅವರ ಪಾತ್ರ ಜನಮನ್ನಣೆ ಗಳಿಸಿತ್ತು. ನಾಡಿಗರ್‌ ಸಂಗಂ (The South Indian Artistes Association) ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜ್ಯೂನಿಯರ್‌ ಬಾಲಯ್ಯ ಅವರ ನಿಧನಕ್ಕೆ ತಮಿಳು ಸಿನಿಮಾದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here