ವೆಟ್ರಿಮಾರನ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ವಿಡುದಲೈ’ ಚಿತ್ರದಲ್ಲಿ ವಿಜಯ್‌ ಸೇತುಪತಿ, ಸೂರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ದುಬಾರಿ ವೆಚ್ಚದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಇಳಯರಾಜ ಸಂಗೀತವಿದೆ.

ವಿಜಯ್​ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ ‘ವಿಡುದಲೈ’ ಎರಡು ಭಾಗಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಕಾಲಿವುಡ್​ನ ಜನಪ್ರಿಯ ನಿರ್ದೇಶಕರಲ್ಲೊಬ್ಬರಾದ ವೆಟ್ರಿಮಾರನ್​ ತಿಂಗಳುಗಳ ಹಿಂದೆ ‘ವಿಡುದಲೈ’ ಘೋಷಿಸಿದಾಗಲೇ, ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿತ್ತು. ಕ್ರಮೇಣ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ನರು ಚಿತ್ರತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆಯೇ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಸದ್ಯ ‘ವಿಡುದಲೈ’ ಚಿತ್ರದ ಮೊದಲ ಭಾಗದ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಜಾರಿಯಲ್ಲಿವೆ. ಎರಡನೆಯ ಭಾಗದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಸಿರುಮಲೈ, ಕೊಡೈಕೆನಾಲ್​ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಎರಡು ಚಿತ್ರಗಳು ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿವೆ.

ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದ್ದು, ಚಿತ್ರಕ್ಕಾಗಿ 10 ಕೋಟಿ ರೂ. ವೆಚ್ಚದಲ್ಲಿ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್​ ನಿರ್ಮಿಸಲಾಗಿದೆ. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್​ ನಿರ್ಮಾಣಕ್ಕೂ ಬಳಸಲಾಗಿರುವುದು ವಿಶೇಷ. ಇದಲ್ಲದೆ, ಸಿರುಮಲೈ ಬಳಿ ಜಾಕಿ ಕಲಾ ನಿರ್ದೇಶನದಲ್ಲಿ ಒಂದು ಹಳ್ಳಿಯ ಸೆಟ್‌ ಸಿದ್ಧವಾಗಿದೆ. ಸದ್ಯ ಕೊಡೈಕೆನಾಲ್​ನಲ್ಲಿ ಪೀಟರ್​ ಹೇನ್ಸ್​ ನಿರ್ದೇಶನದಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆ ತಯಾರಿ ನಡೆದಿದ್ದು, ಇದಕ್ಕಾಗಿ ಬಲ್ಗೇರಿಯಾದಿಂದ ಸಾಹಸ ಕಲಾವಿದರನ್ನು ಕರೆಸಲಾಗಿದೆ. ಈ ಆಕ್ಷನ್​ ದೃಶ್ಯಗಳಲ್ಲಿ ಬಲ್ಗೇರಿಯಾದ ಸಾಹಸ ಕಲಾವಿದರು ಸಹ ಭಾಗವಹಿಸುತ್ತಿರುವುದು ವಿಶೇಷ. ಚಿತ್ರದಲ್ಲಿ ವಿಜಯ್​ ಸೇತುಪತಿ, ಸೂರಿ, ಭವಾನಿ ಶ್ರೀ, ಪ್ರಕಾಶ್​ ರಾಜ್​, ಗೌತಮ್​ ವಾಸುದೇವ ಮೆನನ್, ರಾಜೀವ್​ ಮೆನನ್​ ಇತರರು ಅಭಿನಯಿಸುತ್ತಿದ್ದಾರೆ. ಇಳಯರಾಜ ಸಂಗೀತ, ವೇಲ್​ರಾಜ್​ ಛಾಯಾಗ್ರಹಣ ಚಿತ್ರಕ್ಕಿದೆ. ರೆಡ್​ ಜೈಂಟ್‌ ಮೂವಿಸ್​ನಡಿ ಉದಯನಿಧಿ ಸ್ಟಾಲಿನ್​ ಚಿತ್ರವನ್ನು ಅರ್ಪಿಸುತ್ತಿದ್ದು, ಆರ್​.ಎಸ್​. ಇನ್ಫೋಟೈನ್​ಮೆಂಟ್​ನಡಿ ಎಲ್ರೆಡ್​ ಕುಮಾರ್​ ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here