ನ್ಯಾನ್ಸಿ ಮೇಯರ್ಸ್ ನಿರ್ದೇಶನದ ಸಿನಿಮಾ ‘The Intern’. ಆಕೆಯ ಇತರ ಚಿತ್ರಗಳಾದ ’The Holiday’, ’Its Complicated’, ‘Something is got to give’, ‘Father of the Bride’ ಇತ್ಯಾದಿಗಳ ಹಾಗೆ ಇದು ಇಂದಿನ ಸಮಾಜದಲ್ಲಿ ಬದಲಾಗಿರುವ ಗಂಡು ಹೆಣ್ಣಿನ ಸಮೀಕರಣವನ್ನು ಕುರಿತು, ಅದಕ್ಕಿಂತ ಹೆಚ್ಚಾಗಿ ಬದಲಾದ ಹೆಣ್ಣುಮಕ್ಕಳನ್ನು ಕುರಿತು, ರೂಢಿಗತ ನಂಬಿಕೆ, ಆಚರಣೆಗಳನ್ನು ಮುರಿಯುತ್ತಾ ಮಾತನಾಡುತ್ತದೆ. ‘The Intern’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

’Musicians wont retire,
They stop when there is no music left in them’
ಅವನಲ್ಲಿನ ಸಂಗೀತ ಖಾಲಿಯಾಗಿರುವುದಿಲ್ಲ..
ಒಂಟಿತನ ಯಾವ ವಯಸ್ಸಿನಲ್ಲಾದರೂ ಕಷ್ಟವೇ, ಆದರೆ ಇಳಿವಯಸ್ಸಿನ ಒಂಟಿತನಕ್ಕೆ ಅಸಹಾಯಕತೆ ಮತ್ತು ನಾನು ಯಾರಿಗೂ ಅಗತ್ಯವಾಗಲೀ ಅನಿವಾರ್ಯವಾಗಲಿ ಅಲ್ಲ ಎನ್ನುವ ಹಠಾತ್ ಸಾಕ್ಷಾತ್ಕಾರವೂ ಸೇರಿಕೊಂಡರೆ ಪ್ರತಿದಿನವೂ ಒಂದು ಎವರೆಸ್ಟ್ ಯಾತ್ರೆಯೇ. ’ಇಂಟರ್ನ್’ ಚಿತ್ರದಲ್ಲಿರುವ ಬೆನ್ ವಿಟ್ಕರ್ 70ರ ವಯಸ್ಸಿನವನು. ಹೆಂಡತಿ ತೀರಿಕೊಂಡು ಮೂರು ವರ್ಷಗಳಾಗಿವೆ. ಒಳ್ಳೆಯ ಮನೆ, ಒಳ್ಳೆಬದುಕು ಸಾಗಿಸಲು ಬೇಕಾದ ಹಣ ಎಲ್ಲವೂ ಇದೆ. ಆದರೆ ಆತನಿಗೆ ಇಲ್ಲದಿರುವುದು ಬದುಕಲು ಬೇಕಾದ, ಮುಂಜಾನೆ ಏಳಲು ಬೇಕಾದ ಒಂದು ಉದ್ದೇಶ.

ಗಡಿಯಾರದ ಒತ್ತಡವಿರದ, ಮುಂಜಾನೆ ಮನೆಬಿಡಬೇಕಾದ ಅನಿವಾರ್ಯತೆ ಇಲ್ಲದ ದಿನ ನಮ್ಮೆಲ್ಲರ ಕನಸು. ಆದರೆ ಆ ಕನಸು ಸಾಕಾರವಾದರೆ ಎಷ್ಟು ಭೀಕರವಾಗಿರುತ್ತದೆ ಎನ್ನುವ ಅರಿವು ನಮಗೆ ಕೊರೋನ ಸಂದರ್ಭದಲ್ಲಿ ಆಯಿತು. ಬೆಳಗ್ಗೆ ಎದ್ದ ಕೂಡಲೇ ಮಾಡುತ್ತಿದ್ದ ಕೆಲಸಗಳನ್ನು, ಸಿದ್ಧವಾಗುತ್ತಿದ್ದ ಬಗೆಯನ್ನು, ಕಡೆಗೆ ಟ್ರಾಫಿಕ್ ಸದ್ದನ್ನು ಸಹ ಮಿಸ್ ಮಾಡತೊಡಗಿದೆವು. ಒಂದು ರೊಟೀನ್ ಹುಡುಕಿಕೊಳ್ಳುವ ಕಾರಣಕ್ಕೇ ಎಷ್ಟೋ ಹವ್ಯಾಸಗಳನ್ನು ಶುರು ಮಾಡಿಕೊಂಡೆವು. ಬೆನ್ ಸಹ ಹೀಗೆಯೇ, ಮಳೆ ಇರಲಿ, ಬಿಸಿಲಿರಲಿ ಮುಂಜಾನೆ ಏಳೂವರೆಗೆ ಒಂದು ಕಾಫಿಶಾಪ್‌ಗೆ ಹೋಗಿ ಕೂರುತ್ತಾನೆ. ಅಲ್ಲಿನ ಚಲನೆಯಲ್ಲಿ ತನ್ನನ್ನು ತಾನೇ ಕೂರಿಸಿಕೊಳ್ಳುತ್ತಾನೆ.

ಜಗತ್ತು ಚಲಿಸುವಾಗ ತಾನು ನಿಂತಲ್ಲೇ ನಿಲ್ಲಬಾರದು, ಆ ಚಲನೆಯ ಭಾಗವಾಗಬೇಕು ಎನ್ನುವ ಕಾರಣಕ್ಕಾಗಿಯೇ ಅಡಿಗೆ, ಯೋಗ, ಸುತ್ತಾಟ, ಹೊಸ ಭಾಷೆ ಎಲ್ಲವನ್ನೂ ಕಲಿಯುತ್ತಾನೆ. ಏನೂ ನಡೆಯದ ಅವನ ಜೀವನದಲ್ಲಿ ಇತ್ತೀಚೆಗೆ ನಿಯಮಿತವಾಗಿ ಪುನರಾವರ್ತನೆ ಆಗುತ್ತಿರುವ ಒಂದೇ ಸಂದರ್ಭ ಎಂದರೆ ಸ್ನೇಹಿತರ, ಆತ್ಮೀಯರ ಅಂತಿಮಯಾತ್ರೆ ಮಾತ್ರ. ಬದುಕಿನ ಆ ಹಂತದಲ್ಲಿ ಅವನಿದ್ದಾನೆ, ಆದರೆ ಅವನು ಸೋತು ಕೂರುವವನಲ್ಲ. ಬದುಕಿಗೆ ಕಾರಣಗಳನ್ನು, ಅರ್ಥಗಳನ್ನು ಪ್ರತಿಕ್ಷಣ ಹುಡುಕುತ್ತಲೇ ಇರುವವನು. ‘ಗಾಡ್ ಫಾದರ್‌’ನ ವಿಟೋ ಕಾರ್ಲಿಯೋನಿ, ‘ಟಾಕ್ಸಿ ಡ್ರೈವರ್’ನ ಟ್ರಾವಿಸ್ ಬಿಕಲ್ ಇಂತಹ ಪಾತ್ರಗಳಲ್ಲಿ ನೋಡಿದ್ದ ರಾಬರ್ಟ್ ಡಿ ನೀರೋನನ್ನು ಈ ಪಾತ್ರದಲ್ಲಿ ಕಲ್ಪಿಸಿಕೊಳ್ಳುವುದೂ ಕಷ್ಟವೇ. ಆದರೆ ಆತ ಈ ಪಾತ್ರವನ್ನು ನಿರಾಯಾಸವಾಗಿ ನಿಭಾಯಿಸಿದ್ದಾನೆ.

ಚಿತ್ರದ ಒಂದು ಬದಿಗೆ ಈ ಪಾತ್ರವಿದ್ದರೆ ಇನ್ನೊಂದು ಬದಿಗೆ ಜೂಲ್ಸ್ ಆಸ್ಟಿನ್ ಎನ್ನುವ ಯಶಸ್ವೀ ಉದ್ಯಮಿಯ ಪಾತ್ರವಿದೆ. ಆನ್‌ಲೈನ್‌ ಬಟ್ಟೆಗಳ ವ್ಯಾಪಾರ ಪ್ರಾರಂಭಿಸಿದ ಆಕೆಗೆ ಆ ಕೆಲಸದ ಬಗ್ಗೆ ಇನ್ನಿಲ್ಲದ ಪ್ಯಾಷನ್‌, ಶ್ರದ್ದೆ. ಉತ್ಪಾದನೆ, ಪ್ಯಾಕಿಂಗ್, ರವಾನೆ ಮತ್ತು ಗ್ರಾಹಕರ ಸಂಪರ್ಕ ಎಲ್ಲದರಲ್ಲೂ ಭಾಗಿಯಾಗುವ ಆಕೆ ಸ್ಥಾಪಿಸಿದ್ದ ಆ ಉದ್ಯಮ ಮೂರು ವರ್ಷಗಳ ಟಾರ್ಗೆಟ್ ಅನ್ನು 9 ತಿಂಗಳಲ್ಲಿ ಮುಟ್ಟಿದೆ. 25 ಜನರೊಂದಿಗೆ ಪ್ರಾರಂಭವಾದ ಉದ್ಯಮದಲ್ಲಿ ಇಂದು 220 ಮಂದಿ ಕೆಲಸ ಮಾಡುತ್ತಿದ್ದಾರೆ. ಅವಳ ಕೆಲಸದ ಯಶಸ್ಸು ಈಗ ಸಣ್ಣ ಮತ್ತು ಯಶಸ್ವೀ ವ್ಯಾಪಾರಗಳು ಅನುಭವಿಸುವ ಬಿಕ್ಕಟ್ಟನ್ನುಅನುಭವಿಸುತ್ತಿದೆ. ಹೂಡಿಕೆದಾರರು ಇವಳು ಗೆಲ್ಲಿಸಿದ ಈ ಉದ್ಯಮಕ್ಕೆ ಈಗ ಅನುಭವ ಇರುವ CEO ಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.

ಸಾಧಾರಣವಾಗಿ ಯಾವುದಕ್ಕೂ ವಿನಾಕಾರಣ ಸ್ಪಂದಿಸದಂತೆ ಇರುವ ಈಕೆಗೆ ಆ ಮಾತನ್ನು ಸಹೋದ್ಯೋಗಿ ಸೂಚಿಸಿದ ಕೂಡಲೇ ಕಣ್ಣುತುಂಬಿಕೊಳ್ಳುತ್ತದೆ. ಕೆಲಸ ಪ್ರಾರಂಭಿಸುವ ಕಾಲಕ್ಕೆ ಅವಳ ಗಂಡ ಸಹ ಒಳ್ಳೆಯ ಹುದ್ದೆಯಲ್ಲಿರುತ್ತಾನೆ. ಅವರಿಗೆ ಒಬ್ಬ ಮಗಳಿರುತ್ತಾಳೆ. ಆದರೆ ಇವಳ ಯೋಜನೆಯನ್ನು ಕುರಿತ ಪ್ಯಾಷನ್ ಗಮನಿಸಿದ ಆತ ಅವಳನ್ನು ಮುನ್ನುಗ್ಗಲು ಬಿಟ್ಟು ತಾನು ಮನೆಯಲ್ಲೇ ಉಳಿದು ಮಗುವನ್ನು ನೋಡಿಕೊಳ್ಳುವೆ ಎಂದು ಹೇಳುತ್ತಾನೆ. ಆತನೀಗ stay at home husband. ಅವರಿಬ್ಬರ ನಡುವಿನ ಹೊಂದಾಣಿಕೆ ಅದು. ಆದರೆ ಆ ಮಗು ಓದುವ ಶಾಲೆಯ ಒಂದಿಬ್ಬರು ಅಮ್ಮಂದಿರು ಅದರ ಬಗ್ಗೆ ಕುಹಕವಾಡುತ್ತಿರುತ್ತಾರೆ. ತನ್ನ ಕ್ಷೇತ್ರದಲ್ಲಿ ತಾನು ಬೆಸ್ಟ್ ಎಂದು ಸಾಬೀತು ಪಡಿಸಿಕೊಳ್ಳುವ ಒತ್ತಡದ ಜೊತೆಜೊತೆಯಲ್ಲಿಯೇ ಇಲ್ಲಿ ಅವಳು ತನ್ನನ್ನು ತಾನು ನಾನು ಅಡಿಗೆ ಸಹ ಮಾಡಬಲ್ಲೆ ಎಂದು ಸಾಬೀತು ಪಡಿಸಿಕೊಳ್ಳಬೇಕಾಗುತ್ತಿರುತ್ತದೆ ಎನ್ನುವುದರಲ್ಲಿ ಇಡೀ ಸನ್ನಿವೇಶದ ವ್ಯಂಗ್ಯ ಇದೆ.

ಜೂಲ್ಸ್ ಕಂಪನಿಯ ಮಾನವ ಸಂಪನ್ಮೂಲ ಇಲಾಖೆ ಸೀನಿಯರ್ ಸಿಟಿಜನ್ಸ್‌ಗಳನ್ನು ಇಂಟರ್ನ್‌ಗಳನ್ನಾಗಿ ತೆಗೆದುಕೊಳ್ಳುವ ಒಂದು ಪ್ರಾಜೆಕ್ಟ್ ಪ್ರಾರಂಭಿಸುತ್ತದೆ. ನವತಂತ್ರಜ್ಞಾನಕ್ಕೆ ತಮ್ಮನ್ನು ತಾವು ಒಡ್ಡಿಕೊಂಡೇ ಬೆಳೆದ ಈ ತಲೆಮಾರು ವಯಸ್ಸಾದವರ ಕೌಶಲ್ಯಗಳ ಸಾಧ್ಯತೆಯ ಬಗ್ಗೆ ಹೇಗೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಒಂದು ಉದಾಹರಣೆ, ಅವರು ಕೆಲಸದ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಲು ಹೇಳಿರುವುದಷ್ಟೇ ಅಲ್ಲ, ತಮ್ಮ ಕುರಿತು ಮಾಹಿತಿಯಿರುವ ಅರ್ಜಿ ಸಹ ಧ್ವನಿಮುದ್ರಿತವಾಗಿರಬೇಕು ಎಂದು ಹೇಳಿರುತ್ತಾರೆ.

ಕೆಲಸಕ್ಕೆ ತನ್ನ ಅರ್ಜಿ ತುಂಬಿಸಲು 70ರ ಈ ಅಜ್ಜ 9 ರ ಮೊಮ್ಮಗನ ಸಹಾಯ ತೆಗೆದುಕೊಳ್ಳಬೇಕಾಗಿರುತ್ತದೆ! ಅಲ್ಲಿ ಬೆನ್ ಎದುರಿಸುವ ಒಂದು ಪ್ರಶ್ನೆ, ಕೆಲಸಕ್ಕೆ ಹೋದವರನ್ನು ಸಾಧಾರಣವಾಗಿ ಕೇಳುವಂಥಾದ್ದೇ, ’ಇಂದಿಗೆ ಹತ್ತು ವರ್ಷಗಳಲ್ಲಿ ನಿಮ್ಮನ್ನು ನೀವು ಎಲ್ಲಿ ನೋಡಬಯಸುತ್ತೀರಿ?’! ಅಲ್ಲಿ 2-3 ಸುತ್ತಿನ ಸಂದರ್ಶನಗಳಾಗುತ್ತವೆ. ಕೆಲಸ ಏಕೆ ಬೇಕು ಎನ್ನುವುದಕ್ಕೆ ಬೆನ್ ಕೊಡುವ ಕಾರಣ ಇದು, ’ನನಗೆ ಜನಗಳೊಡನೆ ಸಂಪರ್ಕ ಬೇಕು, ಕೆಲಸದ ಜೋಶ್ ಬೇಕು, ಸವಾಲು ಬೇಕು, ನನ್ನ ಅಗತ್ಯತೆಯ ನಂಬಿಕೆ ಬೇಕು…’ ಕಡೆಗೆ ಆಯ್ಕೆಯಾದವರಲ್ಲಿ ಈತನೂ ಒಬ್ಬ.

ಬೆನ್ ಸಂಭ್ರಮ ನೋಡಬೇಕು! ಹಠಾತ್ತಾಗಿ ಆತನ ಬದುಕಿಗೊಂದು ಉದ್ದೇಶ ಸಿಕ್ಕಿಬಿಟ್ಟಿದೆ. ರಾತ್ರಿಯೇ ಶೂ ಪಾಲೀಶ್ ಮಾಡಿಡುತ್ತಾನೆ. ಬಟ್ಟೆಗಳನ್ನು ಎತ್ತಿಡುತ್ತಾನೆ. ಬ್ರೀಫ್ ಕೇಸ್ ಜೋಡಿಸಿಡುತ್ತಾನೆ. ಒಂದಲ್ಲ ಎರಡು ಅಲಾರಂಗಳನ್ನು ಇಟ್ಟುಕೊಳ್ಳುತ್ತಾನೆ. ಮುಂಜಾನೆ ನೀಟಾಗಿ ಸೂಟುಹಾಕಿಕೊಂಡು, ಬ್ರೀಫ್ಕೇಸ್ ಹಿಡಿದು ಕೆಲಸಕ್ಕೆ ಹೊರಡುತ್ತಾನೆ. ಆದರೆ ಅಲ್ಲಿನ ಕೆಲಸದ ಸಂಸ್ಕೃತಿ ಇವನು ಊಹಿಸಲಾಗದಷ್ಟು ಬದಲಾಗಿದೆ. ಎಲ್ಲರೂ ಕ್ಯಾಶುಅಲ್ ಆಗಿ ಬಟ್ಟೆ ಧರಿಸಿದ್ದಾರೆ. ಕೆಲಸ ಮಾಡುವವರ ಸರಾಸರಿ ವಯಸ್ಸು 25 ವರ್ಷಗಳು! ಗೋಡೆಗಳಿಲ್ಲದ ಆಫೀಸ್ ಅದು. ಹುಡುಗಿಯೊಬ್ಬಳು ತನ್ನ ನಾಯಿಮರಿಯನ್ನು ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುತ್ತಿರುತ್ತಾಳೆ. ದಾಡಿ ಬೋಳಿಸದ, ಟಕ್ ಇನ್ ಮಾಡದ ಹುಡುಗರು, ಸಣ್ಣ ವಯಸ್ಸಿನವರ ನಗು, ಅವಸರ ಎಲ್ಲೆಲ್ಲೂ.

ತನ್ನ ಡೆಸ್ಕ್‌ನಲ್ಲಿರುವ ಲ್ಯಾಪ್ ಟಾಪ್ ಆನ್ ಮಾಡಲು ಸಹ ಅವನು ಪಕ್ಕದವನ ಸಹಾಯ ತೆಗೆದುಕೊಳ್ಳಬೇಕು. ಈತ ಕೆಲಸ ಮಾಡಬೇಕಾಗಿರುವುದು ನೇರವಾಗಿ ಜೂಲ್ಸ್ ಆಸ್ಟಿನ್‌ಳೊಡನೆ. ಸಹೋದ್ಯೋಗಿಗಳು ಅನುಕಂಪ ಸೂಚಿಸುತ್ತಾರೆ, ಜೂಲ್ಸ್ ಸಹ ಬೇಕಾದರೆ ಬೇರೆ ವಿಭಾಗಕ್ಕೆ ಬದಲಾಯಿಸಿಕೊಳ್ಳಬಹುದು ಎಂದು ಹೇಳಿದರೂ ಬೆನ್ ಒಪ್ಪಿಕೊಳ್ಳುವುದಿಲ್ಲ. ದಿನಕ್ಕೆ 4 ಗಂಟೆಗಳಿಗೂ ಕಡಿಮೆ ನಿದ್ರೆ ಮಾಡುವ, ಆಫೀಸನ್ನೇ ಮನೆ ಮಾಡಿಕೊಂಡಿರುವ, ವ್ಯಾಯಾಮಕ್ಕೆಂದು ಆಫೀಸಿನಲ್ಲೇ ಸೈಕಲ್ ತುಳಿದುಕೊಂಡು ಓಡುವ, ಕೆಲಸ ಬಿಟ್ಟು ಮತ್ಯಾವ ಸಾಮಾಜಿಕ, ವೈಯಕ್ತಿಕ ಸಂಪರ್ಕಕ್ಕೂ ಸಮಯ ಇಲ್ಲದ ಜೂಲ್ಸ್ ಎಂದರೆ ಎಲ್ಲರಿಗೂ ಭಯಮಿಶ್ರಿತ ಗೌರವವೇ ಹೊರತು ಅಕ್ಕರೆಯಿಲ್ಲ. ಆದರೆ ಬೆನ್ ಕಣ್ಣಿಗೆ ಆಕೆಯೊಂದು ಮಾದರಿ.

ಭಿನ್ನ ಭಿನ್ನ ಧೃವಗಳ ಇವರಿಬ್ಬರ ಸಾಮಾನ್ಯ ನೆಲೆ ಕೆಲಸದ ಬಗೆಗಿನ ನಿಯತ್ತು. ಜೂಲ್ಸ್ ಅವನಿಗೆ ಯಾವುದೇ ಕೆಲಸ ಕೊಡದಾಗ ಬೆನ್ ತಾನೇ ಹುಡುಕಿಕೊಂಡು ಕೆಲಸ ಮಾಡುತ್ತಾನೆ. ಅಲ್ಲಿನ ಅವಸರಕ್ಕೆ ತನ್ನ ಸಾವಧಾನ ಬೆರೆಸಿ ಕೆಲಸದ ಸ್ಥಳದಲ್ಲಿ ಒಂದು ನಿಧಾನ ಮತ್ತು ಶಿಸ್ತು ತರುತ್ತಾನೆ. ನಿಧಾನವಾಗಿ ಎಲ್ಲರಿಗೂ ಬೇಕಾದವನಾಗುತ್ತಾನೆ. ಅವನ ಅನುಭವದ ಬಗ್ಗೆ ಎಲ್ಲರಿಗೂ ಈಗ ಗೌರವ. ಜೂಲ್ಸ್ ಬಗೆಗೆ ಅವನದು ಏಕಮೇವ ನಿಷ್ಠೆ. ಅವನ ಸಾಮರ್ಥ್ಯ, ಸಾವಧಾನ, ಕೆಲಸದಲ್ಲಿನ ಶ್ರದ್ಧೆ ಎಲ್ಲವನ್ನೂ ಅವಳು ಗಮನಿಸುತ್ತಲೇ ಇರುತ್ತಾಳೆ. ಅವಳಿಗೇ ಗೊತ್ತಿಲ್ಲದೆ ಅವಳಿಗೆ ಬೇಡವಾಗಿದ್ದ ಈ ಸೀನಿಯರ್ ಸಿಟಿಜನ್ ಈಗ ಅವಳ ಹಿರಿಯ ಸ್ನೇಹಿತ, ನಂಬಿಕಸ್ತ, ತನ್ನೆಲ್ಲಾ ಬಿಗುವು ಕಳಚಿ ಅವಳು ಸಹಜವಾಗಿರಬಲ್ಲ ಒಡನಾಡಿ ಆಗಿಬಿಟ್ಟಿರುತ್ತಾನೆ.

ಇದೇ ಸಮಯದಲ್ಲಿ ಬೆನ್‌ಗೆ ಜೂಲ್ಸ್ ಗಂಡನಿಗೆ ಒಂದು ಹೊರಗಿನ ಸಂಬಂಧ ಇರುವುದು ಗೊತ್ತಾಗುತ್ತದೆ. ಅವನು ಅಲ್ಲಾಡಿ ಹೋಗುತ್ತಾನೆ. ಅವನ ಪುಸ್ತಕದಲ್ಲಿ ಅದೊಂದು ಘೋರ ಅಪರಾಧ. ಗಂಡನಿಗೂ ಆ ಬಗ್ಗೆ ಗಿಲ್ಟ್ ಇರುತ್ತದೆ, ಅದನ್ನು ನಿವಾರಿಸಿಕೊಳ್ಳಲೇನೋ ಎನ್ನುವಂತೆ, ’ಹೊಸ ಸಿಈಓ ಬಂದರೆ ಜೂಲ್ಸ್ ಗೆ ಸ್ವಲ್ಪ ಬಿಡುವು ಸಿಗಬಹುದಲ್ಲ? ಮನೆಯಲ್ಲೂ ಅವಳು ಆಫೀಸಿನ ಕೆಲಸದಲ್ಲಿ ಎಷ್ಟು ಬ್ಯುಸಿಯಾಗಿರುತ್ತಾಳೆ ಎನ್ನುವುದು ನಿನಗೂ ಗೊತ್ತಲ್ಲ?’ ಎಂದು ಕೇಳುತ್ತಾನೆ. ಆಗ ಬೆನ್ ಹೇಳುವ ಒಂದು ಮಾತು ಅವನೆದುರಲ್ಲಿ ಕನ್ನಡಿ ಹಿಡಿಯುತ್ತದೆ, ’ಅಂದರೆ ಹೊರಗಿನಿಂದ ಬರುವ ಸಿಈಓ ಒಬ್ಬ ಈ ಮನೆಯ ಸಮಸ್ಯೆ ಬಗೆಹರಿಸಬಹುದೆ?’ ಎಂದು ಅವನು ಕೇಳುತ್ತಾನೆ.

ಬೇರೊಬ್ಬರು ಬಂದರೆ ಈ ಉದ್ದಿಮೆ ತನ್ನ ಕೈಜಾರುತ್ತದೆ, ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭ ಬಂದರೆ ಅವರ ಮಾತು ಮೇಲುಗೈ ಪಡೆಯುತ್ತದೆ ಎಂದು ಗೊತ್ತಿದ್ದರೂ ಅದನ್ನು ಒಪ್ಪಿಕೊಳ್ಳಲು ಅವಳಿಗೆ ಅವಳದೇ ಕಾರಣಗಳಿವೆ. ಗಂಡನ ಸಂಬಂಧದ ವಿಷಯ ಬೆನ್‌ಗಷ್ಟೇ ಅಲ್ಲ, ಜೂಲ್ಸ್‌ಗೂ ಗೊತ್ತಾಗಿದೆ. ಆದರೆ ಅದನ್ನು ಎದುರಿಸುವ ಧೈರ್ಯ ಅವಳಿಗಿಲ್ಲ. ಕಡೆಗೊಮ್ಮೆ ಬೆನ್ ಬಳಿ ಅದನ್ನು ಹೇಳಿಕೊಂಡಾಗ ಅವನು ಮೊದಲು ಮಾಡುವ ಕೆಲಸ ಇಡೀ ಘಟನೆಗೆ ಅವಳಾಗಲಿ, ಕೆಲಸದ ಬಗೆಗಿನ ಅವಳ ವ್ಯಸ್ತತೆ ಆಗಲಿ ಕಾರಣವಲ್ಲ ಎಂದು ಅವಳಿಗೆ ಮನದಟ್ಟು ಮಾಡುವುದು. ಇದೇ ಕೆಲಸವನ್ನು ಅವನು ಜೂಲ್ಸ್ ಬಗ್ಗೆ ಕುಹಕವಾಡುವ ಶಾಲೆಯ ಇತರ ಅಮ್ಮಂದಿರೆದುರಿಗೂ ಮಾಡಿರುತ್ತಾನೆ.

ಹೊಸ ಸಿಈಓ ಒಬ್ಬರನ್ನು ಕರೆದುಕೊಂಡರೆ ನನ್ನ ಸಂಸಾರದ ಕಡೆಗೆ ತಾನು ಗಮನ ಕೊಡಬಹುದಲ್ಲ ಎಂದು ಜೂಲ್ಸ್ ಕೇಳುವ ಪ್ರಶ್ನೆಗೆ ಅವನು ’ನೀನು ಇಷ್ಟು ಕಷ್ಟಪಟ್ಟು ಸಾಧಿಸಿದ ಎಲ್ಲವನ್ನೂ ನಿನ್ನ ಗಂಡ ಇನ್ನೊಂದು ಸಂಬಂಧ ಬೆಳಸಿಕೊಳ್ಳದಿರಲಿ ಎಂದು ಬಿಟ್ಟು ಬಿಡುತ್ತೇನೆ ಎಂದು ಹೇಳುವೆಯಾ?’ ಎಂದು ಕೇಳುತ್ತಾ ಎರಡೂ ಹೇಗೆ ಬೇರೆಬೇರೆ ವಿಷಯಗಳು ಎನ್ನುವುದನ್ನು ಅರ್ಥ ಮಾಡಿಸುತ್ತಾನೆ. ಅವನದು ಅವನ ಕಾಲಘಟ್ಟದ ಕಡ್ಡಿಮುರಿದಿಟ್ಟ ನಂಬಿಕೆಯಾದರೆ, ಜೂಲ್ಸ್ ವಾಸ್ತವದ ಅರಿವಿಟ್ಟುಕೊಂಡು ಆ ಸಮಸ್ಯೆಯನ್ನು ಎದುರಿಸಲು ಪ್ರಯತ್ನಿಸುತ್ತಾಳೆ.

ಇದು ನ್ಯಾನ್ಸಿ ಮೇಯರ್ಸ್ ಚಿತ್ರ. ಆಕೆಯ ಇತರ ಚಿತ್ರಗಳಾದ ’The Holiday’, ’Its Complicated’, ‘Something is got to give’, ‘Father of the Bride’ ಇತ್ಯಾದಿಗಳ ಹಾಗೆ ಇದು ಇಂದಿನ ಸಮಾಜದಲ್ಲಿ ಬದಲಾಗಿರುವ ಗಂಡು ಹೆಣ್ಣಿನ ಸಮೀಕರಣವನ್ನು ಕುರಿತು, ಅದಕ್ಕಿಂತ ಹೆಚ್ಚಾಗಿ ಬದಲಾದ ಹೆಣ್ಣುಮಕ್ಕಳನ್ನು ಕುರಿತು, ರೂಢಿಗತ ನಂಬಿಕೆ, ಆಚರಣೆಗಳನ್ನು ಮುರಿಯುತ್ತಾ ಮಾತನಾಡುತ್ತದೆ. ಚಿತ್ರದ ಮೊದಲ ಒಂದು ಗಂಟೆ ನಿಧಾನವಾಗಿ ಚಲಿಸುತ್ತದೆ. ಕೆಲವು ಸನ್ನಿವೇಶಗಳು ತೀರಾ ಸಿನಿಮೀಯ ಅನ್ನಿಸಿದರೂ ಇದೊಂದು feel good ಸಿನಿಮಾ. ಅದರ ಜೊತೆಜೊತೆಯಲ್ಲಿಯೇ ಕೆಲವು ಗಂಭೀರ ಪ್ರಶ್ನೆಗಳನ್ನೂ ಎತ್ತುತ್ತದೆ.

LEAVE A REPLY

Connect with

Please enter your comment!
Please enter your name here