ಫೆಬ್ರವರಿ 4ರಂದು ತೆರೆಗೆ ಬರಬೇಕಿದ್ದ ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರವನ್ನು ಕೋವಿಡ್‌ ಸೋಂಕು ಹೆಚ್ಚಾಗುತ್ತಿರುವ ಕಾರಣದಿಂದ ಮುಂದೂಡಲಾಗಿತ್ತು. ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್‌ 1ರ ಯುಗಾದಿ ಸಂದರ್ಭಕ್ಕೆ ಸಿನಿಮಾ ತೆರೆಕಾಣಲಿದೆ.

ಕೋವಿಡ್‌ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ದೊಡ್ಡ ಬಜೆಟ್‌ ಸಿನಿಮಾಗಳ ಬಿಡುಗಡೆ ಮುಂದೂಡಲಾಗುತ್ತಿದೆ. ‘RRR’, ‘ರಾಧೆ ಶ್ಯಾಮ್‌’, ‘ಸರ್ಕಾರು ವಾರಿ ಪಾಟ’ ತೆಲುಗು ಚಿತ್ರಗಳ ಜೊತೆ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ‘ಆಚಾರ್ಯ’ ಸಿನಿಮಾದ ಬಿಡುಗಡೆಯೂ ಮುಂದಕ್ಕೆ ಹೋಗಿತ್ತು. ಫೆಬ್ರವರಿ 4ರಂದು ತೆರೆಗೆ ಬರಬೇಕಿದ್ದ ಸಿನಿಮಾ ಮುಂದೂಡಿದಾಗ ಅಭಿಮಾನಿಗಳು ನಿರಾಸೆ ಹೊಂದಿದ್ದರು. ಈಗ ಎಲ್ಲರಿಗಿಂತ ಮೊದಲು ಚಿರಂಜೀವಿ ಸಿನಿಮಾ ನಿರ್ಮಾಪಕರು ಬಿಡುಗಡೆ ದಿನಾಂಕವನ್ನು ಏಪ್ರಿಲ್‌ 1 ಎಂದು ಘೋಷಿಸಿದ್ದಾರೆ. ಈಗ ಇತರೆ ಚಿತ್ರನಿರ್ಮಾಪಕರು ಎಚ್ಚೆತ್ತುಕೊಂಡು ತಮ್ಮ ಸಿನಿಮಾಗಳ ಬಿಡುಗಡೆ ದಿನ ಘೋಷಿಸಲು ಲೆಕ್ಕಾಚಾರ ಹಾಕುತ್ತಿದ್ದಾರೆ.

ಸಿನಿಮಾ ಟಿಕೆಟ್‌ ದರಗಳ ಗಣನೀಯ ಇಳಿಕೆ, ಸರ್ಕಾಋದ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಸೇರಿದಂತೆ ಆಂಧ್ರ ಸರ್ಕಾರ ಸಿನಿಮೋಧ್ಯಮ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ತೆಲುಗು ಸಿನಿಮಾರಂಗ ಅಳಲು ತೋಡಿಕೊಂಡಿತ್ತು. ಈ ವಿಚಾರವಾಗಿ ಹಿರಿಯ ನಟ ಚಿರಂಜೀವಿ ಇತ್ತೀಚೆಗೆ ಮುಖ್ಯಮಂತ್ರಿ ಜಗನ್‌ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು. ಭೇಟಿ ಫಲಪ್ರದವಾಗಿದ್ದು ಕೆಲವು ಮಾರ್ಪಾಟುಗಳು ಆಗಲಿವೆ ಎನ್ನಲಾಗುತ್ತಿದೆ. ಈ ಭೇಟಿಯ ನಂತರ ಚಿರಂಜೀವಿ ಸಿನಿಮಾ ಬಿಡುಗಡೆಗೆ ಹೊಸ ದಿನಾಂಕ ಘೋಷಣೆಯಾಗಿದೆ. ಕೊರಟಾಲ ಶಿವಾ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಮ್‌ ಚರಣ್‌ ತೇಜಾ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ‘ಆಚಾರ್ಯ’ ಸಿನಿಮಾದಲ್ಲಿ ತಂದೆ – ಮಗ, ಚಿರಂಜೀವಿ ಮತ್ತು ರಾಮ್‌ ಚರಣ್‌ ತೇಜಾ ಪೂರ್ಣಪ್ರಮಾಣದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಜಲ್‌ ಅಗರ್‌ವಾಲ್‌, ಪೂಜಾ ಹೆಗ್ಡೆ ಚಿತ್ರದ ನಾಯಕಿಯರು. ಮಣಿಶರ್ಮ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here