ಗುರುರಾಜ ಕುಲಕರ್ಣಿ ನಿರ್ದೇಶನದ ‘ದ ಜಡ್ಜ್ಮೆಂಟ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ರವಿಚಂದ್ರನ್, ನಾಗಾಭರಣ, ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ್ ಬೆಳವಾಡಿ ಚಿತ್ರದ ಪ್ರಮುಖ ಪಾತ್ರಧಾರಿಗಳು. ಅನೂಪ್ ಸಿಳೀನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕೋರ್ಟ್ ಡ್ರಾಮಾ ‘ದ ಜಡ್ಜ್ಮೆಂಟ್’ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಚಿತ್ರವನ್ನು ಗುರುರಾಜ ಕುಲಕರ್ಣಿ ನಿರ್ದೆಶಿಸಿದ್ದಾರೆ. ಸಿನಿಮಾದಲ್ಲಿ ನಾಗಾಭರಣ, ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಕುರಿತು ಮಾತನಾಡಿದ ನಿರ್ದೇಶಕ ಗುರುರಾಜ ಕುಲಕರ್ಣಿ, ‘ನಮ್ಮ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಸಂಕಲನ ಕಾರ್ಯ ನಡೆಯುತ್ತಿದೆ. ನಮ್ಮ ಚಿತ್ರದ ತಂತ್ರಜ್ಞರನ್ನು ಪರಿಚಯಿಸುವ ಸಲುವಾಗಿ ಈ ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ. ನಾನು ಹಿಂದೆ ನಿರ್ಮಾಪಕನಾಗಿ ಬಂದಾಗ ಯಾರು ಕೂಡ ನನ್ನನ್ನು ಪರಿಚಯಿಸಿರಲಿಲ್ಲ. ಆಗ ನನಗೆ ತುಂಬಾ ಬೇಸರವಾಗಿತ್ತು. ನಿರ್ಮಾಪಕರಿಗೆ ಸಲ್ಲುವ ಗೌರವ ಸಲ್ಲಲ್ಲೇಬೇಕು. ಹಾಗಾಗಿ ನಾನು ಮೊದಲು ನಿರ್ಮಾಪಕರನ್ನು ಪರಿಚಯಿಸುತ್ತಿದ್ದೇನೆ. ಶರದ್ ನಾಡಗೌಡ,
ವಿಶ್ವನಾಥ್ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಪ್ರಮೋದ್ ಮರವಂತೆ ಹಾಡುಗಳನ್ನು ಬರೆದಿದ್ದಾರೆ. ವಾಸುದೇವ ಚಿತ್ರಕಥೆ, ಎಂ ಎಸ್ ರಮೇಶ್ ಸಂಭಾಷಣೆ, ಕೆಂಪರಾಜ್ ಸಂಕಲನ ಹಾಗೂ ಪಿ ಕೆ ಹೆಚ್ ದಾಸ್ ಛಾಯಾಗ್ರಹಣ ಚಿತ್ರಕ್ಕಿದೆ’ ಎಂದರು.
‘ನಾವು ಗೆಳೆಯರೆಲ್ಲಾ ಸೇರಿಕೊಂಡು ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ ಚಿತ್ರೀಕರಣ ಪೂರ್ಣವಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ನಮ್ಮ ಚಿತ್ರ ಈಗಾಗಲೇ ಮುಂಬೈ ತನಕ ತಲುಪಿದೆ. ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಯೋಜನೆಯಿದೆ. ಅಲ್ಲಿನ ಪ್ರಸಿದ್ದ ನಟರೊಬ್ಬರ ಜೊತೆ ಸದ್ಯದಲ್ಲೇ ಈ ಕುರಿತು ಚರ್ಚಿಸಲಿದ್ದೇವೆ. ನಮ್ಮ ಚಿತ್ರ ಅಲ್ಲಿಯವರೆಗೂ ತಲುಪಲು ಇಲ್ಲಿನ ಮಾಧ್ಯಮ ನೀಡಿದ ಬೆಂಬಲ ಕಾರಣ’ ಎಂದರು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ರಾಮು ರಾಯಚೂರು. ‘ನನ್ನ ಮೂವತ್ತೆರಡು ವರ್ಷಗಳ ಸಿನಿ ಜರ್ನಿಯಲ್ಲಿ ತಂತ್ರಜ್ಞರಿಗಾಗಿ ಪತ್ರಿಕಾಗೋಷ್ಠಿ ಆಯೋಜಿಸಿರುವುದು ಇದೇ ಮೊದಲಿರಬೇಕು. ಈ ಚಿತ್ರದ ಸಂಭಾಷಣೆ ಮಾಮೂಲಿ ತರಹ ಇಲ್ಲ. ಸ್ವಲ್ಪ ಭಿನ್ನವಾಗಿದೆ’ ಎನ್ನುವುದು ಸಂಭಾಷಣೆ ರಚಿಸಿರುವ ಎಂ ಎಸ್ ರಮೇಶ್ ಮಾತು. G9 Communication Media ಮತ್ತು Entertainment ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.