ಕನ್ನಡ ಮನರಂಜನಾ ವಾಹಿನಿ ‘ಸಿರಿಕನ್ನಡ’ದಲ್ಲಿ ಎರಡು ನೂತನ ಧಾರಾವಾಹಿ ಮತ್ತು ರಿಯಾಲಿಟಿ ಶೋ ಮೂಡಿಬರಲಿವೆ. ‘ಊರ್ಮಿಳಾ’ ಸೀರಿಯಲ್‌ನೊಂದಿಗೆ ಚಿತ್ರನಿರ್ದೇಶಕ ಎಸ್‌ ನಾರಾಯಣ್‌ ಪುತ್ರ ಪಂಕಜ್‌ ಕಿರುತೆರೆಗೆ ಬರುತ್ತಿದ್ದಾರೆ. ಹೇಮಲತಾ ಮತ್ತು ಹಿತೇಶ್‌ ‘ಸಖತ್‌ ಜೋಡಿ’ ರಿಯಾಲಿಟಿ ಶೋ ನಿರೂಪಿಸಲಿದ್ದಾರೆ.

ಸಿರಿಕನ್ನಡ ಮನರಂಜನಾ ವಾಹಿನಿ ಎರಡು ನೂತನ ಧಾರಾವಾಹಿ ಮತ್ತು ರಿಯಾಲಿಟಿ ಶೋ ಆರಂಭಿಸುತ್ತಿದೆ. ‘ಊರ್ಮಿಳಾ’, ‘ಬ್ರಾಹ್ಮಿನ್ಸ್‌ ಕೆಫೆ’ ಮತ್ತು ‘ಸಖತ್‌ ಜೋಡಿ’ ರಿಯಾಲಿಟಿ ಶೋಗಳು ಜೂನ್‌ 5ರಿಂದ ವಾಹಿನಿಯಲ್ಲಿ ಮೂಡಿಬರಲಿವೆ. ವಾಹಿನಿ ಮುಖ್ಯಸ್ಥರಾದ ರಾಜೇಶ್‌ ರಾಜಘಟ್ಟ, ‘ಈಗಾಗಲೇ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ಮೂಲಕ ಸಿರಿಕನ್ನಡ ಕನ್ನಡಿಗರಿಗೆ ಚಿರಪರಿಚಿತವಾಗಿದೆ. ಜೂನ್ 5ರಿಂದ ಎರಡು ಧಾರಾವಾಹಿ ಹಾಗೂ ರಿಯಾಲಿಟಿ ಶೋಗೆ ಚಾಲನೆ ನೀಡುತ್ತಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ವಾಹಿನಿಯಿಂದ ಅಪಾರ ವೆಚ್ಚದಲ್ಲಿ ಈ ರಿಯಾಲಿಟಿ ಶೋ ನಿರ್ಮಾಣವಾಗುತ್ತಿದೆ. ಈ ಶೋನಲ್ಲಿ ಭಾರಿ ಮೊತ್ತದ ಉಡುಗೊರೆಗಳು ಇರಲಿವೆ’ ಎನ್ನುತ್ತಾರೆ.

‘ಸಖತ್‌ ಜೋಡಿ’ ರಿಯಾಲಿಟಿ ಶೋ ಅನ್ನು ಹಾಸ್ಯನಟ ಹಿತೇಶ್‌ ಮತ್ತು ಜನಪ್ರಿಯ ನಿರೂಪಕಿ ಹೇಮಲತಾ ನಿರೂಪಿಸಲಿದ್ದಾರೆ. ಈ ಶೋನ ಚಿತ್ರೀಕರಣಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ವೆಚ್ಚದಲ್ಲಿ ಸೆಟ್‌ ಹಾಕಲಾಗಿದೆ ಎನ್ನುವ ಮಾಹಿತಿ ಅವರಿಂದ ಸಿಗುತ್ತದೆ. ಜೂನ್‌ 5ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 6ಕ್ಕೆ ‘ಸಖತ್‌ ಜೋಡಿ’ ಪ್ರಸಾರವಾಗಲಿದೆ. ‘ಊರ್ಮಿಳಾ’ ಧಾರಾವಾಹಿ ಜೂನ್ 5ರಿಂದ ರಾತ್ರಿ 8.30ಕ್ಕೆ ಮೂಡಿಬರಲಿದೆ. ಖ್ಯಾತ ಚಿತ್ರನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್ ಹಾಗೂ ರಶ್ಮಿತಾ ಪ್ರಧಾನಪಾತ್ರಧಾರಿಗಳು. ‘ನಾನು ಚಿಕ್ಕ ವಯಸ್ಸಿನಲ್ಲಿ ಬಾಲಕಲಾವಿದನಾಗಿ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದೆ. ಈಗ ಈ ಧಾರಾವಾಹಿ ಮೂಲಕ ಕಿರುತೆರೆಗೆ ಮರಳುತ್ತಿದ್ದೇನೆ’ ಎನ್ನುತ್ತಾರೆ ಪಂಕಜ್‌. ಆಶಾರಾಣಿ, ಶಿವು ಈ ಸರಣಿಯ ಇತರೆ ಪ್ರಮುಖ ಕಲಾವಿದರು.

ರವಿ ಆರ್ ಗರಣಿ ಕಥೆ ಬರೆದಿರುವ ‘ಬ್ರಾಹ್ಮಿನ್ಸ್ ಕೆಫೆ’ ವಿಭಿನ್ನ ಕಥಾಹಂದರದ ಸರಣಿ. ಜೂನ್ 5ರಿಂದ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ. ಶಿವು ಎಂಬ ಹೊಸಹುಡುಗ ಈ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸುತ್ತಿದ್ದಾರೆ. ಗಾಯತ್ರಿ ಸೆಲ್ವಂ ಹಾಗೂ ಸೆಲ್ವಂ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದು, ಸಂಜೀವ್‌ ತಗಡೂರು ನಿರ್ದೇಶಿಸಲಿದ್ದಾರೆ. ಶ್ರೀನಾಥ್ ವಸಿಷ್ಠ, ಪ್ರಥಮ ಪ್ರಸಾದ್, ಶಿವು, ರಾಮಸ್ವಾಮಿ ಈ ಸರಣಿಯ ಪ್ರಮುಖ ಪಾತ್ರಧಾರಿಗಳು.

Previous articleಕಥೆಯೊಂದು ಶುರುವಾಗಿದೆ & ನಮ್ಮ ಲಚ್ಚಿ ‘ಸುವರ್ಣ ಸಂಭ್ರಮ’!
Next articleನಿಧಾನ ಗತಿಯಾದರೂ ತಾರ್ಕಿಕ Spy – Detective ‘ದಿ ನೈಟ್ ಏಜೆಂಟ್’

LEAVE A REPLY

Connect with

Please enter your comment!
Please enter your name here