ಸಿನಿಮಾ ಕಥೆ ಹೇಳಬೇಕು, ಅದು ನಿಜಬದುಕಿನ ಕಥೆಯಾಗಿದ್ದರೆ ಸಂತೋಷ. ಅದಕ್ಕೊಂದು ಸಾಮಾಜಿಕ ದೃಷ್ಟಿ ಸಹ ಇದ್ದರೆ ಅದು ಇನ್ನೂ ಒಳ್ಳೆಯ ಚಿತ್ರವಾಗುತ್ತದೆ. ಆದರೆ ಆ ‘ಇನ್ನೂ ಒಳ್ಳೆಯ’ ಮೆಟ್ಟಿಲುಗಳನ್ನೇರದೆಯೂ ಚಿತ್ರಕಥೆ ಹೇಳಬಹುದು ಎನ್ನುವುದಕ್ಕೆ ನಾನು ಈ ವಾರ ವೀಕ್ಷಿಸಿದ ‘The Odd Couple’, ‘Deja vu’ ಸಿನಿಮಾಗಳು ಉದಾಹರಣೆ. ಈ ಎರಡೂ ಸಿನಿಮಾಗಳ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿವೆ.
ಸಿನಿಮಾದ ಮಟ್ಟಿಗೆ ಹೇಳುವುದಾದರೆ ಇದೊಂದು ಸಂಕೀರ್ಣ ಕಾಲ. ಸೇಫ್ ಅಂದುಕೊಂಡಿದ್ದ ಎಲ್ಲಾ ಸಮೀಕರಣಗಳೂ ತಲೆ ಕೆಳಗಾಗುತ್ತಿವೆ. ಹಿಂದಿ ಚಿತ್ರರಂಗವಂತೂ ಒಂದೊಂದು ಹೆಜ್ಜೆಯನ್ನೂ ಅಂಜಿ ಅಂಜಿ ಇಡುವಂತಾಗಿದೆ. ಅವರ ದೊಡ್ಡದೊಡ್ಡ ಹೀರೋಗಳು, ದೊಡ್ಡದೊಡ್ಡ ನಿರ್ಮಾಣ ಸಂಸ್ಥೆಗಳು ತಮ್ಮ ಆ ಠೇಂಕಾರವನ್ನು ಕಳೆದುಕೊಂಡಿವೆ. ಯಾವ ದಕ್ಷಿಣದ ಚಿತ್ರಗಳನ್ನು ಅವರು ಕಡೆಗಣ್ಣಿನಿಂದ ನೋಡುತ್ತಿದ್ದರೋ ಅವು ಅವರ ಎಲ್ಲಾ ಅಂದಾಜು, ಲೆಕ್ಕಾಚಾರಗಳನ್ನೂ ಮೀರಿ ನಿಲ್ಲುತ್ತಿವೆ ಮತ್ತು ಗೆಲ್ಲುತ್ತಿವೆ. ಆದರೆ ಇಲ್ಲೂ ಕೂಡ ಮೇಲ್ನೋಟಕ್ಕೆ ಕಾಣಿಸದ ಹಲವು ಬದಲಾವಣೆಗಳಾಗುತ್ತಿವೆ. ಎರಡು ಮೂರು ತಲೆಮಾರುಗಳಿಂದ ಚಿತ್ರರಂಗದದಲ್ಲಿದ್ದ ಕುಟುಂಬಗಳ ಅತ್ಯಧಿಕ ಪ್ರಯತ್ನ ಮತ್ತು ಪ್ರೊಮೋಷನ್‌ಗಳ ನಡುವೆಯೂ ಅವರ ಚಿತ್ರಗಳು ಉದ್ದಂಡ ಮಲಗುತ್ತಿವೆ.
ನಾಗಾರ್ಜುನ, ನಾಗಚೈತನ್ಯ, ಅಖಿಲ್, ಚಿರಂಜೀವಿ, ಪವನ್ ಕಲ್ಯಾಣ್, ರವಿತೇಜ, ಮೋಹನ್ ಬಾಬು, ರಾಣಾ ದಗ್ಗುಬಾಟಿ, ವಿಜಯ್, ಅಜಿತ್ ಮುಂತಾದ ಅತಿರಥ, ಮಹಾರಥರು ಸೋಲನ್ನು ಅನುಭವಿಸಿದ್ದಾರೆ. ಇವರೆಲ್ಲಾ ಇದುವರೆಗೂ ಅತ್ಯುತ್ತಮ ಚಿತ್ರಗಳನ್ನೇ ಕೊಡುತ್ತಿದ್ದರು ಎಂದೇನಲ್ಲ. ಆದರೆ ಅವು ಎಂತಹ ಚಿತ್ರಗಳಾದರೂ ಸರಿ ಇವರ ಕಾರಣದಿಂದ ಹಿಟ್ ಮತ್ತು ಸೂಪರ್ ಹಿಟ್‌ಗಳಾಗುತ್ತಿದ್ದವು. ಆದರೆ ಈಗ ಈ ಸೂಪರ್ ಹೀರೋಗಳು ನಂಬದಂತಹಾ ಫಲಿತಾಂಶವನ್ನು ಬಾಕ್ಸ್ ಆಫೀಸ್ ನೀಡುತ್ತಿದೆ. ಇಂತಹ ಸೂಪರ್ ಹೀರೋಗಳ ಚಿತ್ರಗಳಲ್ಲಿ ಯಾವ ಮಟ್ಟಿನ ಹಣಹೂಡಿಕೆಯಾಗಿರುತ್ತದೆ ಎಂದರೆ ಅವು ಸೂಪರ್ ಹಿಟ್‌ಗಳಾದರೆ ಮಾತ್ರ ನಿರ್ಮಾಪಕರು ಹಣ ನೋಡಲು ಸಾಧ್ಯ.
ಎನ್‌ಟಿಆರ್, ಎಎನ್‌ಆರ್, ಶಿವಾಜಿ ಗಣೇಶನ್, ಎಂಜಿಆರ್ ಅಥವಾ ನಮ್ಮ ರಾಜಕುಮಾರ್ ಕಾಲದಲ್ಲಿ ಬೆಳಗ್ಗೆ 9 ಗಂಟೆಗೆ ಚಿತ್ರೀಕರಣ ಶುರು ಎಂದರೆ ಎಂಟೂ ಮುಕ್ಕಾಲಿಗೆ ಕಲಾವಿದರು ಮೇಕಪ್ ಧರಿಸಿ ಸೆಟ್‌ನಲ್ಲಿರುತ್ತಿದ್ದರು ಎನ್ನುವ ಕಥೆಗಳನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಚಿತ್ರಕಥೆ, ಬಡ್ಜೆಟ್, ಟೈಂಲೈನ್ ಎಲ್ಲದರಲ್ಲೂ ಸ್ಟುಡಿಯೋಗಳು ನಂತರದಲ್ಲಿ ಹಂಚಿಕಾ ಸಂಸ್ಥೆಗಳು, ನಿರ್ಮಾಪಕರು ಪ್ರಧಾನಪಾತ್ರ ವಹಿಸುತ್ತಿದ್ದ ಕಾಲ ಸರಿದುಹೋಗಿ ಹೀರೋಗಳು ಈಗ ಆ ಸಿಂಹಾಸನವನ್ನು ಏರಿದ್ದಾರೆ. ಕಥೆಗಳಿಗೆ ತಕ್ಕ ಹೀರೋ, ಹೀರೋಯಿನ್‌ಗಳನ್ನು ಆರಿಸುವ ಬದಲು ಹೀರೋ ಇಮೇಜಿಗೆ ತಕ್ಕಂತೆ ಕಥೆ ಬರೆಯುವ, ಕೆಲವೊಮ್ಮೆ ಬರೆದ ಕಥೆಯನ್ನೂ ತಿದ್ದುವ ಪರಿಪಾಠ ನಡೆಯುತ್ತಿವೆ. ಪ್ರೊಡಕ್ಷನ್ ಕಾಸ್ಟ್ ಮಿತಿ ಮೀರುತ್ತಿದೆ. ಇದೇ ಕಾರಣಕ್ಕಾಗಿ ತೆಲುಗು ನಿರ್ಮಾಪಕರು ಇತ್ತೀಚೆಗೆ ಶೂಟಿಂಗ್ ನಿಲ್ಲಿಸಿ ಪ್ರತಿಭಟಿಸಿದ್ದರು. ಚಿರಂಜೀವಿ, ರಾಮ್ ಚರಣ್ ನಟಿಸಿದ ‘ಆಚಾರ್ಯ’ ಚಿತ್ರ ಅಭೂತಪೂರ್ವ ಸೋಲು ಕಂಡು, ಹಂಚಿಕೆದಾರರು ಕಂಗಾಲಾಗಿದ್ದ ಸಮಯದಲ್ಲಿ ಚಿರಂಜೀವಿ ಪತ್ನಿಯೊಡನೆ ಅಮೇರಿಕಾ ಪ್ರವಾಸ ಹೋಗಿ, ವಿಮಾನದ ಬ್ಯುಸಿನೆಸ್ ಕ್ಲಾಸಿನಲ್ಲಿ ತೆಗೆದ ಸೆಲ್ಫಿಯೊಂದನ್ನು ಹಂಚಿಕೊಂಡಾಗ ಅದಕ್ಕಾಗಿ ಭಾರಿ ವಿರೋಧ ಎದುರಿಸಬೇಕಾಯಿತು. ಚಿರಂಜೀವಿಯ ಚಿತ್ರೋದ್ಯಮ ಇತಿಹಾಸದಲ್ಲೇ ಮೊದಲಬಾರಿಗೆ ಹಂಚಿಕೆದಾರರು ಅವರ ಮನೆಯ ಮುಂದೆ ಮುಷ್ಕರ ನಡೆಸಿ ನಷ್ಟಪರಿಹಾರಕ್ಕಾಗಿ ಆಗ್ರಹಿಸಿದರು. ಅದೇ ರೀತಿಯಲ್ಲಿ ಮೋಹನ್ ಬಾಬು ಅವರ ‘ಸನ್ ಆಫ್ ಇಂಡಿಯಾ’ ಚಿತ್ರದ ಸೋಲು ಟ್ರೋಲ್‌ಗಳಿಗೆ, ಮೀಮ್‌ಗಳಿಗೆ ಹಬ್ಬವಾಯಿತು.
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಇಂದಿಗೂ ಕಥೆಯನ್ನು ಆಧರಿಸಿ ಚಿತ್ರಗಳು ಬರುತ್ತಲಿವೆ ಮತ್ತು ಅನೇಕ ಹೊಸಹೊಸ ನಿರ್ದೇಶಕರು ತಮ್ಮ ಹೊಸಹೊಸ ಆಲೋಚನೆಗಳ ಮೂಲಕ, ಸಿದ್ಧಮಾದರಿಗಳನ್ನು ಒಡೆಯುವುದರ ಮೂಲಕ, ಹೊಸಚಿತ್ರಗಳನ್ನು ಕಟ್ಟುತ್ತಿದ್ದಾರೆ ಮತ್ತು ಓಟೀಟಿ ಅವುಗಳಿಗೆ ವೇದಿಕೆಯನ್ನು ಒದಗಿಸುತ್ತಿದೆ ಎನ್ನುವುದು ಸಮಾಧಾನದ ವಿಷಯ. ಈ ದಿಸೆಯಲ್ಲಿ ನಾನು ಈ ವಾರ ನೋಡಿದ ಎರಡು ಚಿತ್ರಗಳನ್ನು ಕುರಿತು ಬರೆಯಬೇಕಿದೆ. ಕಳೆದ ವಾರ ಹೊಸ ನಿರ್ದೇಶಕಿ ಇಂದು ವಿ.ಎಸ್. ನಿರ್ದೇಶನದ 19(1)a ಚಿತ್ರದ ಬಗ್ಗೆ ಬರೆದಿದ್ದೆ. ಈ ವಾರ ನೋಡಿದ The Odd Couple ಮತ್ತು De javu ಚಿತ್ರಗಳನ್ನು ಕುರಿತು ಈಗ ಬರೆಯುತ್ತಿದ್ದೇನೆ. ಇವೆರಡೂ ಅತುತ್ತಮ ಚಿತ್ರಗಳೆ, ಜಾಗತಿಕ ಚಿತ್ರಗಳ ಮಟ್ಟದಲ್ಲಿ ನಿಲ್ಲಬಲ್ಲಂತಹ ಚಿತ್ರಗಳೆ ಎಂದರೆ ನಾನು ಹೌದು ಎನ್ನಲಾರೆ, ಏಕೆಂದರೆ ಇವೆರಡೂ ಚಿತ್ರಗಳಿಗೂ ತಮ್ಮದೇ ಆದ ಮಿತಿಗಳು, ದೌರ್ಬಲ್ಯಗಳು ಇವೆ. ಆದರೆ ಇವುಗಳ ನಡುವೆಯೂ ಅವು ಹೊಸತನದ ಕಥೆಯೊಂದನ್ನು ಹೇಳುವ ಪ್ರಯತ್ನ ಮಾಡಿವೆ.
ನಾನು ಮೊದಲು ನೋಡಿದ ಚಿತ್ರ 2019ರ ಹಿಂದಿ ಭಾಷೆಯ ‘The Odd Couple’. ಇದು Amazon Primeನಲ್ಲಿ ಸ್ಟ್ರೀಂ ಆಗುತ್ತಿದೆ. ಚಿತ್ರವನ್ನು ಪ್ರಶಾಂತ್ ಜೊಹಾರಿ ನಿರ್ದೇಶಿಸಿದ್ದಾರೆ. ವಿಜಯ್ ರಾಜ್, ಸುಚಿತ್ರಾ ಕೃಷ್ಣಮೂರ್ತಿ, ಮನೋಜ್ ಪಾಹ್ವಾ, ದಿವ್ಯೇಂದು ಶರ್ಮಾ, ಪ್ರಣತಿ ರಾಯ್ ಮುಂತಾದವರು ನಟಿಸಿರುವ ಈ ಚಿತ್ರದ ಕಥೆ ವಿಶಿಷ್ಟವಾಗಿದೆ. ದೇಶ ಬಿಟ್ಟು, ಜರ್ಮನಿಯಲ್ಲಿ ನೆಲೆಸಿರುವ ಪೇಂಟರ್ ಒಬ್ಬ ವರ್ಷಗಳ ನಂತರ ಭಾರತಕ್ಕೆ ಹಿಂದಿರುಗುತ್ತಾನೆ. ತನ್ನದೇ ಆದ ಭಾವನಾತ್ಮಕ ಕಾರಣಗಳಿಗಾಗಿ ಆತ ಇಲ್ಲಿ ಒಂದು ಕಟ್ಟಡವನ್ನು ಖರೀದಿಸಬೇಕಾಗಿದೆ. ಸಿದ್ಧಾರ್ಥನಂತೆ ನಡುರಾತ್ರಿಯಲ್ಲಿ ಎದ್ದು ಊರು ಬಿಟ್ಟು ಹೋಗಿರುವ ಅವನು ಹೋಗುವಾಗ ಹೆಂಡತಿಗೆ ಒಂದು ಮಾತೂ ಹೇಳಿರುವುದಿಲ್ಲ. ಏಳುವರ್ಷಗಳ ಅವನ ಅನುಪಸ್ಥಿತಿಯ ಕಾರಣದಿಂದ ಹೆಂಡತಿ ವಿಚ್ಛೇದನವನ್ನು ತೆಗೆದುಕೊಂಡಿದ್ದಾಳೆ. ಈಗ ಅವನು ಜರ್ಮನಿಯ ನಾಗರೀಕನಾಗಿರುವುದರಿಂದ ಅವನು ಇಲ್ಲಿ ಆಸ್ತಿ ಖರೀದಿ ಮಾಡುವಂತಿಲ್ಲ. ಬ್ರೋಕರ್ ಒಂದು ಜುಗಾಡ್ ಹೇಳಿಕೊಡುತ್ತಾನೆ. ಇಲ್ಲಿ ಯಾರನ್ನಾದರೂ ಮದುವೆ ಆಗಿ, ಆಸ್ತಿ ತೆಗೆದುಕೊಳ್ಳಿ, ಆಮೇಲೆ ಅದನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ! ಹೇಗೋ ಹೆಂಡತಿಯನ್ನು ಮರುಮದುವೆಗೆ ಒಪ್ಪಿಸುತ್ತಾನೆ.
ಅದೇ ಕಟ್ಟಡದಲ್ಲಿ ಇನ್ನೊಂದು ಜೋಡಿ ಸಹ-ವಾಸದಲ್ಲಿದ್ದಾರೆ. ಆ ಹುಡುಗಿಗೆ ಹೇಗಾದರೂ ಮಾಡಿ ಗೆಳತಿಗಿಂತ ಮೊದಲು ಮದುವೆಯಾಗಿಬಿಡುವ ಹಟ. ಹುಡುಗನನ್ನು ಒಪ್ಪಿಸುತ್ತಾಳೆ. ಕಲಾವಿದನ ಹೆಂಡತಿ ಮತ್ತು ಈ ಹುಡುಗಿ ಇಬ್ಬರ ಹೆಸರೂ ನಿವೇದಿತಾ. ಒಬ್ಬ ಗುಮಾಸ್ತನ ತಪ್ಪಿನಂದಾಗಿ ಆ ಹುಡುಗಿ ನಡುವಯಸ್ಸಿನ ಕಲಾವಿದನ ಹೆಂಡತಿ ಮತ್ತು ಈ ಹುಡುಗ ನಡುವಯಸ್ಸಿನ ಆ ಬರಹಗಾರ್ತಿಯ ಗಂಡ ಎನ್ನುವಂತೆ ಮ್ಯಾರೇಜ್ ಸರ್ಟಿಫಿಕೇಟ್ ಕೈಗೆ ಬರುತ್ತದೆ. ಅದನ್ನು ಸರಿಪಡಿಸಲೆಂದು ಹೋಗಿ, ಆಗದೆ ಇರುವಾಗ ಆ ಕಛೇರಿಗೆ ಚಹಾ ಸರಬರಾಜು ಮಾಡುವ ಹುಡುಗ ಇನ್ನೊಂದು ಜುಗಾಡ್ ಹೇಳುತ್ತಾನೆ – ಇಲ್ಲಿ ಎಲ್ಲವೂ ಸಾಧ್ಯ! ‘ಒಂದು ವರ್ಷ ಈಗಿರುವಂತೆಯೇ ಕಳೆದುಬಿಡಿ. ಆಮೇಲೆ ಡಿವೋರ್ಸ್ ತೆಗೆದುಕೊಳ್ಳಿ. ಅದೇ ಸುಲಭ’ ಎನ್ನುವ ಅವನ ಮಾತಿನಂತೆಯೇ ಆ ಎರಡೂ ದಂಪತಿ ವರ್ಷವಾದ ಮೇಲೆ ವಿಚ್ಛೇದನಕ್ಕೆ ಬರುತ್ತಾರೆ. ಆದರೆ ಅಲ್ಲಿಂದ ಕಥೆ ಸ್ವಲ್ಪ ಹೊರಳಿಕೊಳ್ಳುತ್ತದೆ. ಚಿತ್ರ ಅಲ್ಲಲ್ಲ ಸ್ವಲ್ಪ ಉಪದೇಶ ಕೊಡುತ್ತದೆ ಮತ್ತು ನಿರೀಕ್ಷಿತ ಹಾದಿಯನ್ನೇ ಹಿಡಿಯುತ್ತದೆ ಎನ್ನುವುದು ಹೌದಾದರೂ ಚಿತ್ರದ ಕಥಾವಸ್ತುವಿನ ಭಿನ್ನತೆ ಮತ್ತು ಮೊದಲರ್ಧ ಗಮನ ಸೆಳೆಯುತ್ತದೆ.
ಹಾಗೆಯೇ ಇಷ್ಟವಾದ ಇನ್ನೊಂದು ಸಿನಿಮಾ 2022ರಲ್ಲಿ ಬಿಡುಗಡೆಯಾದ, ಅರವಿಂದ್ ಶ್ರೀನಿವಾಸನ್ ನಿರ್ದೇಶನದ ತಮಿಳಿನ ‘De javu’. ಇದೂ ಸಹ Amazon Prime ನಲ್ಲಿ ಸ್ಟ್ರೀಂ ಆಗುತ್ತಿದೆ. ಚಿತ್ರದ ಮುಖ್ಯ ಆಕರ್ಷಣೆ ನಮ್ಮ ಅಚ್ಯುತ್ ಕುಮಾರ್. ಕುಡುಕ ಕಥೆಗಾರನಾಗಿ ಅವರ ಅಭಿನಯ ಟಾಪ್ ಕ್ಲಾಸ್. ಜೊತೆಗೆ ಅರುಳ್ ನಿಧಿ, ಮೈಮ್ ಗೋಪಿ, ಮಧುಬಾಲ ಮುಂತಾದವರು ನಟಿಸಿದ್ದಾರೆ.
ಒಂದು ರಾತ್ರಿ ಚಿತ್ರದ ಕಥೆ ಪ್ರಾರಂಭವಾಗುವಾಗ ಕುಡಿದು ತೂರಾಡುವ ಕಥೆಗಾರನೊಬ್ಬ ಪೋಲೀಸ್ ಸ್ಟೇಷನ್ನಿಗೆ ಬಂದು ಒಂದು ಕಂಪ್ಲೆಂಟ್ ಕೊಡಬೇಕು ಎನ್ನುತ್ತಾನೆ. ಅವನ ಕಂಪ್ಲೆಂಟ್ ವಿಚಿತ್ರವಾಗಿದೆ. ಅವನ ಕಥೆಯ ಪಾತ್ರಗಳು ಅವನಿಗೆ ಕರೆ ಮಾಡಿ, ಅವನು ಕಥೆಯನ್ನು ಬರೆದ ಕಾರಣಕ್ಕೆ ತಮಗೆ ತೊಂದರೆ ಆಗಿದೆ ಎಂದು ಹೇಳಿ ಅವನನ್ನು ಬೆದರಿಸುತ್ತಿರುತ್ತವೆ. ಠಾಣೆಯ ರೈಟರ್ ಅವನನ್ನು ಸಮಾಧಾನಪಡಿಸಿ ಮನೆಗೆ ಕಳಿಸುತ್ತಾನೆ. ಮನೆಗೆ ಬಂದ ರೈಟರ್ ಇನ್ನೊಂದಿಷ್ಟು ಬಸಿದುಕೊಂಡು ತನ್ನ ಕಾದಂಬರಿಯನ್ನು ಮುಂದುವರೆಸುತ್ತಾನೆ. ಅವನ ಕಥೆಯಲ್ಲಿ ಪೂಜಾ ಎನ್ನುವ ಹೆಣ್ಣುಮಗಳನ್ನು ಮೂವರು ಕಿಡ್ನಾಪ್ ಮಾಡಿರುತ್ತಾರೆ. ಕಾಡಿನಲ್ಲಿ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಆಕೆ ಪೋಲೀಸ್ ಸ್ಟೇಷನ್ನಿಗೆ ಕರೆ ಮಾಡುತ್ತಾಳೆ. ಅಷ್ಟರಲ್ಲಿ ಕರೆಂಟ್ ಹೋಗಿ, ಕಥೆ ಮುಂದುರಿಸಲಾರದೆ ಕಥೆಗಾರ ಮಲಗುವಾಗ ಬೆಳಗಿನ ಜಾವ ಮೂರಾಗಿರುತ್ತದೆ. ಬೆಳಗ್ಗೆ ಪೋಲೀಸರು ಬಂದು ಮನೆ ಬಾಗಿಲು ತಟ್ಟಿ ಅವನನ್ನು ಏಳಿಸುತ್ತಾರೆ. ಇವನು ರಾತ್ರಿ ಕಥೆ ಬರೆಯುತ್ತಿದ್ದ ಅದೇ ಸಮಯದಲ್ಲಿ ಪೂಜಾ ಎನ್ನುವ ಹುಡುಗಿಯೊಬ್ಬಳು ಕಿಡ್ನಾಪ್ ಆಗಿದ್ದೇನೆ ಎಂದು ಪೋಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿರುತ್ತಾಳೆ. ಅಷ್ಟೇ ಅಲ್ಲ, ಈ ಕಥೆಗಾರನ ಹೆಸರನ್ನೂ ಹೇಳಿರುತ್ತಾಳೆ. ಅವನನ್ನು ಎಳೆದುಕೊಂಡು ಹೋಗಿ ‘ವಿಚಾರಣೆ’ ನಡೆಸಲು ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬ ಬರುತ್ತಾನೆ.
ಸರಿಯಾದ ವಾರೆಂಟ್ ಇಲ್ಲದೆ ಬಂದು ಈ ಇಳಿವಯಸ್ಕನನ್ನು ಪೊಲೀಸರು ಬಲವಂತವಾಗಿ ಕರೆದುಕೊಂಡು ಹೋಗುತ್ತಿರುವುದನ್ನು ಜನ ಪ್ರತಿಭಟಿಸಿ, ಅದೊಂದು ವೈರಲ್ ಸುದ್ದಿಯಾಗುತ್ತದೆ. ಆ ಪೊಲೀಸ್ ಆಫೀಸರ್ ನನ್ನು ವಿಚಾರಿಸಲು ಕರೆಸುವ ಮಹಿಳಾ ಡಿಜಿಪಿ ಆ ಹುಡುಗಿ ಕರೆ ಮಾಡಿದ ರೆಕಾರ್ಡಿಂಗ್ ಕೇಳಿದರೆ ಅದು ಆಕೆಯ ಮಗಳ ದನಿ! ಅಲ್ಲಿಂದ ವಿಚಾರಣೆಗೆ ಬಲ ಬರುತ್ತದೆ. ಮಾಮೂಲಿ ಹೆಣ್ಣುಮಗಳೊಬ್ಬಳು ತಪ್ಪಿಸಿಕೊಳ್ಳುವುದು ಮತ್ತು ಸಾಮಾಜಿಕವಾಗಿ ಒಳ್ಳೆಯ ಸ್ಥಾನದಲ್ಲಿರುವವರ ಮನೆಮಗಳು ತಪ್ಪಿಸಿಕೊಳ್ಳುವುದು ಒಂದೇ ಏನು? ಇದಕ್ಕಾಗಿ ಒಬ್ಬ ವಿಶೇಷ ತನಿಖಾಧಿಕಾರಿಯನ್ನು ಸಹ ನೇಮಿಸಲಾಗುತ್ತದೆ. ಆದರೆ ಕಥೆ ಅಲ್ಲಿಂದ ವಿಚಿತ್ರ ತಿರುವನ್ನು ತೆಗೆದುಕೊಳ್ಳುತ್ತದೆ. ಆ ಕಥೆಗಾರ ಏನೇನು ಬರೆಯುತ್ತಾನೋ, ನಿಜ ಜೀವನದಲ್ಲಿ ಸಣ್ಣಸಣ್ಣ ವಿವರಗಳೂ ಸಹ ಕರಾರುವಾಕ್ಕಾಗಿ ಥೇಟ್ ಹಾಗೆಯೇ ನಡೆಯುತ್ತಾ ಹೋಗುತ್ತದೆ! ಹಾಗಾದರೆ ನಿಜಕ್ಕೂ ಆ ಕಥೆಗಾರನಿಗೆ ಅತೀಂದ್ರೀಯ ಶಕ್ತಿ ಇದೆಯೆ? ಇದು ಪ್ರಶ್ನೆ.
ಥ್ರಿಲ್ಲರ್ ಚಿತ್ರಗಳ ಒಂದು ಸಮಸ್ಯೆ ಎಂದರೆ ಅವರು ಎಷ್ಟು ರೋಮಾಂಚಕಾರಿಯಾಗಿ ಕಥೆಯನ್ನು ಕಟ್ಟುತ್ತಾ ಹೋಗುತ್ತಾರೋ ಕಥೆಗೆ ಅದಕ್ಕೆ ಹೊಂದುವಂತಹ ಕೊನೆಯನ್ನು ಕೊಡುವುದು. ಬಹಳಷ್ಟ ಥ್ರಿಲ್ಲರ್ ಚಿತ್ರಗಳು, ವೆಬ್ ಸರಣಿಗಳು ಇದರಲ್ಲಿ ಸೋತು ಬಿಡುತ್ತವೆ. ಈ ಚಿತ್ರ ಸಹ ಅದಕ್ಕೆ ಹೊರತಲ್ಲ. ಚಿತ್ರದ ಸಂಗೀತ ಮತ್ತು ಛಾಯಾಗ್ರಹಣ ಸೊಗಸಾಗಿದೆ. ತನಿಖಾಧಿಕಾರಿಯ ಪಾತ್ರದಲ್ಲಿ ಅರುಳ್ ನಿಧಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಹಲವು ಶೇಡ್‌ಗಳಿರುವ ಪಾತ್ರವನ್ನು ನಿರ್ವಹಿಸುವುದರಲ್ಲಿ ಮಧುಬಾಲ ದಯನೀಯವಾಗಿ ಸೋಲುತ್ತಾರೆ. ಚಿತ್ರದ ಇನ್ನೊಂದು ಮಿತಿ ಎಂದರೆ ಈ ಥ್ರಿಲ್ಲರ್ ಚಿತ್ರಕ್ಕೆ ಒಂದು ಭಾವನಾತ್ಮಕ ಆಯಾಮ ಒದಗಿಸುವುದರಲ್ಲಿ ನಿರ್ದೇಶಕರು ಯಶಸ್ವಿ ಆಗದೆ ಇರುವುದು. ಇದು ಕೇವಲ ಮೆದುಳಿನ ಲೆಕ್ಕಾಚಾರವಾಗುತ್ತದೆಯೇ ಹೊರತು ಮನಸನ್ನು ತಾಕುವುದಲ್ಲ. ಸನ್ನಿವೇಶಗಳು ಏಕಮುಖವಾಗಿ ಚಲಿಸುತ್ತವೆಯೇ ಹೊರತು ಅಲ್ಲಿ ಸಂಘರ್ಷ ಕಂಡುಬರುವುದಿಲ್ಲ. ಆದರೆ ಈ ಎಲ್ಲ ಮಿತಿಗಳ ನಡುವೆಯು ಇದು ನೋಡಬಹುದಾದ ಚಿತ್ರವಾಗಿದೆ.
ಸಿನಿಮಾ ಕಥೆ ಹೇಳಬೇಕು, ಅದು ನಿಜಬದುಕಿನ ಕಥೆಯಾಗಿದ್ದರೆ ಸಂತೋಷ. ಅದಕ್ಕೊಂದು ಸಾಮಾಜಿಕ ದೃಷ್ಟಿ ಸಹ ಇದ್ದರೆ ಅದು ಇನ್ನೂ ಒಳ್ಳೆಯ ಚಿತ್ರವಾಗುತ್ತದೆ. ಆದರೆ ಆ ‘ಇನ್ನೂ ಒಳ್ಳೆಯ’ ಮೆಟ್ಟಿಲುಗಳನ್ನೇರದೆಯೂ ಚಿತ್ರಕಥೆ ಹೇಳಬಹುದು ಎನ್ನುವುದಕ್ಕೆ ನಾನು ಈ ವಾರ ನೋಡಿದ ಈ ಎರಡೂ ಚಿತ್ರಗಳೂ ಸಾಕ್ಷಿ. ಬಹುಶಃ ಅದ್ದೂರಿ ಬಡ್ಜೆಟ್ ಇಲ್ಲದಿದ್ದರೂ ಕಥೆ ಮತ್ತು ನಿರೂಪಣೆಯಲ್ಲಿ ಹೊಸತನವನ್ನು ಕೊಡಬಲ್ಲ, ಗಟ್ಟಿನೆಲೆಯನ್ನು ಹೊಂದಿರುವ ಚಿತ್ರಗಳು ಚಿತ್ರರಂಗವನ್ನು ಈ ಕಾಲಾಪ್ರವಾಹದಿಂದ ದಾಟಿಸುವಲ್ಲಿ ನೆರವಾಗಬಲ್ಲವು.