ಜಾಗತಿಕ ಸಿನಿಮಾದ ದಂತಕತೆ ಚಾಪ್ಲಿನ್ ಕುರಿತ ‘ದಿ ರಿಯಲ್ ಚಾರ್ಲಿ ಚಾಪ್ಲಿನ್’ ಡಾಕ್ಯುಮೆಂಟರಿಯ ಟ್ರೈಲರ್ ಬಿಡುಗಡೆಯಾಗಿದೆ. ಮೇರು ನಟನ ಆಡಿಯೋ, ವೀಡಿಯೋಗಳ ಜೊತೆ ಮರುಸೃಷ್ಟಿಸಿದ ಸನ್ನಿವೇಶಗಳ ಅಪರೂಪದ ಸಾಕ್ಷ್ಯಚಿತ್ರವಿದು.
ಅಮೇರಿಕಾ ಟೀವಿ ನೆಟ್‌ವರ್ಕ್ ‘ಶೋಟೈಂ’ ನಿರ್ಮಿಸಿರುವ ಚಾರ್ಲಿ ಚಾಪ್ಲಿನ್ ಕುರಿತ ‘ದಿ ರಿಯಲ್ ಚಾರ್ಲಿ ಚಾಪ್ಲಿನ್’ ಡಾಕ್ಯುಮೆಂಟರಿಯ ಟ್ರೈಲರ್ ಬಿಡುಗಡೆಯಾಗಿದೆ. ಜೇಮ್ಸ್ ಸ್ಪಿನ್ನಿ ಮತ್ತು ಪೀಟರ್ ಮಿಡ್ಲ್’ಟನ್ ನಿರ್ದೇಶನದ ಸಾಕ್ಷ್ಯಚಿತ್ರದಲ್ಲಿ ಚಾರ್ಲಿ ಕುರಿತಂತೆ ಜನರಿಗೆ ಗೊತ್ತಿರದ ಅಪರೂಪದ ವಿಷಯ, ಆಡಿಯೋ, ವೀಡಿಯೋಗಳು ಕಾಣಸಿಗಲಿವೆ. ವಿಕ್ಟೋರಿಯಾ ಲಂಡನ್‌ನ ಸ್ಲಂನಿಂದ ಹಾಲಿವುಡ್‌ನ ಜನಪ್ರಿಯ ತಾರೆಯಾಗುವ ಹಾದಿಯಲ್ಲಿನ ಚಾಪ್ಲಿನ್ ಬದುಕು ಇಲ್ಲಿ ಅನಾವರಣಗೊಳ್ಳಲಿದೆ. ಟ್ರೈಲರ್‌ನಲ್ಲಿ ಮಹಾತ್ಮಾ ಗಾಂಧೀಜಿ ಅವರನ್ನು ಚಾಪ್ಲಿನ್ ಭೇಟಿಯಾದ ಸಂದರ್ಭದ ಫೋಟೋ ಇದೆ.
ಚಾಪ್ಲಿನ್ ಒಬ್ಬ ನಟನಾಗಿಷ್ಟೇ ಜಗತ್ತಿಗೆ ಗೊತ್ತಿರುವ ವ್ಯಕ್ತಿಯಲ್ಲ. ತಮ್ಮ ಜೀವಪರ, ಯುದ್ಧವಿರೋಧಿ ಸಿನಿಮಾಗಳ ಮೂಲಕ ಅವರು ಮಾನವತಾವಾದಿ ಎಂದು ಕರೆಸಿಕೊಂಡವರು. ಅವರು ನಟಿಸಿ, ನಿರ್ದೇಶಿಸಿದ ಸಿಟಿ ಲೈಟ್ಸ್, ದಿ ಗೋಲ್ಡ್ ರಷ್, ದಿ ಗ್ರೇಟ್ ಡಿಕ್ಟೇಟರ್, ಲೈಮ್‌ಲೈಟ್ ಸೇರಿದಂತೆ ಅವರ ಹಲವು ಚಿತ್ರಗಳಲ್ಲಿ ಈ ಅಂಶಗಳನ್ನು ನಾವು ಕಾಣಬಹುದು. ‘ದಿ ಲಿಟ್ಲ್ ಟ್ರ್ಯಾಂಪ್’ ಐಕಾನಿಕ್ ಪಾತ್ರದ ಮೂಲಕ ಜಗತ್ತು ಅವರನ್ನು ನೆನಪಿಸಿಕೊಳ್ಳುತ್ತದೆ. ಡಾಕ್ಯುಮೆಂಟರಿಯ ಅಧಿಕೃತ ಸಿನಾಪ್ಸಿಸ್ ಹೀಗೆ ಹೇಳುತ್ತದೆ – “ಇಲ್ಲಿಯವರೆಗೆ ಯಾರಿಗೂ ಲಭ್ಯವಾಗಿರದ ಚಾರ್ಲಿ ಅವರ ಆಡಿಯೋ, ಕುಟುಂಬದ ಸದಸ್ಯರ ಮಾಹಿತಿಯ ಜೊತೆಗೆ ಕೆಲವು ಸನ್ನಿವೇಶಗಳ ಮರುಚಿತ್ರಣದೊಂದಿಗೆ ‘ರಿಯಲ್ ಚಾರ್ಲಿ ಚಾಪ್ಲಿನ್’ರನ್ನು ಕಾಣುವ ಪ್ರಯತ್ನವಿದು. ಸ್ಲಂನಲ್ಲಿ ಹುಟ್ಟಿ ಬೆಳೆದು ಜಾಗತಿಕ ತಾರೆಯಾಗಿ ಬೆಳೆದ ಅಚ್ಚರಿಯ ಘಟನಾವಳಿಗಳು ಇಲ್ಲಿರಲಿವೆ. ಈ ಸಾಕ್ಷ್ಯಚಿತ್ರ ಶೋಟೈಂನಲ್ಲಿ ಡಿಸೆಂಬರ್ 11ರಂದು ಪ್ರಸಾರವಾಗಲಿದೆ”










