ಸರಣಿಯಲ್ಲಿ ಕಾಜೋಲ್‌ ಹೈಲೈಟ್ ಆಗಿದ್ದರೂ ಸಣ್ಣ ಪುಟ್ಟ ಪಾತ್ರಗಳೂ ಅಚ್ಚುಕಟ್ಟಾಗಿ ತಮ್ಮ ಕೆಲಸ ನಿರ್ವಹಿಸಿವೆ. ನೀವು ‘ದಿ ಗುಡ್ ವೈಫ್’ ಅನ್ನು ವೀಕ್ಷಿಸಿದ್ದರೆ, ‘ದಿ ಟ್ರಯಲ್’ ಮೂಲ ಆವೃತ್ತಿಯ ತೆಳು ಆವೃತ್ತಿಯಂತೆ ತೋರುತ್ತದೆ. ಅದಲ್ಲ ಎಂದಾದರೆ ಇದೊಂದು ಒಳ್ಳೆ ವೆಬ್ ಸರಣಿ ಎಂದು ಹೇಳಲು ಅಡ್ಡಿಯಿಲ್ಲ. ‘ದಿ ಟ್ರಯಲ್’ DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಕಾಜೋಲ್ ಪ್ರಧಾನ ಪಾತ್ರದಲ್ಲಿ ಇದ್ದಾರೆ ಎಂಬ ಕಾರಣದಿಂದಲೇ ‘ದಿ ಟ್ರಯಲ್’ ವೆಬ್ ಸರಣಿ ನೋಡಿದ್ದು. ಪ್ರಶಸ್ತಿ-ವಿಜೇತ ಅಮೆರಿಕನ್ ಸರಣಿ ‘ದಿ ಗುಡ್ ವೈಫ್‌’ನ ದೇಸೀ ಆವೃತ್ತಿಯೇ ‘ದಿ ಟ್ರಯಲ್’. DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿರುವ ಸುಪರ್ಣ್ ಎಸ್ ವರ್ಮಾ ನಿರ್ದೇಶಿಸಿರುವ ಎಂಟು ಸಂಚಿಕೆಗಳ ಈ ಸರಣಿ, ‘ದಿ ಗುಡ್ ವೈಫ್‌’ನಂತೆ ಉತ್ತಮವಾಗಿ ಪ್ರಾರಂಭವಾಗುತ್ತದೆ. ನೊಯೋನಿಕಾಳ (ಕಾಜೋಲ್) ಪತಿ ಅಡಿಷನಲ್ ಜಡ್ಜ್ ರಾಜೀವ್ (ಜಿಶ್ಶು ಸೇನ್‌ಗುಪ್ತಾ), ಲೈಂಗಿಕ ಹಗರಣದಲ್ಲಿ ಬಂಧಿಸಲ್ಪಟ್ಟಾಗ ಅಲ್ಲಿಯವರೆಗೆ ಖುಷಿಖುಷಿಯಾಗಿದ್ದ ಆ ಪುಟ್ಟ ಸಂಸಾರ ಬುಡಮೇಲು ಆಗಿಬಿಡುತ್ತದೆ. ಗಂಡನ ಪ್ರಕರಣದಿಂದಾಗಿ ಸಮಾಜದಲ್ಲಿ ತಲೆ ಎತ್ತಿ ನಡೆಯಲು ಕಷ್ಟ ಎಂಬ ಪರಿಸ್ಥಿತಿ. ಹೋದಲ್ಲಿ ಬಂದಲ್ಲಿ ಸೆಕ್ಸ್ ಟೇಪ್ ಬಗ್ಗೆಯೇ ಚರ್ಚೆ. ರಾಜೀವ್ ಅವರ ಸೆಕ್ಸ್ ವಿಡಿಯೊವನ್ನು SNP ನ್ಯೂಸ್ ವಾಹಿನಿಯಲ್ಲಿ ಪದೇ ಪದೇ ತೋರಿಸುತ್ತಿರುವ ಟಿವಿ ನಿರೂಪಕ ದಕ್ಷ್ (ಅತುಲ್ ಕುಮಾರ್). ಇತ್ತ ರಾಜೀವ್ ಬಂಧನವಾಗುತ್ತಿದ್ದಂತೆ ಅವರ ಬ್ಯಾಂಕ್ ಖಾತೆಗಳು, ಸವಲತ್ತು ಎಲ್ಲವನ್ನೂ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.

ಇಬ್ಬರು ಹೆಣ್ಣುಮಕ್ಕಳು, ಗಂಡನಿಗೆ ಸೆರಮನೆವಾಸ. ಒಂದು ಕಾಲದಲ್ಲಿ ನುರಿತ ವಕೀಲೆಯಾಗಿದ್ದ ನೊಯೋನಿಕಾ ಅವಮಾನ, ನೋವು, ಸಿಟ್ಟು ಎಲ್ಲವನ್ನೂ ನುಂಗಿ ತಾನು ವಾಸವಾಗಿದ್ದ ಮನೆಯನ್ನು ತೊರೆದು ಬೇರೆಡೆ ಮನೆ ಮಾಡುತ್ತಾಳೆ. ಬದುಕು ಸಾಗಿಸಬೇಕು, ಗಂಡನ ಕಡೆಯಿಂದ ಬರುವ ಎಲ್ಲಾ ಸವಲತ್ತುಗಳು ನಿಂತುಹೋಗಿವೆ. ಮನೆ, ಮಕ್ಕಳು ಸಂಸಾರದಲ್ಲೇ ಖುಷಿ ಕಂಡಿದ್ದ ಆಕೆ ಮತ್ತೆ ಕೆಲಸ ಹುಡುಕಲು ಶುರು ಮಾಡುತ್ತಾಳೆ. ಆದರೆ ಗಂಡನ ಪ್ರಕರಣದಿಂದಾಗಿ ಆಕೆಗೆ ಕೆಲಸ ನೀಡಲು ಸಂಸ್ಥೆಗಳು ಹಿಂಜರಿಯುತ್ತವೆ. ಈ ಕಷ್ಟದ ಹೊತ್ತಲ್ಲಿ ಆಕೆಗೆ ನೆರವು ನೀಡಲು ಮುಂದಾಗಿದ್ದು ಆಕೆಯ ಮಾಜಿ ಬಾಯ್‌ಫ್ರೆಂಡ್‌ ವಿಶಾಲ್ (ಅಲಿ ಖಾನ್). ಮಾಲಿನಿ ಖನ್ನಾ (ಶೀಬಾ ಚಡ್ಡಾ) ಜತೆ ಪಾಲುದಾರನಾಗಿ ಕಾನೂನು ಸಲಹಾ ಸಂಸ್ಥೆ ನಡೆಸುತ್ತಿದ್ದಾನೆ ವಿಶಾಲ್. ಅಲ್ಲಿ ಜೂನಿಯರ್ ವಕೀಲರಾಗಿ ನೊಯೋನಿಕಾಗೆ ಕೆಲಸ ಸಿಗುತ್ತದೆ. ಅದೇ ಕಂಪನಿಯಲ್ಲಿ ಧೀರಜ್ (ಗೌರವ್ ಪಾಂಡೆ) ಕೂಡಾ ಜೂನಿಯರ್ ಲಾಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಗೆಳೆತನ – ಸಂಬಂಧ ಹೇಳಿ ಕೆಲಸ ಗಿಟ್ಟಿಸಿಕೊಂಡವಳು ನೊಯೋನಿಕಾ ಎಂಬ ಅಸಮಾಧಾನ ಧೀರಜ್‌ಗೆ ಇದೆ. ಇತ್ತ ಅನುಭವೀ ವಕೀಲೆಯಾಗಿದ್ದ ನೊಯೋನಿಕಾ 10 ವರ್ಷಗಳ ಬ್ರೇಕ್‌ನ ನಂತರ ಜ್ಯೂನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಮತ್ತೆ ಶುರು ಮಾಡಿದ್ದಾಳೆ. ಮುಂದೇನಾಗುತ್ತೆ?

ಕೆಲಸ ಸೇರಿದ ಕೂಡಲೇ ಆಕೆಗೆ ಹೈ ಪ್ರೊಫೈಲ್ ಕೇಸೊಂದನ್ನು ವಾದಿಸುವ ಅವಕಾಶ ಸಿಕ್ಕಿಬಿಡುತ್ತದೆ. ಕ್ರಿಕೆಟಿಗ ಮೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಆತನ ಗರ್ಲ್‌ಫ್ರೆಂಡ್‌ ಜೂಹಿ ಭಾಟಿಯಾ ಆರೋಪಿ. ಗರ್ಲ್‌ಫ್ರೆಂಡ್ ಜತೆಗಿನ ಜಗಳದಿಂದಾಗಿಯೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಜೂಹಿ ಮೇಲೆ ಹೊರಿಸಲಾಗಿದೆ. ವಾಹಿನಿಯೊಂದು ಆಕೆಯೇ ಅಪರಾಧಿ ಎಂದು ಘೋಷಿಸುತ್ತದೆ. ದಿನಕ್ಕೊಂದು ಹ್ಯಾಶ್‌ಟ್ಯಾಗ್‌ ಬಳಸಿ ಟೀವಿ ವಾಹಿನಿ ನಡೆಸುವ ಅಭಿಯಾನ, ಜೂಹಿಯ ಮೇಲೆ ಆರೋಪ ಹೊರಿಸಿ ಆಕೆಯೇ ಅಪರಾಧಿ ಎಂದು ಕಿರುಚುವ ನಿರೂಪಕ. ಇದೆಲ್ಲ ನೋಡಿದರೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಲ್ಲಿನ ರಿಯಾ ಚಕ್ರವರ್ತಿ ನೆನಪಿಗೆ ಬಾರದೇ ಇರದು.

ನೊಯೋನಿಕಾಗೆ ಕ್ರಿಕೆಟಿಗ ಮೋಹಿತ್ ಪ್ರಕರಣದಲ್ಲಿ ನಿರ್ಣಾಯಕ ಸುಳಿವುಗಳನ್ನು ತರಲು ಸಹಾಯಕಿಯಾಗಿ ಇರುವುದು ಚುರುಕಿನ ತನಿಖಾಧಿಕಾರಿ ಸನಾ (ಕುಬ್ರ ಸೇಟ್). ಜೂಹಿ ಭಾಟಿಯಾ ನಿರಪರಾಧಿ ಎಂದು ಸಾಬೀತುಪಡಿಸುವ ಮೂಲಕ ನೊಯೋನಿಕಾ ಮೊದಲ ಕೇಸು ಗೆಲ್ಲುತ್ತಾಳೆ. ಇತ್ತ ಗಂಡನನ್ನು ಜೈಲಿನಲ್ಲಿ ಹೋಗಿ ಭೇಟಿ ಮಾಡುತ್ತಾಳೆ. ಅಲ್ಲಿ ಹೋಗಿ ಭೇಟಿ ಮಾಡಿದಾಗಲೆಲ್ಲ ನೀನು ಮಾಡಿದ್ದನ್ನು ಕ್ಷಮಿಸಲಾಗುವುದಿಲ್ಲ ಎಂದು ಹೇಳುತ್ತಾಳೆ. ಗಂಡನ ಪ್ರಕರಣದಿಂದಾಗಿ ಅವಮಾನ ಸಹಿಸುತ್ತಿರುವ ಪತ್ನಿ, ಕುಟುಂಬ ನಡೆಸುವುದಕ್ಕಾಗಿ ವೃತ್ತಿಗೆ ಹಿಂದಿರುಗಿದ್ದಾಳೆ, ಕೆಲಸ ಆಕೆಗೆ ತುಂಬಾನೇ ಮುಖ್ಯ. ಎಲ್ಲವನ್ನೂ ದಿಟ್ಟತನದಿಂದ ಆಕೆ ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ಚಿತ್ರ ಹೈಲೈಟ್ ಮಾಡುತ್ತದೆ.

ಹುಸೇನ್ ದಲಾಲ್, ಅಬ್ಬಾಸ್ ದಲಾಲ್ ಮತ್ತು ಸಿದ್ಧಾರ್ಥ್ ಕುಮಾರ್ ಅವರ ಚಿತ್ರಕಥೆ ಮೂಲಕತೆಯಿಂದ ಕೆಲವು ಕೇಸ್‌ಗಳನ್ನು ಇಲ್ಲಿಗೆ ತಂದಿದ್ದರೂ ಅವು ಅನಗತ್ಯವಾಗಿ ಕಾಣುತ್ತದೆ. ಮಗಳ ಸಹಪಾಠಿಯಾಗಿರುವ ಹುಡುಗನ ಮೇಲೆ ಕೊಲೆ ಆರೋಪ ಕೇಳಿ ಬಂದಾಗ ಆತನನ್ನು ರಕ್ಷಿಸುವುದು, ಟೀವಿ ನಿರೂಪಕ ದಕ್ಷ್ ವಿರುದ್ಧದ ಮಾನನಷ್ಟ ಮೊಕದ್ದಮೆ ಅಥವಾ ಕಟ್ಟಡ ಕಾರ್ಮಿಕರ ಸಾವಿಗೆ ಬಿಲ್ಡರ್ ನಿರ್ಲಕ್ಷ್ಯ ಆರೋಪ ಪ್ರಕರಣಗಳನ್ನು ತುಂಬಾ ಸರಳವಾಗಿ ತೋರಿಸಲಾಗಿದೆ.

ಇದೆಲ್ಲದರ ನಡುವೆ ‘ದಿ ಟ್ರಯಲ್’ ನೋಡುತ್ತಿದ್ದಂತೆ ಮನಸ್ಸಿನಲ್ಲಿ ಕೆಲವೊಂದು ಗೊಂದಲಗಳು ಮೂಡುತ್ತವೆ. ರಾಜೀವ್‌ ಗೆಳೆಯ ಇಲ್ಯಾಸ್ (ಅಸೀಮ್ ಹತ್ತಂಗಡಿ) ಪ್ರತಿ ಸಮಸ್ಯೆಗೆ ಪರಿಹಾರ ನೀಡುವ ವ್ಯಕ್ತಿ. ಈತ ನೊಯೋನಿಕಾಗೆ ವೈಯಕ್ತಿಕ ಸಮಸ್ಯೆ ಎದುರಾದಾಗಲೂ, ವೃತ್ತಿ ಜೀವನದಲ್ಲಿನ ಸಮಸ್ಯೆ ಕಾಣಿಸಿಕೊಂಡಾಗಲೂ ಸಲಹೆಯೊಂದಿಗೆ ಬರುತ್ತಾರೆ. ನೊಯೋನಿಕಾ ತನ್ನ ಅತ್ತೆಯೊಂದಿಗೆ (ಬೀನಾ ಬ್ಯಾನರ್ಜಿ) ಜಗಳವಾಡಿದರೂ, ಗಂಡನನ್ನು ಭೇಟಿ ಮಾಡಿದಾಗ ಅವರ ಬಗ್ಗೆ ಯಾವುದೇ ದೂರು ಇರುವುದಿಲ್ಲ. ಅಲ್ಲಿ ಆಕೆಗೆ ಪರ್ಫೆಕ್ಟ್ ಇಂಡಿಯನ್ ವೈಫ್ ವ್ಯಕ್ತಿತ್ವ! ಮನೆ ಖರ್ಚು ನಿಭಾಯಿಸಲು ಆಕೆ ಮರ್ಸಿಡಿಸ್ ಕಾರು ಮಾರುತ್ತಾಳೆ. ಆಕೆ ಚಲಾಯಿಸುತ್ತಿರುವ ಕಾರು ಸೆಡಾನ್. ಯಾವುದೇ ಶ್ರೀಮಂತಿಕೆಗೆ ಕಮ್ಮಿ ಇಲ್ಲ ಎಂಬಂತೆ ಆಕೆಯ ಉಡುಗೆ ತೊಡುಗೆ, ಡಿಸೈನರ್ ಬ್ಯಾಗ್, ಲೈಫ್ ಸ್ಟೈಲ್ ಎಲ್ಲ ಇರುತ್ತದೆ. ಆದರೆ ಅವಳ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲು ತಾಪತ್ರಯ ಇರುತ್ತದೆ. ಆಕೆಯ ಗಂಡನಿರುವ ಜೈಲು ತುಂಬಾ ನೀಟ್ ಆಂಡ್ ಕ್ಲೀನ್! ಅವರು ಭೇಟಿ ಮಾಡುವ ಜಾಗ ಕೂಡಾ. ದೊಡ್ಡದಾದ ಕಾನೂನು ಸಂಸ್ಥೆಯಲ್ಲಿ ಒಮ್ಮೊಮ್ಮೆ ಮೀಟಿಂಗ್, ಎರಡು ಮೂರು ಪಾತ್ರಗಳಷ್ಟೇ ಕೆಲಸದಲ್ಲಿ ತೊಡಗಿರುವುದು ಕಾಣಿಸುತ್ತದೆ. ನ್ಯಾಯಾಲಯದಲ್ಲಿ ವಾದಿಸಿದ್ದು ಮೂರೇ ಮೂರು ವಕೀಲರು!

ಮತ್ತೆ ವೆಬ್ ಸರಣಿ ವಿಚಾರಕ್ಕೆ ಬರುವುದಾದರೆ ಸನಾಳನ್ನು ಕಂಡರೆ ಧೀರಜ್‌ಗೆ ಇಷ್ಟ. ಪೊಲೀಸ್ ಅಧಿಕಾರಿ (ಅಮೀರ್ ಅಲಿ)ಗೂ ಆಕೆಯ ಮೇಲೆ ತೀರದ ಮೋಹ. ಅದೊಂದು ತ್ರಿಕೋನ ಪ್ರೇಮಕತೆ. ತುಂಬಾ ಅಚ್ಚುಕಟ್ಟಾಗಿ ಕೆಲಸ ಮಾಡುವ ಸನಾಳದ್ದು ಪೋಷಕ ಪಾತ್ರವಾಗಿದ್ದರೂ ಆಸಕ್ತಿದಾಯಕವಾಗಿ ಕಾಣುತ್ತದೆ. ನೊಯೋನಿಕಾಳ ಗಂಡನ ದೆಸೆಯಿಂದಾಗಿ ಬದುಕು ಅಲ್ಲೋಲಕಲ್ಲೋಲವಾಗಿದೆ, ಹಳೇ ಬಾಯ್ ಫ್ರೆಂಡ್ ಹತ್ತಿರವಾಗಿದ್ದಾನೆ. ಮನಸ್ಸಿನ ತುಮುಲಗಳನ್ನು ನಿಭಾಯಿಸುವ ನೊಯೋನಿಕಾ ಇಲ್ಲಿ ಇಷ್ಟವಾಗುತ್ತಾಳೆ. ಇನ್ನೊಂದು ಮುಗ್ಗುಲಲ್ಲಿ ನೊಯೋನಿಕಾ ಪ್ರೀತಿ, ವಿಶ್ವಾಸ, ಹಣೆಬರಹ ಮತ್ತು ನಂಬಿಕೆಯ ಬಗ್ಗೆ ಆಗಾಗ ಮಾತುಗಳಾಡುತ್ತಾಳೆ. ಕೆಲವೊಂದು ಕಡೆ ಬೋರ್ ಅನಿಸಿದರೂ ಮರುಕ್ಷಣಕ್ಕೆ ಅದನ್ನು ಆಸಕ್ತಿದಾಯಕವಾಗಿಸುವುದು ಕೂಡಾ ನೊಯೋನಿಕಾಳ ಪಾತ್ರದಲ್ಲಿರುವ ಕಾಜೋಲ್, ಇಲ್ಲಿ ಆಕೆಯೇ ಹೈಲೈಟ್ ಆಗಿದ್ದರೂ ಸಣ್ಣ ಪುಟ್ಟ ಪಾತ್ರಗಳೂ ಅಚ್ಚುಕಟ್ಟಾಗಿ ತಮ್ಮ ಕೆಲಸ ನಿರ್ವಹಿಸಿವೆ. ನೀವು ‘ದಿ ಗುಡ್ ವೈಫ್’ ಅನ್ನು ವೀಕ್ಷಿಸಿದ್ದರೆ, ‘ದಿ ಟ್ರಯಲ್’ ಮೂಲ ಆವೃತ್ತಿಯ ತೆಳು ಆವೃತ್ತಿಯಂತೆ ತೋರುತ್ತದೆ. ಅದಲ್ಲ ಎಂದಾದರೆ ಇದೊಂದು ಒಳ್ಳೆ ವೆಬ್ ಸರಣಿ ಎಂದು ಹೇಳಲು ಅಡ್ಡಿಯಿಲ್ಲ.

LEAVE A REPLY

Connect with

Please enter your comment!
Please enter your name here