ನಟಿ ಎಸ್ತರ್ ನರೋನ್ಹಾ ‘ದಿ ವೆಕೆಂಟ್ ಹೌಸ್’ ಚಿತ್ರದೊಂದಿಗೆ ನಿರ್ದೇಶಕಿಯಾಗಿದ್ದಾರೆ. ಖಾಲಿ ಮನೆಯೊಂದರ ಸುತ್ತ ನಡೆಯುವ ಥ್ರಿಲ್ಲರ್ ಕಥಾನಕವಿದು. ಪ್ರಮುಖ ಪಾತ್ರದಲ್ಲಿ ನಟಿಸಿರುವ ಅವರು ಸಂಗೀತ ಸಂಯೋಜನೆ, ಚಿತ್ರನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ.
‘ಉಸಿರಿಗಿಂತ ನೀನೇ ಹತ್ತಿರ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ಎಸ್ತರ್ ನರೋನ್ಹಾ ಮುಂದೆ ‘ನಾವಿಕ’, ‘ಅತಿರಥ’, ‘ನುಗ್ಗೇಕಾಯಿ’, ‘ಲೋಕಲ್ ಟ್ರೈನ್’, ‘ಲಂಕೆ’ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಕೊಂಕಣಿ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವುದಲ್ಲದೆ ಹಾಡುಗಳನ್ನೂ ಹಾಡಿದ್ದಾರೆ. ತೆಲುಗು ಮತ್ತು ತುಳು ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ನಟನೆ, ಸಂಗೀತ ಸಂಯೋಜನೆ, ಚಿತ್ರನಿರ್ಮಾಣದ ಅನುಭವ ಇದ್ದ ಅವರು ‘ದಿ ವೆಕೆಂಟ್ ಹೌಸ್’ ಚಿತ್ರದೊಂದಿಗೆ ನಿರ್ದೇಶಕಿಯಾಗಿ ಅಭಿಯಾನ ಶುರು ಮಾಡಿದ್ದಾರೆ. ಖಾಲಿ ಮನೆಯೊಂದರ ಸುತ್ತ ನಡೆಯುವ ಥ್ರಿಲ್ಲಿಂಗ್ ಕಥಾವಸ್ತು ಚಿತ್ರದಲ್ಲಿದೆ. ಕನ್ನಡ ಮತ್ತು ಕೊಂಕಣಿ ಎರಡೂ ಭಾಷೆಗಳಲ್ಲಿ ಸಿನಿಮಾ ತಯರಾಗಿದೆ.
ಚಿತ್ರದ ಬಹುಪಾಲು ಚಿತ್ರೀಕರಣ ಎಸ್ತರ್ ಅವರ ಫಾರ್ಮ್ ಹೌಸ್‌ನಲ್ಲಿ ನಡೆದಿದೆ. ಅವರೇ ಹೇಳುವಂತೆ ಇದು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸೆಟ್ಟೇರಿದ ಸಿನಿಮಾ. ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಚಿತ್ರಕ್ಕಿದೆ. ಮಂಗಳೂರು ಮೂಲದ ಎಸ್ತರ್ ಬೆಳೆದದ್ದು ಮುಂಬೈನಲ್ಲಿ. ನಟಿಯಾಗುವ ಇರಾದೆಯಿಂದ ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಹಿಂದಿ ಚಿತ್ರರಂಗ ಪ್ರವೇಶಿಸಿದ್ದರು. ಮುಂದೆ ಕನ್ನಡಕ್ಕೆ ಬಂದ ಅವರು ಈಗ ನಿರ್ದೇಶನದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಇತ್ತೀಚೆಗೆ ತೆರೆಕಂಡ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ‘ಇನಾಮ್ದಾರ್’ ಸಿನಿಮಾದ ಹಾಡೊಂದಕ್ಕೆ ಅವರು ಹೆಜ್ಜೆ ಹಾಕಿದ್ದರು.