ಹಿಂಸೆ ಮತ್ತು ಕ್ರೂರತೆಯನ್ನು ವೈಭವೀಕರಿಸುವತ್ತ ನಿರ್ದೇಶಕರು ಗಮನವಹಿಸಿ ಮಿಕ್ಕ ವಿಭಾಗಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅರಗಿಸಿಕೊಳ್ಳುವುದಕ್ಕೆ ಆಗದಷ್ಟು ವಿಚಾರಗಳನ್ನು ಒಂದೇ ಸರಣಿಯಲ್ಲಿ ತುರುಕಿರುವುದರಿಂದ, ಯಾವ ವಿಷಯಕ್ಕೂ ಸಲ್ಲಬೇಕಾದ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ. ನಿರ್ದೇಶಕರು ಏನು ಹೇಳಹೊರಟಿದ್ದಾರೆ ಎನ್ನುವುದು ಅರ್ಥವಾಗುವುದಕ್ಕೆ ಮುನ್ನವೇ ಸರಣಿ ಮುಗಿದು ತಲೆ ಗೊಂದಲದ ಗೂಡಾಗುತ್ತದೆ. ‘ದಿ ವಿಲೇಜ್‌’ ತಮಿಳು ಸರಣಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

‘ದ ವಿಲ್ಲೇಜ್’ ಬಿಡುಗಡೆಗೂ ಮುನ್ನವೇ ಬಹಳ ನಿರೀಕ್ಷೆ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದ ಸರಣಿ. ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿ ಮಾಡಿರುವ ಸರಣಿ. ಅಶ್ವಿನ್ ಶ್ರೀವತ್ಸಗಂ, ವಿವೇಕ್ ರಂಗಾಚಾರಿ ಮತ್ತು ಶಮಿಕ್ ದಾಸ್ ಗುಪ್ತ ಬರೆದಿರುವ ಕಾದಂಬರಿ ಕೂಡ ಬಹಳ ಘೋರ ಕಥಾನಕ ಹೊಂದಿದ್ದು ಸರಣಿಯಲ್ಲೂ ಅದನ್ನೇ ಪ್ರಸ್ತುತಪಡಿಸಿದ್ದಾರೆ. ಒಂದು ಘೋರ ಕಥಾನಕ ಮತ್ತು ಕ್ರೂರತೆಯ ಕಥೆಯನ್ನು ಕಾದಂಬರಿಯಾಗಿ ಓದುವುದೇ ಒಂದು ಅನುಭವ. ಆದರೆ ತೆರೆಯ ಮೇಲೆ ನೋಡೋದು ಮತ್ತೊಂದು ಅನುಭವ. ಬಹಳ ಗಾಢವಾದ ಕಥಾಹಂದರವಿದ್ದ ಈ ಕಾದಂಬರಿ ತೆರೆಯ ಮೇಲೂ ಅದೇ ಗಾಢತೆಯನ್ನು ಉಳಿಸಿಕೊಳ್ಳುತ್ತದೆಯೇ ಎಂಬ ಕುತೂಹಲಕ್ಕೆ ಸ್ವಲ್ಪ ನಿರಾಸೆಯಾಗಿದೆ ಎಂದೇ ಹೇಳಬಹುದು. ಕಾದಂಬರಿಯಲ್ಲಿ ಕಂಡುಬರುವ ತೀವ್ರತೆ ತೆರೆಯ ಮೇಲೆ ಅತ್ಯಂತ ಸಿನಿಮೀಯವಾಗಿ ಜಾಳುಜಾಳಾಗಿ ಚಿತ್ರಿತವಾಗಿದೆ ಎಂದು ಮೇಲುನೋಟಕ್ಕೆ ಅನಿಸುತ್ತದೆ.

‘ದ ವಿಲ್ಲೇಜ್’ ಸರಣಿ ನೋಡಿದ ಮೇಲೆ ಬೇಡವೆಂದರೂ ಇಂಥ ಕಥಾಹಂದರವಿರುವ ಅನೇಕ ಪುಸ್ತಕಗಳು ಮತ್ತು ಸರಣಿಗಳು ನೆನಪಾಗುವುದು ಸುಳ್ಳಲ್ಲ. ಒಂದು ಕಡೆ ಮೈನವಿರೇಳಿಸುವ ಭಯಾನಕ ಮಾದರಿಯ ಚಿತ್ರಣ ಎನಿಸಿದರೂ ‘ಸ್ಪೀಶೀಸ್’ ಸರಣಿ ಮತ್ತು ತಮಿಳಿನ ‘ಸಿಟಿಜನ್’ ಚಿತ್ರದ ಹೋಲಿಕೆ ಮತ್ತು ಛಾಯೆ ಕಂಡುಬರುತ್ತದೆ. ಇಷ್ಟೆಲ್ಲ ಇದ್ದರೂ ‘ದ ವಿಲ್ಲೇಜ್’ ನಿರೂಪಣೆ ಬಹಳ ಗೋಜಲು ಗೋಜಲು ಎನಿಸಿ ಚಿತ್ರಕತೆ ಬಹಳ ಬಾಲಿಷವಾಗಿ ಹೆಣೆಯಲಾಗಿದೆ ಎನಿಸುತ್ತದೆ. ಈ ಸರಣಿಯಲ್ಲಿ ಬಹಳ ತೀವ್ರ ಎನಿಸುವ ನರಭಕ್ಷಕರ ವಿಷಯ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾಟ ಮಂತ್ರ, ಅನೈತಿಕ ಸಂಬಂಧಗಳು, ಸೈನ್ಸ್ ಫಿಕ್ಷನ್ ಇತ್ಯಾದಿ ಅನೇಕ ವಿಚಾರಗಳನ್ನು ಅನಾವರಣ ಮಾಡುವ ಪ್ರಯತ್ನ ಮಾಡಿದ್ದರೂ ಬೌದ್ಧಿಕವಾಗಿ ಇನ್ನೂ ಪ್ರಬುದ್ಧವಾಗಿ ಇರಬಹುದಿತ್ತು ಎನಿಸುತ್ತದೆ. ಸುಮ್ಮನೆ ವೀಕ್ಷಕರಲ್ಲಿ ಸಂಚಲನ ಉಂಟುಮಾಡುವುದಕ್ಕೆ ಮತ್ತು ರೋಚಕತೆಯ ಅಂಶ ಸೇರಿಸುವುದಕ್ಕೆ ಮಾತ್ರ ಈ ವಿಷಯಗಳ ಬಳಕೆ ಆಗಿದೆ ಹೊರತು ಅದರ ನಿಜವಾದ ಉದ್ದೇಶ ಮತ್ತು ಸಂದೇಶ ವೀಕ್ಷಕರನ್ನು ತಲುಪುವುದರಲ್ಲಿ ವಿಫಲವಾಗಿದೆ.

ಕಟ್ಟಿಯಿಲ್ ಎನ್ನುವ ಕರಾವಳಿ ಪ್ರದೇಶದ ಸಣ್ಣ ಹಳ್ಳಿಯೊಂದರ ಕಥೆ ಇದು. ದುರಾಸೆಯ ಕಪಿಮುಷ್ಟಿಗೆ ಸಿಲುಕಿ ಕ್ರೂರ ಬದುಕನ್ನು ಸಾಗಿಸುವ ದುಷ್ಟ ಜನರು ವಾಸಿಸುವ ಹಳ್ಳಿ. ಈಗಾಗಲೇ ಜೀತದ ಪದ್ಧತಿ ಇರುವ ಊರಲ್ಲಿ ಆಚಾನಕ್ಕಾಗಿ ವೈಜ್ಞಾನಿಕ ಬದಲಾವಣೆಯೊಂದು ನಡೆದು ಜನರು ಮತ್ತಷ್ಟು ಕ್ರೂರಿಗಳಾಗುತ್ತಾರೆ. ಸದ್ಯದ ಕಾಲಘಟ್ಟದಲ್ಲಿ ಕಟ್ಟಿಯಿಲ್ ದುಷ್ಟಶಕ್ತಿಗಳಿಂದ ಬಾಧಿತವಾದ ಒಂದು ಊರು. ಈ ಸನ್ನಿವೇಶದಲ್ಲಿ ನಾಯಕ ನಟ ಗೌತಮ್ (ಆರ್ಯ) ಪಾತ್ರ ಪರಿಚಯವಾಗುತ್ತದೆ. ಕೆಟ್ಟು ಹೋದ ಕಾರಲ್ಲಿ ತನ್ನ ಹೆಂಡತಿ ನೇಹಾ ಮತ್ತು ಮಗಳು ಮಾಯಾಳನ್ನು ಬಿಟ್ಟು ಹೋಗಿರುತ್ತಾನೆ.

ಇಲ್ಲಿ ದುಷ್ಟಶಕ್ತಿಗಳನ್ನೇ ನಾವು ಕ್ರೂರಿ ಎಂದುಕೊಂಡರೆ ನಾಯಕನ ಪಾತ್ರಚಿತ್ರಣ ಮತ್ತೂ ದಿಗಿಲು ಹುಟ್ಟಿಸುವಂತಿದೆ. ಸಂಪೂರ್ಣವಾಗಿ ಕಥೆಗೆ ಸಂಬಂಧವೇ ಇಲ್ಲವೇನೋ ಎನಿಸುವಂತೆ ಮಹತ್ವವೇ ಇಲ್ಲದಂತೆ ಆ ಪಾತ್ರದ ಚಿತ್ರಣ ಮಾಡಲಾಗಿದೆ. ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳ ಘನಘೋರ ಚಿತ್ರಣಗಳು ಇವೆ. ಶಕ್ತಿಯುತವಾಗಿ ಇರಬಹುದಾಗಿದ್ದ ಈ ವಿಚಾರವನ್ನು ಕೇವಲ ಕಥೆಯನ್ನು ಮುನ್ನಡೆಸುವ ಉದ್ದೇಶಕ್ಕಾಗಿ ಬಳಸಿಕೊಂಡಂತಿದೆ. ರಾಸಾಯನಿಕಗಳ ಬಳಕೆಯಿಂದ ಪರಿಸರದ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತಾದ ಚಿತ್ರಣವೂ ಸರಣಿಯಲ್ಲಿ ಇದೆ. ಇಷ್ಟೆಲ್ಲ ಒಳ್ಳೊಳ್ಳೆ ವಿಚಾರಗಳಿದ್ದರೂ ಯಾವುದನ್ನೂ ಸರಿಯಾಗಿ, ಸೂಕ್ಷ್ಮವಾಗಿ ನಿಖರತೆಯಿಂದ ತೋರಿಸಲಾಗಿಲ್ಲ. ಒಂದು ರೀತಿ ಜಾಳುಜಾಳಾಗಿ ನಿರೂಪಿತವಾಗಿವೆ.

ನಿರ್ಮಾಣದ ಗುಣಮಟ್ಟ ಮತ್ತು ಅಭಿನಯ ವಿಭಾಗದಲ್ಲಿ ಕೂಡ ಸರಣಿ ಅಷ್ಟೇನೂ ಪ್ರಶಂಸಾರ್ಹವಾಗಿಲ್ಲ. ಬರೀ ಹಿಂಸೆ ಮತ್ತು ಕ್ರೂರತೆಯನ್ನು ವೈಭವೀಕರಿಸುವತ್ತ ನಿರ್ದೇಶಕರು ಗಮನವಹಿಸಿ ಮಿಕ್ಕ ವಿಭಾಗಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನಿಸುತ್ತದೆ. ನಿರ್ದೇಶಕರು ಸ್ವಲ್ಪ ಗಮನ ನೀಡಿದ್ದರೆ ಇದೇ ಹಿಂಸೆ ಮತ್ತು ಕ್ರೂರತೆಗಳೇ ಸರಣಿಯ ಮುಖ್ಯ ಪಾತ್ರಗಳಾಗಿ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಬಹುದಿತ್ತು. ಆದರೆ ಇಲ್ಲಿ ಹಿಂಸಾತ್ಮಕ ದೃಶ್ಯಗಳು ಆತ್ಮವಿಲ್ಲದ ದೇಹಗಳಂತೆ ಕೇವಲ ಕಣ್ಣು ಮತ್ತು ಕಿವಿಗೆ ಭಾವವನ್ನು ದಾಟಿಸಿ ಮನಸ್ಸಿಗೆ ಮುಟ್ಟಿಸುವಲ್ಲಿ ಸೋತಿವೆ.

ಆದರೆ ಇಲ್ಲಿ ಪ್ರಶಂಸಿಸಬೇಕಾದ ಒಂದು ವಿಚಾರ ಎಂದರೆ ಚುರುಕಾದ ಸಂಕಲನ. ಎಲ್ಲ ಸಂಚಿಕೆಗಳೂ ಬಹಳ ಅಚ್ಚುಕಟ್ಟಾಗಿ, ಸರಸರನೇ ನೋಡಿಸಿಕೊಂಡು ಹೋಗುತ್ತವೆ. ಎಲ್ಲಿಯೂ ಕಥೆಯನ್ನು ಎಳೆಯಲಾಗಿಲ್ಲ. ಇಲ್ಲಿ ಆಯ್ಕೆ ಮಾಡಿಕೊಂಡಿರುವ ವಿಷಯಗಳು ಆಸಕ್ತಿಕರವಾಗಿವೆ. ನಿರೂಪಣೆಗೆ ಬಳಸಿರುವ ಶೈಲಿ ವಿಭಿನ್ನವಾಗಿದೆ. ಆದರೆ ಚಿತ್ರಕಥೆ ವ್ಯವಸ್ಥಿತವಾಗಿಲ್ಲ. ಸರಣಿಯ ಅಂತ್ಯ ಕೂಡ ಮುಂದಿನ ಭಾಗದ ಮುನ್ನುಡಿಯಂತೆ ಮಾಡಲಾಗಿದ್ದು ಸರಣಿಯ ಎರಡನೇ ಭಾಗವನ್ನು ಎದುರು ನೋಡಬಹುದೇ ಎನ್ನುವ ಕುತೂಹಲವನ್ನು ಪ್ರೇಕ್ಷಕರಲ್ಲಿ ಉಳಿಸಿ ಮುಗಿಯುತ್ತದೆ.

ಏನೇ ಆದರೂ ಹಸಿವಿದ್ದಷ್ಟು ಮಾತ್ರ ಊಟ ಮಾಡಬೇಕು. ಇಲ್ಲವಾದಲ್ಲಿ ಅಜೀರ್ಣ ಆಗುತ್ತದೆ. ಇದರಲ್ಲಿ ಆಗಿರುವುದೂ ಅದೇ. ಅರಗಿಸಿಕೊಳ್ಳುವುದಕ್ಕೆ ಆಗದಷ್ಟು ವಿಚಾರಗಳನ್ನು ಒಂದೇ ಸರಣಿಯಲ್ಲಿ ತುರುಕಿರುವುದರಿಂದ, ಯಾವ ವಿಷಯಕ್ಕೂ ಸಲ್ಲಬೇಕಾದ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ. ನಿರ್ದೇಶಕರು ಏನು ಹೇಳಹೊರಟಿದ್ದಾರೆ ಎನ್ನುವುದು ಅರ್ಥವಾಗುವುದಕ್ಕೆ ಮುನ್ನವೇ ಸರಣಿ ಮುಗಿದು ತಲೆ ಗೊಂದಲದ ಗೂಡಾಗುತ್ತದೆ. ಕೊನೆಗೆ ತಲೆಯಲ್ಲಿ ಉಳಿಯುವುದು ಘನಘೋರ ಹಿಂಸಾತ್ಮಕ ದೃಶ್ಯಾವಳಿಗಳು ಮಾತ್ರ. ‘ದ ವಿಲ್ಲೇಜ್’ ಆಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here