ಸಿನಿಮಾದಲ್ಲಿ ಹೊಸತನವೇನೂ ಇಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಸ್ಕ್ರಿಪ್ಟ್‌ಗಳಿಂದ ಆಯ್ದು ಚಿತ್ರಕಥೆ ಬರೆದು ಜೋಡಿಸಿದಂತಿದೆ. ಸಿನಿಮಾ ‘ಭಿನ್ನವಾಗಿರುತ್ತದೆ’ ಎಂಬ ನಿರೀಕ್ಷೆಯೇನೂ ಇಲ್ಲದೆ, ಟೈಮ್ ಪಾಸ್‌ಗಾದರೂ ಒಂದು ಸಿನಿಮಾ ನೋಡೋಣ ಎಂದೆನಿಸಿದರೆ ‘ಟಿಕು ವೆಡ್ಸ್ ಶೇರು’ ನೋಡಬಹುದು. ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ನಟನೆಯ ಹಿಂದಿ ಸಿನಿಮಾ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮ್ ಆಗುತ್ತಿದೆ.
‘ಟಿಕು ವೆಡ್ಸ್ ಶೇರು’ ಹೆಸರು ನೋಡಿದಾಗಲೇ ಪ್ರೇಮಕಥೆ ಎಂಬುದನ್ನು ಸುಲಭವಾಗಿ ಊಹಿಸಿಕೊಳ್ಳಬಹುದು. ಆರಂಭದಲ್ಲಿ ಹೀರೊ ಎಂಟ್ರಿ 70ರ ದಶಕದಲ್ಲಿ ಬಾಲಿವುಡ್ ನಾಯಕರು ಹೇಗೆ ಇರ್ತಿದ್ರು ಎಂಬ ನಾಸ್ಟಾಲ್ಜಿಕ್ ಫೀಲ್ ಕೊಡುತ್ತದೆ. ಜೂನಿಯರ್ ಆರ್ಟಿಸ್ಟ್ ಆಗಿರುವ ಶೇರು, ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯಿರುವ ಹಳ್ಳಿ ಹುಡುಗಿ ಟಿಕು – ಇವರಿಬ್ಬರು ಜೊತೆಯಾದರೆ ಏನಾಗುತ್ತೆ ಎಂಬುದೇ ಕಥೆ. ಸಾಯಿ ಕಬೀರ್ ನಿರ್ದೇಶನದ ಈ ಚಿತ್ರ ಸ್ವಲ್ಪ ಹಾಸ್ಯಗಳೊಂದಿಗೆ ಶುರುವಾದರೂ ನಂತರ ಮೆಲೊಡ್ರಾಮ ಆಗಿ ನೋಡುಗರ ತಾಳ್ಮೆ ಪರೀಕ್ಷಿಸುತ್ತದೆ.
ನೇರಾ ನೇರವಾಗಿ ಹೇಳಬೇಕೆಂದರೆ ‘ಟಿಕು ವೆಡ್ಸ್ ಶೇರು’ ಸಿನಿಮಾದಲ್ಲಿ ಹೊಸತನವೇನೂ ಇಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಸ್ಕ್ರಿಪ್ಟ್‌ಗಳಿಂದ ಆಯ್ದು ಚಿತ್ರಕಥೆ ಬರೆದು ಜೋಡಿಸಿದಂತಿದೆ. ಶಿರಾಜ್ ಖಾನ್ ಅಫ್ಘಾನಿ ಅಲಿಯಾಸ್ ಶೇರು (ನವಾಜುದ್ದೀನ್ ಸಿದ್ದಿಕಿ) ಮುಂಬೈನಲ್ಲಿ ಜೂನಿಯರ್ ಆರ್ಟಿಸ್ಟ್. ಸೂಪರ್ ಸ್ಟಾರ್ ಆಗುವ ಕನಸು ಹೊಂದಿರುವ ಮಹತ್ವಾಕಾಂಕ್ಷಿ ನಟ, ಭೋಪಾಲ್‌ನಲ್ಲಿರುವ ಹುಡುಗಿ ತಸ್ಲೀಮ್ ಅಲಿಯಾಸ್ ಟಿಕುವನ್ನು (ಅವ್ನೀತ್ ಕೌರ್) ನೋಡಲು ಹೋಗುತ್ತಾನೆ. ಮೊದಲಿಗೆ ಮದುವೆಗೆ ಒಪ್ಪದ ಹುಡುಗಿ, ಹುಡುಗ ಶೇರುನನ್ನು ಮದುವೆಯಾದರೆ ಮುಂಬೈಗೆ ಹೋಗಿ ಅಲ್ಲಿ ಪ್ರಿಯಕರ ಬಿನ್ನಿಯೊಂದಿಗೆ (ರಾಹುಲ್)ಸೇರಬಹುದು ಎಂಬ ಯೋಜನೆಯೊಂದಿಗೆ ಮದುವೆಯಾಗುತ್ತಾಳೆ. ಮುಂಬೈಗೆ ಬಂದ ಮರುದಿನವೇ ಪ್ರಿಯಕರನ ಬಳಿಗೆ ಓಡಿಹೋಗುವ ಈಕೆಗೆ ತಾನು ಮೋಸ ಹೋದೆ ಎಂದು ಅರಿವಾಗುತ್ತದೆ.
ಹೊಟ್ಟೆಯಲ್ಲಿ ಕೂಸು ಇದೆ ಎಂದು ಪ್ರಿಯಕರನಲ್ಲಿ ಹೇಳುವಾಗ ಆತ ವಿವಾಹಿತ, ಆತನಿಗೆ ಮಗು ಕೂಡ ಇದೆ ಎನ್ನುವುದು ಗೊತ್ತಾಗುತ್ತದೆ. ಇತ್ತ ತನ್ನನ್ನು ಬಿಟ್ಟು ಓಡಿ ಹೋದ ಹೆಂಡ್ತಿಗಾಗಿ ಹುಡುಕುವ ಶೇರುಗೆ ಅವಳು ಸಿಕ್ಕಿದರೂ ಎಲ್ಲ ‘ಕತೆ’ ಗೊತ್ತಾದಾಗ ಕುಸಿದುಹೋಗುತ್ತಾನೆ. ಆದರೂ ಆಕೆಯ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿದ ಹುಡುಗಿ ಟಿಕುವಿನ ಪ್ರೀತಿ ಗೆಲ್ಲುವುದಕ್ಕಾಗಿ ಪರಿಶ್ರಮಿಸುತ್ತಾನೆ ಶೇರು. ಕತೆ ಇಲ್ಲಿಂದ ಆರಂಭವಾಗುತ್ತದೆ. ಇಬ್ಬರು ಸರಳ ವ್ಯಕ್ತಿಗಳು ತಮ್ಮ ಕನಸುಗಳನ್ನು ಬೆನ್ನತ್ತಿ ಹೊರಟಾಗ ಅವರ ಪ್ರಯಾಣಗಳಳು ವಿಭಿನ್ನ ಹಾದಿಗಳಲ್ಲಿ ಸಾಗುತ್ತವೆ. ‘ಟಿಕು ವೆಡ್ಸ್ ಶೇರು’ ಮುಂಬೈ ಎಂಬ ಕನಸಿನ ನಗರಿಯಲ್ಲಿ ಹೆಸರು ಮತ್ತು ಖ್ಯಾತಿಯನ್ನು ಗಳಿಸಲು ಬರುವ ಅಸಂಖ್ಯಾತ ಕಲಾವಿದರ ಹೋರಾಟವನ್ನು ಧ್ವನಿಸುತ್ತದೆ.
ಆದರೆ ಇಲ್ಲಿರುವ ಪಾತ್ರಗಳು ನಿಮ್ಮನ್ನು ತಾಕುವುದಿಲ್ಲ. ಅಳು, ನಗು, ಕಣ್ಣೀರು ಯಾವುದೂ ನಿಮ್ಮಲ್ಲಿ ಪ್ರತಿಕ್ರಿಯೆ ಉಂಟುಮಾಡುವುದಿಲ್ಲ. ಯಾವುದೇ ಗಂಭೀರವಾದ ದೃಶ್ಯಗಳು ಅಥವಾ ಸಂಭಾಷಣೆಗಳು ನಿಮ್ಮನ್ನು ಹಿಡಿದು ನಿಲ್ಲಿಸುವುದಿಲ್ಲ. ಹಲವು ಸಂಭಾಷಣೆಗಳನ್ನು ಸುಮ್ಮನೆ ತುರುಕಲಾಗಿದೆ ಎಂದು ಅನಿಸಿಬಿಡುತ್ತದೆ. ಕೂಲ್ ಎಂದು ತೋರಿಸಲು ಟಿಕು ಮತ್ತು ಶೇರು ಪಾತ್ರದಿಂದ ಹೇಳಿಸಿದ ಸಂಭಾಷಣೆಗಳು ‘ಅತಿಯಾಯ್ತು’ ಎಂದೆನಿಸದಿರದು. ಸಾಯಿ ಕಬೀರ್ ಮತ್ತು ಅಮಿತ್ ತಿವಾರಿ ಜತೆಯಾಗಿ ಬರೆದ ಚಿತ್ರಕಥೆ ಒಂದು ಹಂತದಿಂದ ಇನ್ನೊಂದಕ್ಕೆ ಹೋಗುತ್ತಿದ್ದರೂ ಎಲ್ಲಿಯೂ ಪ್ರೇಕ್ಷರನ್ನು ಹಿಡಿದು ನಿಲ್ಲಿಸುವುದಿಲ್ಲ. ಸ್ತ್ರೀದ್ವೇಷ, ಪಿತೃಪ್ರಭುತ್ವ, ವರದಕ್ಷಿಣೆ, ಕೌಟುಂಬಿಕ ಹಿಂಸಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಸಮಸ್ಯೆಗಳನ್ನು ಸಿನಿಮಾದಲ್ಲಿ ತೋರಿಸಲು ಪ್ರಯತ್ನಿಸಿದ್ದರೂ ಯಾವುದನ್ನೂ ಪರಿಣಾಮಕಾರಿಯಾಗಿ ತೋರಿಸಲು ಸಿನಿಮಾ ವಿಫಲವಾಗಿದೆ.
ಇನ್ನು ಚಿತ್ರದಲ್ಲಿನ ಸಂಭಾಷಣೆಗಳ ಬಗ್ಗೆ ಹೇಳುವುದಾದರೆ ಶೇರು ಬಾಯಲ್ಲಿ ಸುಖಾಸುಮ್ಮನೆ ಹಲವು ಡೈಲಾಗ್ ಹೇಳಿಸಿದಂತಿದೆ. ಜೂನಿಯರ್ ಆರ್ಟಿಸ್ಟ್ ಆಗಿರುವ ಶೇರು ಸೆಟ್‌ನಲ್ಲಿರುವ ವ್ಯಕ್ತಿಯೊಬ್ಬನಲ್ಲಿ ‘ಮೇಂ ಜೋ ಭಿ ಕರ್ತಾ ಹೂಂ ಶಿದ್ದತ್ ಕೆ ಸಾಥ್ ಕರ್ತಾ ಹೂಂ ಆಂಡ್ ಇಟ್ಸ್ ಎ ಫ್ಯಾಕ್ಟ್’ ಅಂತಾನೆ. ಮನೆಯಲ್ಲಿ ತನ್ನ ಬೆಕ್ಕು ಎಲಿಜಬೆತ್‌ನೊಂದಿಗೆ ಮಾತನಾಡುತ್ತಾ, you are irritating me like a fly, not butterfly, like a house fly ಅಂತಾನೆ. ಗತ್ತು ತೋರಿಸುವುದಕ್ಕಾಗಿ ಶೇರು ಹೇಳುವ ಇಂಗ್ಲಿಷ್ ಕೂಡಾ ‘ಬೇಕಾಗಿರಲಿಲ್ಲ’ ಎಂದು ಅನಿಸುತ್ತದೆ.
ಅಂದಹಾಗೆ, ಶೇರು ತನ್ನ ಬಿಡುವಿನ ವೇಳೆಯಲ್ಲಿ ಪಿಂಪ್ ಆಗಿ ಕೆಲಸ ಮಾಡುತ್ತಾನೆ. ಹಣ ಗಳಿಸಲು ಡ್ರಗ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಶ್ರೀಮಂತರಿಗೆ ಯುವತಿಯರನ್ನು ಪೂರೈಕೆ ಮಾಡುವ ಕೆಲಸವನ್ನೂ ಮಾಡುತ್ತಾನೆ. ಒಂದು ಹಂತದಲ್ಲಿ, ಶೇರು ತಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಬಯಸಿ ಇತರ ವ್ಯವಹಾರಗಳಿಂದ ಮುಕ್ತನಾಗಲು ಪ್ರಯತ್ನಿಸುತ್ತಾನೆ, ಆದರೆ ಅದು ಅಷ್ಟು ಸುಲಭವಲ್ಲ. ನನಗೆ ಬಡತನ ಇಷ್ಟವಿಲ್ಲ, ಎಲ್ಲರೂ ನಮ್ಮನ್ನು ತಮಾಷೆ ಮಾಡುತ್ತಿದ್ದರು. ಈಗ ನೋಡು ನಾನು ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ಟಿಕು ಹೇಳುವಾಗ ಶೇರುನ ಮುಖಭಾವ ಎಲ್ಲವನ್ನೂ ಹೇಳಿ ಬಿಡುತ್ತದೆ.
ಟಿಕು ಮತ್ತು ಶೇರು, ಇಬ್ಬರು ವ್ಯತಿರಿಕ್ತ ಸ್ವಭಾವದವರಾದರೂ ಸ್ವಲ್ಪಮಟ್ಟಿಗೆ ಒಂದೇ ರೀತಿಯ ವ್ಯಕ್ತಿತ್ವಗಳು. ಅವರ ಕನಸನ್ನು ನನಸಾಗುವಂತೆ ಮಾಡುವುದೇ ಮುಂಬೈ?, ಮಾಯಾನಗರಿಯ ಒಳಗಿನ ಕನಸಿನ ಓಟಗಳು, ಕರಾಳ ಮುಖಗಳು, ಬದುಕಿನ ತಲ್ಲಣಗಳ ನಡುವೆ ಗುರಿಮುಟ್ಟಲು ಈ ದಂಪತಿಗಳಿಗೆ ಸಾಧ್ಯವಾಗುತ್ತದೆಯೇ? ಸಿನಿಮಾ ‘ಭಿನ್ನವಾಗಿರುತ್ತದೆ’ ಎಂಬ ನಿರೀಕ್ಷೆಯೇನೂ ಇಲ್ಲದೆ, ಟೈಮ್ ಪಾಸ್‌ಗಾದರೂ ಒಂದು ಸಿನಿಮಾ ನೋಡೋಣ ಎಂದೆನಿಸಿದರೆ ಟಿಕು ವೆಡ್ಸ್ ಶೇರು ಸಿನಿಮಾ ನೋಡಬಹುದು. ಇದು ಈಗ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮ್ ಆಗುತ್ತಿದೆ.