ಧರಣಿ ನಿರ್ದೇಶನ, ವಿಜಯ್ ಮತ್ತು ತ್ರಿಷಾ ನಟನೆಯ ಸೂಪರ್‌ಹಿಟ್ ತಮಿಳು ಸಿನಿಮಾ ‘ಗಿಲ್ಲಿ’ ಮರುಬಿಡುಗಡೆಯಾಗುತ್ತಿದೆ. ಎರಡು ದಶಕಗಳ ಹಿಂದೆ 2004ರ ಏಪ್ರಿಲ್ 16ರಂದು ತೆರೆಗೆ ಬಂದಿದ್ದ ಚಿತ್ರವಿದು. ಇದೇ ಏಪ್ರಿಲ್ ತಿಂಗಳಲ್ಲಿ ಸಿನಿಮಾ ಮತ್ತೆ ಥಿಯೇಟರ್‌ಗೆ ಬರಲಿದೆ.
ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅಭಿನಯದ ಬ್ಲಾಕ್‌ಬಸ್ಟರ್ ತಮಿಳು ಸಿನಿಮಾ ‘ಗಿಲ್ಲಿ’ ಮರು-ಬಿಡುಗಡೆಯಾಗಲಿದೆ. ಈ ಸಿನಿಮಾ ತೆರೆಕಂಡು 20 ವರ್ಷಗಳಾಗಿವೆ. ಏಪ್ರಿಲ್ 16, 2004ರಂದು ತೆರೆಕಂಡ ಸಿನಿಮಾ ತಮಿಳು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಚಿತ್ರವನ್ನು ಡಿಜಿಟಲ್ ರೂಪದಲ್ಲಿ ರಚಿಸಿ ಮರುಬಿಡುಗಡೆ ಮಾಡುವುದಾಗಿ ನಿರ್ಮಾಪಕ ಎ ಎಮ್ ರತ್ನಂ ದೃಢಪಡಿಸಿದ್ದಾರೆ. ಚಿತ್ರವನ್ನು ಕಳೆದ ವರ್ಷ ವಿಜಯ್ ಅವರ ಜನ್ಮದಿನದಂದು ಮರುಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿತ್ತು. ಕಾರಣಾಂತರಗಳಿಂದ ಯೋಜನೆ ಕೈಗೂಡಲಿಲ್ಲ. ಈಗ ಸಿನಿಮಾ ಮರುಬಿಡುಗಡೆಗೆ ಸಜ್ಜಾಗಿದ್ದು, ಏಪ್ರಿಲ್ ತಿಂಗಳಲ್ಲಿ ಥಿಯೇಟರ್‌ಗೆ ಬರಲಿದೆ.
ಚಿತ್ರಕಥೆಯು ಮದುರೈನಲ್ಲಿ ನಡೆಯುವ ಕಬ್ಬಡಿ ಪಂದ್ಯವೊಂದರಲ್ಲಿ ಭಾಗವಹಿಸಲು ವೇಲು (ವಿಜಯ್) ತೆರಳಿದ್ದಾಗ ಅಲ್ಲಿ ಮುತ್ತುಪಾಡಿ (ಪ್ರಕಾಶ್ ರಾಜ್)ಯೊಂದಿಗೆ ನಿಶ್ಚಯವಾಗಿದ್ದ ಧನಲಕ್ಷ್ಮಿಯ (ತ್ರಿಶಾ) ಮದುವೆ ತಪ್ಪಿಸುತ್ತಾನೆ. ಅವಳಿಗೆ ಈ ಮದುವೆ ಇಷ್ಟವಿಲ್ಲದ ಕಾರಣ ಅವಳನ್ನು ಅಲ್ಲಿಂದ ಕರೆದೊಯ್ದು ಅವನ ಮನೆಯಲ್ಲಿ ಇರಿಸಿಕೊಳ್ಳುತ್ತಾನೆ. ನಂತರ ಕಬ್ಬಡಿ ಪಂದ್ಯದಲ್ಲಿ ಮುತ್ತುಪಾಡಿಯನ್ನು ಸೋಲಿಸಿ ಧನಲಕ್ಷಿಯನ್ನು ಮದುವೆಯಾಗುತ್ತಾನೆ.
‘ಗಿಲ್ಲಿ’, ತೆಲುಗು ಹಿಟ್ ‘ಒಕ್ಕಡು’ (2003) ಚಿತ್ರದ ಅಧಿಕೃತ ತಮಿಳು ರಿಮೇಕ್. ನಿರ್ಮಾಪಕ ಧರಣಿ ಅವರು ಈ ಕಥೆಯನ್ನು ಬರೆದು ನಿರ್ದೇಶಿಸಿದ್ದರು. ಈ ಸಿನಿಮಾ ವಿಜಯ್ ಅವರ ವೃತ್ತಿಜೀವನದಲ್ಲಿ ಒಂದು ಮೈಲುಗಲ್ಲು ಸೃಷ್ಟಿಸಿತ್ತು. ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಧಮು, ಮಾಯಿಲ್ ಸಾಮಿ, ಜಾನಕಿ ಸಬೇಶ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ‘ಅಪುಡಿ ಪೋಡೆ’ ಹಾಡು ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಈ ಸಿನಿಮಾ ಕನ್ನಡದಲ್ಲಿ ‘ಅಜಯ್’ ಶೀರ್ಷಿಕೆಯಡಿ ನಿರ್ಮಾಣವಾಗಿತ್ತು. ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮತ್ತು ಅನು ಮೆಹ್ತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿದ್ದರು. ಜೂನ್ 6, 2006ರಂದು ತೆರೆಕಂಡ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.