ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರವು ಓವರ್ ಸೀಸ್ ಮಾರುಕಟ್ಟೆಗೆ ದಾಖಲೆಯ ಮೊತ್ತಕ್ಕೆ ವ್ಯಾಪಾರವಾದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ ಜುಲೈ 28ರಂದು ತೆರೆಕಾಣಲಿದೆ.
ವಿದೇಶಿ ಮಾರುಕಟ್ಟೆಯ ‘ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನು ‘ಒನ್ ಟ್ವೆಂಟಿ 8 ಮೀಡಿಯಾ’ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ವಿದೇಶಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಈ ಬಗ್ಗೆ ಮಾತನಾಡುವ ಚಿತ್ರದ ನಿರ್ಮಾಪಕ ಜಾಕ್ ಮಂಜು, “ಸಿನಿಮಾದ ಕಂಟೆಂಟ್ ಯೂನಿವರ್ಸಲ್ ಆಗಿರುವುದು ನಮಗೆ ಅನುಕೂಲಕರವಾಗಿದೆ. ದೊಡ್ಡ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಈ ಅಂಶವೇ ನಮಗೆ ವರವಾಗಿರುವುದು. ಉಳಿದ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಿದ್ದೇವೆ. ಇದು ಕನ್ನಡ ಚಿತ್ರರಂಗದ ಸಂದರ್ಭದಲ್ಲಿ ಅತ್ಯಧಿಕ ಮತ್ತು ಇತರ ದಕ್ಷಿಣ ಭಾರತದ ಭಾಷೆಗಳಿಗೆ ಸಮಾನವಾಗಿದೆ” ಎನ್ನುತ್ತಾರೆ. ಮೂಲಗಳ ಪ್ರಕಾರ ಸಿನಿಮಾ ಓವರ್ ಸೀಸ್ ಮಾರುಕಟ್ಟೆಗೆ 1.3 ಮಿಲಿಯನ್ ಡಾಲರ್ಸ್‌ಗೆ (10 ಕೋಟಿ ರೂ) ಬಿಕಿರಿಯಾಗಿದೆ ಎನ್ನುವ ಮಾಹಿತಿಯಿದೆ.
‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವದಾದ್ಯಂತ 3D ನಲ್ಲಿ ಬಿಡುಗಡೆಯಾಗಲಿದೆ. ಅನೂಪ್ ಭಂಡಾರಿ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಇದ್ದಾರೆ. ವಿಶೇಷ ಹಾಡಿಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಿದ್ದಾರೆ. ಚಿತ್ರವನ್ನು ಝೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದ್ದು, ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ‘KGF2’ ನಂತರ ಇದು ಕನ್ನಡದ ಪ್ರಮುಖ ಪ್ಯಾನ್ ಇಂಡಿಯಾ ಚಿತ್ರವಾಗಲಿದೆ ಎನ್ನುವುದು ಉದ್ಯಮದ ಲೆಕ್ಕಾಚಾರ.