ತೆಲುಗು ಸಿನಿಮಾ ಕಟುಂಬಗಳು ಪ್ರತಿಷ್ಠೆಯ ಕಣವೆಂದೇ ಭಾವಿಸುವ ಮೂವೀ ಆರ್ಟಿಸ್ಟ್ಸ್ ಅಸೋಸಿಯೇಷನ್ (MAA) ಚುನಾವಣೆಯಲ್ಲಿ ಪ್ರಕಾಶ್ ರೈ ಅವರಿಗೆ ಸೋಲಾಗಿದೆ. ‘ಇನ್‌ಸೈಡರ್’ ಎಂದು ತಮ್ಮನ್ನು ಬಿಂಬಿಸಿಕೊಂಡಿದ್ದ ನಟ ವಿಷ್ಣು ಮಂಚು ಗೆದ್ದು ಬೀಗಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಪ್ರಕಾಶ್ ರೈ MAA ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಳೆದೊಂದು ತಿಂಗಳಿನಿಂದ ತೆಲುಗು ಚಿತ್ರರಂಗದಲ್ಲಿ MAA ಎಲೆಕ್ಷನ್ ಕುರಿತಂತೆ ಭರ್ಜರಿ ಸುದ್ದಿಯಾಗಿತ್ತು. ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿದ್ದ ನಟರಾದ ಪ್ರಕಾಶ್ ರೈ ಮತ್ತು ವಿಷ್ಣು ಮಂಚು ಪರಸ್ಪರ ವಾಗ್ವಾದಗಳನ್ನು ನಡೆಸಿದ್ದರು. ತೆಲುಗು ಸಿನಿಮಾ ಕುಟುಂಬಗಳ ಸ್ಟಾರ್ ಹೀರೋಗಳು ತಮಗೆ ಬೇಕಾದ ಅಭ್ಯರ್ಥಿಗಳ ಪರ ಮಾತನಾಡಿ ಪರೋಕ್ಷವಾಗಿ ಬೆಂಬಲಿಸಿದ್ದರು. ತೆಲುಗು ಜನರಿಗೆ ಇದೊಂದು ಅಸೆಂಬ್ಲೀ ಚುನಾವಣೆ ಎನ್ನುವಂತೆ ಭಾಸವಾಗಿತ್ತು. ಯುವನಟ ವಿಷ್ಣು ಮಂಚು ತಮ್ಮನ್ನು ‘ಇನ್‌ಸೈಡರ್’ ಎಂದು ಹೇಳಿಕೊಂಡು ಕನ್ನಡ ಮೂಲದ ಪ್ರಕಾಶ್ ರೈ ಅವರನ್ನು ‘ಔಟ್‌ಸೈಡರ್’ ಎಂದೇ ಕರೆಯುತ್ತಾ ಬಂದಿದ್ದರು. ಅಂತಿಮವಾಗಿ ವಿಷ್ಣು ಮಂಚು ಅವರೇ ಗೆದ್ದಿದ್ದು, ‘ಔಟ್‌ಸೈಡರ್’ ಪ್ರಕಾಶ್ ರೈ ಸೋತಿದ್ದಾರೆ.
ತೆಲುಗು ಚಿತ್ರರಂಗದ ಮೂಲಗಳ ಪ್ರಕಾರ ಹಿರಿಯ ನಟ ಮೋಹನ್ ಬಾಬು ಅವರು MAA ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಹಾಗಾಗಿ ತಿಂಗಳುಗಳಿಂದ ತಮ್ಮ ಪುತ್ರ ವಿಷ್ಣು ಮಂಚು ಪರ ಪ್ರಚಾರದಲ್ಲಿ ತೊಡಗಿದ್ದರು, ತಮ್ಮ ಪ್ರಭಾವ ಬಳಸಿ ತೆಲುಗು ಚಿತ್ರರಂಗದ ಕಲಾವಿದರಿಗೆ ವಿಷ್ಣು ಮಂಚು ಪರ ಮತ ಚಲಾಯಿಸುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಇನ್ನೊಂದೆಡೆ ನಟ ಚಿರಂಜೀವಿ ಕುಟುಂಬ ಪ್ರಕಾಶ್ ರೈ ಅವರ ಪರೋಕ್ಷ ಬೆಂಬಲಕ್ಕೆ ನಿಂತಿತ್ತು. ನೇರವಾಗಿ ಹೇಳಿಕೊಳ್ಳದಿದ್ದರೂ ಅವರ ನಡೆ ಏನು ಎನ್ನುವುದು ಜನರಿಗೆ ತಿಳಿದಿತ್ತು. ಒಂದು ಹಂತದಲ್ಲಿ ಇದು ಚಿರಂಜೀವಿ ವರ್ಸಸ್ ಮೋಹನ್ ಬಾಬು ಎಂದೇ ಬಿಂಬಿತವಾಗಿತ್ತು. ಅಂತಿಮವಾಗಿ ವಿಷ್ಣು ಮಂಚು ಗೆದ್ದಿದ್ದು, ಮೋಹನ್ ಬಾಬು ಮೇಲುಗೈ ಸಾಧಿಸಿದಂತಾಗಿದೆ.
ಇನ್ನು ನಿನ್ನೆ ಜ್ಯುಬಿಲಿ ಹಿಲ್ಸ್ ಶಾಲೆಯೊಂದರಲ್ಲಿ ನಡೆದ ಮತ ಪ್ರಕ್ರಿಯೆಯಲ್ಲೂ ಕೆಲವು ಡ್ರಾಮಾಗಳು ನಡೆದ ವರದಿಯಾಗಿವೆ. ನಟರಾದ ನರೇಶ್ ಮತ್ತು ಪ್ರಕಾಶ್ ರೈ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆದರೆ ನಂತರ ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದಾಗ ಪ್ರಕಾಶ್ ರೈ ಪ್ರತಿಕ್ರಿಯಿಸಲು ನಿರಾಕರಿಸಿದರು. ಮತ ಚಲಾವಣೆ ಸಂದರ್ಭದಲ್ಲಿ ಪ್ರಕಾಶ್ ರೈ, ಮೋಹನ್ ಬಾಬು ಮತ್ತು ವಿಷ್ಣು ಮಂಚು ಪರಸ್ಪರ ಶುಭಾಶಯ ಕೋರಿದ್ದು ವಿಶೇಷ. ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಟ ಚಿರಂಜೀವಿ, “ನಮ್ಮ ನಮ್ಮಲ್ಲೇ ಪೈಪೋಟಿ ನಡೆಯುವುದು ಸಮಂಜಸವಲ್ಲ. ಈ ಬಾರಿ ಕೆಲವು ಅನಪೇಕ್ಷಿತ ಘಟನಾವಳಿಗಳು ನಡೆದವು. ಇದರ ಅವಶ್ಯಕತೆ ಇರಲಿಲ್ಲ. ಯಾರೇ ಗೆಲುವು ಸಾಧಿಸಿದರೂ ಕಲಾವಿದರ ಕ್ಷೇಮ, ಚಿತ್ರರಂಗದ ಉನ್ನತಿಗೆ ಕೆಲಸ ಮಾಡಲಿ” ಎಂದಿದ್ದಾರೆ. ವಿಷ್ಣು ಮಂಚು ಮುಂದಿನ ಎರಡು ವರ್ಷಗಳ ಅವಧಿಗೆ MAA ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
MAAಗೆ ಪ್ರಕಾಶ್ ರೈ ರಾಜೀನಾಮೆ | ಸಾಕಷ್ಟು ವಾದ – ವಿವಾದಗಳೊಂದಿಗೆ MAA ಎಲೆಕ್ಷನ್ ಮುಗಿದು ವಿಷ್ಣು ಮಂಚು ಅವರ ಗೆಲುವಿನ ಹಿನ್ನೆಲೆಯಲ್ಲಿ ಇಂದು ನಟ ಪ್ರಕಾಶ್ ರೈ MAAಗೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಹಲವರಲ್ಲಿ ಅಚ್ಚರಿ ಮೂಡಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಕಾಶ್ ರೈ, “ಮೊದಲನೆಯದಾಗಿ ನಟ ವಿಷ್ಣು ಮಂಚು ಅವರಿಗೆ ಅಭಿನಂದನೆಗಳು ಅವರು ಮತ್ತು ಅವರ ತಂಡ ತೆಲುಗು ಚಿತ್ರರಂಗದ ಏಳ್ಗೆಗಾಗಿ ಕೆಲಸ ಮಾಡಲಿ. ಆದರೆ, ಚುನಾವಣೆ ಸಂದರ್ಭದಲ್ಲಿ ನನ್ನನ್ನು ‘ಹೊರಗಿನವನು’ ಎಂದು ಅವರು ಬಿಂಬಿಸಿದ್ದು ನೋವುಂಟುಮಾಡಿದೆ. ಇಲ್ಲಿ ಪ್ರಾದೇಷಿಕತೆಯೇ ಮುಖ್ಯವಾಯ್ತು. ‘ಹೊರಗಿನವರು ಸಂಘಕ್ಕೆ ವೋಟ್ ಮಾಡಬಹುದು, ಆದರೆ ಸ್ಪರ್ಧಿಸುವಂತಿಲ್ಲ’ ಎಂದು ಬೈಲಾ ಬದಲಿಸುವ ಕುರಿತೂ ಚರ್ಚೆಯಾಗಿದ್ದವು. ನಾನು ಆತ್ಮಗೌರವವುಳ್ಳ ವ್ಯಕ್ತಿಯಾಗಿದ್ದು, ಇನ್ನು ಮುಂದೆ ಕಲಾವಿದರ ಸಂಘದ ಸದಸ್ಯನಾಗಿ ಮುಂದುವರೆಯಲು ಇಚ್ಛಿಸುವುದಿಲ್ಲ. ಹಾಗೆಂದು ನಟನೆಗೂ, ಈ ನಿರ್ಧಾರಕ್ಕೂ ಸಂಬಂಧವಿಲ್ಲ. ಎಂದಿನಂತೆ ನಾನು ಎಲ್ಲರೊಂದಿಗೆ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಇರುತ್ತೇನೆ” ಎಂದಿದ್ದಾರೆ.