ಸಿನಿ ಲೋಕದಲ್ಲಿ 5 ದಶಕಗಳ ಕಾಲ ಸಕ್ರಿಯವಾಗಿದ್ದ ವಹೀದಾ ರೆಹಮಾನ್​ ಅವರು ಪ್ರತಿಷ್ಠಿತ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು 90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಬುತ ನಟನೆಯ ಮೂಲಕ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ವಹೀದಾ ರೆಹಮಾನ್​ ಅವರಿಗೆ ಈ ವರ್ಷದ ದಾದಾಸಾಹೇಬ್‌ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಹಿರಿಯ ನಟಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮನಮೋಹಕವಾದ ತಮ್ಮ ಅಭಿನಯದ ಮೂಲಕ ಅವರು ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹೆಚ್ಚಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಅವರು ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ವಹೀದಾ ರೆಹಮಾನ್​ ಅವರು 1955ರಲ್ಲಿ ತೆಲುಗಿನ ‘ರೋಜುಲು ಮಾರಾಯಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ದೇವ್​ ಆನಂದ್​ ನಟನೆಯ ‘ಸಿಐಡಿ’ ಸಿನಿಮಾ ಮೂಲಕ ವಹೀದಾ ರೆಹಮಾನ್​ ಅವರು ಬಾಲಿವುಡ್​ಗೆ ಪ್ರವೇಶ ಪಡೆದರು. ಬಳಿಕ ‘ಪ್ಯಾಸಾ’, ‘ಕಾಗಜ್​ ಕೆ ಫೂಲ್​’, ‘ಸಾಹಿಬ್​ ಬೀ ಔರ್​ ಗುಲಾಮ್​​’ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಅಪಾರ ಜನಪ್ರಿಯತೆ ಗಳಿಸಿದ್ದಾರೆ.

‘ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ವಹೀದಾ ರೆಹಮಾನ್​ ಅವರಿಗೆ ಈ ವರ್ಷದ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ​ ಘೋಷಣೆ ಮಾಡಲು ನನಗೆ ಸಂತಸ ಆಗಿದೆ. ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ಅವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ದಾದಾ ಸಾಹೇಬ್​ ಫಾಲ್ಕೆ ಪಡೆಯಲಿರುವ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್​ ಅವರು X ನಲ್ಲಿ ಪೋಸ್ಟ್​ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here