‘ಟೋಬಿ’ಯಲ್ಲಿ ಕತೆಯ ಜೊತೆಜೊತೆಗೆ ಮಾರಿ ದೇವತೆ ಪ್ರೇಕ್ಷಕರ ಮನಸ್ಸಿಗೆ ಇಳಿಯುವುದಿಲ್ಲ. ಕತೆಯ ಅಂತಃಸತ್ವವನ್ನು ಹಿಡಿದಿಡುವಂತೆ ಬಳಕೆ ಮಾಡಿದ ‘ಮಾರಿ, ಮಾರಿ, ಮಾರಿಗೆ ದಾರಿ’ ಪ್ರೇಕ್ಷಕರಿಗೆ ಕನೆಕ್ಟ್‌ ಆಗುವುದಿಲ್ಲ. ಬಹುಶಃ ಹಾಗಾಗಿಯೇ ಕ್ಲೈಮಾಕ್ಸ್‌ನಲ್ಲಿನ ನಾಯಕ ಪ್ರೇಕ್ಷಕರಿಗೆ ‘ಮಾರಿ’ಯಾಗಿ ಕಾಣಿಸುವುದಿಲ್ಲ. ‘ಮಾರಿ’ಯಾಗಿ ಕಾಣಿಸದ ‘ಟೋಬಿ’ ಎಂದಿನ ರಿವೇಂಜ್‌ ಕತೆಯ ಹೀರೋ ಎನಿಸಿಬಿಡುತ್ತಾನೆ.

ಸಿದ್ಧಮಾದರಿಗೆ ಹೊರತಾದ ಕತೆ, ನಿರೂಪಣೆಯಿಂದ ಗಮನ ಸೆಳೆದಿದ್ದವರು ರಾಜ್‌ ಬಿ ಶೆಟ್ಟಿ. ಅವರ ನಿರ್ದೇಶನದಲ್ಲಿ ತೆರೆಕಂಡ ಈ ಹಿಂದಿನ ‘ಒಂದು ಮೊಟ್ಟೆಯ ಕತೆ’ ಮತ್ತು ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳಿಗೆ ಈ ಗುಣವಿತ್ತು. ಅವರ ರಚನೆ – ನಿರ್ದೇಶನದ ಈ ಎರಡೂ ಸಿನಿಮಾಗಳ ಕತೆ, ಜಾನರ್‌ ಕೂಡ ಭಿನ್ನ. ಈಗ ‘ಟೋಬಿ’ಗೆ ಅವರು ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ನಿರ್ದೇಶನದ ಹೊಣೆಗಾರಿಕೆಯನ್ನು ತಮ್ಮ ತಂಡದವರೇ ಆದ ಬೇಸಿಲ್‌ ಅಲ್ಚಲಕ್ಕಲ್‌ ಅವರ ಹೆಗಲಿಗೆ ಹೊರಿಸಿದ್ದಾರೆ. ಚಿತ್ರದ ಶೀರ್ಷಿಕೆ ಪಾತ್ರಧಾರಿಯೇ ರಾಜ್‌ ಆದ್ದರಿಂದ ಚಿತ್ರೀಕರಣದುದ್ದಕ್ಕೂ ಅವರ ಮೇಲುಸ್ತುವಾರಿ ಇದ್ದೇ ಇದೆ. ಹಾಗಾಗಿ ತಮ್ಮ ಹಿಂದಿನ ಯಶಸ್ವೀ ಚಿತ್ರಗಳಿಗಿದ್ದ ಮೂಲ ಗುಣ ‘ಸಹಜತೆ’ಯನ್ನು ಇಲ್ಲಿಯೂ ಕಾಯ್ದುಕೊಂಡಿದ್ದಾರೆ.

ಕತೆಗಾರ ಟಿ ಕೆ ದಯಾನಂದ್‌ ಅವರದ್ದು ಮೂಲ ಕತೆ. ರಾಜ್‌ ಬಿ ಶೆಟ್ಟಿ ಈ ಕತೆಯನ್ನು ಆಧರಿಸಿ ಚಿತ್ರಕಥೆ ಹೆಣೆದು ಸಂಭಾಷಣೆ ರಚಿಸಿದ್ದಾರೆ. ಟೋಬಿ, ಜೆನ್ನಿ, ಸಾವಿತ್ರಿ, ಆನಂದ, ದಾಮೋದರ, ಶಾಲಿನಿ ಹಾಗೂ ಚಿತ್ರದ ಇನ್ನಿತರೆ ಪ್ರಮುಖ ಪಾತ್ರಗಳಿಗೆ ಗಟ್ಟಿತನವಿದೆ. ಉತ್ತರ ಕನ್ನಡದ ಪುಟ್ಟ ಪಟ್ಟಣ, ಅಲ್ಲಿನ ಹಳೆಯ ಓಣಿಗಳು, ಕಡಲ ತೀರ, ಬೋಟ್‌ಗಳು, ಅಲ್ಲಿನ ಭಾಷಾ ಸೊಗಡು, ಕರಾವಳಿಯ ವಾತಾವರಣದ ಹಿನ್ನೆಲೆಯಲ್ಲಿ ಪಾತ್ರಗಳು ಸೊಗಸಾಗಿ ಎಸ್ಟಾಬ್ಲಿಷ್‌ ಆಗುತ್ತವೆ. ವಿಶಿಷ್ಟ ವ್ಯಕ್ತಿತ್ವ, ಗುಣದಿಂದಾಗಿ ಮೊದಲಾರ್ಧದಲ್ಲಿ ಪಾತ್ರಗಳು ಮನಸ್ಸಿಗಿಳಿಯುತ್ತವೆ. ಪಾತ್ರವೈವಿಧ್ಯದಿಂದಾಗಿ ಕೆಲವೆಡೆಯ ನಿಧಾನಗತಿಯ ನಿರೂಪಣೆಯೂ ಗಮನಕ್ಕೆ ಬಾರದು. ಮುಂದೆ ಇದೇ ಗುಣ ದ್ವಿತಿಯಾರ್ಧಕ್ಕಿಲ್ಲ ಎನ್ನುವುದು ಸಿನಿಮಾದ ಮಿತಿ.

‘ನಾನು ಬರೆಯುವ ಯಾವ ಪಾತ್ರಗಳು ಪರಿಪೂರ್ಣವಲ್ಲ’ ಎನ್ನುತ್ತಾರೆ ರಾಜ್‌ ಶೆಟ್ಟಿ. ಇಲ್ಲಿ ಟೋಬಿಯೂ ವಿಕ್ಷಿಪ್ತ ಸ್ವಭಾವದ ವ್ಯಕ್ತಿತ್ವದವನು. ‘GGVV’ಯ ‘ಶಿವ’ನಲ್ಲಿನ ವಿಕ್ಷಿಪ್ತತೆ ಟೋಬಿಯಲ್ಲಿಯೂ ಕಾಣಿಸುತ್ತದೆ. ಅಲ್ಲಿನಂತೆ ಇಲ್ಲಿಯೂ ನಾಯಕನ ವಿಕ್ಷಿಪ್ತತೆ ಕೆಲವರ ಅನುಕೂಲಕ್ಕೆ ಬಳಕೆಯಾಗುತ್ತದೆ. ಆದರೆ ಈ ಕತೆಗೆ ವಿಕ್ಷಿಪ್ತ ನಾಯಕನಲ್ಲಿನ ಹೆಣ್ಗರುಳು, ಮನುಷ್ಯತ್ವದ ಸೆಲೆಯನ್ನು ಬೆಸೆದಿದ್ದಾರೆ ರಾಜ್‌ ಶೆಟ್ಟಿ. ಕೆಲವೆಡೆ ಟೋಬಿ ಪಾತ್ರಕ್ಕಿರುವಷ್ಟು ತೂಕ ಜೆನ್ನಿ ಪಾತ್ರದಲ್ಲೂ ಕಾಣಿಸುತ್ತದೆ ಎನ್ನುವುದಕ್ಕೆ ತೂಕದ ಬರವಣಿಗೆಗೆ ಸಾಕ್ಷಿ. ಪಾತ್ರಚಿತ್ರಣ, ಟ್ರೀಟ್‌ಮೆಂಟ್‌ನಿಂದ ಇಷ್ಟವಾಗುವ ಮೊದಲಾರ್ಧದ Intensity ದ್ವಿತಿಯಾರ್ಧಕ್ಕೆ ದಕ್ಕಿಲ್ಲ. ಸಿನಿಮಾ ಮುಗಿಯುವ ಹೊತ್ತಿಗೆ, ಎಂದಿನ ಹೊಡಿ – ಬಡಿ ಸಿನಿಮಾಗಳಂತೆ ಇದು ಕೂಡ ರಿವೇಂಜ್‌ ಸಿನಿಮಾ ಆಯ್ತಾ ಎನ್ನುವ ಪ್ರಶ್ನೆ ಏಳುತ್ತದೆ.

ಯಶಸ್ವೀ ‘ಕಾಂತಾರ’ ಚಿತ್ರದಂತೆ ‘ಟೋಬಿ’ ಕತೆಯಲ್ಲೂ ಜನಪದ, ಪುರಾಣದ ಕತೆಯ ಹಿನ್ನೆಲೆಯಿದೆ. ಊರಿನ ದೇವತೆ ಮಾರಿ ಮತ್ತು ನಾಡನ್ನು ಆಳಿದ ದೊರೆಗಳ ಕತೆಯೊಂದಿಗೆ ಶುರುವಾಗುವ ಸಿನಿಮಾ ಮುಗಿಯುವುದೂ ಅದೇ ಜಾತ್ರೆಯ ಅಂಗಳದಲ್ಲಿ. ‘ಕಾಂತಾರ’ ಚಿತ್ರದುದ್ದಕ್ಕೂ ದೈವದ ಪ್ರಭಾವಳಿಯಿತ್ತು. ಆದರೆ ‘ಟೋಬಿ’ಯಲ್ಲಿ ಕತೆಯ ಜೊತೆಜೊತೆಗೆ ಮಾರಿ ದೇವತೆ ಪ್ರೇಕ್ಷಕರ ಮನಸ್ಸಿಗೆ ಇಳಿಯುವುದಿಲ್ಲ. ಅದೇಕೋ ಕತೆಯ ಅಂತಃಸತ್ವವನ್ನು ಹಿಡಿದಿಡುವಂತೆ ಚಿತ್ರದ ಪ್ರಚಾರಕ್ಕೆಂದು ಬಳಕೆ ಮಾಡಿದ ‘ಮಾರಿ, ಮಾರಿ, ಮಾರಿಗೆ ದಾರಿ’ ಒಕ್ಕಣಿ ಪ್ರೇಕ್ಷಕರಿಗೆ ಕನೆಕ್ಟ್‌ ಆಗುವುದಿಲ್ಲ. ಬಹುಶಃ ಹಾಗಾಗಿಯೇ ಕ್ಲೈಮಾಕ್ಸ್‌ನಲ್ಲಿನ ನಾಯಕ ಪ್ರೇಕ್ಷಕರಿಗೆ ‘ಮಾರಿ’ಯಾಗಿ ಕಾಣಿಸುವುದಿಲ್ಲ. ‘ಮಾರಿ’ಯಾಗಿ ಕಾಣಿಸದ ‘ಟೋಬಿ’ ಎಂದಿನ ರಿವೇಂಜ್‌ ಕತೆಯ ಹೀರೋ ಎನಿಸಿಬಿಡುತ್ತಾನೆ.

ಕಾಗದದ ಮೇಲೆ ಬರೆದ ವಿಶಿಷ್ಟ ಪಾತ್ರಗಳನ್ನು ತೆರೆಯ ಮೇಲೆ ತರುವುದು ಸರಳವಲ್ಲ. ರಾಜ್‌ ಬಿ ಶೆಟ್ಟಿ ಮತ್ತು ಅವರ ತಂಡ ಈ ವಿಚಾರವಾಗಿ ಸಾಕಷ್ಟು ಹೋಂವರ್ಕ್‌, ವರ್ಕ್‌ಶಾಪ್‌ ಮಾಡಿರುವಂತಿದೆ. ಚಿತ್ರದ ಪ್ರತಿಯೊಂದು ಪಾತ್ರಗಳನ್ನು ಅವರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ತಾವೇ ಬರೆದ ಪಾತ್ರವಾದ್ದರಿಂದ ‘ಟೋಬಿ’ಯ ಗುಣವಿಶೇಷಣಗಳನ್ನು ರಾಜ್‌ ಬಿ ಶೆಟ್ಟಿ ಜೀವಿಸಿದ್ದಾರೆ. ಜೆನ್ನಿ ಪಾತ್ರದಲ್ಲಿ ಚೈತ್ರ ಜೆ ಆಚಾರ್‌ ಅವರದ್ದು ರಾಜ್‌ ಶೆಟ್ಟಿಗೆ ಪೈಪೋಟಿ ನೀಡುವಂತಹ ನಟನೆ. ಇವರಿಬ್ಬರ ಪಾತ್ರಗಳ ಮಧ್ಯೆಯ ಕೆಮಿಸ್ಟ್ರಿ ಚೆನ್ನಾಗಿ ವರ್ಕ್‌ ಆಗಿದೆ. ಸಾವಿತ್ರಿ, ಆನಂದ, ದಾಮೋದರ, ಶಾಲಿನಿ ಸೇರಿದಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಪಾತ್ರಗಳು ನಮ್ಮ ಮಧ್ಯೆಯ ಜನರಂತೆ ಪ್ರೇಕ್ಷಕರಿಗೆ ಭಾಸವಾಗುತ್ತವೆ. ಮಿಥುನ್‌ ಮುಕುಂದನ್‌ ಹಿನ್ನೆಲೆ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸಿದಂತಿದೆ. ಅವರ ಹಿನ್ನೆಲೆ ಸಂಗೀತ ಚಿತ್ರದ ಕೆಲವು ಸನ್ನಿವೇಶಗಳ Impact ಅನ್ನು ಇಮ್ಮಡಿಗೊಳಿಸುತ್ತದೆ. ಮಿಥುನ್‌ ಮುಕುಂದನ್‌ ಮತ್ತು ಸಂಕಲನಕಾರ ನಿತಿನ್‌ ಶೆಟ್ಟಿ ಅವರ ಕೆಲಸಕ್ಕೆ ಶಹಭಾಷ್‌ಗಿರಿ ಸಲ್ಲಬೇಕು.

Previous article69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ | ‘777 ಚಾರ್ಲಿ’ ಅತ್ಯುತ್ತಮ ಪ್ರಾದೇಶಿಕ ಸಿನಿಮಾ
Next article‘ಕಾಲಾ’ ಟೀಸರ್‌ | ಅವಿನಾಶ್‌ ತಿವಾರಿ ನಟನೆಯ ವೆಬ್‌ ಸರಣಿ Disneyplus Hotstarನಲ್ಲಿ

LEAVE A REPLY

Connect with

Please enter your comment!
Please enter your name here