ಜನರ ಬದುಕಿನ ಮೇಲಿನ ಯುದ್ಧದ ಪರಿಣಾಮವನ್ನು ನಿರ್ಲಿಪ್ತತೆಯಿಂದ ದಾಖಲಿಸುತ್ತದೆ – Klondike. ಚಿತ್ರದ ನಿರ್ದೇಶಕಿ ಮರ್ಯಾನಾ ಗೋರ್ಬಾಕ್ ಈ ಚಿತ್ರವನ್ನು ಅಮಾಯಕ‌ ಮಹಿಳೆಯರಿಗೆ ಅರ್ಪಿಸಿದ್ದು ಮೆಚ್ಚುವಂಥದ್ದು.

2014ರಲ್ಲಿ ಮಲೇಷ್ಯಾದ ವಿಮಾನ ಯುಕ್ರೇನ್- ರಷ್ಯಾ ಗಡಿಯಲ್ಲಿ ಪತನವಾದ ನಂತರದ ನಿಜಘಟನೆಗಳನ್ನು ‘Klondike’ ಚಿತ್ರ ಆಧರಿಸಿದೆ‌. ಇರ್ಕಾ ತುಂಬು ಗರ್ಭಿಣಿ. ಆಕೆಯ ಗಂಡ ತಾವಿರುವ ಪಾರ್ಮ್ ಹೌಸ್ ಬಿಟ್ಟು ತೆರಳೋಣವೆಂದರೆ ಆಕೆ ಒಪ್ಪುವುದಿಲ್ಲ‌.ಆ ಸಮಯದಲ್ಲಿ ಅವರ ಪಾರ್ಮ್ ಹೌಸ್ ಸಮೀಪದಲ್ಲೇ ವಿಮಾನ ಪತನವಾಗುತ್ತದೆ.

ಇರ್ಕಾ ಮತ್ತವಳ ತಮ್ಮ ಯುಕ್ರೇನಿಯನ್ನಿನ ಪರವಾಗಿದ್ದರೆ, ಆಕೆಯ ಗಂಡ ಮತ್ತು ಆತನ ಗೆಳೆಯ ಯುಕ್ರೇನ್ ಸೆಪರೇಟಿಸ್ಟರ ಪರವಾಗಿರುತ್ತಾರೆ. ಪಾರ್ಮ ಹೌಸ್‌ನಲ್ಲೇ ಉಳಿಯಬೇಕೆನ್ನುವ ಇರ್ಕಾಳ ಬಯಕೆಗೆ ಕುತ್ತು ಬರುತ್ತದೆ. ರಷ್ಯಾ ಪಡೆಗಳಿಗೆ ಆಕೆಯ ಗಂಡ ಹಸುವನ್ನು ಕಡಿದು ಒಪ್ಪಿಸುತ್ತಾನೆ. ತಮ್ಮನ ಹೆಡೆಮುಡಿ ಕಟ್ಟುತ್ತಾನೆ. ವಿಮಾನ ಹೊಡೆದುರುಳಿಸಿದವರ ಪತ್ತೆಗೆ ಬರುವ ಯುಕ್ರೇನ್ ಯೋಧರು ಹಿಂಸಿಸುತ್ತಾರೆ. ಇರ್ಕಾ ಹೆರುವ ಸಂದರ್ಭದಲ್ಲಿ ಒಬ್ಬರೂ ಇಲ್ಲ. ಜನರ ಬದುಕಿನ ಮೇಲೆ ಯುದ್ಧ ಮಾಡುವ ಪರಿಣಾಮವನ್ನು ನಿರ್ಲಿಪ್ತತೆಯಿಂದ ಚಿತ್ರ ದಾಖಲಿಸುತ್ತದೆ. ಮಗುವಿಗೆ ‘ವ್ಲಾದಿಮಿರ್‌‌’ ಎಂದು ಹೆಸರಿಡಬೇಕೆಂದು ಹೇಳುವ ಇರ್ಕಾ ಗಂಡ ರಷ್ಯಾ ಪರವೆಂದು ಅನ್ನಿಸಿದರೂ ಪರಿಸ್ಥಿತಿಯ ಶಿಶು ಆತ. ಚಿತ್ರದ ನಿರ್ದೇಶಕಿ ಮರ್ಯಾನಾ ಗೋರ್ಬಾಕ್ ಈ ಚಿತ್ರವನ್ನು ಅಮಾಯಕ‌ ಮಹಿಳೆಯರಿಗೆ ಅರ್ಪಿಸಿದ್ದು ಮೆಚ್ಚುವಂಥದ್ದು.

Before Now and Then : ‘ಹೆಣ್ಣು ತನ್ನ ತುರುಬಿನ ಗಂಟಿನಲ್ಲಿ ಗುಟ್ಟುಗಳನ್ನು ಬಚ್ಚಿಟ್ಟುಕೊಳ್ಳುತ್ತಾಳೆ’ ಎಂದು ಚಿತ್ರದ ನಾಯಕಿ ನಾನಾ ಹೇಳುತ್ತಾಳೆ. ಅವಳಲ್ಲಿ ಗುಟ್ಟುಗಳಿವೆ. ಕಮ್ಯುನಿಸ್ಟ್ ವಿರೋಧಿ ಹೋರಾಟದಲ್ಲಿ ಗಂಡ ಮತ್ತು ಮಗನನ್ನು ಕಳೆದುಕೊಂಡ ಆಕೆ ಅನಿವಾರ್ಯವಾಗಿ ಎರಡನೇ ಮದುವೆ ಆಗುತ್ತಾಳೆ. 1966 ನಂತರ ಸುಕಾರ್ನೋ ಸರಕಾರ ಹೋಗಿ ಸುಹಾರ್ತೋ ಅಧಿಕಾರಕ್ಕೆ ಬರುತ್ತಾನೆ. ಸತ್ತನೆಂದು ತಿಳಿದಿರುವ ನಾನಾ ಗಂಡ ಭೇಟಿಯಾಗುತ್ತಾನೆ‌. ಮುಂದೆ ಅವಳಿಗೆ ಕೆಟ್ಟ ಕನಸುಗಳು ಬೀಳುವುದಿಲ್ಲ‌. ಗಂಡ ನಂಬಿಕೆ ದ್ರೋಹ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ‘ಹೆಣ್ಣಿಗೆ ಮಾತ್ರಾ ಗಿಲ್ಟ್ ಯಾಕಿರಬೇಕೆಂದು’ ಆಕೆ ತನ್ನ ಇಚ್ಚೆಯಂತೆ ಬದುಕುವ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಚಿತ್ರದ ನಿರ್ದೇಶಕಿ ಕಮಿಲಾ ಆಂಡಿನಿ ಬೋಲ್ಡ್ ಅಗಿ ಕತೆಯ ನಿರ್ವಹಣೆ ಮಾಡಿದ್ದಾರೆ. ನಾನಾ ಪಾತ್ರ ನೆನಪುಳಿಯುವಂತಿದೆ. ಹಿನ್ನೆಲೆ ಸಂಗೀತ ಅಪೂರ್ವ ಅನುಭವ ನೀಡುತ್ತದೆ.

The Blue Caftan : ಕಫ್ತಾನ್ ಹೊಲಿಗೆ ಕಲಿಯಲು ಹೊಸಬನೊಬ್ಬ ಬಂದಾಗ ಟೈಲರ್ ಹಲೀಮನ ಹೆಂಡತಿ ಮಿನಾ, ‘ಅವನು ಹೆಚ್ಚು ದಿನ ಇರುವುದಿಲ್ಲ’ ಎನ್ನತ್ತಾಳೆ. ಹಲೀಮ್‌ಗೆ ಹೆಂಡತಿಯೆಂದರೆ ಇಷ್ಟ. ಅದರೆ ಲೈಂಗಿಕತೆ ಬಗ್ಗೆ ಆಕೆಗೆ ನಿರಾಸಕ್ತಿ. ಕೆಲಸಕ್ಕೆ ಬಂದ ಹುಡುಗ ಸಲಿಂಗ ರತಿ ಬಯಸಿದಾಗ ನಿರಾಸಕ್ತಿ ತೋರುತ್ತಾನೆ. ಹೆಂಡತಿಯ ಕಾಯಿಲೆ ಗುಣವಾಗುವುದಿಲ್ಲವೆಂದು ತಿಳಿದಾಗ ಸತ್ಯವನ್ನು ತೋಡಿಕೊಳ್ಳುತ್ತಾನೆ. ಅಕೆ ಆಕ್ಷೇಪಿಸುವುದಿಲ್ಲ. ಇಂತಹ ಒಂದು ಅಸಾಮಾನ್ಯ ವಿಷಯವನ್ನು ನಿರ್ದೇಶಕಿ ಮರಿಯಮ್ ತೌಜನಿ ಎಚ್ಚರದಿಂದಲೂ, ಸಂಯಮದಿಂದಲೂ ರೂಪಿಸಿದ್ದಾರೆ. ಹಲೀಮ್, ಮಿನಾ ಪಾತ್ರಧಾರಿಗಳು ಅತ್ಯಂತ ಸಂಯಮದಿಂದ ನಟಿಸಿದ್ದಾರೆ‌.

ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಮುಸ್ಲಿಂ ರಾಷ್ಟ್ರಗಳೆಂದು ಕರೆದುಕೊಳ್ಳುವ ಮೊರಾಕ್ಕೋ, ಇಂಡೋನೇಷ್ಯಾ ದೇಶಗಳಲ್ಲಿ ಮೂಲಭೂತವಾದ ಕಾಣುವುದಿಲ್ಲ. ಮಹಿಳೆಯರು ಗಂಡಸರಂತೆ ಸ್ವಚ್ಚಂದ ಜೀವನ ನಡೆಸುವ ಅವಕಾಶವಿದೆ. ಕಾನೂನು ಬಾಹಿರ ಸೆಕ್ಸ್ ನಡೆಸುವ ಅಡ್ಡೆಗಳೂ ಇವೆ. ಇಂಡೋನೇಷ್ಯಾದ ಚಿತ್ರದಲ್ಲಿ ಮಹಿಳೆಯೊಬ್ಬಳು ‘ನಾನು ಮದುವೆಯಾಗುವುದಿಲ್ಲ,ನನ್ನ ಬದುಕನ್ನು ಯಾರೂ judge ಮಾಡುವುದು ಬೇಕಿಲ್ಲ’ ಅನ್ನುತ್ತಾಳೆ. ಮಹಿಳಾ ಪಾತ್ರಗಳಂತೆ ಈ ಬಾರಿ BIFFesನಲ್ಲಿ ನಿರ್ದೇಶಕಿಯರ ಹಲವು ಸಿನಿಮಾಗಳು ಗಮನ ಸೆಳೆದವು. ನಿರ್ದೇಶಕಿಯರು ಬೋಲ್ಡ್ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಮರ್ಥವಾಗಿ ನಿರ್ವಹಣೆ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ.

https://youtu.be/fFJBaGlt0FI

LEAVE A REPLY

Connect with

Please enter your comment!
Please enter your name here