ಒಂದು ದೃಷ್ಯ ಕಟ್ಟಲ್ಲಿ ನಿರೂಪಿತವಾಗುವ ಪ್ರತಿ ವಸ್ತು- ಮಾತಿನ ವಿವರವೂ, ಮುಂದಿನ ಎರಡು ಮೂರು ದೃಷ್ಯಗಳಲ್ಲಿ ತನ್ನ ಪರಿಣಾಮವನ್ನು ತೋರಬೇಕು – ಇಲ್ಲದಿದ್ದರೆ ಆ ವಿವರಗಳು ದಕ್ಕುವುದಿಲ್ಲ. ‘Boy from heaven’ನ ಪ್ರತಿ ದೃಷ್ಯಾವಳಿಯಲ್ಲೂ ಈ ಬಗೆಯ ದಟ್ಟ ಸೂಚನೆಗಳು ಕಾಣುತ್ತವೆ.

‘Boy from Heaven’ ಒಂದು ಉತ್ತಮ ಚಿತ್ರಕಥೆ ಹೇಗಿರುತ್ತದೆ ಎಂಬುದಕ್ಕೆ ಒಳ್ಳೆಯ ಉದಾಹರಣೆ. ಸಾಧಾರಣವಾಗಿ, ಸಿನಿಮಾ ನೋಡುವಾಗ ನಮಗೆ ಚಿತ್ರಕಥೆಯ ಬಿಗಿಬಂಧವು ಅರಿವಿಗೆ ಬರುವುದಿಲ್ಲ-ನಿರ್ದೇಶಕರು ಚೆಂದಾಗಿ ಕತೆ ಹೇಳಿದ್ದಾರೆ ಅಂದ್ಕೋತ್ತೀವಿ. ಸಿನಿಮಾ ಎಳೀತಿದೆ ಅನ್ನಿಸಿದರೆ ನಿರ್ದೇಶಕ ಕೆಟ್ಟದಾಗಿ ಕತೆ ಹೇಳ್ತಿದ್ದಾನೆ ಅಂದ್ಕೋತ್ತೀವಿ. ಕಥನ ನಿರೂಪಣೆಯು ದೃಷಿಕೆಗಳಲ್ಲಿ ಬಿಚ್ಚಿಕೊಳ್ಳುವ ಬಗೆಯನ್ನು ನಿಯಂತ್ರಿಸುವುದು Scripting ಯಾನೆ Screen play. ಒಂದೊಂದು ದೃಷ್ಯ ಚೌಕಟ್ಟನ್ನು ಪೋಣಿಸಿ ತಲುಪಿಸಬೇಕಾದ ಅರ್ಥವನ್ನು ಮನಗಾಣಿಸುವ ಜವಾಬ್ದಾರಿ ಚಿತ್ರಕಥೆಯದಾಗಿರುತ್ತದೆ.

‘Boy from Heaven’, ದೈವ ಶ್ರದ್ದೆಯುಳ್ಳ ಈಜಿಪ್ತಿನ ಒಂದು ಕಡಲ ತೀರದ ಹಳ್ಳಿಯ ಮೀನುಗಾರ ಯುವಕನೊಬ್ಬ, ದೇಶದ ಪ್ರಭುತ್ವ ಹಾಗು ಜನರ ನಂಬುಕೆ – ವಿಶ್ವಾಸಗಳ ನಿಯಂತ್ರಣ ಮಾಡುವ ಮತ ಅಧಿಕಾರ ಕೇಂದ್ರಗಳ ನಡುವಿನ ಸಂಘರ್ಷದ ದಾಳವಾಗಿ ಅನುಭವಿಸುವ ತಲ್ಲಣ, ಆ ಮೂಲಕ ನಾಡಿನ ಸಾಮಾಜಿಕ – ರಾಜಕೀಯ ಚಿತ್ರ ಕಟ್ಟಿಕೊಡುವ ಇರಾದೆಯದು.

ಬಹಳ ಮಿತವಾದ ದೃಷ್ಯಕಟ್ಟುಗಳಲ್ಲಿ ಯುವಕನ ನಿತ್ಯ ಬದುಕಿನ ಸ್ಥಿತಿಗತಿ, ಅಲ್ ಅಜರ್ ವಿಶ್ವವಿದ್ಯಾಲಯವು ಮತಾಧಿಕಾರ ಕೇಂದ್ರವಾಗಿರುವ ಬಗೆ, ಪ್ರಭುತ್ವಕ್ಕೆ ಅದರ ಇಮಾಮರ ಜೊತೆಗಿರುವ ಸಂಬಂಧ – ಸಂಘರ್ಷ, ಮೀನುಗಾರ ಹುಡುಗ ಆ ಆಟದಲ್ಲಿ ಸಿಕ್ಕಿ ಬೀಳುವುದು, ಅದರ ಮೂಲಕ ಅವನ ಕುಟುಂಬಕ್ಕೆ ಅಪಾಯ ತಂದಿಡುವ ಬೆದರಿಕೆಗಳನ್ನು ಅನುಭವಿಸುವುದು, ಅತಿ ಸಂಕಷ್ಟದ ಸ್ಥಿತಿಯಲ್ಲಿ ತನ್ನ ವಿವೇಕಯುತ ತಂತ್ರಗಳ ಮೂಲಕ ಪಾರಾಗಿ ಮತ್ತೆ ಹಳ್ಳಿ ಸೇರುವ ಮುನ್ನ ವಿಕಾರ ಅಧಿಕಾರ ಸಂಘರ್ಷದ ಒಳನೋಟವನ್ನು ಪ್ರೇಕ್ಷಕರಿಗೆ ಕಾಣಿಸಲು, ದೃಷ್ಯ ಸರಣಿಯಲ್ಲಿ ಹಲವು ಚಾಣಾಕ್ಷ ಬಾಣದ ಗುರುತು ಸೂಚಿ ದೃಷ್ಯ ಹೆಣೆಯುವುದು – ಇಷ್ಟೆಲ್ಲವನ್ನೂ ಎರಡು ಗಂಟೆಯಲ್ಲಿ, ನೋಡುಗರ ಆಸಕ್ತಿಯು ಸಡಿಲಾಗದ ಹಾಗೆ ಕಟ್ಟುವ ಕಸುಬುದಾರಿಕೆ ಚಿತ್ರಕತೆಯದು. Boy from heavenನ ಪ್ರತಿ ದೃಷ್ಯಕಟ್ಟೂ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕಥನ ನಡಿಗೆಯ ಸೂಚಿಸಿ, ಮುಂಬರುವ ದೃಷಿಕೆಗೆ ಸುಳಿವು ಹೆಣೆಯುತ್ತಾ ಚಕಚಕ ದೃಷ್ಯ ಸರಣಿಗಳನ್ನು, ಒಂದು ಪದವೂ ಅನಾವಶ್ಯಕವಾಗಿರದ ಸಂಭಾಷಣೆಗಳ ಜತೆ ಬೆಸೆಯುವ ಕೌಶಲವನ್ನು ನಾವು ಅನುಭವಿಸುವಂತೆ ಮಾಡುತ್ತದೆ. ಅದು ತಾರಿಖ್ ಸಲೆಹ್ ಅವರ ಚಿತ್ರಕಥೆಯ ಬಿಗಿಬಂಧ!

ಚಿತ್ರಕಥೆ ಕಟ್ಟುವಲ್ಲಿ, ‘ಚೆಕಾಫನ ತುಪಾಕಿ’ ತಂತ್ರ ಸೂತ್ರದ ಪರಿಣಾಮಕಾರಿ ಬಳಕೆಯು ಮಹತ್ವದ ಪಾತ್ರ ವಹಿಸುತ್ತದೆ. ಒಂದು ದೃಷ್ಯ ಕಟ್ಟಲ್ಲಿ ನಿರೂಪಿತವಾಗುವ ಪ್ರತಿ ವಸ್ತು- ಮಾತಿನ ವಿವರವೂ, ಮುಂದಿನ ಎರಡು ಮೂರು ದೃಷ್ಯಗಳಲ್ಲಿ ತನ್ನ ಪರಿಣಾಮವನ್ನು ತೋರಬೇಕು – ಇಲ್ಲದಿದ್ದರೆ ಆ ವಿವರಗಳು ದಕ್ಕುವುದಿಲ್ಲ. ಇದು ‘ಚೆಕಾಫನ ತುಪಾಕಿ’ ತಂತ್ರ. ‘Boy from heaven’ನ ಪ್ರತಿ ದೃಷ್ಯಾವಳಿಯಲ್ಲೂ ಈ ಬಗೆಯ ದಟ್ಟ ಸೂಚನೆಗಳು ಕಾಣುತ್ತವೆ, ಪ್ರತಿ ವಿವರವೂ ಮುಂದಿನ ಎರಡು ಮೂರು ದೃಷ್ಯಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತು ಪಡಿಸಿಬಿಡುತ್ತದೆ. ತಾರಿಖ್‌ಗೆ 2022ರ ಪ್ರತಿಷ್ಠಿತ ಕ್ಯಾನ್ಸ್ ಚಿತ್ರೋತ್ಸವದಲ್ಲಿ ‘ಅತ್ಯ್ತುತ್ತಮ ಚಿತ್ರಕತೆ’ ಪ್ರಶಸ್ತಿ ದಕ್ಕಿರುವುದು ಸುಮ್ಮನೆ ಅಲ್ಲ!

LEAVE A REPLY

Connect with

Please enter your comment!
Please enter your name here